ಇಂದಿನ ಸುಭಾಷಿತ, ಭರ್ತೃಹರಿಯ ನೀತಿ ಶತಕದಿಂದ…

ಧನ ಶಬ್ದದಿಂದ ಧಾನ್ಯ ಶಬ್ದ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಶವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಲಾಗುತ್ತಿರಲಿಲ್ಲ. ಅದರ ವಿನಿಯೋಗ ನಡೆಯುತ್ತಲೇ ಇರಬೇಕಾಗಿತ್ತು. ಧಾನ್ಯವನ್ನು ತಿನ್ನಬೇಕು, ಇಲ್ಲವೇ  ತಿನ್ನಲು ಇಲ್ಲದವರಿಗೆ ಕೊಡಬೇಕು.  ಅದೇ ರೀತಿ ಧನ ಅಂದರೆ ಹಣ ಕೂಡಾ... ।   ಎನ್.ರಂಗನಾಥ ಶರ್ಮರ ವ್ಯಾಖ್ಯಾನ । ಕೃಪೆ : ಸೂಕ್ತಿ ವ್ಯಾಪ್ತಿ
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ ॥ 
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ॥ ನೀತಿಶತಕ ॥
ಅರ್ಥ: ದಾನ, ಭೋಗ, ನಾಶ - ಎಂದು ಹಣಕ್ಕೆ ಮೂರು ಗತಿಗಳುಂಟು. ಯಾರು ದಾನ ಮಾಡುವುದಿಲ್ಲವೋ ತಾವೂ ಭೋಗಿಸುವುದಿಲ್ಲವೋ, ಅವರ ಹಣಕ್ಕೆ ಮೂರನೆಯ ಗತಿ - ಎಂದರೆ ನಾಶ ಉಂಟಾಗುತ್ತದೆ.

ತಾತ್ಪರ್ಯ: ಹಣವಿರುವುದು ಚಲಾವಣೆಗಾಗಿ. ಚಲಾವಣೆಯೆಂದರೆ ಕೊಳ್ಳುವುದು ಅಥವಾ ಕೊಡುವುದು. ಕೊಳ್ಳುವುದು ತನಗಾಗಿ, ಕೊಡುವುದು ಪರರಿಗಾಗಿ. ಕೊಳ್ಳುವುದು ಸ್ವಾರ್ಥವೆನಿಸಿದರೂ ಪರಿಣಾಮದಲ್ಲಿ ಪರಾರ್ಥವೂ ಆಗುತ್ತದೆ. ಯಾರೂ ಹಣವನ್ನೇ ತಿನ್ನುವುದಿಲ್ಲ; ಅನ್ನಕ್ಕಾಗಿ, ಬಟ್ಟೆಗಾಗಿ ಖರ್ಚು ಮಾಡುತ್ತಾರೆ. ಪರಿಣಾಮದಲ್ಲಿ ಆ ಹಣ ರೈತನಿಗಷ್ಟು, ನೇಕಾರನಿಗಷ್ಟು ಸೇರಿಹೋಗುತ್ತದೆ. ಹೀಗೆ ಭೋಗದಲ್ಲಿಯೂ ಒಂದಂಶದ ತ್ಯಾಗ ಉಂಟು. ಆದರೆ ಉದ್ದೇಶ ಸ್ವಾರ್ಥವಾದ್ದರಿಂದ ಸ್ವಾರ್ಥದ ಲೇಪನ ಉಂಟು. ಇದು ರಾಜಸ.

ಬಡಬಗ್ಗರಿಗಾಗಿ ಕೊಡುವುದು ದಾನ. ಆಸ್ಪತ್ರೆ, ವಿದ್ಯಾಶಾಲೆಗಳ ನಿರ್ಮಾಣ ಮೊದಲಾದವು ದಾನದ ವಿವಿಧ ಮುಖಗಳು. ಪರಾರ್ಥವೇ ಉದ್ದೇಶವಾದರೆ ಈ ದಾನ ಸಾತ್ತ್ವಿಕ. ಹೆಸರಿಗಾಗಿ, ಕಳ್ಳಹಣವನ್ನು ದಕ್ಕಿಸಿಕೊಳ್ಳುವುದಕ್ಕಾಗಿ ಆದರೆ, ಆಗಲೂ ಆ ದಾನ ರಾಜಸವೇ.

ಧನ ಶಬ್ದದಿಂದ ಧಾನ್ಯ ಶಬ್ದ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಶವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಲಾಗುತ್ತಿರಲಿಲ್ಲ. ಅದರ ವಿನಿಯೋಗ ನಡೆಯುತ್ತಲೇ ಇರಬೇಕಾಗಿತ್ತು. ಧಾನ್ಯವನ್ನು ತಿನ್ನಬೇಕು, ಇಲ್ಲವೇ  ತಿನ್ನಲು ಇಲ್ಲದವರಿಗೆ ಕೊಡಬೇಕು. ಇಂಥ ಧನವುಳ್ಳವನು ಧನ್ಯನೆನಿಸಿದ್ದ. ದ್ರವ್ಯವೂ ಧನವೇ.

ದ್ರವ್ಯಯಜ್ಞವು ಹಲವಾರು ಯಜ್ಞಗಳಲ್ಲೊಂದು. “ಯಜಃ ದೇವಪೂಜಾ ಸಂಗತಿಕರಣದಾನೇಷು’’ ಎಂಬುದು ಧಾತುವಿನ ಅರ್ಥ. ದೇವತಾಪೂಜೆ, ಅಧಿಕವಾಗಿರುವುದರ ಸಮನ್ವಿತ ವಿತರಣೆ, ಬಡಬಗ್ಗರಿಗೆ ದಾನ – ಇವಿಷ್ಟು ‘’ಯಜ್ಞ’’ ಶಬ್ದಾರ್ಥ. ಒಂದು ವರ್ಷಕ್ಕಿಂತ ಹೆಚ್ಚಾಗುವಷ್ಟು ದ್ರವ್ಯ ಉಳ್ಳವನು ಯಜ್ಞ ಮಾಡಬೇಕೆಂದು ವಿಧಿಸುತ್ತದೆ ಶಾಸ್ತ್ರ.

ಗಾಳಿ ಸ್ವಚ್ಛವಾಗಿರಬೇಕಾದರೆ ಬೀಸುತ್ತಿರಬೇಕು. ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು. ಹಣದ ವಿನಿಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ನೈರ್ಮಲ್ಯ.

ಹೂ, ಹಣ್ಣು, ಹಣ – ಇವುಗಳಿಗೆ ಭೋಗ, ದಾನ ಎರಡೇ ಸರಿಯಾದ ಗತಿ. ಇಲ್ಲದಿದ್ದರೆ ಹೂ ಬಾಡುತ್ತದೆ, ಹಣ್ಣು ಕೊಳೆಯುತ್ತದೆ. ಹಣ ಕಂಡವರ ಪಾಲಾಗಿ ಹಾಳಾಗುತ್ತದೆ.

ಶಾಸ್ತ್ರಕಾರರು ಪ್ರತಿಯೊಂದು ಪದಾರ್ಥಕ್ಕೂ ಆರು ವಿಕಾರಗಳಿವೆ ಎಂದು ಗೊತ್ತುಮಾಡಿದ್ದಾರೆ. ಜಾಯತೇ, ಅಸ್ತಿ, ವರ್ಧತೇ, ವಿಪರಿಣಮತೇ, ಕ್ಷೀಯತೇ, ನಶ್ಯತಿ – ಎಂಬಿವು ಆರು ಭಾವವಿಕಾರಗಳು. ಉದಾಹರಣೆಗೆ ನಮ್ಮ ದೇಹವನ್ನೇ ತೆಗೆದುಕೊಳ್ಳಬಹುದು. ಮೊದಲು ಇದು ಹುಟ್ಟಿತು ಎನ್ನುತ್ತೇವೆ. ವಿಶಿಷ್ಟರೂಪವನ್ನು ತಳೆದು ಇಲ್ಲಿದೆ, ಅಲ್ಲಿದೆ, ಈ ಆಕೃತಿಯಲ್ಲಿ ಇಷ್ಟು ಪ್ರಮಾಣದಲ್ಲಿದೆ ಎಂಬ ವ್ಯವಹಾರಕ್ಕೆ ಗೋಚರವಾಗುವುದು “ಅಸ್ತಿ’. ಅನಂತರ ಆಹಾರವನ್ನು ತನ್ನಲ್ಲಿ ಅಳವಡಿಸಿಕೊಂಡು ದೇಹ ವರ್ಧಿಸುತ್ತದೆ. ಬೆಳವಣಿಗೆ ನಿಂತ ಮೇಲೆ ವಿಪರಿಣಾಮ. ಕೂದಲು ಬೆಳ್ಳಗಾಗುವುದು, ಚರ್ಮ ಮೂಳೆ ಮಾಂಸಖಂಡಗಳು ಬೆಳವಣಿಗೆಯನ್ನು ನಿಲ್ಲಿಸಿ ಬೇರೆ ಬೇರೆ ರೂಪವನ್ನು ತಳೆಯುವುದು ವಿಪರಿಣಾಮ. ಆಮೇಲೆ ದೇಹದ ಕ್ಷೀಣತೆ, ಅನಂತರ ನಾಶ – ಮರಣ.

ಹೀಗೆ ಆರು ವಿಕಾರಗಳಿಗೆ ಒಳಪಟ್ಟ ಹಣಕ್ಕೂ ಮೂರು ಗತಿಗಳನ್ನು ವ್ಯಾವಹಾರಿಕವಾಗಿ ನೀತಿಶಾಸ್ತ್ರಕಾರನು ಹೇಳಿದ್ದಾನೆ. ಹಣವನ್ನು ಸಂಪಾದಿಸುವುದು ತಮ್ಮ ಭೋಗಕ್ಕಾಗಿ ಎಂಬುದನ್ನು ಸಕಲರೂ ಬಲ್ಲರು. ಈ ‘ಸ್ವಾರ್ಥ’ದಲ್ಲಿ ಮಡದಿ ಮಕ್ಕಳ ಸುಖ ಎಂಬ ‘ಸ್ವಕೀಯಾರ್ಥ’ವೂ ಸೇರಿಹೋಗುತ್ತದೆ. ವಿಚಾರ ಮಾಡಿದಾಗ ತನಗಾಗಿಯೇ ಅಲ್ಲವೆ ತನ್ನವರು ಎಂಬ ಅಭಿಮಾನ ?

ಯಾರು ಹಣದ ಅಭಾವದಿಂದ ತತ್ತರಿಸುತ್ತಿದ್ದಾರೋ ಅವರಿಗೆ ಕೊಡುವುದು ದಾನ. ಅದನ್ನು ಸತ್ಪಾತ್ರರಿಗೆ ಕೊಡಬೇಕೆಂಬುದು ಸರ್ವಸಮ್ಮತವಾದ ನೀತಿ.

ತಾನೂ ತಿನ್ನಬೇಕು, ಹಸಿದವರಿಗೂ ತಿನ್ನಿಸಬೇಕು ಎಂಬುದೇ ಮೂಲತತ್ತ್ವ. ದಾನ, ಭೋಗ – ಎಂಬ ಎರಡು ಗತಿಗಳು ಧನಕ್ಕೆ ದೊರೆಯದೆ ಹೋದಾಗ ನಾಶ ಎಂಬ ಮೂರನೆಯ ಗತಿ ಅದಕ್ಕೆ ಕಟ್ಟಿಟ್ಟದ್ದು. ಅದು ತನ್ನ ಪಾಲಿಗೆ ಇಲ್ಲ ಎಂಬುದೇ ನಾಶ. ಭೋಗದಿಂದಾದ ಸುಖವಾಗಲಿ, ದಾನದಿಂದಾಗುವ ಪುಣ್ಯವಾಗಲಿ ಅವನ ಪಾಲಿಗೆ ಇಲ್ಲ. ತಾನೂ ತಿನ್ನ, ಪರರಿಗೂ ಕೊಡ – ಎಂಬ ಕಡುಲೋಭಿ ಈ ನೀತಿಯಿಂದ ಏನಾದರೂ ಕಲಿತರೆ ಅವನಿಗೇ ಒಳ್ಳೆಯದು. ಭಾಗವತದಲ್ಲಿ ಈ ನೀತಿಯನ್ನೇ ವಿಸ್ತರಿಸಿ “ಮನುಷ್ಯನು ಹಣವನ್ನು ಧರ್ಮಕ್ಕಾಗಿ, ಕೀರ್ತಿಗಾಗಿ, (ಉದ್ಯೋಗದಲ್ಲಿ ತೊಡಗಿಸಿ) ಮತ್ತೆ ಧನಾರ್ಜನೆಗಾಗಿ, ತನ್ನ ಭೋಗಕ್ಕಾಗಿ, ಸ್ವಜನರಿಗಾಗಿ ಹಂಚಬೇಕು” – ಎಂದು ಹೇಳಿದೆ (8-19-37). ಸ್ವಾರ್ಥವನ್ನು ಗೌಣವಾಗಿಸಿ ಪರಾರ್ಥವಾಗಿ ದುಡಿಯಬೇಕೆಂಬುದು ನೀತಿಶಾಸ್ತ್ರಕಾರನ ಹೃದಯ. ಆದ್ದರಿಂದ “ದಾನಂ ಭೋಗೋ ನಾಶ…..” ಎಂಬಲ್ಲಿ ದಾನವನ್ನೇ ಮೊದಲು ಹೇಳಲಾಗಿದೆ.

Leave a Reply