ಜಪಾನಿ ನಟನ ಜೂಜು

ನೀವು ಗೆಲುವಿಗಾಗಿ ಅಥವಾ ಸೋಲಿಗಾಗಿ ಆಡುತ್ತಿಲ್ಲ. ಏಕೆಂದರೆ ನಿಮ್ಮ ಸೋಲು ಅಷ್ಟೇ ಅಲ್ಲ ನಿಮ್ಮ ಗೆಲುವು ಕೂಡ ನಿಮ್ಮ ಸಂಕಟವಾಗಿ ಬದಲಾಗಬಹುದು. ಸೋಲು ಗೆಲುವಿನ ಕರಾರುಗಳಿಲ್ಲದೇ ಎಲ್ಲ ಪಣಕ್ಕಿಟ್ಟು ಆಟ ಆಡುತ್ತಾನೆ ಸಾಹಸಿ… ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Staking everything, knowing that you are gambling with the unknown… you may be victorious, you may be a failure, but it does not matter – Osho.

ನನಗೆ ಒಬ್ಬ ಜಪಾನಿ ನಟ ನೆನಪಾಗುತ್ತಿದ್ದಾನೆ. ಎರಡನೇಯ ಮಹಾಯುದ್ಧ ಕ್ಕಿಂತ ಮುಂಚೆ ಅಮೇರಿಕೆಯ ಹಾಲಿವುಡ್ ನಲ್ಲಿ ವಾಸವಾಗಿದ್ದ. ಹಾಲಿವುಡ್ ಸಿನೇಮಾಗಳಲ್ಲಿನ ತನ್ನ ನಟನೆಯಿಂದಾಗಿ ಸಾಕಷ್ಟು ಹಣ, ಪ್ರಸಿದ್ಧಿ ಗಳಿಸಿದ್ದ. ಅವನು ಎಷ್ಟು ಹಣ ಗಳಿಸಿದ್ದನೆಂದರೆ ಇಡೀ ಜೀವಮಾನ ಯಾವ ಕೆಲಸ ಮಾಡದೇ ಐಷಾರಾಮಿಯಾಗಿ ಜೀವನ ನಡೆಸುವಷ್ಟು. ಹಾಗಾಗಿ ಅವನು ಮರಳಿ ಜಪಾನಿಗೆ ಹೋಗುವ ಮನಸ್ಸು ಮಾಡಿದ. ಅವನಿಗೆ ಪ್ಯಾರಿಸ್ ನೋಡಬೇಕೆಂಬ ಬಹು ದೊಡ್ಡ ಆಸೆಯಿತ್ತಾದ್ದರಿಂದ ಪ್ಯಾರಿಸ್ ಮೂಲಕ ಜಪಾನಿಗೆ ಮರಳುವ ವ್ಯವಸ್ಥೆ ಮಾಡಿಕೊಂಡ.

ಪ್ಯಾರಿಸ್ ನ ಭವ್ಯ ಹೊಟೆಲ್ ನ ಅತ್ಯಂತ ಮೇಲಿನ ಮಹಡಿಯಲ್ಲಿ ಅವ ರೂಮ್ ಬುಕ್ ಮಾಡಿಕೊಂಡಿದ್ದ. ಹೊಟೆಲ್ ನ ತಳ ಮಹಡಿಯಲ್ಲಿ ಒಂದು ಪ್ರಸಿದ್ಧ ಕ್ಯಾಸಿನೋ ಇತ್ತು. ಜಗತ್ತಿನ ಶ್ರೀಮಂತರೆಲ್ಲ ಅಲ್ಲಿಗೆ ಜೂಜು ಆಡಲು ಬರುತ್ತಿದ್ದರು. ನಟ ಹೊಟೆಲ್ ಗೆ ಬಂದಾಗ ಬಹುತೇಕ ಸಂಜೆಯಾಗಿತ್ತು. ರೂಮಿಗೆ ಹೋಗಿ ಫ್ರೆಶ್ ಆಗಿ, ಮೆಟ್ಟಲು ಇಳಿದು ಕ್ಯಾಸಿನೋ ಗೆ ಬಂದ. ಆತ ತಾನು ಗಳಿಸಿದ್ದನ್ನೆಲ್ಲ ಪಣಕ್ಕಿಟ್ಟು ಜೂಜು ಆಡಿದ, ಆದರೆ ಅದೃಷ್ಟ ಅವನ ಜೊತೆಗಿರಲಿಲ್ಲ. ಅವ ತನ್ನ ಎಲ್ಲ ಹಣ ಜೂಜಿನಲ್ಲಿ ಕಳೆದುಕೊಂಡ. ಜಪಾನಿಗೆ ಹೋಗಲು ಟಿಕೇಟ್ ಖರೀದಿಸಲು ಬೇಕಾಗುವಷ್ಟು ಹಣ ಕೂಡ ಅವನ ಬಳಿ ಉಳಿಯಲಿಲ್ಲ. ಆತ ರೂಮಿಗೆ ಮರಳಿ ಹೋದಮೇಲೆ ಕ್ಯಾಸಿನೋದಲ್ಲಿ ನಿರವ ಆವರಿಸಿಕೊಂಡಿತು. ಅಲ್ಲಿಯವರೆಗೆ ಇಷ್ಟು ದೊಡ್ಡ ಮೊತ್ತವನ್ನು ಯಾರೂ ಅಲ್ಲಿ ಕಳೆದುಕೊಂಡಿರಲಿಲ್ಲ. ಹೊಟೆಲಿನ ಕೆಲಸಗಾರರೆಲ್ಲ ದಿಗ್ಭ್ರಮೆಗೆ ಒಳಗಾಗಿದ್ದರು.

ಮರುದಿನ ಬೆಳಿಗ್ಗೆ ಜಪಾನಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪತ್ರಿಕೆಗಳ ಮುಖಪುಟದಲ್ಲಿ ದಪ್ಪ ಅಕ್ಷರಗಳಲ್ಲಿ ಪ್ರಕಟವಾಗಿತ್ತು. ನಿನ್ನೆ ರಾತ್ರಿ ಕ್ಯಾಸಿನೋದಲ್ಲಿ ನಡೆದ ಘಟನೆಗೆ ಸಾಕ್ಷಿಯಾಗಿದ್ದ ಹೊಟೇಲ್ ನ ಸ್ಟಾಫ್, ಆತ್ಮಹತ್ಯೆ ಮಾಡಿಕೊಂಡ ಜಪಾನಿ ಕ್ಯಾಸಿನೋದಲ್ಲಿ ಹಣ ಕಳೆದುಕೊಂಡ ವ್ಯಕ್ತಿಯಲ್ಲದೇ ಬೇರೆ ಯಾರೂ ಆಗಿರಲಿಕ್ಕೆ ಸಾಧ್ಯವಿಲ್ಲವೆಂದು ಭಾವಿಸಿ, ಜಪಾನಿ ನಟನ ರೂಮಿಗೆ ಓಡಿ ಬಂದು ಬಾಗಿಲು ಬಾರಿಸಿದರು. ಬಾಗಿಲು ತೆರೆದ ನಟ, “ ಯಾಕೆ ಏನಾಯ್ತು ? ಏನೀ ಗಲಾಟೆ “ ಪ್ರಶ್ನೆ ಮಾಡಿದ.

“ ದಯವಿಟ್ಟು ಕ್ಷಮಿಸು. ಪೇಪರ್ ನಲ್ಲಿ ಪ್ರಕಟವಾಗಿರುವ ಸುದ್ದಿ ನೋಡಿ ನಮಗೆ ಗಾಬರಿಯಾಗಿತ್ತು . ಆತ್ಮಹತ್ಯೆ ಮಾಡಿಕೊಂಡವನ ದೇಹ ಎಷ್ಟು ನುಜ್ಜು ಗುಜ್ಜಾಗಿತ್ತೆಂದರೆ ಅವನ ಮುಖ ಗುರುತಿಸಲಿಕ್ಕಾಗಲಿಲ್ಲವಂತೆ. ಶವದ ಜೇಬಿನಲ್ಲಿದ್ದ ಪಾಸ್ ಪೋರ್ಟ ನೋಡಿ ಅದು ಜಪಾನಿ ಯುವಕನ ದೇಹ ಅಂತ ಪೇಪರ್ ನಲ್ಲಿ ಬರೆದಿದ್ದಾರೆ. ನಿನ್ನೆ ಕ್ಯಾಸಿನೋದಲ್ಲಿ ನೀನು ಎಲ್ಲ ಹಣ ಕಳೆದುಕೊಂಡ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಾವು ಊಹೆ ಮಾಡಿಕೊಂಡೆವು.” ಹೊಟೆಲಿನ ಸ್ಟಾಫ್ ತಮ್ಮ ಗಾಬರಿಗೆ ಕಾರಣ ಹೇಳಿದರು.

ಅವರ ಮಾತು ಕೇಳಿ ಜಪಾನಿ ನಟ ನಕ್ಕ,

“ ನಿಮಗೆ ಈಗ ಖಾತ್ರಿ ಆಗಿರಬೇಕು ಸತ್ತವನು ನಾನಲ್ಲ. ನಾನು ಹಣ ಗಳಿಸಿದ್ದೆ, ಅದನ್ನ ಪಣಕ್ಕಿಟ್ಟೆ, ಎಲ್ಲ ಹಣ ಸೋತೆ. ವಿಷಯ ಇಷ್ಟೇ ಆದರೆ ನಾನು ನನ್ನನ್ನು ಕಳೆದುಕೊಂಡಿಲ್ಲ. ನನ್ನ ನಂಬಿ, ನಾನು ಮತ್ತೆ ಹಣ ಗಳಿಸುತ್ತೇನೆ ಹಾಗು ಮತ್ತೆ ಇಲ್ಲಿ ಬಂದು ಜೂಜಾಡುತ್ತೇನೆ. ಹಣದ ಸಲುವಾಗಿ ಆತ್ಮಹತ್ಯೆ ಮಾಡುಕೊಳ್ಳುವ ಹೇಡಿ ನಾನಲ್ಲ. ಹಣ ಗಳಿಸಿದಾಗ ನಾನು ಹೇಗೆ ಇದ್ದೆನೋ ಹಣ ಕಳೆದುಕೊಂಡಾಗಲೂ ಹಾಗೇ ಇರುವೆ. ಹಣ ನನ್ನ ಬದಲಾಯಿಸಲು ಸಾಧ್ಯವಿಲ್ಲ.

ನಟನಾಗುವುದಕ್ಕಿಂತ ಮೊದಲು ನಾನು ಒಬ್ಬ ಮಾಸ್ಟರ್ ಜೊತೆಗಿದ್ದೆ. ಅವರು ನನಗೆ ಕಲಿಸಿದ್ದು, ‘ಎಂಥ ಸ್ಥಿತಿಯಲ್ಲೂ ನೀನು ನಿನ್ನತನ ಬಿಟ್ಟುಕೊಡಬೇಡ. ಸೋಲು, ಗೆಲುವು , ಒಳ್ಳೆಯದು, ಕೆಟ್ಟದ್ದು ಎಲ್ಲ ಸ್ಥಿತಿಗಳನ್ನೂ ಸಾಕ್ಷಿ ಎಂಬಂತೆ ವೀಕ್ಷಿಸು. ‘ ನಿನ್ನೆ ರಾತ್ರಿ ನನಗೆ ಒಳ್ಳೆಯ ನಿದ್ದೆ ಬಂತು. ಈಗ ತಾನೇ ಎದ್ದು ಮುಂದೆ ಮಾಡಬೇಕಿರುವ ಕೆಲಸದ ಬಗ್ಗೆ ಯೋಚಿಸುತ್ತಿದ್ದೆ. ನೀವು ಬಾಗಿಲು ಬಾರಿಸಿದಿರಿ.”

ಹೌದು ಅಜ್ಞಾತದೆಂದಿಗೆ ಜೂಜಾಡುತ್ತಿರುವುದು ಗೊತ್ತಿದ್ದೂ ಎಲ್ಲವನ್ನು ಪಣಕ್ಕಿಡುವಾಗ ಕೆಲವೊಮ್ಮೆ ನಿಮಗೆ ಗೆಲುವಾಗಬಹುದು ಕೆಲವೊಮ್ಮೆ ನೀವು ಸೋಲಲೂಬಹುದು ಆದರೆ ತೊಂದರೆ ಇಲ್ಲ ….. ನೀವು ಗೆಲುವಿಗಾಗಿ ಅಥವಾ ಸೋಲಿಗಾಗಿ ಆಡುತ್ತಿಲ್ಲ. ಏಕೆಂದರೆ ನಿಮ್ಮ ಸೋಲು ಅಷ್ಟೇ ಅಲ್ಲ ನಿಮ್ಮ ಗೆಲುವು ಕೂಡ ನಿಮ್ಮ ಸಂಕಟವಾಗಿ ಬದಲಾಗಬಹುದು. ಸೋಲು ಗೆಲುವಿನ ಕರಾರುಗಳಿಲ್ಲದೇ ಎಲ್ಲ ಪಣಕ್ಕಿಟ್ಟು ಆಟ ಆಡುತ್ತಾನೆ ಸಾಹಸಿ.

Osho, Light on the Path – Talks given to the Rajneesh Mystery School in the Himalayan foothills of Kulu-Manali, India, and in Kathmandu, Nepal, Ch 19, Q 1 (excerpt)


Leave a Reply