ಸಾಕಿಯ ಪ್ರಿಯ ಕುಡುಕ; ರಮದಾನ್ ಕಾವ್ಯವ್ರತ| ಸೂಫಿ Corner

ಮೂಲ: ಶಬ್‌ಸ್ತರಿ | ಕನ್ನಡಕ್ಕೆ: ಸುನೈಫ್
 ಸಾಕಿಯ ಪ್ರಿಯಕುಡುಕನಾಗುವುದೆಂದರೆ
ತನ್ನ ತಾ ಕಳೆದುಕೊಂಡು ಹಗುರಾಗುವುದು

ಸಾಕಿಯ ಮಧುಶಾಲೆಯೊಂದು
ಪ್ರೇಮಿಗಳಿಗೆ ಕೂಡುದಾಣ,
ಅಲ್ಲಿ ಆತ್ಮದ ಹಕ್ಕಿ ನಿದ್ರಿಸುವುದು
ಪ್ರೇಮೋನ್ಮತ್ತವಾಗಿ,
ಅದಿರುವುದು ಕಾಲಾತೀತ ಬಯಲಿನ ಪುಣ್ಯಭೂಮಿಯಲ್ಲಿ.

ಪ್ರೇಮಿ ಮರುಭೂಮಿಯಲ್ಲಿ ಒಬ್ಬಂಟಿ ಅಲೆಯುವಾಗ
ಲೋಕವು ಮರೀಚಿಕೆಯಾಗುವುದು,
ಮರುಭೂಮಿ ಮಾತ್ರ ಅನಶ್ವರವಾಗುಳಿವುದು,
ಅದರ ತುದಿಮೊದಲ ಕಂಡವರಿಲ್ಲ.
ಅಲ್ಲಿ ನೂರು ವರುಷ ಅಲೆದರೂ
ಯಾರನ್ನೂ ಕೂಡಲಾಗದು,
ಏನನ್ನೂ ಕಾಣಲಾಗದು; ತನ್ನನ್ನೂ.

ಮರುಭೂಮಿಯ ಮನುಷ್ಯರಿಗೆ ತಲೆಬುಡವಿಲ್ಲ,
ಅವರು ವಿಶ್ವಾಸಿಗಳಲ್ಲ,
ಅವಿಶ್ವಾಸಿಗಳಂತು ಅಲ್ಲವೇ ಅಲ್ಲ.
ತುಟಿ ತಾಗಿಸದೆ, ಗಂಟಲಿಳಿಸದೆ
ನಿಸ್ವಾರ್ಥದ ಸುರ ಕುಡಿದು
ಒಳಿತು ಕೆಡುಕುಗಳ ಕಳೆದುಕೊಂಡವರು.
ಪದ ಪದವಿಗಳ ಹಂಗು ತೊರೆದು
ಹೇಳ ಹೆಸರಿಲ್ಲದಂತೆ ಮಾಯವಾಗುವರು.
ಆಧ್ಯಾತ್ಮದಮಲಿನ ಘಮದ ಸೆಳವಿಗೆ ಸಿಕ್ಕಿ;
ಎಲ್ಲ ತೊರೆದು ಬರಿಗೈಲಿ ಹೊರಟಿರುವರು,
ಆತ್ಮನಾಶದ ರುಚಿ ಹಿಡಿದ ಮೇಲೆ
ತೂರಾಡುವುದು, ತೆವಲುವುದು ಸಾಮಾನ್ಯ.
ದಂಡ, ಸುರಾಹಿ, ಜಪಮಾಲೆಗಳನ್ನೂ ಎಸೆದಿರುವರು,
ಭಾವೋನ್ಮಾದದ ಒಂದು ಹನಿ ಗುಟುಕಿಗಾಗಿ.
ಬೀಳುವರು ಎಡವಿ, ಮತ್ತೆ ಎದ್ದೇಳುವರು,
ಕೆಲವೊಮ್ಮೆ ಒಟ್ಟಾಗಿ ಉರಿಯುತ್ತ,
ಕೆಲವೊಮ್ಮೆ ವಿರಹದಲ್ಲಿ ಕರಗುತ್ತಾ.

ರಕ್ತಕಣ್ಣೀರ ಕೋಡಿ ಹರಿದ ನಂತರ
ಈಗ ಪರಮಾನಂದದ ಲೋಕಕೆ ಏರಿರುವರು,
ಓಟಕ್ಕೆ ನಿಂತವರಂತೆ ಕತ್ತೆತ್ತಿ ನೋಡುತ್ತಿದ್ದಾರೆ,
ಗೋಡೆಯ ಕಂಡು ಮುಖ ಕಪ್ಪಿಟ್ಟಿತೋ,
ಮಿಲನದ ರಂಗು ಮುಗಿಯುವ ಮುನ್ನ
ಗಲ್ಲುಗಂಬ ಎದುರಾಯಿತೋ;
ಸಮಾದಲ್ಲಿ ಒಂದೇ ಸಮ ತಿರುಗುತ್ತಿದ್ದಾರೆ,
ಪ್ರೇಮಿಯ ಬಾಹುಗಳಲ್ಲಿ ಕಳೆದು ಹೋಗುತ್ತಿದ್ದಾರೆ,
ಹಾಡುಗಾರನ ದನಿಯಲೆಗಳು
ಕಾಣದ ಲೋಕಕೆ ಸೆಳೆದೊಯ್ಯುತ್ತಿವೆ.

ಹಾಡೆಂದರೆ ಪದಘೋಷಗಳಲ್ಲ, ಸದ್ದುಗದ್ದಲಗಳಲ್ಲ;
ಒಂದೊಂದು ಸ್ವರವೂ ಒಂದೊಂದು ಗುಪ್ತನಿಧಿ.
ತಮ್ಮೆಲ್ಲ ಕರಣಗಳನ್ನು ಕಳೆದುಕೊಂಡಿರುವರು,
ಬಣ್ಣ ಮತ್ತು ವಾಸನೆಗಳು ಅವರಿಗಲ್ಲ,
ಶುದ್ಧ ಸುರಸಾಗರದಲ್ಲಿ ಮಿಂದೆದ್ದಿಹರು.
ಅವರು ಪ್ರೇಮೋಪಾಸನೆಯ ಪಕ್ಷಪಾತಿಗಳು;
ಅವರಿಗೆ ಗುರು ಶಿಷ್ಯರೆಂಬ ಪಟ್ಟಗಳಿಲ್ಲ;
ನಿಲುವಂಗಿಯೊಳಗಿನ ಪರಮ ಸುಖದ
ಗುಟ್ಟು ಬಿಟ್ಟುಕೊಡದೆ,
ಎದೆಯ ಕಸದ ಕೊನೆಯ ಧೂಳನ್ನೂ
ತೊಡೆದು ಹಾಕಿರುವರು.

ಅವರು,
ಒಂದು ಬಟ್ಟಲು ಮದ್ಯ ಕುಡಿದಿರುವರು
ಮತ್ತವರೀಗ, ಕೊನೆಯದಾಗಿ, ಸೂಫಿಗಳಾದರು.

Leave a Reply