ಮುಖ್ಯವಾಗಿ ಎರಡು ಬಗೆಯ ದುಃಖಗಳು. ಒಂದು ನಮ್ಮ ಅನುಭವಕ್ಕೆ, ಪ್ರಜ್ಞೆಗೆ ಥಟ್ಟನೇ ಗೊತ್ತಾಗುವ ದುಃಖ, ಇನ್ನೊಂದು ನಮ್ಮೊಳಗೆ ಸುಪ್ತವಾಗಿರುವ ದುಃಖ, ಈ ದುಃಖಕ್ಕೆ ಯಾವ ಕಾರಣ, ಯಾವ ತಕ್ಷಣದ ಪ್ರೇರಣೆಯೂ ಇಲ್ಲ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ದುಃಖವೆಂದರೆ……..ದುಗುಡ, ಅಸ್ಪಷ್ಟತೆ, ಸಂಪೂರ್ಣ ಒಂಟಿತನ ಎನ್ನುವ ಭಾವನೆ. ದುಃಖ ಹಲವಾರು ಬಗೆಯದು, ಸಾವಿನ ದುಃಖ; ಬಯಕೆಗಳನ್ನು ಪೂರ್ತಿಮಾಡಿಕೊಳ್ಳಲಾಗದ ದುಃಖ, ಯಾರೂ ತನ್ನನ್ನು ಗುರುತಿಸುತ್ತಿಲ್ಲ ಎನ್ನುವ ದುಃಖ, ಪ್ರೀತಿಸುವ ಆದರೆ ತಿರುಗಿ ಪ್ರೀತಿಯನ್ನು ವಾಪಸ್ ಪಡೆಯಲಾರದ ದುಃಖ.
ಹೀಗೆ ಹಲವಾರು ಬಗೆಯ ದುಃಖಗಳು ಇರುವುದಂತೂ ನಿಜ ಹಾಗು ನನ್ನ ಪ್ರಕಾರ ದುಃಖದ ಸ್ವಭಾವವನ್ನು ಪೂರ್ತಿಯಾಗಿ ತಿಳಿದುಕೊಳ್ಳದೇ ಹೋದರೆ ಬಿಕ್ಕಟ್ಟುಗಳಿಗೆ, ಸಂದಿಗ್ಧಗಳಿಗೆ ಹಾಗು ಪ್ರತಿದಿನದ ನೋವಿಗೆ ಕಾರಣವಾಗಿರುವ ಭ್ರಷ್ಟತೆ, ಅವನತಿಗಳಿಗೆ ಕೊನೆಯೇ ಇಲ್ಲ.
ಮುಖ್ಯವಾಗಿ ಎರಡು ಬಗೆಯ ದುಃಖಗಳು. ಒಂದು ನಮ್ಮ ಅನುಭವಕ್ಕೆ, ಪ್ರಜ್ಞೆಗೆ ಥಟ್ಟನೇ ಗೊತ್ತಾಗುವ ದುಃಖ, ಇನ್ನೊಂದು ನಮ್ಮೊಳಗೆ ಸುಪ್ತವಾಗಿರುವ ದುಃಖ, ಈ ದುಃಖಕ್ಕೆ ಯಾವ ಕಾರಣ, ಯಾವ ತಕ್ಷಣದ ಪ್ರೇರಣೆಯೂ ಇಲ್ಲ.
ಬಹುತೇಕ ಎಲ್ಲರಿಗೂ ನಮ್ಮ ಪ್ರಜ್ಞೆಗೆ ನಿಲುಕುವ ದುಃಖದ ಬಗ್ಗೆ ಗೊತ್ತು ಮತ್ತು ಈ ಬಗೆಯ ದುಃಖದ ಜೊತೆ ಹೇಗೆ ವ್ಯವಹರಿಸಬೇಕು ಎನ್ನುವುದೂ ಗೊತ್ತು ; ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಪಾಲಿಸುತ್ತ ಈ ದುಃಖದಿಂದ ದೂರವಾಗುವುದು ಅಥವಾ ದೂರ ಓಡಿಹೋಗುವುದು, ಈ ದುಃಖವನ್ನು ತರ್ಕಬದ್ಧವಾಗಿ ವಿವರಿಸುತ್ತ ಸಾಮಾನ್ಯೀಕರಣಗಳಿಸುವುದು, ಬೌದ್ಧಿಕವಾಗಿ ಅಥವಾ ದೈಹಿಕವಾಗಿ ನಶೆಯಲ್ಲಿ ತೇಲಾಡುತ್ತ ದುಃಖ ಮರೆಸುವ ಪ್ರಯತ್ನ ಮಾಡುವುದು ಅಥವಾ ಶಬ್ದಗಳ ಜೊತೆ ಆಟ ಆಡುತ್ತ ಮೈ ಮರೆಯುವುದು, ಬಾಹ್ಯ, ತೋರಿಕೆಯ ಮನೋರಂಜನೆಗಳ ಮೊರೆ ಹೋಗುವುದು, ಇತ್ಯಾದಿ. ನಾವು ಇಷ್ಟೆಲ್ಲ ಪ್ರಯತ್ನ ಮಾಡಿದರೂ ಈ ಪ್ರಜ್ಞೆಗೆ ಗೊತ್ತಿರುವ ದುಃಖದಿಂದ ಕಳಚಿಕೊಳ್ಳುವುದು ಮಾತ್ರ ಸಾಧ್ಯವಾಗುವುದೇ ಇಲ್ಲ.
ಇನ್ನು ನಮ್ಮೊಳಗೆ ಸುಪ್ತವಾಗಿರುವ ದುಃಖದ ಕುರಿತು, ಈ ಬಗೆಯ ದುಃಖ ನಮಗೆ ಶತಮಾನಗಳಿಂದ ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬಂದದ್ದು. ಮನುಷ್ಯ ಈ ಅಸಾಮಾನ್ಯ ದುಃಖವನ್ನು ನೀಗಿಸಿಕೊಳ್ಳಲು ಸದಾ ಪ್ರಯತ್ನ ಮಾಡುತ್ತಲೇ ಇದ್ದಾನೆ ; ಆದರೆ ನಾವು ಖುಶಿಯಾಗಿದ್ದೇವೆ, ನಮ್ಮ ಬಳಿ ಸುಖವಾಗಿ ಇರಲು ಬೇಕಾದುದೆಲ್ಲ ಇದೆ ಎಂದು ನಾವು ತಿಳಿದುಕೊಂಡಿರುವಾಗಲೂ ಎಲ್ಲೋ ನಮ್ಮೊಳಗೆ, ನಮ್ಮ ಸುಪ್ತ ಪ್ರಜ್ಞೆಯ ಆಳದಲ್ಲಿ ಈ ದುಃಖದ ಕುರುಹುಗಳು ಇದ್ದೇ ಇವೆ.
ದುಃಖಕ್ಕೆ ಒಂದು ಕೊನೆ ಹಾಡಬೇಕು ಎಂದು ಮಾತಾಡುವಾಗಲೆಲ್ಲ ನಾವು ಎಲ್ಲ ದುಃಖಗಳ ಕೊನೆ ಬಯಸುತ್ತಿದ್ದೇವೆ, ಪ್ರಜ್ಞೆಗೆ ಗೊತ್ತಿರುವ ಮತ್ತು ಸುಪ್ತಪ್ರಜ್ಞೆಯಲ್ಲಿರುವ ಎರಡೂ ದುಃಖಗಳಿಂದ ಮುಕ್ತಿ ಬಯಸುತ್ತಿದ್ದೇವೆ.
ದುಃಖವನ್ನು ಕೊನೆಗೊಳಿಸಿಕೊಳ್ಳಬೇಕಾದರೆ ನಮ್ಮ ಬುದ್ಧಿ-ಮನಸ್ಸು ಅತ್ಯಂತ ಸ್ಪಷ್ಟವಾಗಿರಬೇಕು, ತುಂಬ ಸರಳವಾಗಿರಬೇಕು. ಸರಳತೆ ಕೇವಲ ಒಂದು ತಿಳುವಳಿಕೆಯಲ್ಲ, ಸರಳವಾಗಿರಲು ಬುದ್ಧಿಮತ್ತೆ, ವಿವೇಕ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಆಳವಾದ ಸಂವೇದನೆ.