ಒಳ್ಳೆಯ ಸುದ್ದಿ ಎಂದರೆ… : ಒಂದು ಪದ್ಯ

ಮೂಲ: Thich Nhat Hanh | ಕನ್ನಡಕ್ಕೆ: ಚಿದಂಬರ ನರೇಂದ್ರ 
 ಅವರು ಮುದ್ರಿಸದ ಒಳ್ಳೆಯ ಸುದ್ದಿಗಳನ್ನ
 ನಾವು ಪ್ರಕಟ ಮಾಡುತ್ತೆವೆ.
 ಪ್ರತೀ ಕ್ಷಣಕ್ಕೊಂದರಂತೆ ಪ್ರಕಟವಾಗುತ್ತವೆ
 ನಮ್ಮ ವಿಶೇಷ ಸಂಚಿಕೆಗಳು,
 ಕೇವಲ ನಿಮಗಾಗಿ ಎಂಬಂತೆ.

 ಒಳ್ಳೆಯ ಸುದ್ದಿ ಎಂದರೆ,
 ನೀವು ಇನ್ನೂ ಬದುಕಿರುವುದು ಮತ್ತು,
 ಚಳಿಗಾಲದ ಕೊರೆವ ಚಳಿಯ ನಡುವೆಯೂ
 ನಿಂಬೆಯ ಗಿಡ ತಲೆ ಎತ್ತಿ ನಿಂತಿರುವುದು.

 ಒಳ್ಳೆಯ ಸುದ್ದಿ ಎಂದರೆ,
 ನಿನಗೆ ಸುಂದರವಾದ ಕಣ್ಣುಗಳಿವೆ ,
 ನೀಲಿ ಆಕಾಶದ 
 ಮೂಲೆ ಮೂಲೆಗಳನ್ನು ಮುಟ್ಟಲು.
 
 ಒಳ್ಳೆಯ ಸುದ್ದಿ ಎಂದರೆ,
 ನಿಮ್ಮ ಮಗು, ನಿಮ್ಮ ಕಣ್ಣ ಮುಂದಿದೆ ಹಾಗು,
 ಆ ಮಗುವನ್ನು ಬರಸೆಳೆದು ಅಪ್ಪಿಕೊಳ್ಳಲು
 ನಿಮ್ಮ ತೋಳುಗಳು ಸಧೃಡವಾಗಿವೆ.

 ಅವರು ಕೇವಲ ಸುಳ್ಳು ಸುದ್ದಿ ಮುದ್ರಿಸುತ್ತಾರೆ,
 ನಾವು ಹಾಗಲ್ಲ, 
 ನಮ್ಮ ಪ್ರತೀ ವಿಶೇಷ ಸಂಚಿಕೆಯನ್ನು ಗಮನಿಸಿ.

 ಒಳ್ಳೆಯ ಸುದ್ದಿ ಎಂದರೆ,
 ರಸ್ತೆಯ ಬದಿಯಲ್ಲಿ ಡ್ಯಾಂಡೆಲಿಯನ್ ಹೂವುಗಳು
 ಇನ್ನೂ ಅದ್ಭುತವಾಗಿ ಮುಗುಳ್ನಗುತ್ತ, 
 ಚಿರಂತನ ಸಂಗೀತವನ್ನು ನುಡಿಸುತ್ತಿದೆ.
 
 ದಯವಿಟ್ಟು ಕೇಳಿ,
 ಒಳ್ಳೆಯ ಸುದ್ದಿ ಎಂದರೆ,
 ನಿಮಗೆ ಕೇಳಬಲ್ಲ ಕಿವಿಗಳಿವೆ.
 ತಲೆ ಬಾಗಿಸಿ
 ಆ ಮಧುರ ಸಂಗೀತಕ್ಕೆ ಕಿವಿಯಾಗಿ,
 ಬದಿಗೆ ಸರಿಸುತ್ತ ನಿಮ್ಮ ಪೂರ್ವಾಗ್ರಹಗಳನ್ನೆಲ್ಲ 
 ಜಗದ ದುಗುಡಗಳನ್ನೆಲ್ಲ  ಹಿಂದೆ ಹಾಕುತ್ತ.
 
 ಇದೀಗ ಬಂದ ಒಳ್ಳೆಯ ಸುದ್ದಿ,
 ಹೀಗೆ ಮಾಡುವುದು ನಿಮಗೆ ಸಾಧ್ಯ.
 

Leave a Reply