ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ

ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ ~ ಗಾಯತ್ರಿ


ಏಷ ಸ್ವಪ್ರತಿಬಿಂಬಸ್ಯ ಸ್ವಯಮಾಲೋಕನೇಚ್ಛಾಯ |
ಅತ್ಯಂತನಿರ್ಮಲಾಕಾರಃ ಸ್ವಯಂ ಮುಕುರತಾಂ ಗತಃ ||ಯೋಗ ವಾಸಿಷ್ಠ ||
ಅರ್ಥ : ಈ ಬ್ರಹ್ಮವು ತನ್ನ ಪ್ರತಿ ಬಿಂಬವನ್ನು ತಾನೇ ನೋಡಿಕೊಳ್ಳಬೇಕೆಂಬ ಇಚ್ಛೆಯಿಂದ ತಾನೇ ಅತ್ಯಂತ ನಿರ್ಮಲವಾದ ಕನ್ನಡಿಯಾಯಿತು.

ತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ.

ಈ ಗಹನ ಚಿಂತನೆಯಾಚೆಗೆ, ಪರಬ್ರಹ್ಮದ ಈ ನಡೆಯಿಂದ ನಾವು ದೈನಂದಿನ ಲೌಕಿಕದಲ್ಲಿ ಕಲಿಯಬೇಕಾದ ಪಾಠವೊಂದಿದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು, ನಾವು ಹೇಗಿದ್ದೇವೆ, ಹೇಗೆ ವರ್ತಿಸುತ್ತೇವೆಂದು ನೋಡಿಕೊಳ್ಳಬೇಕು ಅನ್ನಿಸಿದರೆ, ನಾವು ಕೂಡಾ ಕನ್ನಡಿಯಾಗಿ ವಿಸ್ತರಣೆಗೊಳ್ಳಬೇಕು. ನಮ್ಮ ಸುತ್ತಮುತ್ತಲಿನವರು ನಮಗೆ ಹೇಗೆ ಸ್ಪಂದಿಸುತ್ತಾರೋ ಅವೆಲ್ಲವನ್ನೂ ನಮ್ಮ ಪ್ರತಿಬಿಂಬವೆಂದು ಗ್ರಹಿಸಬೇಕು. ಅಂದರೆ, ನಾವು ಹೇಗೆ ಇದ್ದೇವೆಯೋ, ವರ್ತಿಸುತ್ತೇವೆಯೋ ಅದೇ ನಮಗೆ ಅವರೆಲ್ಲರ ಸ್ಪಂದನೆಯ ರೂಪದಲ್ಲಿ ಪ್ರತಿಬಿಂಬವಾಗಿ ಮೂಡುತ್ತಿದೆ ಎಂದು ಭಾವಿಸಬೇಕು! ಆಗ ನಮಗೆ ನಮ್ಮ ವ್ಯಕ್ತಿತ್ವ ಎಷ್ಟು ಕಳಪೆಯಾಗಿದೆ ಅಥವಾ ಸುಂದರವಾಗಿದೆ ಎಂಬ ಅರಿವು ಉಂಟಾಗುವುದು.

ನಾವು ಪ್ರತಿಯೊಬ್ಬರೂ ಪರಸ್ಪರರ ಪ್ರತಿಬಿಂಬಗಳೇ ಆಗಿದ್ದೇವೆ. ನಮ್ಮ ಜೊತೆಯವರು ಹೇಗೆ ವರ್ತಿಸುತ್ತಾರೋ ನಾವೂ ಅದನ್ನೇ ನಮ್ಮ ವರ್ತನೆಯಲ್ಲಿ ಪ್ರತಿಬಿಂಬಿಸುತ್ತೇವೆ. ಆದರೆ ಹಾಗೆ ಪ್ರತಿಬಿಂಬಿಸುವ ಭರದಲ್ಲಿ ಅಪಾರ್ಥಗಳು ಉಂಟಾಗಬಾರದು. ಕನ್ನಡಿ ದೂಳು ಮುಸುಕಿದ್ದರೆ ಪ್ರತಿಬಿಂಬ ಸ್ಪಷ್ಟವಾಗಿ ಮೂಡುವುದಿಲ್ಲ. ಹಾಗೆಯೇ ಪೂರ್ವಾಗ್ರಹ, ರಾಗದ್ವೇಷಗಳ ದೂಳು ನಮ್ಮ ಅಂತರಂಗದ ಕನ್ನಡಿಯನ್ನು ಮುಸುಕಿದ್ದರೆ ನಾವು ಕೂಡ ನಮ್ಮ ಸುತ್ತಲಿನವರ ಸ್ಪಷ್ಟ ಪ್ರತಿಬಿಂಬ ಪಡೆಯಲು ಸೋಲುತ್ತೇವೆ. ಆದ್ದರಿಂದ, ಪರಬ್ರಹ್ಮ ಹೇಗೆ ನಿರ್ಮಲವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತೋ, ನಾವೂ ನಮ್ಮ ಪೂರ್ವಾಗ್ರಹಗಳನ್ನು ಒರೆಸಿ, ಶುಭ್ರವಾಗಿ ವ್ಯವಹರಿಸಬೇಕು.

ನೀವು ಇದೊಂದು ಕಿರುಗಥೆಯನ್ನು ಕೇಳಿಯೇ ಇರುತ್ತೀರಿ. ಒಬ್ಬನು ದಿನಾಲೂ ಎದುರು ಮನೆಯ ಗೋಡೆಗಳನ್ನು ನೋಡಿ “ಅವರ ಮನೆಯ ಗೋಡೆಗಳು ಎಷ್ಟು ಮಲಿನವಾಗಿವೆ” ಅನ್ನುತ್ತಾ ಇರುತ್ತಾನೆ. ಒಂದು ದಿನ ಅವನ ಹೆಂಡತಿ ತಮ್ಮ ಮನೆಯ ಕಿಟಕಿ ಗಾಜುಗಳನ್ನು ಒರೆಸಿ ಸ್ವಚ್ಛ ಮಾಡುತ್ತಾಳೆ. ಅನಂತರದಲ್ಲಿ ಅವನಿಗೆ ಎದುರು ಮನೆಯ ಗೋಡೆಗಳು ಶುಭ್ರವಾಗಿ ಕಾಣಿಸತೊಡಗುತ್ತವೆ. “ಅಯ್ಯೋ! ಮಲಿನವಾಗಿದ್ದುದು ಗೋಡೆಯಲ್ಲ, ನಮ್ಮದೇ ಮನೆಯ ಗಾಜು” ಎಂದು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ.

ನಾವೂ ಹಾಗೆಯೇ. ನಮ್ಮ ಕನ್ನಡಿಯನ್ನು ಶುಚಿಯಾಗಿಟ್ಟುಕೊಳ್ಳದೆ ಬಿಂಬಗಳನ್ನು ದೂರುತ್ತೇವೆ. ಹಾಗಾಗುವುದು ಬೇಡ. ಪರಬ್ರಹ್ಮದ ಮಹಾಮಾದರಿಯಂತೆ, ನಾವು ನಿರ್ಮಲ ಕನ್ನಡಿಗಳಾಗೋಣ. ನಮ್ಮನ್ನು ನಾವು ಅರಿಯುವ ಯತ್ನ ಮಾಡೋಣ.

2 Comments

Leave a Reply