ಮೂಲ: ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಡಾ.ಎಚ್.ಎಸ್.ಶಿವಪ್ರಕಾಶ್
ಯಾರೋ ಒಬ್ಬರು ಕೇಳಿದರು:
‘ಪ್ರಾರ್ಥನೆಗಿನ್ನಾ ಉತ್ತಮ ಯಾವುದು?’
ಅದಕ್ಕೆ ಉತ್ತರ: ಪ್ರಾರ್ಥನೆಯ ಆತ್ಮ
ಪ್ರಾರ್ಥನೆಗಿನ್ನಾ ಶ್ರೇಷ್ಠವಾದುದು
ಎರಡನೆ ಉತ್ತರ: ಪ್ರಾರ್ಥನೆಗಿಂತಾ
ಇನ್ನೂ ಶ್ರೇಷ್ಠವಾದುದು ನಿಯತ್ತು
ಪ್ರಾರ್ಥನೆ ಮಾಡುವುದಾದರೆ
ದಿನಾ ಐದು ಸಾರಿ ಮಾಡಬೇಕು
ನಿಯತ್ತಾದರೋ ಸದಾ
ಎಡೆಬಿಡದೆ ಇರುವಂಥದು
ನೆಪ ಒಡ್ಡಿ ಪ್ರಾರ್ಥನೆ ತಪ್ಪಬಹುದು
ಅನುಮತಿಯಿಂದ ಮುಂದೂಡಬಹುದು
ನಿಯತ್ತನ್ನು ಹೀಗೆ ತಪ್ಪಿಸಲಾಗುವುದಿಲ್ಲ
ಅನುಮತಿ ತಗೊಂಡು ಮುಂದೂಡಲಾಗದು
ಪ್ರಾರ್ಥನೆ ಮಾಡದೆ ಹೋದಾಗಲೂ
ಫಲ ನೀಡುವುದು ನಿಯತ್ತು
ಆದರೆ ನಿಯತ್ತಿಲ್ಲದ ಪ್ರಾರ್ಥನೆ
ಪೂರ್ತಿ ನಿಷ್ಪ್ರಯೋಜಕವಾಗುವುದು