ಹುಡುಕುವಾಗ ದೊರಕದ್ದು, ಹುಡುಕಾಟ ನಿಲ್ಲಿಸಿದಾಗ ದೊರಕುವುದು! : ಓಶೋ ವ್ಯಾಖ್ಯಾನ

ಧರ್ಮ ನಿನಗೆ ಹೇಳಿಕೊಡಬಹುದಾದ ಕಲೆ ಎಂದರೆ ಹೇಗೆ ನಿನ್ನ ನೀನು ಕಳೆದುಕೊಳ್ಳುವುದು, ಹೇಗೆ ಕರಗುವುದು, ಹೇಗೆ ಶರಣಾಗುವುದು, ಹೇಗೆ ಬಾಗಿಲನ್ನು ಕಿತ್ತು ಬಯಲಾಗುವುದು ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಕಬೀರ್ ಕೇಳುತ್ತಿದ್ದಾನೆ, “ನಾನು ನಿನ್ನ ಹುಡುಕುತ್ತಿದ್ದಾಗ ನೀನಿರಲಿಲ್ಲ, ಆದರೆ ಈಗ ನೀನು ಕಾಣಿಸಿಕೊಂಡಿರುವಾಗ ಆ ಹುಡುಕಾಡುವ ಮನುಷ್ಯ ಕಬೀರ ಎಲ್ಲಿ ಹೋದ ? ಹುಡುಕುವವನೇ ಇಲ್ಲದಿರುವಾಗ ಇದು ಎಂಥ ಭೇಟಿ? ಸಂಧಿಸಬೇಕಾದವರು ಇಬ್ಬರು ಅಲ್ಲವೆ? ನಾನು ಹುಡುಕಾಡುತ್ತ ತಿರುಗುವಾಗ ನನಗೆ ದೊರಕದ್ದು ನಾನು ಹುಡುಕಾಟ ನಿಲ್ಲಿಸಿದಾಗ ದೊರಕುವುದೆಂದರೆ ಎಂಥ ವಿಚಿತ್ರ ಇದು?”

ಆದರೆ ಇದರಲ್ಲಿ ಆಶ್ಚರ್ಯಪಡವಂಥದು ಏನೂ ಇಲ್ಲ. ಇಬ್ಬರ ಭೇಟಿ ಯಾವತ್ತೂ ಸಾಧ್ಯವಿಲ್ಲ. ಸಾಮಾನ್ಯ ಗ್ರಹಿಕೆಯೆಂದರೆ ಒಂದು ಭೇಟಿಗೆ ಇಬ್ಬರು ಬೇಕೆ ಬೇಕು. ಕೇವಲ ಒಬ್ಬನಿರುವಾಗ ಯಾವ ಭೇಟಿ ತಾನೆ ಸಾಧ್ಯ? ಸಾಮಾನ್ಯ ತರ್ಕದ ಪ್ರಕಾರ ಆ ಇನ್ನೊಬ್ಬರ ಅನುಪಸ್ಥಿತಿಯಲ್ಲಿ ಭೇಟಿಯಾಗುವುದಾದರೂ ಏನು ?

ಆದರೆ ನಿಜದ ಭೇಟಿ, ಯಾವುದು ಪ್ರೇಮ, ಪ್ರಾರ್ಥನೆ, ನಿರ್ವಾಣ ಎಂದೆಲ್ಲ ಗುರುತಿಸಲ್ಪಡುತ್ತದೋ ಆ ಭೇಟಿ ಇಬ್ಬರಿಂದ ಸಾಧ್ಯವಾಗುವಂಥದಲ್ಲ. ಹುಡುಕಾಡುವವನಿರುವವರೆಗೂ ಹುಡುಕಲ್ಪಡುವುದು ದೂರ ದೂರ. ಆದರೆ ಹುಡುಕಾಟ ನಿಂತ ಕ್ಷಣದಲ್ಲಿಯೇ ಹುಡುಕಾಡಲ್ಪಡುತ್ತಿರುವುದರ ಹಾಜರಿ.

ಹೀಗೇಕೆ ? ಅಹಂ ಕಾರಣ. ಅಹಂ ಇರುವವರೆಗೂ ಎಲ್ಲವೂ ನೀನೇ ನೀನಾಗಿರುವಾಗ ನಿನ್ನನ್ನು ಬೇರೆ ಯಾವುದೂ ಪ್ರವೇಶ ಮಾಡಲಾರದು. ನಿನ್ನನ್ನು ನೀನು ಕಳೆದುಕೊಂಡಾಗ ಎಲ್ಲವೂ ನಿನ್ನ ಮೂಲಕ ಹಾಯ್ದು ಹೋಗಬಲ್ಲದು. ಈಗ ನೀನು ಎಷ್ಟು ಅಪಾರವಾಗಿರುವೆ ಎಂದರೆ ದಿವ್ಯವೂ ನಿನ್ನ ಪ್ರವೇಶಿಸಬಲ್ಲದು, ಸಮಸ್ತವೂ ನಿನ್ನ ಮೂಲಕ ಹಾಯ್ದು ಹೋಗಲು ಸಿದ್ಧ ಏಕೆಂದರೆ ನಿನ್ನಲ್ಲಿ ಆ ಅವಕಾಶ ಈಗ ಸಾಧ್ಯವಾಗಿದೆ.

ಧರ್ಮ ನಿನಗೆ ಹೇಳಿಕೊಡಬಹುದಾದ ಕಲೆ ಎಂದರೆ ಹೇಗೆ ನಿನ್ನ ನೀನು ಕಳೆದುಕೊಳ್ಳುವುದು, ಹೇಗೆ ಕರಗುವುದು, ಹೇಗೆ ಶರಣಾಗುವುದು, ಹೇಗೆ ಬಾಗಿಲನ್ನು ಕಿತ್ತು ಬಯಲಾಗುವುದು.


Leave a Reply