ರಾಬಿಯಾ ಕುರಾನ್ ನಲ್ಲಿದ್ದ ‘ಸೈತಾನ ಎದುರಾದರೆ ಅವನನ್ನು ದ್ವೇಷಿಸು’ ಎಂಬ ವಾಕ್ಯದಲ್ಲಿ ‘ದ್ವೇಷಿಸು’ ಎಂಬ ಪದವನ್ನು ಚಿತ್ತು ಮಾಡಿ ‘ಪ್ರೀತಿಸು’ ಎಂದು ತಿದ್ದಿದ್ದಳು. ಅದಕ್ಕೆ ಅವಳು ಕೊಟ್ಟ ಕಾರಣ… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ
ಸೂಫಿಗಳು ಎಲ್ಲ ಧರ್ಮಗಳ ಪರಿಪೂರ್ಣ ಚಿಂತನೆಯ ಅತ್ಯುತ್ತಮ ಮೊತ್ತ. ಬೇರೆ ಯಾವ ಅಧ್ಯಾತ್ಮದ ಚಿಂತಕರಿಗೂ ನೀವು ಅವರನ್ನು ಹೋಲಿಕೆ ಮಾಡುವುದು ಸಾಧ್ಯವಿಲ್ಲ. ಮತ್ತು ಈ ಸೂಫಿಗಳಲ್ಲೇ ಅತ್ಯಂತ ವಿಶಿಷ್ಟಳಾದ ರಾಬಿಯಾ ಅಲ್ – ಅದಬಿಯಾ ಳನ್ನ ಬೇರೆ ಯಾರಿಗೂ ಹೋಲಿಸಲಾಗದು.
ಹಾಗೆಯೇ ಇನ್ನೊಬ್ಬ ಮಹಾನ್ ಸೂಫಿ ಸಂತ ಹಸನ್. ಸೂಫಿಗಳೆಲ್ಲರ ಪ್ರೀತಿ, ಗೌರವಕ್ಕೆ ಪಾತ್ರನಾದವನು. ರಾಬಿಯಾ ಮತ್ತು ಹಸನ್ ನಡುವೆ ನಡೆದ ಒಂದು ಘಟನೆ ನೆನಪಾಗುತ್ತಿದೆ.
ನನ್ನ ಪ್ರಕಾರ ರಾಬಿಯಾ ತುಂಬ ದೊಡ್ಡ ಸೂಫಿ ಬಹುಶಃ ಎಲ್ಲ ಸೂಫಿ ಮಾಸ್ಟರ್ಗಳಿಗಿಂತ, ಹಾಗೆಯೇ ಹಸನ್ ಗೂ ಸಾವಿರಾರು ಹಿಂಬಾಲಕರು. ಒಮ್ಮೆ ಹಸನ್, ರಾಬಿಯಾಳ ಮನೆಗೆ ಬಂದ. ಒಂದಿಷ್ಟು ದಿನ ಅಲ್ಲೇ ಇದ್ದು ರಾಬಿಯಾಳ ಜೊತೆ ಚರ್ಚೆ ಮಾಡುವುದು ಹಸನ್ ನ ಉದ್ದೇಶವಾಗಿತ್ತು.
ಒಂದು ಮುಂಜಾನೆ ಹಸನ್ ಗೆ ಪವಿತ್ರ ಕುರಾನ್ ಪಠಣ ಮಾಡುವ ಬಯಕೆಯಾಯಿತು ಆದರೆ ಹಸನ್ ಬರುವಾಗ ತನ್ನ ಸ್ವಂತ ಪ್ರತಿ ಜೊತೆ ತಂದಿರಲಿಲ್ಲ. ಹಾಗಾಗಿ ರಾಬಿಯಾಳ ಸ್ವಂತ ಪ್ರತಿಯನ್ನು ಹಸನ್ ಕೇಳಿ ಪಡೆದುಕೊಂಡ.
ರಾಬಿಯಾಳ ಕುರಾನ್ ಪ್ರತಿಯನ್ನು ತೆರೆಯುತ್ತಿದ್ದಂತೆಯೇ ಅಲ್ಲಿ ಹಸನ್ ಗೆ ಅಚ್ಚರಿ ಕಾದಿತ್ತು. ಬಹಳಷ್ಟು ಜಾಗಗಳಲ್ಲಿ ರಾಬಿಯಾ ತನ್ನ ಮಾತುಗಳನ್ನ ಸೇರಿಸಿದ್ದಳು, ಹಲವಾರು ಕಡೆಗಳಲ್ಲಿ ಸಾಲುಗಳನ್ನ ತಿದ್ದುಪಡಿ ಮಾಡಿದ್ದಳು. ಇದು ಇಸ್ಲಾಂನ ಪ್ರಚಲಿತ ಪರಂಪರೆಗೆ ವಿರುದ್ಧ ಏಕೆಂದರೆ ಕುರಾನ್ ಭಗವಂತನ ಕೊನೆಯ ಸಂದೇಶ ಮತ್ತು ಮಹಮ್ಮದರು ಅಲ್ಲಾಹ್ ನ ಕೊನೆಯ ಪ್ರವಾದಿಗಳು. ಹಾಗಾಗಿ ಕುರಾನ್ ನ ತಿದ್ದುಪಡಿ ನಿಷಿದ್ಧ. ಆದರೆ ಇಲ್ಲಿ ರಾಬಿಯಾ ಕೆಲ ಸಾಲುಗಳನ್ನೇ ತೆಗೆದುಬಿಟ್ಟಿದ್ದಾಳೆ ಅಲ್ಲಲ್ಲಿ ತಿದ್ದುಪಡಿ ಮಾಡಿದ್ದಾಳೆ.
“ ರಾಬಿಯಾ, ನಿನ್ನ ಕುರಾನ್ ಪ್ರತಿಯನ್ನ ಯಾರೋ ಹಾಳು ಮಾಡಿದ್ದಾರೆ” ಹಸನ್ ಆತಂಕದಿಂದ ಕೂಗಿಕೊಂಡ. “ ಇಲ್ಲ ಅದೆಲ್ಲ ನನ್ನದೇ ಕೆಲಸ, ಹಾಗೆ ಮಾಡದೇ ನನಗೆ ಬೇರೆ ದಾರಿ ಇರಲಿಲ್ಲ.” ರಾಬಿಯಾ, ಹಸನ್ ನ ಆತಂಕ ಕಡಿಮೆ ಮಾಡುವ ಪ್ರಯತ್ನ ಮಾಡಿದಳು. “ಇಲ್ಲಿ ನೋಡು ಹಸನ್, ನೀನು ತೆರೆದಿರುವ ಪುಟ. ಈ ವಾಕ್ಯ ಗಮನಿಸು…… ನಿನಗೆ ಸೈತಾನ ಎದುರಾದರೆ ಅವನನ್ನ ದ್ವೇಷಿಸು” ರಾಬಿಯಾ ದ್ವೇಷಿಸು ಎಂಬ ಪದವನ್ನು ಚಿತ್ತು ಮಾಡಿ ಪ್ರೀತಿಸು ಎಂದು ತಿದ್ದಿದ್ದಳು.
“ ಆದರೆ ರಾಬಿಯಾ ಅದು ಭಗವಂತನ ಸಂದೇಶ, ನೀನು ತಿದ್ದುವ ಹಾಗಿಲ್ಲ.” ಹಸನ್ ರಾಬಿಯಾಳ ನಡೆಯನ್ನ ಆಕ್ಷೇಪಿಸಿದ. “ ಹಸನ್ ನನಗೆ ಗೊತ್ತಿಲ್ಲ ಆದರೆ ನನ್ನ ಬಗ್ಗೆ ನನಗೆ ಅರಿವು ಮೂಡಿದ ಮೇಲೆ ನನ್ನೊಳಗೆ ಉಳಿದುಕೊಂಡಿರುವುದು ಪ್ರೀತಿ ಮಾತ್ರ. ನನ್ನ ಎದುರು ಸಂತ, ಸೈತಾನ ಯಾರೇ ಬರಲಿ, ನನಗೆ ಅವರ ಬಗ್ಗೆ ಇರುವುದು ಪ್ರೀತಿ ಮಾತ್ರ. ಇದು ನನ್ನ ಸ್ವಂತ ಕುರಾನ್ ನ ಪ್ರತಿ ಇದರಲ್ಲಿರುವ ತಿಳುವಳಿಕೆ ನನ್ನನ್ನು ಪ್ರತಿಫಲಿಸುತ್ತದೆ. ಹಾಗಾಗಿ ಇದು ನನ್ನ ಅನುಭವದ ಮೊತ್ತ. ದ್ವೇಷ ನನ್ನಿಂದ ಪೂರ್ತಿಯಾಗಿ ದೂರವಾಗಿದೆ ಹಾಗಾಗಿ ನನಗೆ ಕುರಾನ್ ನ ಮೂಲ ಸಾಲುಗಳನ್ನ ಪಾಲಿಸಲು ಸಾಧ್ಯವಾಗುತ್ತಿಲ್ಲ, ನಾನು ಅಸಹಾಯಕಳು. ಸಾಕ್ಷಾತ್ ಭಗವಂತನೇ ಬಂದು ಹೇಳಿದರೂ ನಾನು ಅವನ ಜೊತೆ ವಾದ ಮಾಡುತ್ತೇನೆ ಏಕೆಂದರೆ ದ್ವೇಷ ನನ್ನ ಅನುಭವದ ಪರೀಧಿಯಲ್ಲಿ ಇಲ್ಲವೇ ಇಲ್ಲ. ನಾನು ಈ ಮಾತನ್ನ ಬಹಳ ಅಧಿಕಾರಯುತವಾಗಿ, ಖಂಡಿತವಾಗಿ ಹೇಳಬಲ್ಲೆ. ಯಾವಾಗ ನೀನು ಭಗವಂತನ ಪ್ರೀತಿಯಲ್ಲಿ ಪೂರ್ತಿಯಾಗಿ ಒಂದಾಗುವೆಯೋ ಆಗ ನಿನ್ನ ಕಣ ಕಣವೂ ಪ್ರೀತಿಯಿಂದ ತುಂಬಿ ಹರಿಯುವುದು. ಆಗ ನಿನ್ನೆದುರಿಗೆ ಯಾರೇ ಎದುರಾದರೂ ಅವರಿಗೆ ನಿನ್ನಿಂದ ಪ್ರೀತಿ ಬಿಟ್ಟು ಬೇರೇನೂ ಸಿಗುವುದಿಲ್ಲ. ಪ್ರೀತಿ ನಿನ್ನೊಳಗಿಂದ ಬೆಳಕಿನಂತೆ ಹರಿಯುತ್ತದೆ. ಭಗವಂತ, ಸೈತಾನ ಯಾರೇ ಎದುರಾದರೂ ಅವರು ನಿನ್ನ ಪ್ರೀತಿಯಲ್ಲಿ ಮುಳುಗಿ ಹೋಗುತ್ತಾರೆ. ನೀನು ಒಬ್ಬನೇ ಇರುವಾಗಲೂ, ನಿನ್ನ ಸುತ್ತ ಯಾರೂ ಇಲ್ಲದಿರುವಾಗಲೂ, ಪ್ರೀತಿ ನಿನ್ನೊಳಗಿಂದ ಹರಿಯುತ್ತಲೇ ಇರುತ್ತದೆ. ಹೀಗೆ ಪ್ರೀತಿ ತುಂಬಿ ಹರಿಯುವುದು, ಅರಿವು ಸಾಧ್ಯವಾದ ಬಗ್ಗೆ ಸ್ಪಷ್ಟ ಸಂದೇಶ. ಪ್ರೀತಿ ಜ್ಞಾನೋದಯದ ಸಹಜ ಸ್ವಭಾವ.
“ ಹೌದಲ್ಲ, ಎಷ್ಟು ನಿಜ ಇದು!” ಹಸನ್, ರಾಬಿಯಾಳ ಮಾತಿಗೆ ಖುಶಿಯಿಂದ ತಲೆದೂಗಿದ.
Osho, The Sword and the Lotus – Talks in the Himalayas, Ch 17, Q 1 (excerpt)
ಕಣ್ಣು ಕಂಡ ಸತ್ಯ…ಅದ್ಭುತ ….