ನಗು ಅತ್ಯಂತ ಪವಿತ್ರ ಪ್ರಾರ್ಥನೆ : ಓಶೋ

ಜಗತ್ತಿನಲ್ಲಿ ಗಂಭೀರತೆಗಿಂತ ಸಂವೇದನಾಶೀಲತೆ ಹೆಚ್ಚಾಗಬೇಕು. ಪ್ರಾಮಾಣಿಕತೆ ಇರಬೇಕು ನಿಜ ಆದರೆ ಗಾಂಭೀರ್ಯ ಯಾವತ್ತೂ ಬೇಡ… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಮಾಸ್ಟರ್ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ ಹಣ್ಣುಗಳು ತುಂಬಿದ್ದವು.

ಝೆನ್ ಕಲಿಯುತ್ತಿದ್ದ ಶಿಷ್ಯರೆಲ್ಲ ಅತ್ಯಂತ ಶಿಸ್ತಿನಿಂದ, ಗಂಭೀರವಾಗಿ ಮಾವಿನ ಹಣ್ಣುಗಳನ್ನ ಕಿತ್ತು ಬಾಕ್ಸ್ ಗೆ ತುಂಬಿ ಪ್ಯಾಕ್ ಮಾಡತೊಡಗಿದರು.

ಮಾಸ್ಟರ್ ರೋಶಿ ಗೆ ಇದೆಲ್ಲ ಏನೋ ಅಸಹಜ ಅನ್ನಿಸತೊಡಗಿತು.

ಕೊನೆಗೆ ಮಾಸ್ಟರ್ ರೋಶಿ ಸ್ವತಃ ತಾವೇ ಮರ ಏರಿ, ಹಣ್ಣು ಕಿತ್ತು ಎಲ್ಲ ಶಿಷ್ಯರ ಮೇಲೆ ಎಸೆಯುತ್ತ, ಜೋರಾಗಿ ಕೇಕೆ ಹಾಕಿ ಕೂಗಾಡಲು ಶುರು ಮಾಡಿದರು.

ಅಲ್ಲಿಯ ತನಕ, ಶಿಷ್ಯರಿಗೆ, ತಾವು ಪೂರ್ತಿ ಝೆನ್ ಮರೆತದ್ದು, ಮರೆತೇ ಹೋಗಿತ್ತು.

ಜಗತ್ತಿನಲ್ಲಿ ಗಂಭೀರತೆಗಿಂತ ಸಂವೇದನಾಶೀಲತೆ ಹೆಚ್ಚಾಗಬೇಕು. ಪ್ರಾಮಾಣಿಕತೆ ಇರಬೇಕು ನಿಜ ಆದರೆ ಗಾಂಭೀರ್ಯ ಯಾವತ್ತೂ ಬೇಡ.

ಸೆನ್ಸ್ ಆಫ್ ಹ್ಯೂಮರ್ ಧಾರ್ಮಿಕ ಮನುಷ್ಯನಿಗೆ ಇರಬೇಕಾದ ಅತ್ಯಂತ ಮೂಲಭೂತ ಗುಣ. ಇದು ಜಗತ್ತಿಗೆ ಮನವರಿಕೆಯಾಗಬೇಕು ಎನ್ನುವುದು ನನ್ನ ಅತ್ಯಂತ ಪ್ರಬಲವಾದ ಬಯಕೆ.

ನಿಮಗೆ ನಗುವುದು, ನಗಿಸುವುದು ಸಾಧ್ಯವಾಗದಿದ್ದರೆ ನೀವು ಬದುಕಿನ ಹಲವಾರು ಮುಖ್ಯ ಸಂಗತಿಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ, ಬದುಕಿನ ಹಲವಾರು ನಿಗೂಢಗಳಿಗೆ ತೆರೆದುಕೊಳ್ಳುವುದು ನಿಮಗೆ ಸಾಧ್ಯವಾಗುವುದಿಲ್ಲ.

ನಿಮ್ಮ ನಗೆ ನಿಮ್ಮನ್ನು ಅತ್ಯಂತ ಮುಗ್ಧ ಮಗುವಾಗಿಸುತ್ತದೆ, ನಿಮ್ಮ ನಗು ನಿಮ್ಮನ್ನು ಅಸ್ತಿತ್ವದೊಂದಿಗೆ ಒಂದಾಗಿಸುತ್ತದೆ, ಭೋರ್ಗರೆಯುತ್ತಿರುವ ಮಹಾ ಸಾಗರದೊಂದಿಗೆ, ನಕ್ಷತ್ರಗಳೊಂದಿಗೆ ಮತ್ತು ಅವುಗಳ ಮಹಾಮೌನದೊಂದಿಗೆ ಒಂದಾಗಿಸುತ್ತದೆ.

ನಿಮ್ಮ ನಗು ನಿಮ್ಮನ್ನು ಜಗತ್ತಿನ ಅಪರೂಪದ ಪ್ರಬುದ್ಧ ಭಾಗವಾಗಿಸುತ್ತದೆ ಏಕೆಂದರೆ ಪ್ರಬುದ್ಧ ಪ್ರಾಣಿಗಳಿಗೆ ಮಾತ್ರ ನಗುವುದು ಸಾಧ್ಯ. ನೀವು ಇದನ್ನ ಪರೀಕ್ಷೆ ಮಾಡಬಹುದು, ಪ್ರಾಣಿಗಳಂಥವರ ಮುಂದೆ ಜೋಕ್ ಹೇಳಿ ನೋಡಿ ಏನಾಗುತ್ತದೆ.

ಜಗತ್ತಿನಲ್ಲಿ ಗೌರವಯುತವಾಗಿ ಪ್ರಬುದ್ಧರಂತೆ ಬದುಕಲು ಗಾಂಭೀರ್ಯ ಅತ್ಯವಶ್ಯ ಎನ್ನುವುದನ್ನ ನಮ್ಮ ತಲೆಯಲ್ಲಿ ತುಂಬಲಾಗಿದೆ. ಈ ಕಾರಣವಾಗಿಯೇ ಜನ ಗಂಭೀರತೆಯನ್ನ ತಮ್ಮ ಮೇಲೆ ಆವಾಹಿಸಿಕೊಂಡು ನಾಟಕದ ಬದುಕು ಬಾಳುತ್ತಿದ್ದಾರೆ. ಗಂಭೀರತೆ ಅವರ ಎರಡನೇಯ ಪ್ರಕೃತಿಯಾಗಿಬಿಟ್ಟಿದೆ ಆದರೆ ಅವರು ಕಾಯಿಲೆಯತ್ತ ಸಾಗುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ.

ಈ ಗಂಭೀರತೆಯನ್ನ ಹೊರಗಿಟ್ಟು ನೋಡಿ ಜಗತ್ತು ಎಷ್ಟು ಅದ್ಭುತ ತಮಾಷೆಗಳಿಂದ ತುಂಬಿಕೊಂಡಿದೆ. ನಮ್ಮಲ್ಲಿ ಸೆನ್ಸ್ ಆಫ್ ಹ್ಯೂಮರ್ ಇರುವುದಾದರೆ ನಮ್ಮನ್ನು ದುಗುಡ ತುಂಬಿಕೊಳ್ಳುವುದು ಸಾಧ್ಯವಿಲ್ಲ. ಪ್ರತೀಕ್ಷಣ ಎನೋ ಒಂದು ತಮಾಷೆ ಎಲ್ಲೆಲ್ಲೂ ಘಟಿಸುತ್ತಲೇ ಇರುತ್ತದೆ.

ನನ್ನ ಉದ್ದೇಶವೇ ಮರೆತು ಹೋಗಿರುವ ನಗುವನ್ನು ಮನುಷ್ಯಧರ್ಮದಲ್ಲಿ ಪುನರ್ ಸ್ಥಾಪಿಸುವುದು. ನೀವು ನಗುವನ್ನು ಮರೆತಿರುವಿರಾದರೆ, ನಿಮಗೆ ಹಾಡು-ಕುಣಿತ, ಕೊನೆಗೆ ಪ್ರೇಮವೂ ನೆನಪಿಲ್ಲ. ಹೇಗೆ ಗಂಭೀರತೆಯೊಂದಿಗೆ ಕೆಲವು ಗುಣಗಳು ಹಾಸುಹೊಕ್ಕಾಗಿವೆಯೋ ಹಾಗೆಯೇ ನಗುವಿನೊಂದಿಗೆ ಕೂಡ ಕೆಲವು ಗುಣಗಳು ಒಂದಾಗಿವೆ.

ಹಾಗಾಗಿಯೇ ನೀವು ನಗುವನ್ನು ಮರೆತಾಗ ಪ್ರೇಮವನ್ನೂ ಮರೆಯುವಿರಿ.

ದುಃಖದ ಚೆಹರೆ ಹೊತ್ತುಕೊಂಡು ನಿಮ್ಮ ಪ್ರೇಯಸಿಗೆ ಆಯ್ ಲವ್ಯೂ ಹೇಗೆ ಹೇಳುತ್ತೀರಿ ? ನಿಮ್ಮ ಮುಖದಲ್ಲಿ ಮನಸ್ಸಿನಲ್ಲಿ ಒಂದು ಮುಗುಳ್ನಗೆಯಾದರೂ ಇರಲೇಬೇಕಲ್ಲವೆ? ದುಗುಡದ ಮುಖದೊಂದಿಗೆ ಒಂದು ಸಣ್ಣ ಸಂವಹನವೂ ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಜನ ಎಲ್ಲವನ್ನೂ ಗಂಭೀರರಾಗಿ ನೋಡುತ್ತಿರುವುದರಿಂದ ಭಾರ ಬದುಕನ್ನ ಜೀವಿಸುತ್ತಿದ್ದಾರೆ.

ಹೆಚ್ಚು ಹೆಚ್ಚು ನಗುವುದನ್ನ ರೂಢಿ ಮಾಡಿಕೊಳ್ಳಿ.

ನನ್ನ ಪ್ರಕಾರ ನಗು ಅತ್ಯಂತ ಪವಿತ್ರ ಪ್ರಾರ್ಥನೆ

Leave a Reply