ಶಿಷ್ಯನಿಗೆ ಬೋಧಿ ಧರ್ಮ ಖಾಲಿತನವನ್ನು ಎಸೆದ್ ಬಾ ಅಂದಿದ್ದು ಯಾಕೆ!? ~ ಬೋಧಿ ಧರ್ಮನ ಕಥೆಗೆ ಓಶೋ ರಜನೀಶ್ ವ್ಯಾಖ್ಯಾನ | ಕನ್ನಡಕ್ಕೆ : ಚಿದಂಬರ ನರೇಂದ್ರ
ಒಮ್ಮೆ ಹೀಗಾಯಿತು ಬೋಧಿಧರ್ಮನ ಶಿಷ್ಯ ಅವನೆದುರು ಹಾಜರಾದ?
“ ಮಾಸ್ಟರ್, ನೀವು ಖಾಲೀ ಆಗಲಿಕ್ಕೆ ಹೇಳಿದ್ದಿರಿ, ನಾನು ಈಗ ಖಾಲೀ ಆಗಿದ್ದೇನೆ. ಮುಂದೆ ಯಾವ ಸಾಧನೆ ಮಾಡಬೇಕು?”
ಶಿಷ್ಯನ ಮಾತು ಕೇಳಿ ಬೋಧಿಧರ್ಮ ಕೆಂಡಾಮಂಡಲನಾದ, ತನ್ನ ಕೋಲಿನಿಂದ ಶಿಷ್ಯನ ತಲೆ ಮೇಲೆ ಜೋರಾಗಿ ಹೊಡೆದ.
“ಹೋಗು, ನಿನ್ನೊಳಗೆ ತುಂಬಿಕೊಂಡಿರುವ ಈ ಖಾಲೀತನವನ್ನು ಹೊರಗೆ ಎಸೆದು ಬಾ”
“ ನಾನು ಖಾಲಿಯಾಗಿದ್ದೇನೆ” ಎಂದು ನೀವು ಹೇಳಿದರೆ, ಆ “ನಾನು” ಇದೆಯಲ್ಲ ಅದು ನಿಮ್ಮನ್ನು ಯಾವತ್ತೂ ಖಾಲೀ ಆಗುವುದಕ್ಕೆ ಬಿಡುವುದಿಲ್ಲ. ಆದ್ದರಿಂದ ಖಾಲೀತನವನ್ನು ಯಾವತ್ತೂ ಘೋಷಿಸಿಕೊಳ್ಳುವುದು ಸಾಧ್ಯವಿಲ್ಲ. ಹೇಗೆ ವಿನೀತತೆಯನ್ನು ಹೇಳಿಕೊಳ್ಳುವುದು ಅಸಾಧ್ಯವೋ ಹಾಗೆಯೇ ಖಾಲೀತನದ ಮೇಲೆ ಹಕ್ಕು ಸಾಧಿಸುವುದು ಅಸಾಧ್ಯ.
“ ನಾನು ವಿನೀತ” ಎಂದು ನೀವು ಹೇಳಿಕೊಂಡರೆ ನೀವು ವಿನೀತರಾಗಿರುವುದು ಸಾಧ್ಯವಿಲ್ಲ. ಯಾರು ತಾನೆ ವಿನೀತತೆಯನ್ನ ಘೋಷಿಸಿಕೊಳ್ಳಬಲ್ಲರು ? ನೀವು ವಿನೀತರಾಗಿದ್ದರೆ, ನೀವು ವಿನೀತರಾಗಿದ್ದೀರಿ ಅಷ್ಟೇ. ನೀವು ವಿನೀತರಾಗಿರುವುದು ನಿಮಗೆ ಗೊತ್ತಾಗುವುದು ಸಾಧ್ಯವಿಲ್ಲ. ಏಕೆಂದರೆ ವಿನೀತತೆಯನ್ನ ಫೀಲ್ ಮಾಡಿಕೊಳ್ಳುವುದೂ ಆಗದ ಮಾತು. ವಿನೀತತೆಯನ್ನ ಫೀಲ್ ಮಾಡಿಕೊಳ್ಳುವುದೆಂದರೆ ಅಹಂಗೆ ಹುಟ್ಟಿಕೊಳ್ಳಲು ಜಾಗ ನೀಡುವುದು. ಹಾಗೆಯೇ ಖಾಲೀತನವನ್ನು ಫೀಲ್ ಮಾಡಿಕೊಳ್ಳುವುದೆಂದರೆ ನಮ್ಮನ್ನು ನಾವು ಮೋಸ ಮಾಡಿಕೊಳ್ಳುವುದು.
ನಿಮ್ಮೊಳಗೆ ಎಷ್ಟೋ ಫಿಲಾಸೊಫೀಗಳನ್ನ ತುಂಬಿಕೊಂಡಿದ್ದೀರಿ. ಸುಮ್ಮನೇ ಎಲ್ಲದರಿಂದ ಕಳಚಿಕೊಂಡುಬಿಡಿ. ಇಲ್ಲಿಯವರೆಗೆ ಅವು ನಿಮಗೆ ಯಾವ ಸಹಾಯವನ್ನೂ ಮಾಡಿಲ್ಲ. ಮುಂದೂ ಮಾಡುವುದಿಲ್ಲ. ಪ್ರಜ್ಞಾಪೂರ್ವಕವಾಗಿ ಈ ಎಲ್ಲದರಿಂದ ಹೊರಗೆ ಬಂದುಬಿಡಿ, ಕಂತು ಕಂತುಗಳಲ್ಲಿ ಅಲ್ಲ, ಎಲ್ಲ ಒಮ್ಮಿಗೆ.