ಮೈಕೆಲ್ ಹಲವಾರು ದಿನ ಚಿತ್ರವನ್ನು ಪೂರ್ಣ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಆಗಲೇ ಮೈಕೆಲ್ ಗೆ ನೆನಪಾದದ್ದು ತಾನು ಗೆಳೆಯನೊಬ್ಬನೊಡನೆ ಹಿಂದೆ ಜಗಳವಾಡಿದ್ದು ಮತ್ತು ಆ ಸಿಟ್ಟನ್ನು ಇನ್ನೂ ತನ್ನೊಳಗೆ ಹೊತ್ತುಕೊಂಡಿರುವುದು … | ಓಶೋ ಹೇಳಿದ ಕಥೆ; ಕನ್ನಡಕ್ಕೆ : ಚಿದಂಬರ ನರೇಂದ್ರ
ನೀವು ದೇವಾಲಯಕ್ಕೆ ಹೋಗುತ್ತೀರಿ ಆದರೆ ನೀವು ಇನ್ನೊಬ್ಬರನ್ನು ಅವಮಾನಿಸಿದ, ಕೆರಳಿಸಿದ, ಇನ್ನೊಬ್ಬರಿಗೆ ಮೋಸ ಮಾಡಿದ, ನೋವನ್ನುಂಟು ಮಾಡಿದ ನೆನಪು ಇನ್ನೂ ನಿಮ್ಮೊಳಗಿದ್ದರೆ, ನಿಮ್ಮನ್ನು ಇನ್ನೂ ಕಳವಳಕ್ಕೆ ದೂಡುತ್ತಿದ್ದರೆ ನಿಮಗೆ ದೇವರ ಜೊತೆ ತನ್ಮಯತೆ, ಸಂಬಂಧ ಸಾಧ್ಯವಾಗುವುದಿಲ್ಲ. ಮೊದಲು ಹೋಗಿ ಅವರಲ್ಲಿ ಕ್ಷಮೆ ಯಾಚಿಸಿ, ಮೊದಲು ನಿಮ್ಮೊಳಗಿನ ತಳಮಳವನ್ನು ನಿವಾರಿಸಿಕೊಳ್ಳಿ ಆಗ ದೇವರಿಗೆ ನಿಮ್ಮ ಮಾತು ಅರ್ಥವಾಗುತ್ತದೆ ಮತ್ತು ಅವನು ಹೇಳಿದ ಮಾತುಗಳು ನಿಮ್ಮನ್ನು ಮುಟ್ಟುತ್ತವೆ.
ಜಗತ್ತಿನ ಮಹಾನ್ ಕಲಾವಿದ ಮೈಕೆಲ್ ಎಂಜಲೊ ಸಿಸ್ಟಿನ್ ಚ್ಯಾಪಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅವನಿಗೆ ಜೀಸಸ್ ನ ಈ ಮಾತುಗಳ ಅನುಭವವಾಯ್ತು. ಮೈಕೆಲ್, ಜೀಸಸ್ ನ ಚಿತ್ರ ಪೇಂಟ್ ಮಾಡುತ್ತಿದ್ದ. ಚಿತ್ರ ಬಹುತೇಕ ಮುಗಿಯುತ್ತ ಬಂದಿತ್ತು, ಕೆಲವೊಂದು ಫಿನಿಶಿಂಗ್ ಟಚಸ್ ಮಾತ್ರ ಬಾಕಿ ಇತ್ತು ಆದರೆ ಯಾಕೋ ಮೈಕೆಲ್ ಗೆ ತೃಪ್ತಿ ಇರಲಿಲ್ಲ . ಅವನಿಗೆ ಚಿತ್ರದಲ್ಲಿ ಯಾವುದೋ ಕೊರತೆ ಎದ್ದು ಕಾಣುತ್ತಿತ್ತು. ಜಿಸಸ್ ನಲ್ಲಿ ಯಾಕೋ ಯಾವುದೋ ಒಂದು ಜಿಸಸ್ ನ ಕಳೆ ಕಂಡುಬರುತ್ತಿರಲಿಲ್ಲ. ಜೀಸಸ್ ನ ಸೌಮ್ಯತನ, ಹೆಣ್ಣುತನ, ಪ್ರೇಮ ಭಾವ ಚಿತ್ರದಲ್ಲಿ ಸ್ಪಷ್ಟವಾಗಿ ಮೂಡಿ ಬಂದಿರಲಿಲ್ಲ. ಮೈಕೆಲ್ ಹಲವಾರು ದಿನ ಚಿತ್ರವನ್ನು ಪೂರ್ಣ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಆಗಲೇ ಮೈಕೆಲ್ ಗೆ ನೆನಪಾದದ್ದು ತಾನು ಗೆಳೆಯನೊಬ್ಬನೊಡನೆ ಹಿಂದೆ ಜಗಳವಾಡಿದ್ದು ಮತ್ತು ಆ ಸಿಟ್ಟನ್ನು ಇನ್ನೂ ತನ್ನೊಳಗೆ ಹೊತ್ತುಕೊಂಡಿರುವುದು.
ಆಗಲೇ ಮೈಕೆಲ್ ಎಂಜಲೋ ಗೆ ಜೀಸಸ್ ನ ಮಾತುಗಳು ನೆನಪಾದವು, “ ನಿನ್ನೊಳಗೆ ಇನ್ನೊಬ್ಬರ ಬಗ್ಗೆ ಸಿಟ್ಟು, ದ್ವೇಷ, ಅಸೂಯೆ ಮನೆ ಮಾಡಿರುವಾಗ ನಿನಗೆ ದೇವರ ಜೊತೆ ಸಂಪರ್ಕ ಸಾಧ್ಯವಾಗುವುದಿಲ್ಲ, ಮೊದಲು ಅವರಲ್ಲಿ ಕ್ಷಮೆ ಯಾಚಿಸಿ ಈ ಸಮಸ್ಯೆಗಳನ್ನು ಬಗೆಹರಿಸಿಕೋ ಆಗ ಮಾತ್ರ ದೇವರೊಂದಿಗೆ ನಿನಗೆ ಸಂಭಾಷಣೆ ಸಾಧ್ಯ.” ಕೂಡಲೇ ಮೈಕೆಲ್, ಚ್ಯಾಪಲ್ ನಿಂದ ಹೊರನಡೆದು ತನ್ನ ಗೆಳೆಯನ ಬಳಿ ಹೋಗಿ ಅವನಲ್ಲಿ ಕ್ಷಮೆ ಕೇಳಿದ, ನಡೆದ ಸಂಗತಿಯನ್ನೆಲ್ಲ ಅವನಿಗೆ ತಿಳಿಸಿದ. “ ನಾನು ಬಹಳ ಪ್ರಯತ್ನ ಮಾಡಿದರೂ ನನ್ನ ಜೀಸಸ್ ಮುಖದಲ್ಲಿ ಸಿಟ್ಟು ಹಾಗೇ ಉಳಿದುಕೊಂಡಿತ್ತು. ಬಹುಶಃ ನನ್ನೊಳಗಿರುವ ಸಿಟ್ಟು ಅವನ ಮುಖದಲ್ಲಿ ಕಾಣುತ್ತಿತ್ತು.”
ನಿಮ್ಮೊಳಗೆ ಸಿಟ್ಟು ಮನೆ ಮಾಡಿಮಾಡಿರುವಾಗ, ಇನ್ನೊಬ್ಬರ ಬಗ್ಗೆ ಕಠಿಣ ಭಾವನೆಗಳು ತುಂಬಿಕೊಂಡಿರುವಾಗ ನೀವು ಪೇಂಟ್ ಮಾಡುತ್ತೀರಾದರೆ, ನಿಮ್ಮ ಚಿತ್ರ ನಿಮ್ಮನ್ನು ಪ್ರತಿಫಲಿಸುತ್ತದೆ. ಮೈಕೆಲ್ ತನ್ನ ಗೆಳೆಯನ ಕ್ಷಮೆ ಕೇಳಿ ಹಗುರಾದ ದಿನ ಕೆಲವು ಕೆಲವು ನಿಮಿಷಗಳಲ್ಲಿ ಪ್ರೀತಿ, ಕ್ಷಮೆ, ಕರುಣೆಯನ್ನ ಹೊತ್ತಂಥ ಜೀಸಸ್ ನ ಅದ್ಭುತ ಚಿತ್ರ ಪೂರ್ಣವಾಯಿತು. ಈಗ ಮೈಕೆಲ್ ಎಂಜಲೊನ ಹೃದಯ ಜೀಸಸ್ ನ ಪ್ರೇಮದ ಜೊತೆ ಟ್ಯೂನ್ ಸಾಧಿಸಿತ್ತು. ಈ ಚಿತ್ರ ಜಗತ್ತಿನ ಶ್ರೇಷ್ಠ ಚಿತ್ರಗಳ ಸಾಲಿಗೆ ಸೇರಿತು.