ಇಮಾಮ್ ಜಫರ್ ಅಲ್- ಸಾದಿಕ್ ನ ಸಂದೇಶ…

“ಪ್ರತೀ ಪದ್ಧತಿಯೂ ಅದರ ಪರಿಸರದಲ್ಲಿ ಮಾತ್ರ ಪೂರ್ಣ. ಅವು ತಮ್ಮ ಇಡಿಯಲ್ಲಿ ಮಾತ್ರ ಸಹಾಯಕಾರಿ, ಈ ತಿಳುವಳಿಕೆಗಳನ್ನು ಮಿಶ್ರಣ ಮಾಡಿ ಗೊಂದಲಕ್ಕೊಳಗಾಗಬೇಡಿ” ಅನ್ನುತ್ತಾರೆ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

Each system is perfect and works. But don’t mix it with anything else; let it function on its own Osho

ಒಬ್ಬ ಹೆಣ್ಣು ಮಗಳಿದ್ದಳು, ಆಕೆ ತಾನು ಹುಟ್ಟಿ ಬೆಳೆದ ಪರಿಸರದ ಧಾರ್ಮಿಕ ನಂಬಿಕೆಗಳನ್ನೆಲ್ಲ ತಿರಸ್ಕರಿಸಿ ನಾಸ್ತಿಕತೆಯನ್ನ ಒಪ್ಪಿಕೊಂಡಿದ್ದಳು. ಕೆಲ ದಿನಗಳ ನಂತರ ಅವಳಿಗೆ ನಾಸ್ತಿಕತೆಯೂ ಸರಿ ಕಾಣದ ಕಾರಣವಾಗಿ ಇನ್ನೊಂದು ಧಾರ್ಮಿಕ ನಂಬಿಕೆಯನ್ನ ಅಪ್ಪಿಕೊಂಡಳು. ಸ್ವಲ್ಪ ದಿನಗಳಾದ ಮೇಲೆ ಆಕೆಗೆ ಮತ್ತೊಂದು ಧರ್ಮದ ನಂಬಿಕೆಗಳು ಮನವರಿಕೆಯಾದವು. ಪ್ರತೀಬಾರಿ ಆಕೆ ತನ್ನ ನಂಬಿಕೆಗಳನ್ನು ಬದಲಾಯಿಸಿಕೊಂಡಾಗ ಏನೋ ಹೊಸದನ್ನು ಕಲಿತೆ ಎಂದು ಭಾವಿಸಿದಳು. ಪ್ರತೀಬಾರಿ ಆಕೆಯನ್ನ ಹೊಸ ಧಾರ್ಮಿಕ ನಂಬಿಕೆಯವರು ತುಂಬು ಹೃದಯದಿಂದ ಸ್ವಾಗತಿಸಿದರು ಮತ್ತು ಆಕೆಯ ಈ ನಿರ್ಧಾರ ಅವಳ ಜ್ಞಾನೋದಯದ ಕಾರಣವಾಗಿ ಎಂದು ನಂಬಿಸಿದರು. ಆದರೆ ಅವಳ ಒಳಗಿನ ತಾಕಲಾಟಗಳು ಇನ್ನೂ ಹಾಗೆಯೇ ಇದ್ದವು, ಆಕೆ ಇನ್ನೂ ಗೊಂದಲದ ಸ್ಥಿತಿಯಲ್ಲೇ ಇದ್ದಳು.

ಆ ಹೆಣ್ಣು ಮಗಳು ತನ್ನ ಗೊಂದಲವನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಆ ಭಾಗದಲ್ಲಿ ತುಂಬ ಹೆಸರುವಾಸಿಯಾಗಿದ್ದ ಗುರು ಇಮಾಮ್ ಜಫರ್ ಅಲ್- ಸಾದಿಕ್ ನ ಭೇಟಿಯಾದಳು. ಅವಳ ಬಂಡಾಯಗಳನ್ನ, ತಳಮಳಗಳನ್ನ ಆಸಕ್ತಿಯಿಂದ ಕೇಳಿದ ಸಾದಿಕ್, ಆಕೆಗೆ ಮನೆಗೆ ವಾಪಸ್ ಹೋಗುವಂತೆಯೂ ತನ್ನ ಸಂದೇಶವನ್ನ ಅವಳ ಮನೆ ಬಾಗಿಲಿಗೆ ತಲುಪಿಸುವುದಾಗಿಯೂ ಮಾತುಕೊಟ್ಟ.

ಸ್ವಲ್ಪ ದಿನಗಳ ನಂತರ ಸಾದಿಕ್ ನ ಶಿಷ್ಯ ಅವಳ ಮನೆಗೆ ಬಂದು ಸಾದಿಕ್ ಕಳುಹಿಸಿದ್ದ ಪೊಟ್ಟಣವೊಂದನ್ನು ಅವಳ ಕೈಗಿತ್ತ. ಆಕೆ ಪೊಟ್ಟಣ ಬಿಚ್ಚಿ ನೋಡಿದಾಗ ಅದೊಂದು ಗ್ಲಾಸ್ ಬಾಟಲ್. ಆ ಬಾಟಲಿಯ ಅರ್ಧ ಭಾಗದಲ್ಲಿ ಕಪ್ಪು, ಕೆಂಪು ಬಿಳಿ ಮೂರು ಬಣ್ಣಗಳ ಮರಳನ್ನು ಮೂರು ಬೇರೆ ಬೇರೆ ಲೇಯರ್ ಗಳಂತೆ ತುಂಬಿ ಬಾಟಲಿಯನ್ನು ಹತ್ತಿಯ ಬಿರಡೆಯಿಂದ ಮುಚ್ಚಲಾಗಿತ್ತು. “ ಬಿರಡೆ ಬಿಚ್ಚಿ ಬಾಟಲಿಯನ್ನು ಜೋರಾಗಿ ಅಲುಗಾಡಿಸಿ ನೀನು ಹೇಗಿರುವಿಯೆಂದು ಗಮನಿಸು “ ಎಂದು ಬಾಟಲಿಯ ಮೇಲೆ ಬರೆಯಲಾಗಿತ್ತು. ಹೆಣ್ಣುಮಗಳು ಬಿರಡೆ ಬಿಚ್ಚಿ ಬಾಟಲಿಯನ್ನು ಜೋರಾಗಿ ಶೇಕ್ ಮಾಡಿದಳು. ಮೂರು ಬೇರೆ ಬೇರೆ ಬಣ್ಣಗಳ ಮರಳು ಒಂದರಲ್ಲೊಂದು ಸೇರಿಕೊಂಡು ಬೂದು ಬಣ್ಣದ ಮೊತ್ತವೊಂದು ಸಿದ್ಧವಾಗಿತ್ತು. ಇದನ್ನ ನೋಡುತ್ತಿದ್ದ ಹಾಗೆಯೇ ಅವಳ ಎಲ್ಲ ತಳಮಳಗಳು ನಿಂತುಹೋದವು.

ಆ ಹೆಣ್ಣುಮಗಳು ಹಲವಾರು ಗುರುಗಳನ್ನ ಭೇಟಿಯಾಗಿದ್ದಳು, ಹಲವಾರು ಧರ್ಮಗಳನ್ನು ಅಭ್ಯಾಸ ಮಾಡಿದ್ದಳು, ಹಲವಾರು ಸಿದ್ಧಾಂತಗಳನ್ನು ಚರ್ಚಿಸಿದ್ದಳು. ಪ್ರತೀಬಾರಿ ಹೊಸದೊಂದು ತಿಳುವಳಿಕೆಗೆ ಹೊರಳಿದಾಗ ಆಕೆಗೆ ಥ್ರಿಲ್ ಆಗುತ್ತಿತ್ತು. ಹೊಸ ಹನಿಮೂನ್ ಆಕೆ ಇಷ್ಟವಾಗುತ್ತಿತ್ತು. ಆದರೆ ದಿನಕಳೆದಂತೆ ಆಕೆಗೆ ಈ ಎಲ್ಲ ಪ್ರಯತ್ನ ಬೇಸರ ತರಿಸುತ್ತಿತ್ತು ಮತ್ತೆ ಆಕೆ ಹೊಸದರ ಹುಡುಕಾಟದಲ್ಲಿ ತೊಡಗಿಕೊಳ್ಳುತ್ತಿದ್ದಳು.

ತನ್ನ ಈ ಹುಡುಕಾಟದ ಫಲವಾಗಿ ಆಕೆ ವಿವಿಧ ಸ್ವಭಾವಗಳ ತಿಳುವಳಿಕೆಯನ್ನ ಗ್ರಹಿಸಿದ್ದಳು, ಹಲವು ವಿರೋಧಾಭಾಸದ ಜ್ಞಾನಗಳ ಬಗೆಯನ್ನ ಅರಿತುಕೊಂಡಿದ್ದಳು. ಈ ಎಲ್ಲ ತಿಳುವಳಿಕೆಗಳು ತಮ್ಮ ಶುದ್ಧತೆಯಲ್ಲಿ ಖಂಡಿತ ಸಮಾಧಾನ ಕೊಡುತ್ತವೆ. ಆದರೆ ನೀವು ಅವುಗಳನ್ನ ಮಿಕ್ಸ್ ಮಾಡುವ ಪ್ರಯತ್ನ ಮಾಡುವಿರಾದರೆ ಗೊಂದಲ, ತಳಮಳ ಕಟ್ಟಿಟ್ಟ ಬುತ್ತಿ. ಇದು ಹೇಗೆಂದರೆ ನೀವು ಬೆಂಜ್, ರೋಲ್ಸ್ ರಾಯ್ಸ್, ಟೋಯೋಟಾ, ಫೋರ್ಡ್ ಕಾರುಗಳ ನಿಮಗಿಷ್ಟದ ಅತ್ಯುತ್ತಮ ಭಾಗಗಳನ್ನು ಒಟ್ಟುಗೂಡಿಸಿ ಹೊಸ ಕಾರು ತಯಾರಿಸಲು ಪ್ರಯತ್ನ ಮಾಡುವಂತೆ. ಈ ಕಾರುಗಳ ಬಿಡಿ ಭಾಗಗಳು ವೈಯಕ್ತಿಕ ಡಿಸೈನ್ ವಿಷಯದಲ್ಲಿ ಬೆಸ್ಟ್ ಹೌದು ಆದರೆ ಅವು ತಮ್ಮ ಸಿಸ್ಟಂ ಲ್ಲಿ ಮಾತ್ರ ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.

ನಿಮಗೆ ಮಹಾವೀರನ ಕೆಲ ವಿಚಾರಗಳು ಇಷ್ಟ ಆಗುತ್ತವೆ ಆಮೇಲೆ ನೀವು ಬುದ್ಧನನ್ನು ಓದಿ ಅವನ ಕೆಲ ಮಾತುಗಳನ್ನ ಮೆಚ್ಚಿಕೊಳ್ಳುತ್ತೀರಿ. ಆಗಲೇ ನೀವು ಬುದ್ಧ ಮತ್ತು ಮಹಾವೀರನನ್ನು ಮಿಶ್ರಣ ಮಾಡಿ ಹೊಸ ಖಿಚಡಿ ತಯಾರಿಸುವ ಪ್ರಯತ್ನ ಮಾಡುತ್ತೀರಿ. ಈ ಖಿಚಡಿಯ ರುಚಿಯ ಬಗ್ಗೆ ನಿಮಗೆ ಸಮಾಧಾನವಿಲ್ಲ, ನಿಮಗೆ ಗೊಂದಲ ಶುರುವಾಗುತ್ತದೆ.

ಮಹಾವೀರನ ತಿಳುವಳಿಕೆಗಳು ಸುಂದರ ಅದರೆ ಅವು ತಮ್ಮ ಒಂದು ಇಡಿ (whole) ಯಲ್ಲಿ ಮಾತ್ರ ಪರಿಪೂರ್ಣ. ಅವು ತಮ್ಮ ಸಂಪೂರ್ಣದ ಸಾವಯವ ಭಾಗ. ಅವು ತಮ್ಮ ಸಿಸ್ಟಂ ಲ್ಲಿ ಮಾತ್ರ ಸುಗಂಧ ಬೀರುವಂಥವು. ಬುದ್ಧಿಸ್ಟ್ ವಾತಾವರಣದಲ್ಲಿ ಮಹಾವೀರನ ಮಾತುಗಳು ಉಸಿರುಗಟ್ಟಿಸಬಹುದು. ಹಾಗೆಯೇ ಬುದ್ಧನ ಮಾತುಗಳು ಕೂಡ ಇಡಿಯಾದ ಬುದ್ಧ ಪರಿಸರದಲ್ಲಿ ಮಾತ್ರ ಪರಿಮಳ ಬೀರುವಂಥವು.

ಈ ಹೆಣ್ಣು ಮಗಳು ನಮ್ಮ ಬಹುತೇಕರ ಪ್ರತಿನಿಧಿ. ನಮ್ಮಲ್ಲೂ ಹಲವರು ಬೇರೆ ಬೇರೆ ಗುರುಗಳ ಪ್ರಭಾವಕ್ಕೆ ಒಳಗಾಗಿ, ಹಲವು ಧರ್ಮಗಳ, ಹಲವು ಸಿದ್ಧಾಂತಗಳ ಬಿಡಿ ಬಿಡಿ ತಿಳುವಳಿಕೆಗಳನ್ನ ಒಟ್ಟು ಮಾಡಲು ಹೋಗಿ ಗೊಂದಲಕ್ಕೊಳಗಾದವರು. ಎಲ್ಲದರಲ್ಲಿಯ ಕೆಲ ಜಾಣ ಮಾತುಗಳನ್ನ ಹೇಳುತ್ತ ದ್ವಂದ್ವಕ್ಕೆ ಸಿಲುಕಿದವರು. ಪ್ರತೀ ಪದ್ಧತಿಯೂ ಅದರ ಪರಿಸರದಲ್ಲಿ ಮಾತ್ರ ಪೂರ್ಣ. ಅವು ತಮ್ಮ ಇಡಿಯಲ್ಲಿ ಮಾತ್ರ ಸಹಾಯಕಾರಿ, ಈ ತಿಳುವಳಿಕೆಗಳನ್ನು ಮಿಶ್ರಣ ಮಾಡಿ ಗೊಂದಲಕ್ಕೊಳಗಾಗಬೇಡಿ.

Osho, Sufis, the People of the Path – Talks on Sufism, Vol 2, Ch 1 (excerpt)

Leave a Reply