ಇಚ್ಛಾಶಕ್ತಿಯುಳ್ಳ ಮನುಷ್ಯನೇ ಶರಣಾಗತಿಗೆ ಸಿದ್ಧನಾಗುತ್ತಾನೆ. ಏಕೆಂದರೆ ಶರಣಾಗತಿಗೆ ಅಪಾರ ಧೈರ್ಯದ ಅವಶ್ಯಕತೆ ಇದೆ. ಎಂದೂ ಶರಣಾಗತಿ ಕೇವಲ ಅಶಕ್ತರ ಹಾದಿ ಎಂದು ತಿಳಿಯಬೇಡಿ. ಶರಣಾಗತಿ ಅಪಾರ ಧೈರ್ಯವುಳ್ಳವರಿಗೆ ಮಾತ್ರ ಸಾಧ್ಯವಾಗುವಂಥದು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ
If surrender sits on the shoulders of your will, you have managed one of the greatest things in life – Osho
ಇರುವುದು ಒಂದೇ ದಾರಿ. ಆ ದಾರಿಯನ್ನ ಯಾವ ಹೆಸರಿನಿಂದ ಕರೆಯುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು. ‘ಶರಣಾಗತಿ’ (Surrender) ಮತ್ತು ‘ಇಚ್ಛೆ’ (Will) ಎನ್ನುವ ಪದಗಳು ಒಂದಕ್ಕೊಂದು ವಿರೋಧ ಎನ್ನುವಂತೆ ಕಂಡರೂ ನಿಜದಲ್ಲಿ ಅವು ಪರಸ್ಪರ ಹೊಂದಿಕೊಂಡು ಹೋಗುವಂಥವು, ಅವು ವಿರೋಧಾಭಾಸದ ಶಬ್ದಗಳಲ್ಲ. ಇದು ಒಂದು ಸೂಕ್ಷ್ಮ.
ಇಚ್ಛಾಶಕ್ತಿಯುಳ್ಳ ಮನುಷ್ಯನೇ ಶರಣಾಗತಿಗೆ ಸಿದ್ಧನಾಗುತ್ತಾನೆ. ಏಕೆಂದರೆ ಶರಣಾಗತಿಗೆ ಅಪಾರ ಧೈರ್ಯದ ಅವಶ್ಯಕತೆ ಇದೆ. ಎಂದೂ ಶರಣಾಗತಿ ಕೇವಲ ಅಶಕ್ತರ ಹಾದಿ ಎಂದು ತಿಳಿಯಬೇಡಿ. ಶರಣಾಗತಿ ಅಪಾರ ಧೈರ್ಯವುಳ್ಳವರಿಗೆ ಮಾತ್ರ ಸಾಧ್ಯವಾಗುವಂಥದು. ಇವರ ಧೈರ್ಯ ಎಷ್ಟು ಅಪರಿಮಿತ ಎಂದರೆ ತಮ್ಮ ಅಹಂ ನ್ನ ಕೂಡ ಇವರು ಮಾಸ್ಟರ್ ನ ಎದುರು ತ್ಯಜಿಸಿ ಶರಣಾಗಬಲ್ಲರು. ನಿಮಗೆ ಇಚ್ಛಾಶಕ್ತಿ ಇಲ್ಲದಿರುವಾಗ ನಿಮ್ಮಿಂದ ಶರಣಾಗತಿ ಸಾಧ್ಯವಿಲ್ಲ. ಶರಣಾಗತಿಗೂ ಗುಲಾಮಗಿರಿಗೂ ಇರುವ ವ್ಯತ್ಯಾಸ ಗಮನಿಸಿ ಗುಲಾಮಗಿರಿ ಅಶಕ್ತರು ಮತ್ತು ಹೇಡಿಗಳ ಸಾಧನ.
ಯಾರು ಈ ಶರಣಾಗುವವರು ?
ನಿಮ್ಮೊಳಗೆ ಕೇವಲ ಇಚ್ಛಾಶಕ್ತಿಯೊಂದಿದ್ದರೆ ಸಾಲದು, ಅದು ನಿಮ್ಮ ಅಹಂ ನ ಬೆಳವಣಿಗೆಗೆ ಸಹಕಾರಿಯಾಗುತ್ತ ನಿಮ್ಮನ್ನು ದಾರಿ ತಪ್ಪಿಸುತ್ತದೆ. ಮಾಸ್ಟರ್ ಸ್ಥಾನದಲ್ಲಿ ಇಚ್ಛಾಶಕ್ತಿ ಮಹಾ ಅಪಾಯಕಾರಿ, ತೊಂದರೆಯನ್ನುಂಟು ಮಾಡುವಂಥದು ಆದರೆ ಯಾವಾಗ ಇಚ್ಛಾಶಕ್ತಿ, ಶರಣಾಗತಿಯ ಜೊತೆ ಸೇರಿಕೊಳ್ಳುತ್ತದೆಯೋ ಆಗ ಅದರ ಚೆಲುವನ್ನು ಬಣ್ಣಿಸಲಿಕ್ಕಾಗದು. ಶರಣಾಗತಿಗೆ ಸಹಾಯ ಮಾಡಲು ಇಚ್ಛಾಶಕ್ತಿ ಬಳಕೆಯಾದಾಗ ನೀವು ಸರಿ ದಾರಿಯಲ್ಲಿ. ಅವೆರಡೂ ಬೇರೆ ಬೇರೆಯಂತೆ ಕಂಡರೂ ಒಂದಕ್ಕೊಂದು ಸಹಾಯಕಾರಿ.
ನಿಮಗೆ ಈ ಕಥೆ ಗೊತ್ತಿರಬಹುದು.
ಒಂದು ಕಾಡಿನಲ್ಲಿ ಇಬ್ಬರು ಮನುಷ್ಯರು ವಾಸವಾಗಿದ್ದರು. ಅವರಲ್ಲಿ ಒಬ್ಬ ಕುರುಡ, ಅವನಿಗೆ ಏನೂ ಕಾಣಿಸುತ್ತಿರಲಿಲ್ಲ. ಇನ್ನೊಬ್ಬ ಹೆಳವ ಅವನು ನಡೆಯಲು ಅಶಕ್ತನಾಗಿದ್ದ. ಅವರಿಬ್ಬರೂ ಒಂದೇ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದರಿಂದ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದರು, ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು.
ಒಮ್ಮೆ ಕಾಡಿಗೆ ಬೆಂಕಿಹತ್ತಿಕೊಂಡಿತು. ಕುರುಡ ಮತ್ತು ಹೆಳವ ಇಬ್ಬರೂ ಕಂಗಾಲಾದರು. ಆದರೆ ಈ ಸಮಯ ವೈರತ್ವವನ್ನು ಸಾಧಿಸುವ ಸಮಸವಾಗಿರಲಿಲ್ಲ. ಕುರುಡ ಮನುಷ್ಯ ನಡೆಯಬಲ್ಲವನಾಗಿದ್ದ, ಓಡಬಲ್ಲವನಾಗಿದ್ದ ಆದರೆ ಅವನಿಗೆ ಯಾವ ಕಡೆ ಸುರಕ್ಷಿತ ದಾರಿ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹೆಳವ ಮನುಷ್ಯನಿಗೆ ಪಾರಾಗಿ ಹೋಗುವ ದಾರಿ ಸ್ಪಷ್ಟ ಕಾಣಿಸುತ್ತಿತ್ತು ಆದರೆ ಅವನಿಗೆ ಆ ದಿಕ್ಕಿನಲ್ಲಿ ಚಲಿಸುವ ಚೈತನ್ಯವಿರಲಿಲ್ಲ.
ಕೊನೆಗೆ ಅವರಿಬ್ಬರೂ ಸೇರಿ ಒಂದು ಒಪ್ಪಂದಕ್ಕೆ ಬಂದರು, “ ಇದು ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಮರೆತು ಒಬ್ಬರಿಗೊಬ್ಬರು ಸಹಾಯ ಮಾಡುವ ಸಮಯ.”
“ ನಾನು ನಿನ್ನನ್ನು ನನ್ನ ಹೆಗಲ ಮೇಲೆ ಕೂರಿಸಿಕೊಳ್ಳುತ್ತೇನೆ ಸುರಕ್ಷಿತ ದಾರಿಯಲ್ಲಿ ನಡೆಯಲು ನೀನು ನನಗೆ ಮಾರ್ಗದರ್ಶನ ಮಾಡು. “ ಕುರುಡ ಮನುಷ್ಯ ಸಲಹೆ ನೀಡಿದ. ಈ ಸಲಹೆ ಒಪ್ಪಿದ ಹೆಳವ ಮನುಷ್ಯ, ಕುರುಡನ ಹೆಗಲ ಮೇಲೆ ಕುಳಿತುಕೊಂಡು ಅವನನ್ನು ಸುರಕ್ಷಿತ ದಾರಿಯಲ್ಲಿ ಮುನ್ನಡೆಸಿದ. ಇಬ್ಬರೂ ಯಾವ ಅಪಾಯವಿಲ್ಲದೇ ಕಾಡಿನ ಬೆಂಕಿಯಿಂದ ಪಾರಾಗಿ ಹೊರಗೆ ಬಂದರು.
ಇಂಥದೇ ಒಂದು ಪರಿಸ್ಥಿತಿಯನ್ನ ಇಚ್ಛಾಶಕ್ತಿ ಮತ್ತು ಶರಣಾಗತಿ ಎದುರಿಸುತ್ತಿದ್ದಾರೆ. ಇಚ್ಛೆ, ಕುರುಡು ಆದರೆ ಬಹಳ ವೇಗವಾಗಿ ಚಲಿಸುವ ಶಕ್ತಿಯುಳ್ಳದ್ದು , ಅಪಾರ ಸಾಮರ್ಥ್ಯಶಾಲಿ. ಶರಣಾಗತಿಗೆ ಕಣ್ಣುಗಳಿವೆ ಆದರೆ ಕಾಲುಗಳಿಲ್ಲ. ನೀವು ಈ ಶರಣಾಗತಿ ಮತ್ತು ಇಚ್ಛಾಶಕ್ತಿಗಳ ನಡುವೆ ಗೆಳೆತನ ಸಾಧ್ಯಮಾಡಬಲ್ಲಿರಾದರೆ, ಹಾಗು ಶರಣಾಗತಿ, ಇಚ್ಛಾಶಕ್ತಿಯ ಹೆಗಲ ಮೇಲೆ ಕುಳಿತುಕೊಳ್ಳುವಂತಾದರೆ, ಬದುಕಿನ ಅತ್ಯಂತ ಮಹತ್ತರ ಸಂಗತಿಯೊಂದನ್ನ ಸಾಧಿಸಿದಂತೆ. ಆಗ ದಾರಿ ಹಗುರ, ಗುರಿ ಹತ್ತಿರ.
Osho, The Sword and the Lotus – Talks in the Himalayas, Ch 3, Q 4 (excerpt)