ಭಯದ ಜೊತೆ ಕೊಡುಕೊಳ್ಳುವಿಕೆ | ಜಿಡ್ಡು ಕಂಡ ಹಾಗೆ

ಭಯ ಹೆಚ್ಚಾದಂತೆಲ್ಲ ದೇವರು, ಮಾಸ್ಟರ್, ಗುರುವಿನ ಹುಡುಕಾಟ ಹೆಚ್ಚಾಗುತ್ತದೆ… | ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ : ಚಿದಂಬರ ನರೇಂದ್ರ

ನಮ್ಮ ಸುತ್ತಮುತ್ತಲಿನ ಜನ ನಮ್ಮ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯಗಳ ಬಗ್ಗೆ ನಮಗೆ ಭಯ, ಬದುಕಿನಲ್ಲಿ ಏನೂ ಸಾಧಿಸದೇ ಇರುವ ಬಗ್ಗೆ ಭಯ, ಜೀವನದಲ್ಲಿ ಯಾವುದನ್ನೂ ಪೂರ್ಣಮಾಡದಿರುವ ಬಗ್ಗೆ ಅಂಜಿಕೆ, ಅವಕಾಶಗಳು ಇರದಿರುವ ಬಗ್ಗೆ ಭಯ, ಇರುವ ಅವಕಾಶವನ್ನು ಕಳೆದುಕೊಳ್ಳುವ ಭಯ ; ಈ ಎಲ್ಲ ಮತ್ತು ಇನ್ನೂ ಮುಂತಾದ ಭಯಗಳು ಕಾರಣವಾಗಿ ನಮ್ಮೊಳಗೆ ತಪ್ಪಿತಸ್ಥ ಭಾವನೆ – ಏನೋ ಮಾಡಬಾರದ್ದನ್ನು ಮಾಡಿರುವ ಬಗ್ಗೆ ; ನಾವು ಮಾಡುವ ಪ್ರತಿ ಕೆಲಸದಲ್ಲೂ ತಪ್ಪಿತಸ್ಥ ಭಾವನೆ ; ನಾವು ಆರೋಗ್ಯದಿಂದ ಇರುವಾಗ ಇತರರು ಬಡವರು, ಅನಾರೋಗ್ಯದಿಂದ ನರಳುತ್ತಿದ್ದಾರೆ ; ನಮಗೆ ಉಣ್ಣಲು ತಿನ್ನಲು ಸಾಕಷ್ಟಿರುವಾಗ ಇತರರು ಹಸಿವೆಯಿಂದ ಬಳಲುತ್ತಿದ್ದಾರೆ.

ಮನಸ್ಸು ಈ ಬಗ್ಗೆ ಹೆಚ್ಚೆಚ್ಚು ವಿಚಾರ ಮಾಡಿದಂತೆಲ್ಲ, ಪ್ರಶೆಗಳನ್ನು ಕೇಳಿಕೊಂಡಂತೆಲ್ಲ, ಆಳವಾಗಿ ಯೋಚಿಸತೊಡಗಿದಂತೆಲ್ಲ ನಮ್ಮೊಳಗೆ ಕಳವಳ, ತಪ್ಪಿತಸ್ಥ ಭಾವನೆ ಹೆಚ್ಚಾಗುತ್ತಲೇ ಹೋಗುತ್ತವೆ. ಭಯ ಹೆಚ್ಚಾದಂತೆಲ್ಲ ದೇವರು, ಮಾಸ್ಟರ್, ಗುರುವಿನ ಹುಡುಕಾಟ ಹೆಚ್ಚಾಗುತ್ತದೆ.

ಎಲ್ಲರಿಗೂ ತಮ್ಮ ಮರ್ಯಾದೆಯ ಬಗ್ಗೆ ಅಪಾರ ಕಾಳಜಿ, ಭಯ ಈ ಮರ್ಯಾದೆಯನ್ನು ಆವರಿಸಿಕೊಂಡಿರುವ ಮುಸುಕು. ನಿಮ್ಮದು ಬದುಕಿನಲ್ಲಿ ಎದುರಾಗುವ ಅನೇಕ ಘಟನೆಗಳನ್ನು ನೇರಾನೇರ ಧೈರ್ಯದಿಂದ ಎದುರಿಸುವ ನಿರ್ಧಾರವೋ ಅಥವಾ ನಿಮ್ಮೊಳಗಿನ ಭಯಕ್ಕೊಂದು ಬಣ್ಣದ ಹೆಸರು ಕೊಟ್ಟು ಮರೆಮಾಚಿ ಬಿಡುವ ಜಾಣತನವೋ? ಅಥವಾ ನಿಮ್ಮ ಮನಸ್ಸಿಗೆ ಸಮಾಧನಕರವಾಗುವಂಥ ವಿವರಣೆಗಳನ್ನು ಹುಡುಕಿ ಭಯದಿಂದ ತತ್ತರಿಸುತ್ತಿರುವ ಮನಸ್ಸನ್ನು ತೃಪ್ತಿಗೊಳಿಸುವ ಚಾಲಾಕಿತನವೋ?

ಹೇಗೆ ಎದುರಿಸುತ್ತಿದ್ದೀರಿ ನೀವು ಭಯವನ್ನ, ಬದುಕನ್ನ? ರೇಡಿಯೋ ಅಥವಾ ಟಿವೀ ಆನ್ ಮಾಡಿಕೊಂಡು, ಪುಸ್ತಕ ಓದುತ್ತ, ಗುಡಿ, ಚರ್ಚು, ಮಸೀದಿಗಳಿಗೆ ಭೇಟಿ ಇತ್ತು ಅಥವಾ ಯಾವುದೋ ನಂಬಿಕೆ, ಸಿದ್ಧಾಂತಕ್ಕೆ ಗಂಟುಬಿದ್ದು ?

ಭಯ ಮನುಷ್ಯನೊಳಗಿನ ವಿಚ್ಛಿದ್ರಕಾರಿ ಶಕ್ತಿ ಅದು ಮನಸ್ಸನ್ನ ಬಾಡುವಂತೆ ಮಾಡುತ್ತದೆ, ನಿಮ್ಮ ಆಲೋಚನೆಗಳನ್ನ ತಿರುಚಿ ವಿಕೃತಗೊಳಿಸುತ್ತದೆ, ಎಲ್ಲ ಬಗೆಯ ಅಸಾಮಾನ್ಯ ಜಾಣ ಮತ್ತು ಸೂಕ್ಷ್ಮ ಸಿದ್ಧಾಂತಗಳತ್ತ, ಅಸಂಗತ ಮೂಢನಂಬಿಕೆಗಳತ್ತ ನಿಮ್ಮನ್ನು ಕೈ ಹಿಡಿದು ಕರೆದುಕೊಂಡು ಹೋಗುತ್ತದೆ.

ಇಂಥ ಭಯ ವಿನಾಶಕಾರಿ ಎಂದು ನಿಮಗೆ ಮನವರಿಕೆಯಾದಾಗ ಹೇಗೆ ನೀವು ಈ ಭಯವನ್ನ ಒರೆಸಿಹಾಕಿ ಮನಸ್ಸನ್ನ ಶುದ್ಧವಾಗಿ ಇಟ್ಟುಕೊಳ್ಳುವಿರಿ? ಭಯದ ಮೂಲವನ್ನು ಶೋಧಿಸಿ ತೆಗೆದಾಗ ಭಯದಿಂದ ಮುಕ್ತರಾಗಬಹುದು ಎಂದು ಹೇಳುತ್ತೀರಿ, ಹೌದಾ ? ಭಯದ ಮೇಲಿನ ಮುಸುಕು ತೆಗೆದುಹಾಕಿ ಭಯದ ಕಾರಣವನ್ನು ಕಂಡುಕೊಂಡಾಕ್ಷಣಕ್ಕೆ ಭಯ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.

ಭಯದ ಬಗ್ಗೆ ಸಂಪೂರ್ಣ ಅರಿವೂ ಮೂಡಬೇಕು ಭಯವನ್ನು ಅದರ ಜಾಣತನ, ತಂತ್ರಗಳಿಂದ ದೂರಮಾಡಿ ನೇರವಾಗಿ ಎದುರಿಸಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.