ಮರೆವಿನ ದಿವ್ಯೌಷಧ ಮತ್ತು ಆತ್ಮವಿಸ್ಮೃತಿಯ ಶಾಪ : ಅಧ್ಯಾತ್ಮ ಡೈರಿ

ಜೀವನದಲ್ಲಿ ಅದೆಷ್ಟೋ ಸಂಗತಿಗಳು ಆಗಿಹೋಗುತ್ತಲೇ ಇರುತ್ತವೆ. ತಪ್ಪುಗಳು ಕೂಡಾ. ಹೀಗಿರುವಾಗ ಆ ಎಲ್ಲ ಸಂಗತಿಗಳನ್ನೂ ತಲೆಯಲ್ಲಿ ಗುಡ್ಡೆಹಾಕಿಕೊಂಡು ಕುಳಿತರೆ ಏನು ಪ್ರಯೋಜನ? ಸತ್ತುಹೋದ ಕ್ಷಣಗಳು ಕಸದಂತೆ. ಅವುಗಳನ್ನು ಕಾಲಕಾಲಕ್ಕೆ ಗುಡಿಸಿಹಾಕಬೇಕು. ಕಸದಲ್ಲಿನಮ್ಮ ಒಂದು ಕಾಲದ ಪ್ರೀತಿಯ ವಸ್ತುಗಳಿದ್ದಾವೆಂದು ಕಸದಬುಟ್ಟಿಯನ್ನು ಮಲಗುವ ಕೋಣೆಯಲ್ಲೋ ಅಡುಗೆ ಮನೆಯಲ್ಲೋ ಕಾಪಿಡುತ್ತೀರೇನು!? | ಅಲಾವಿಕಾ

ಬದುಕು ನೆನ್ನೆ ನಾಳೆಗಳ ನಡುವಿನ ಪ್ರತಿಕ್ಷಣದ ಬಿಂದು. ಈ ಕ್ಷಣ, ಈ ಹೊತ್ತು ನಾವು ಏನು ಮಾಡುತ್ತಿರುತ್ತೇವೆಯೋ ಅದೇ ಬದುಕು. ನೆನ್ನೆ ನಾವು ಸಾಮ್ರಾಜ್ಯವನ್ನೆ ಆಳಿರಬಹುದು. ಅದು ಮುಖ್ಯವಾಗುವುದಿಲ್ಲ. ಈ ಕ್ಷಣವೂ ನಾವು ಅರಸರೇ ಆಗಿದ್ದೇವಾ? ಅದು ಮುಖ್ಯವಾಗುತ್ತದೆ. ಕಳೆದು ಹೋದ ಕಾಲದ ಸ್ಮರಣೆಯಲ್ಲಿ ಈ ಕ್ಷಣದ ಕಾಲವನ್ನು ಕಳೆಯುವುದು ಬುದ್ಧಿವಂತಿಕೆಯಲ್ಲ ಅದು ನಮ್ಮ ಜೀವಿತದ ವಿಸ್ತಾರವನ್ನು ಕಡಿತಗೊಳಿಸುತ್ತದೆಯಷ್ಟೆ.

ಜೀವನದಲ್ಲಿ ಅದೆಷ್ಟೋ ಸಂಗತಿಗಳು ಆಗಿಹೋಗುತ್ತಲೇ ಇರುತ್ತವೆ. ತಪ್ಪುಗಳು ಕೂಡಾ. ಹೀಗಿರುವಾಗ ಆ ಎಲ್ಲ ಸಂಗತಿಗಳನ್ನೂ ತಲೆಯಲ್ಲಿ ಗುಡ್ಡೆಹಾಕಿಕೊಂಡು ಕುಳಿತರೆ ಏನು ಪ್ರಯೋಜನ? ಸತ್ತುಹೋದ ಕ್ಷಣಗಳು ಕಸದಂತೆ. ಅವುಗಳನ್ನು ಕಾಲಕಾಲಕ್ಕೆ ಗುಡಿಸಿಹಾಕಬೇಕು. ಕಸದಲ್ಲಿನಮ್ಮ ಒಂದು ಕಾಲದ ಪ್ರೀತಿಯ ವಸ್ತುಗಳಿದ್ದಾವೆಂದು ಕಸದಬುಟ್ಟಿಯನ್ನು ಮಲಗುವ ಕೋಣೆಯಲ್ಲೋ ಅಡುಗೆ ಮನೆಯಲ್ಲೋ ಕಾಪಿಡುತ್ತೀರೇನು!?

ಹಾಗೆಯೇ ನೆನಪುಗಳು ಕೂಡಾ. ಅದೆಷ್ಟೋ ಸಂತಸದ ಕ್ಷಣಗಳು ನಮ್ಮವಾಗಿರುತ್ತವೆ. ಯಾವುದೋ ಸಂದರ್ಭದಲ್ಲವು ಅಚಾನಕ್ಕಾಗಿ ನೆನಪಾದರೆ ತೊಂದರೆಯಿಲ್ಲ ಆದರೆ ನಾವು ಬಳಸಿಕೊಳ್ಳಬೇಕಿರುವ, ಬದುಕಬೇಕಿರುವ ಈ ಕ್ಷಣದಲ್ಲಿಹಳೆಯ ಸಂತಸವನ್ನು ಕೆದಕುತ್ತ ಕುಳಿತರೆ ಪ್ರಸಕ್ತ ಕ್ಷಣ ದುಃಖತಪ್ತವೆನ್ನಿಸುವುದು.

ನಮ್ಮಶಾಲಾ ದಿನಗಳ ಆಟೋಟಗಳನ್ನು ನೆನೆಸಿಕೊಳ್ಳುವಾಗ ಕೊರಳುಬ್ಬಿದಂತಾಗುತ್ತದೆಯಲ್ಲವೆ? ಮೊದಲ ಪ್ರೇಮದ ಮೊದಮೊದಲ ದಿನಗಳನ್ನು ನೆನೆಸಿಕೊಂಡು ಕೂತಾಗಲೂ ಅಷ್ಟೇ.

ಒಂದಾನೊಂದು ಕಾಲದ ಸುಖವನ್ನುಮೆಲುಕು ಹಾಕುವಾಗ, ಹಾಗೆ ಹಾಕುತ್ತ ಕೂತ ಫಳಿಗೆಯಲ್ಲಿನಾವು ನೆಮ್ಮದಿಯಿಂದ ಇದ್ದರೂ ಕೂಡ, ಆ ನೆನಪುಗಳೇ ಹೆಚ್ಚು ಹಿತವಾಗಿ ಸದ್ಯದ ಕ್ಷಣವನ್ನು ದೂರತೊಡಗುತ್ತೇವೆ. ಆ ಕ್ಷಣವನ್ನು ನಮ್ಮ ಕೈಯಾರೆ ಕೊಂದುಕೊಳ್ಳುತ್ತೇವೆ.

ಸುಖದ ಕ್ಷಣಗಳ ನೆನವರಿಕೆಯೇ ಹೀಗಾದರೆ, ದುಃಖದ ಕ್ಷಣಗಳ ನೆನವರಿಕೆ ಹೇಗಿರಬಹುದು!? ಅದು ಮತ್ತೂ ಘೋರ. ನಾವು ಇಷ್ಟೆಲ್ಲ ಕಷ್ಟಗಳನ್ನು ಹಾದು ಬಂದೆವು ಎನ್ನುವುದು ನಮ್ಮಲ್ಲಿ ಕಾಲಕಾಲಕ್ಕೆ ನಮ್ಮ ಆತ್ಮವಿಶ್ವಾಸ ತುಂಬುವಂತಿದ್ದರೆ ಸರಿ. ಅದು ಅಹಂಕಾರವನ್ನು ತುಂಬಿಕೊಟ್ಟರೆ ಅದು ನಮ್ಮ ವ್ಯಕ್ತಿತ್ವಕ್ಕೆ ದೊಡ್ಡ ನಷ್ಟವೇ ಸರಿ. ಅಥವಾ ನಮ್ಮ ಕಷ್ಟಗಳ ನೆನವರಿಕೆ ನಮ್ಮಲ್ಲಿ ಸ್ವಾನುಕಂಪ ತುಂಬುವ ಅಪಾಯವೂ ಇದೆ. ಸ್ವಾನುಕಂಪ ಎಲ್ಲಕ್ಕಿಂತ ಅಪಾಯಕಾರಿ. ಅದು ನಮ್ಮ ಸಾಮರ್ಥ್ಯವನ್ನು ನುಂಗಿಹಾಕುತ್ತದೆ.

ಮರೆವು ನಮ್ಮ ಬದುಕನ್ನು ನಿತ್ಯ ನವೀನವಾಗಿರಿಸಲೆಂದೇ ಇರುವ ದಿವ್ಯೌಷಧ. ಅದು ನಮ್ಮ ಹೆಜ್ಜೆ ಗುರುತುಗಳನು ಅಳಿಸಿ, ಪ್ರತಿ ಹೊಸ ಹೆಜ್ಜೆಯೂ ಹೊಸ ಪ್ರಯಾಣದ ಆರಂಭ ಎಂಬ ನಂಬಿಕೆಯನ್ನು ತುಂಬುತ್ತದೆ. ಮತ್ತು ಹೊಸ ಬದುಕು ಯಾವತ್ತೂ ಭೂತಕಥೆ ಹೊತ್ತ ಗೋರಿಯ ಮೇಲಲ್ಲ, ಆದಿಯ ಅರಿವೇ ಇಲ್ಲದ ತೊಟ್ಟಿಲಿನ ಒಳಗಿಂದ ಶುರುವಾಗುತ್ತದೆ.

ಇವೆಲ್ಲ ಲೌಕಿಕದ ನೆನಪು – ಮರೆವುಗಳಾದವು. ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ, ವಿಸ್ಮೃತಿಗೆ ಅವಕಾಶವೇ ಇಲ್ಲದಂತಹ ಸಂಗತಿಯೊಂದಿದೆ. ಅದು ಆತ್ಮದ ತಿಳಿವು.

ನಾವು ಬಾಲ್ಯದಲ್ಲಿ ನಮ್ಮ ಅಂಗಾಗಗಳನ್ನು ಗುರುತಿಸಿಕೊಳ್ಳುತ್ತಾ, ಅವುಗಳೇ ನಾವೆಂದು ತಿಳಿಯುತ್ತಾ ಬೆಳೆಯುತ್ತೇವೆ. ಕಾಲಕಾಲಕ್ಕೆ ನಮ್ಮ ಅಂಗಾಂಗಗಳು ಮೂಲ ರೂಪವನ್ನು ಕಳಚಿ ಬೇರೆಯೇ ಆಕಾರ ತಳೆಯುತ್ತ ಸಾಗುತ್ತವೆ. ಆದರೂ ನಾವು ಅವನ್ನು ನಮ್ಮವೆಂದು ತಿಳಿಯುತ್ತೇವೆ. ಏಕೆಂದರೆ ಮೊದಲ ಬಾರಿ ಗುರುತಿಸಿದ್ದುದರ ಸ್ಮೃತಿ ನಮ್ಮಲ್ಲಿ ಅಷ್ಟು ಪ್ರಬಲವಾಗಿ ಅಚ್ಚೊತ್ತಿ ನಿಂತಿರುತ್ತದೆ.

ಬಲ್ಲವರು ಹೇಳುತ್ತಾರೆ, ಪ್ರತಿಯೊಬ್ಬರಿಗೂ ಅವರ ಬಾಲ್ಯದಲ್ಲಿ ತಾವು ಈ ದೇಹವಲ್ಲ, ಶುದ್ಧಾತ್ಮವೆಂಬುದು ತಿಳಿದಿರುತ್ತದೆ ಎಂದು. ಮಕ್ಕಳು ಸಾಮಾನ್ಯವಾಗಿ ತಮ್ಮನ್ನು ಸಂಬೋಧಿಸಿಕೊಳ್ಳುವಾಗ ತಮ್ಮದೇ ಹೆಸರನ್ನು ಅಥವಾ ಅವನಿವನೆಂಬ ಸರ್ವನಾಮವನ್ನು ಬಳಸುವುದು ಅದಕ್ಕೆ ತಿಳಿಯುವುದಿಲ್ಲ ಎಂದಲ್ಲ… ಅದು ಇನ್ನೂ ತನ್ನ ದೇಹದೊಂದಿಗೆ ತನ್ನನ್ನು ಗುರುತಿಸಿಕೊಂಡಿಲ್ಲ. ಅದಕ್ಕೆ ತಾನು ನಿಜದಲ್ಲಿ ಯಾರೆಂದು ಗೊತ್ತಿದೆ. ಸ್ವಾಮಿ ರಾಮತೀರ್ಥರು ಈ ಅಂಶವನ್ನು ಮತ್ತೆ ಮತ್ತೆ ತಮ್ಮ ಉಪನ್ಯಾಸಗಳಲ್ಲಿ ಹೇಳುತ್ತಾರೆ.

ಆದರೆ ಬೆಳೆಯುತ್ತ ಹೋದಂತೆಲ್ಲ ಮಗುವಿಗೆ ತನ್ನ ದೇಹದ ಗುರುತು ನೆನಪುಳಿದು, ಆತ್ಮದ ನೆನಪು ಅಳಿಯುತ್ತ ಸಾಗುತ್ತದೆ. ಇದನ್ನೇ ಆತ್ಮವಿಸ್ಮೃತಿ ಎನ್ನುವುದು. ವಾಸ್ತವದಲ್ಲಿ ಆಗಬೇಕಾದುದು ಅದಕ್ಕೆ ವ್ಯತಿರಿಕ್ತ. ಆದರೆ ನಾವು ದೃಗ್ಗೋಚರವಾದ ಸಂಗತಿಯನ್ನೆ ನೆಚ್ಚಿಕೊಳ್ಳುವುದರಿಂದ ಆತ್ಮವನ್ನು ಮರೆಯುತ್ತೇವೆ. ಈ ಮರೆವೆಯೇ ನಮ್ಮನ್ನು ಸಂಸಾರದ ಜಂಜಾಟಕ್ಕೆ, ಮರುಕಕ್ಕೆ, ಸಂಕಟಕ್ಕೆ ನೂಕುವುದು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆತ್ಮ ವಿಸ್ಟೃತಿಯ ಬಗ್ಗೆ ಹೇಳುತ್ತಾನೆ.  ಪಾರ್ಥ ರಣಾಂಗಣದಲ್ಲಿ ದುಃಖಿತನಾಗಿ ನಿಂತಾಗ ಕೃಷ್ಣನು ಆತನಿಗೆ ಆತ್ಮಜ್ಞಾನವನ್ನು ಬೋಧಿಸುತ್ತಾನೆ. ತನ್ನ ವಿಶ್ವರೂಪವನ್ನು ಪ್ರಕಟಪಡಿಸಿ, ಅರ್ಜುನನಿಗೆ ಆತನು ಯಾರೆಂದು ತಿಳಿಸಿಕೊಡುತ್ತಾನೆ.

ಆವರೆಗೆ ಅರ್ಜುನನು ತಾನು ಫಲಾಫಲಗಳಿಲ್ಲದ, ಗುಣದೋಷಗಳಿಲ್ಲದ, ಕರ್ಮಾಕರ್ಮಗಳಿಲ್ಲದ ಶುದ್ಧಾತ್ಮನೆಂಬ ಸಂಗತಿ ಮರೆತುಹೋಗಿರುತ್ತದೆ. ಅವನಿಗೆ ನೆನಪಿದ್ದುದೆಲ್ಲಾ ತನ್ನ ಹೆಸರು ಅರ್ಜುನ ಎಂಬುದು; ತಾನು ಪಾಂಡವ ರಾಜಕುಮಾರ ಎಂಬುದು; ತನ್ನೆದುರು ಯುದ್ಧಕ್ಕೆ ನಿಂತಿರುವವರೆಲ್ಲ ತನಗೆ ಒಂದಲ್ಲ ಒಂದು ಬಗೆಯಲ್ಲಿ ಸಂಬಂಧಿಗಳಾಗಬೇಕು ಎಂಬುದು.

ಲೌಕಿಕದ ಈ ಸ್ವೃತಿಗಳನ್ನು ಅಳಿಸಿಕೊಂಡು, ತಾನು ಶುದ್ಧಾತ್ಮನೆಂಬ ಅಲೌಕಿಕದ ಸ್ವೃತಿಯುಳಿಸಿಕೊಂಡು ಅದಕ್ಕೆ ತಕ್ಕಂತೆ ನಡೆಯುವುದೇ ಧರ್ಮವೆಂದು ಮನದಟ್ಟು ಮಾಡಿಕೊಡುತ್ತಾನೆ ಶ್ರೀ ಕೃಷ್ಣ

One thought on “ಮರೆವಿನ ದಿವ್ಯೌಷಧ ಮತ್ತು ಆತ್ಮವಿಸ್ಮೃತಿಯ ಶಾಪ : ಅಧ್ಯಾತ್ಮ ಡೈರಿ

  1. ಮನಸ್ಸಿನ ಉಳಿದುಕೊಂಡಿರುವ ಅಂಧಕಾರ ಕೋಪ ತಾಪಗಳೆಷ್ಟೋ ನಮ್ಮ ಅರಿವಿಗೆ ಬಾರದು!. ಆತ್ಮವನ್ನು ಭಗವಂತನ ಕಡೆ ಏಗೆ ಕೊಂಡೊಯ್ಯಲಿ. ಇಡಿಯಷ್ಟು ಭಕ್ತಿ ಶ್ರದ್ದೆ ನಮ್ಮಲ್ಲಿ ಉಳಿದರೆ ನಮ್ಮ ಆತ್ಮವು ಪರಮಾತ್ಮವಾಗುತದೆ .

Leave a Reply