“ನಾನು ಯಾರು?” : ಶ್ರೀ ರಮಣರೊಡನೆ ಸಂಭಾಷಣೆ

ಶಿವಪ್ರಕಾಶಂ ಪಿಳ್ಳೈಯವರ  ಸಂದೇಹಗಳಿಗೆ ರಮಣ ಮಹರ್ಷಿಗಳು ಲಿಖಿತರೂಪದಲ್ಲಿ ನೀಡಿದ ಉತ್ತರಗಳನ್ನು ಸಂಕಲಿಸಿ ‘ನಾನು ಯಾರು?’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಲಾಗಿದೆ. ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ಅನುವಾದಿಸಿದ ಈ ಸಂಗ್ರಹದ ಆಯ್ದ ಭಾಗ ಇಲ್ಲಿದೆ. (ಇಂದು ಶ್ರೀ ರಮಣ ಜಯಂತಿ)

ಶಿವಪ್ರಕಾಶಂ ಪಿಳ್ಳೈ : ಸಪ್ತ ಧಾತು(ಮಜ್ಜೆ, ಮೂಳೆ, ಕೊಬ್ಬು, ಮಾಂಸ, ರಕ್ತ, ಒಳಚರ್ಮ, ಹೊರಚರ್ಮ)ಗಳಿಂದ ಕೂಡಿರುವ ಸ್ಥೂಲ ಶರೀರವು ನಾನಲ್ಲ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆನ್ನುವ ಪಂಚವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅರಿಯುವ ಪಂಚ ಜ್ಞಾನೇಂದ್ರಿಯಗಳೂ ನಾನಲ್ಲ. ವಾಕ್ಕು, ಕೈಕಾಲುಗಳು, ಗುದೋಪಸ್ಥಗಳೆಂಬ ಪಂಚ ಕರ್ವೇಂದ್ರಿಯಗಳೂ ನಾನಲ್ಲ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣಗಳೂ ನಾನಲ್ಲ. ಸಂಕಲ್ಪಾತ್ಮಕ (ಆಲೋಚನಾತ್ಮಕ)ವಾದ ಮನಸ್ಸೂ ನಾನಲ್ಲ. ಸರ್ವ ವಿಷಯ(ಪದಾರ್ಥ)ಗಳೂ ಸರ್ವವೃತ್ತಿಗಳೂ ಇಲ್ಲದೆ ಕೇವಲ ವಿಷಯ ವಾಸನೆಯಿಂದ ಕೂಡಿರುವ ಅಜ್ಞಾನವೂ ನಾನಲ್ಲ. ಇವೆಲ್ಲವೂ ನಾನಲ್ಲ ಎಂದಾದರೆ ನಾನು ಯಾರು?

ರಮಣ ಮಹರ್ಷಿ : ಮೇಲೆ ತಿಳಿಸಿರುವುದೆಲ್ಲವನ್ನೂ ನಾನಲ್ಲ (ನೇತಿ, ನೇತಿ) ಎಂದು ಅಲ್ಲಗಳೆದ ಬಳಿಕ ಉಳಿಯುವ ಶುದ್ಧ ಅರಿವೇ ನಾನು

ಶಿವಪ್ರಕಾಶಂ ಪಿಳ್ಳೈ : ಈ ಅರಿವಿನ ಸ್ವರೂಪವೇನು?
ರಮಣ ಮಹರ್ಷಿ : ಈ ಅರಿವಿನ ಸ್ವರೂಪವೇ ಸಚ್ಚಿದಾನಂದ (ಸತ್, ಚಿತ್, ಆನಂದ).

ಶಿವಪ್ರಕಾಶಂ ಪಿಳ್ಳೈ : ಆತ್ಮಸಾಕ್ಷಾತ್ಕಾರವು ಯಾವಾಗ ಲಭಿಸುತ್ತದೆ?
ರಮಣ ಮಹರ್ಷಿ : ತೋರುತ್ತಿರುವ ಪ್ರಪಂಚವು ಇಲ್ಲವಾದಾಗ (ನಾನು ಶರೀರದಲ್ಲಿದ್ದೇನೆ. ಪ್ರಪಂಚವು ನನ್ನಿಂದ ಹೊರಗಿದೆ ಎಂಬ ಜಗದ್ದೃಷ್ಟಿಯು ನಿವಾರಣೆಯಾದಾಗ) ಸ್ವರೂಪ ದರ್ಶನವು ಆಗುತ್ತದೆ.

ಶಿವಪ್ರಕಾಶಂ ಪಿಳ್ಳೈ : ತೋರುತ್ತಿರುವ ಪ್ರಪಂಚವು ಇಲ್ಲವಾಗುವುದು ಯಾವಾಗ?
ರಮಣ ಮಹರ್ಷಿ : ಎಲ್ಲ ಅರಿವಿಗೂ ಮತ್ತು ಎಲ್ಲ ಕಾರ್ಯಗಳಿಗೂ ಕಾರಣವಾದ ಮನಸ್ಸು ಲಯವಾದಾಗಲೇ ಪ್ರಪಂಚವೂ ಇಲ್ಲವಾಗುವುದು.

ಶಿವಪ್ರಕಾಶಂ ಪಿಳ್ಳೈ : ಮನಸ್ಸಿನ ಸ್ವರೂಪವೇನು?
ರಮಣ ಮಹರ್ಷಿ : ಮನಸ್ಸು ಎಂದು ಕರೆಯಲ್ಪಡುವುದು ಆತ್ಮಸ್ವರೂಪದಲ್ಲಿನ ಒಂದಾನೊಂದು ಅತಿಶಯವಾದ ಶಕ್ತಿ. ಅದೇ ಎಲ್ಲ ಸಂಕಲ್ಪಗಳಿಗೂ ಕಾರಣ. ಆಲೋಚನೆಗಳ ಸಮೂಹದ ಹೊರತಾಗಿ ಪ್ರತ್ಯೇಕವಾಗಿ ಮನಸ್ಸೆಂಬುದು ಇಲ್ಲ. ಆದ ಕಾರಣ ಸಂಕಲ್ಪವೇ ಮನಸ್ಸಿನ ಸ್ವರೂಪ. ಸಂಕಲ್ಪಗಳನ್ನು ಬಿಟ್ಟು ಪ್ರಪಂಚವೆಂಬ ವಸ್ತು ಸ್ವತಂತ್ರವಾಗಿ ಬೇರೆ ಇಲ್ಲ. ಎಚ್ಚರ ಮತ್ತು ಕನಸುಗಳಲ್ಲಿ ಆಲೋಚನೆಗಳೂ ಇವೆ; ಪ್ರಪಂಚವೂ ಇದೆ. ಜೇಡರ ಹುಳುವು ಹೇಗೆ ತನ್ನ ಶರೀರದೊಳಗಿನಿಂದ ಬಲೆಯ ನೂಲನ್ನು ಹೊರತಂದು ಬಳಿಕ ಅದನ್ನು ತನ್ನೊಳಗೇ ಸೆಳೆದುಕೊಂಡು ವಿಲೀನಗೊಳಿಸಿಕೊಳ್ಳುತ್ತದೆಯೋ ಅಂತೆಯೇ ಮನಸ್ಸೂ ತನ್ನೊಳಗಿನ ಜಗತ್ತನ್ನು ಹೊರದೋರಿ ಮತ್ತೆ ಅದನ್ನು ತನ್ನೊಳಗೇ ವಿಲೀನಗೊಳಿಸಿ ಕೊಳ್ಳುತ್ತದೆ. ಮನಸ್ಸು ಬಹಿಮುಖವಾದಾಗ (ಆತ್ಮ ಸ್ವರೂಪದಿಂದ ಹೊರಬಂದಾಗ) ಪ್ರಪಂಚವು ತೋರಿಕೊಳ್ಳುತ್ತದೆ. ಆದ್ದರಿಂದ ಪ್ರಪಂಚವು ತೋರುತ್ತಿರುವಾಗ ಸ್ವರೂಪವು ತೋರುವುದಿಲ್ಲ. ಸ್ವರೂಪವು ಪ್ರಕಾಶಿಸುತ್ತಿರುವಾಗ ಪ್ರಪಂಚವು ತೋರುವುದಿಲ್ಲ. ಮನಸ್ಸಿನ ಸ್ವರೂಪವನ್ನು ಎಡಬಿಡದೆ ವಿಚಾರಕ್ಕೆ ಒಳಪಡಿಸುತ್ತಲೇ ಇದ್ದರೆ ಮನಸ್ಸು ಆತ್ಮವೇ ಆಗಿಬಿಡುವುದು. ಮನಸ್ಸು ಎನ್ನುವುದು ಯಾವಾಗಲೂ ಒಂದು ಸ್ಥೂಲ ವಸ್ತುವನ್ನು ಆಶ್ರಯಿಸಿಯೇ ಇರುತ್ತದೆ. ಹಾಗೆ ಆಶ್ರಯಿಸದೆ ಅದು ಬೇರೆ ಯಾಗಿರುವುದಿಲ್ಲ. ಮನಸ್ಸನ್ನೇ ವ್ಯವಹಾರದಲ್ಲಿ ಸೂಕ್ಷ್ಮ ಶರೀರವೆಂದೂ ಅಥವಾ ಜೀವನೆಂದೂ ಕರೆಯಲಾಗುತ್ತದೆ.

ಶಿವಪ್ರಕಾಶಂ ಪಿಳ್ಳೈ : ಮನಸ್ಸು ಇಲ್ಲವಾಗುವುದು ಹೇಗೆ?
ರಮಣ ಮಹರ್ಷಿ : “ನಾನು ಯಾರು?” ಎಂದು ನಿರಂತರವಾಗಿ ಶೋಸುವುದರಿಂದ ಮಾತ್ರವೇ ಮನಸ್ಸು ಇಲ್ಲವಾಗುತ್ತದೆ. ನಾನು ಯಾರು ಎಂಬ ಚಿಂತನೆಯೇ ಇತರ ಎಲ್ಲ ಆಲೋಚನೆಗಳನ್ನೂ ನಾಶಗೊಳಿಸಿ ಶವವನ್ನು ಸುಡಲು ಉಪಯೋಗಿಸುವ ಕಟ್ಟಿಗೆಯಂತೆ ಕೊನೆಗೆ ತಾನೂ ನಾಶವಾಗಿ ಬಿಡುತ್ತದೆ. ಬಳಿಕ ಸ್ವರೂಪ ದರ್ಶನವಾಗುವುದು.

ಶಿವಪ್ರಕಾಶಂ ಪಿಳ್ಳೈ : “ನಾನು ಯಾರು?” ಎಂಬ ವಿಚಾರ ಮಾರ್ಗದ ಶೋಧನೆಯನ್ನು ಎಡಬಿಡದೆ ಕೈಗೊಳ್ಳುವುದು ಹೇಗೆ?
ರಮಣ ಮಹರ್ಷಿ : ಈ ಶೋಧನೆಯ ಮಾರ್ಗದಲ್ಲಿ ಸಂಕಲ್ಪಗಳು ಮತ್ತೆ ಮತ್ತೆ ಉಂಟಾಗುತ್ತಿದ್ದರೂ ಅವುಗಳನ್ನು ಹಿಂಬಾಲಿಸಲು ಪ್ರಯತ್ನಿಸದೆ, ‘‘ಈ ಸಂಕಲ್ಪಗಳು ಯಾರಿಗೆ ಉಂಟಾಗುತ್ತಿದೆ?’’ ಎಂದು ವಿಚಾರಿಸಬೇಕು. ಎಷ್ಟೇ ಸಂಕಲ್ಪಗಳು ಬರುತ್ತಿರಲಿ ಅದರಿಂದೇನು? ಪ್ರತಿಯೊಂದು ಸಂಕಲ್ಪವೂ ಹೊರಬರುತ್ತಿರುವಾಗಲೇ ‘‘ಇದು ಯಾರಿಗೆ?’’ ಎಂದು ಎಚ್ಚರಿಕೆಯಿಂದ ವಿಚಾರಿಸಿದಾಗ, ‘‘ನನಗೆ” ಎಂದು ತೋರುವುದು. ಆಗ ‘‘ನಾನು ಯಾರು?’’ ಎಂದು ಪಟ್ಟುಬಿಡದೆ ವಿಚಾರ ಮಾಡುತ್ತಿದ್ದರೆ ಮನಸ್ಸು ತನ್ನ ಉಗಮಸ್ಥಾನಕ್ಕೆ ಹಿಂತಿರುಗುವುದು. ನಿರಂತರವಾಗಿ ಹೀಗೆಯೇ ಅಭ್ಯಾಸ ಮಾಡುತ್ತಿದ್ದರೆ ಮನಸ್ಸಿಗೆ ತನ್ನ ಉಗಮಸ್ಥಾನದಲ್ಲಿ ನೆಲೆಸುವ ಶಕ್ತಿಯು ಹೆಚ್ಚುತ್ತಾ ಬರುತ್ತದೆ. ಸೂಕ್ಷ್ಮವಾದ ಮನಸ್ಸು ಮಿದುಳೇ ಮೊದಲಾದ ಇಂದ್ರಿಯಗಳ ಮೂಲಕ ಹೊರ ಮುಖವಾದರೆ ಸ್ಥೂಲವಾದ ನಾಮರೂಪಗಳನ್ನು ಅರಿಯುತ್ತದೆ; ಅದು ಹೃದಯದಲ್ಲೇ ನೆಲೆನಿಂತರೆ ಆಗ ನಾಮರೂಪಗಳು ಮರೆಯಾಗುವುವು. ಹೊರ ಮುಖವಾಗಿ ಹರಿಯುವ ಮನಸ್ಸನ್ನು ಹಿಂತಿರುಗಿಸಿ ಹೃದಯದಲ್ಲಿ ನೆಲೆಸುವುದನ್ನೇ ಅಂತಮುಖ ಎಂದು ಕರೆಯಲಾಗುತ್ತದೆ. ಹೀಗೆ ಮನಸ್ಸನ್ನು ಹೃದಯದಲ್ಲೇ ನೆಲೆಸುವಂತೆ ಮಾಡಿದಲ್ಲಿ ಎಲ್ಲ ಸಂಕಲ್ಪ ವಿಕಲ್ಪಗಳಿಗೆ ಕಾರಣವಾದ ‘ನಾನು’ ಎಂಬ ಅಹಂಕಾರವು ವಿಲೀನವಾಗಿ ಸದಾ ಇರುವ ಸ್ವಸ್ವರೂಪವಾದ ಆತ್ಮವೇ ಬೆಳಗುತ್ತಿರುತ್ತದೆ. ಮಾಡುವ ಎಲ್ಲ ಕಾರ್ಯಗಳನ್ನೂ ‘ನಾನು’ ಎನ್ನುವ ಅಹಂಕಾರವಿಲ್ಲದವನಾಗಿ ಮಾಡಬೇಕು. ಹಾಗೆ ಮಾಡಿದರೆ ಎಲ್ಲವೂ ಶಿವನ (ಭಗವಂತನ, ಆತ್ಮದ) ಸ್ವರೂಪವಾಗಿಯೇ ಕಾಣುತ್ತದೆ.

ಶಿವಪ್ರಕಾಶಂ ಪಿಳ್ಳೈ :  ಭಕ್ತರಲ್ಲಿ ಯಾರು ಅತಿ ಶ್ರೇಷ್ಠರು?
ರಮಣ ಮಹರ್ಷಿ : ಆತ್ಮ ಸ್ವರೂಪವೇ ಆದ ಭಗವಂತನಿಗೆ ಯಾರು ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುತ್ತಾನೆಯೋ ಅವನೇ ಅತಿ ಶ್ರೇಷ್ಠನಾದ ಭಕ್ತ. ಆತ್ಮ ಚಿಂತನೆಯ ಹೊರತು ಬೇರಾವ ಚಿಂತೆಗಳಿಗೂ ಎಡೆಗೊಡದೆ ಇರುವುದೇ ಭಗವಂತನಿಗೆ ಅರ್ಪಿಸಿಕೊಳ್ಳುವುದು ಎಂಬುದರ ನಿಜವಾದ ಅರ್ಥ. ಭಗವಂತನಿಗೆ ಸಮರ್ಪಿಸಲ್ಪಟ್ಟ ಎಲ್ಲ ಭಾರವನ್ನೂ ಅವನು ವಹಿಸಿಕೊಳ್ಳುತ್ತಾನೆ. ಭಗವಂತನ ಶಕ್ತಿಯೊಂದೇ ಎಲ್ಲ ಕಾರ್ಯಗಳನ್ನೂ ಮಾಡುತ್ತಿರುವುದರಿಂದ ನಾವು ಅದಕ್ಕೆ ತಲೆಬಾಗಿರುವುದನ್ನು ಬಿಟ್ಟು , ‘‘ಹೀಗೆ ಮಾಡಬೇಕು, ಹಾಗೆ ಮಾಡಬೇಕು’’ ಎಂದು ಸತತವಾಗಿ ಏಕೆ ಚಿಂತಿಸುತ್ತಿರಬೇಕು? ರೈಲು ಗಾಡಿಯು ಎಲ್ಲ ಭಾರವನ್ನೂ ಹೊರುತ್ತದೆಯೆಂಬುದನ್ನು ತಿಳಿದಿದ್ದೂ ಅದರಲ್ಲಿ ಪ್ರಯಾಣ ಮಾಡುವವನು ತನ್ನ ಬಳಿಯಿರುವ ಚಿಕ್ಕ ಗಂಟನ್ನು ತನ್ನ ತಲೆಯ ಮೇಲೆಯೇ ಹೊತ್ತುಕೊಂಡು ಕಷ್ಟಪಡುವುದೇಕೆ?

ಶಿವಪ್ರಕಾಶಂ ಪಿಳ್ಳೈ :  ವೈರಾಗ್ಯವು ಯಾವುದು?
ರಮಣ ಮಹರ್ಷಿ : ಎಲ್ಲ ಸಂಕಲ್ಪಗಳನ್ನೂ ಅವು ಉದಿಸುತ್ತಿರುವಾಗಲೇ ಸ್ವಲ್ಪವೂ ಉಳಿಯದಂತೆ ನಾಶಮಾಡುವುದನ್ನೇ ವೈರಾಗ್ಯವೆನ್ನುತ್ತಾರೆ. ಸಮುದ್ರದಾಳದ ಮುತ್ತುಗಳನ್ನು ಹೊರ ತರುವವರು ತಮ್ಮ ಶರೀರಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿಕೊಂಡು ಮುಳುಗಿ ಮುತ್ತುಗಳನ್ನು ಹೇಗೆ ಹೊರತರುತ್ತಾರೆಯೋ ಹಾಗೆಯೇ ಪ್ರತಿಯೊಬ್ಬರೂ ವೈರಾಗ್ಯವೇ ಮೊದಲಾದ ಸಾಧನೆಯ ಸಂಪತ್ತಿನಿಂದ ತನ್ನೊಳಗೆ ಮುಳುಗಿ ಆತ್ಮವೆಂಬ ಅಮೂಲ್ಯ ಮುತ್ತನ್ನು ಪಡೆಯಬಹುದು.

ಶಿವಪ್ರಕಾಶಂ ಪಿಳ್ಳೈ :  ಜೀವನೊಬ್ಬನನ್ನು ಮುಕ್ತನನ್ನಾಗಿ ಮಾಡಲು ಭಗವಂತನಿಂದ ಮತ್ತು ಗುರುವಿನಿಂದ ಆಗುವುದಿಲ್ಲವೇ?
ರಮಣ ಮಹರ್ಷಿ : ಭಗವಂತ ಮತ್ತು ಗುರು ಇವರಿಬ್ಬರೂ ಮುಕ್ತನಾಗುವ ಮಾರ್ಗವನ್ನು ಮಾತ್ರ ತಿಳಿಸಿಕೊಡುತ್ತಾರೆ. ಅವರು ತಾವಾಗಿಯೇ ಜೀವನನ್ನು ಬಂಧಮುಕ್ತನನ್ನಾಗಿ ಮಾಡುವುದಿಲ್ಲ. ವಾಸ್ತವವಾಗಿ ಭಗವಂತ ಮತ್ತು ಗುರು ಬೇರೆ ಬೇರೆ ಅಲ್ಲ. ಹುಲಿಯ ಬಾಯಿಗೆ ಸಿಲುಕಿದ ಪ್ರಾಣಿಯು ಹೇಗೆ ಅದರಿಂದ ತಪ್ಪಿಸಿಕೊಳ್ಳಲಾರದೋ ಹಾಗೆಯೇ ಗುರುವಿನ ಕೃಪಾಕಟಾಕ್ಷಕ್ಕೆ ಸಿಕ್ಕಿದವರು ಅವರಿಂದ ರಕ್ಷಿಸಲ್ಪಡುವವರೇ ಹೊರತಾಗಿ ಎಂದಿಗೂ ತೊರೆಯಲ್ಪಡುವುದಿಲ್ಲ. ಆದರೂ ಪ್ರತಿಯೊಬ್ಬರೂ ಗುರು ತೋರಿಸಿದ ದಾರಿಯನ್ನು ತಪ್ಪದೆ ಸ್ವಪ್ರಯತ್ನದಿಂದ ಅನುಸರಿಸಿ ಮುಕ್ತಿಯನ್ನು ಹೊಂದಬೇಕು. ತನ್ನ ಅರಿವಿನ ಕಣ್ಣಿನಿಂದ ಮಾತ್ರವೇ ಒಬ್ಬನು ತನ್ನನ್ನು ತಾನು ಅರಿಯಲಾಗುವುದೇ ಹೊರತು ಇನ್ನೊಬ್ಬರ ಮೂಲಕ ಕಾಣುವುದು ಹೇಗೆ ಸಾಧ್ಯ? ರಾಮನಿಗೆ ತಾನು ರಾಮನೇ ಎಂದು ಅರಿಯಲು ಕನ್ನಡಿಯೊಂದರ ಅಗತ್ಯವೇನಿದೆ?

ಶಿವಪ್ರಕಾಶಂ ಪಿಳ್ಳೈ :  ಮುಕ್ತಿಯೆಂದರೇನು?
ರಮಣ ಮಹರ್ಷಿ : “ಬದ್ಧನಾಗಿರುವ ನಾನು ಯಾರು?’’ ಎಂದು ವಿಚಾರಿಸಿ ತನ್ನ ಯಥಾರ್ಥ ಸ್ವರೂಪವನ್ನು ಅರಿತುಕೊಳ್ಳುವುದೇ ಮುಕ್ತಿ.

ಶಿವಪ್ರಕಾಶಂ ಪಿಳ್ಳೈ :  ಮನೋನಿಗ್ರಹಕ್ಕೆ ಬೇರೆ ಯಾವ ಉಪಾಯಗಳೂ ಇಲ್ಲವೆ?
ರಮಣ ಮಹರ್ಷಿ : ಮನೋನಿಗ್ರಹಕ್ಕೆ ಆತ್ಮ ವಿಚಾರವನ್ನು ಬಿಟ್ಟು ಬೇರೆ ಯಾವ ಉಪಾಯಗಳೂ ಇಲ್ಲ. ಇತರ ಉಪಾಯಗಳಿಂದ ಮನಸ್ಸು ನಿಗ್ರಹಿಸಲ್ಪಟ್ಟಂತೆ ಕಂಡುಬಂದರೂ ಅದು ಮತ್ತೆ ತಲೆದೋರುವುದು. ಪ್ರಾಣಾಯಾಮದಿಂದ ಮನಸ್ಸು ನಿಗ್ರಹಿಸಿದಂತೆ ತೋರಿದರೂ ಪ್ರಾಣಾಯಾಮದ ಬಳಿಕ ಮತ್ತೆ ಉಸಿರಾಟವು ಪ್ರಾರಂಭವಾದಾಗ ಮನಸ್ಸೂ ಮತ್ತೆ ಹೊರಮುಖವಾಗಿ ವಾಸನೆಗಳ ವಶವಾಗಿ ಹೊರಗೆ ಅಲೆದಾಡುತ್ತಿರುತ್ತದೆ. ಮನಸ್ಸಿಗೂ ಉಸಿರಿಗೂ ಉಗಮಸ್ಥಾನವೊಂದೇ. ಮನಸ್ಸಿಗೆ ಸಂಕಲ್ಪವೇ ಸ್ವರೂಪ. ‘ನಾನು’ ಎಂಬ ಭಾವನೆಯೇ ಮನಸ್ಸಿನ ಮೊದಲನೆಯ ಕಲ್ಪನೆ. ಅದಕ್ಕೆ ‘ಅಹಂಕಾರ’ವೆಂದು ಹೆಸರು.
ಅಹಂಕಾರವು ಎಲ್ಲಿಂದ ಉದಿಸುತ್ತದೋ ಅಲ್ಲಿಂದಲೇ ಉಸಿರೂ ಉದಿಸುತ್ತದೆ. ಆದುದರಿಂದ ಮನಸ್ಸನ್ನು ನಿಗ್ರಹಿಸಿದಾಗ ಉಸಿರೂ, ಉಸಿರನ್ನು ನಿಗ್ರಹಿಸಿದಾಗ ಮನಸ್ಸೂ ನಿಗ್ರಹಿಸಲ್ಪಟ್ಟಿರುತ್ತದೆ. ಆದರೆ ಸುಷುಪ್ತಿಯಲ್ಲಿ ಮನಸ್ಸು ನಿಗ್ರಹಿಸಲ್ಪಟ್ಟಿದ್ದರೂ ಉಸಿರಾಟವು ನಿಂತಿರುವುದಿಲ್ಲ. ದೇಹದ ಸಂರಕ್ಷಣೆಯ ಕಾರಣವಾಗಿಯೂ, ದೇಹವು ಮರಣ ಹೊಂದಿರುವುದೋ ಎಂಬ ಸಂಶಯವು ಉಂಟಾಗದಿರುವುದಕ್ಕಾಗಿಯೂ ಈ ವಿಧವಾಗಿ ಈಶ್ವರನ ನಿಯಮವು ಏರ್ಪಟ್ಟಿರುವುದು. ಎಚ್ಚರ ಮತ್ತು ಸಮಾಧಿ ಸ್ಥಿತಿಗಳಲ್ಲಿ ಮನಸ್ಸು ನಿಗ್ರಹಿಸಲ್ಪಟ್ಟಿರುವಾಗ ಉಸಿರೂ ನಿಗ್ರಹಿಸಲ್ಪಟ್ಟಿರುವುದು.
ಉಸಿರು ಮನಸ್ಸಿನ ಸ್ಥೂಲರೂಪವೇ. ಮರಣಕಾಲದವರೆಗೆ ಮನಸ್ಸು ಶರೀರದಲ್ಲಿ ಉಸಿರನ್ನು ಧರಿಸಿಕೊಂಡಿದ್ದು ಶರೀರವು ಮರಣ ಹೊಂದುವ ಸಮಯದಲ್ಲಿ ಆ ಮನಸ್ಸೇ ಉಸಿರನ್ನು ತನ್ನಲ್ಲಿ ಸೇರಿಸಿಕೊಂಡು ಹೊರಟುಹೋಗುತ್ತದೆ. ಆದ ಕಾರಣ ಮನೋನಿಗ್ರಹಕ್ಕೆ ಪ್ರಾಣಾಯಾಮವು ನೆರವಾಗಬಹುದೇ ಹೊರತು ಅದರಿಂದ ಮನೋನಾಶವಾಗುವುದಿಲ್ಲ. ಪ್ರಾಣಾಯಾಮದಂತೆಯೇ ಮೂರ್ತಿಧ್ಯಾನ, ಮಂತ್ರಜಪ, ಆಹಾರ ನಿಯಮಗಳೇ ಮೊದಲಾದವು ಮನೋನಿಗ್ರಹಕ್ಕೆ ನೆರವಾಗುತ್ತವೆ. ಮೂರ್ತಿಧ್ಯಾನ ಮತ್ತು ಮಂತ್ರಜಪಗಳಿಂದ ಮನಸ್ಸಿಗೆ ಏಕಾಗ್ರತೆಯುಂಟಾಗುತ್ತದೆ. ಮನಸ್ಸು ಸದಾ ಚಂಚಲ ಸ್ವಭಾವದಿಂದ ಕೂಡಿದೆ. ಸದಾ ಚಲಿಸುತ್ತಿರುವ ಆನೆಯ ಸೊಂಡಿಲಿಗೆ ಒಂದು ಸರಪಳಿಯನ್ನು ಕೊಟ್ಟರೆ ಅದು ಹೇಗೆ ಅದನ್ನೇ ಹಿಡಿದುಕೊಂಡು ತನ್ನ ಸೊಂಡಿಲಿನ ಚಲನೆಯನ್ನು ನಿಲ್ಲಿಸುವುದೋ, ಹಾಗೆಯೇ ಚಂಚಲವಾದ ಮನಸ್ಸನ್ನೂ ಯಾವುದಾದರೊಂದು ನಾಮ ಅಥವಾ ರೂಪದಲ್ಲಿ ಚಿರಕಾಲ ಪಳಗಿಸಿದರೆ ಅದು ಅದೊಂದನ್ನೇ ಹಿಡಿದುಕೊಂಡು ತನ್ನ ಚಂಚಲತೆ ಕಳೆದುಕೊಳ್ಳುವುದು.
ಮನಸ್ಸು ಲೆಕ್ಕವಿಲ್ಲದಷ್ಟು ಸಂಕಲ್ಪಗಳಾಗಿ ಹರಡಿಹೋದಾಗ ಪ್ರತಿಯೊಂದು ಸಂಕಲ್ಪವೂ ಬಲಹೀನವಾಗುತ್ತದೆ; ಆದರೆ ಸಂಕಲ್ಪಗಳು ಕಡಿಮೆಯಾಗುತ್ತ ಬಂದಾಗ ಮನಸ್ಸು ಏಕಾಗ್ರತೆ ಹೊಂದಿ ಅದರಿಂದ ಬಲಶಾಲಿಯಾದ ಅಂತಹ ಮನಸ್ಸಿಗೆ ಆತ್ಮವಿಚಾರವು ಸುಲಭವಾಗಿ ಸಿದ್ಧಿಸುವುದು. ಸಕಲ ನಿಯಮಗಳಲ್ಲಿ ಶ್ರೇಷ್ಠವಾಗಿರುವ ಹಿತಮಿತ ಸಾತ್ವಿಕ ಆಹಾರ ಸೇವನೆಯ ನಿಮಯಗಳಿಂದ ಮನಸ್ಸಿನ ಸತ್ವಗುಣವು ವೃದ್ಧಿಯಾಗಿ ಆತ್ಮವಿಚಾರಕ್ಕೆ ನೆರವಾಗುವುದು.

ಶಿವಪ್ರಕಾಶಂ ಪಿಳ್ಳೈ :  ಅನಾದಿ ಕಾಲದಿಂದಲೂ ಬಂದಿರುವ ಎಲ್ಲ ವಿಷಯ ವಾಸನೆಗಳೂ ಇಲ್ಲವಾಗಿ ಕೇವಲ ಸ್ವರೂಪಮಾತ್ರನಾಗಿಯೇ ನೆಲೆಸಲು ಸಾಧ್ಯವೇ?
ರಮಣ ಮಹರ್ಷಿ : ಸ್ವರೂಪ ಮಾತ್ರನಾಗಿಯೇ ನೆಲೆಸುವ ಸ್ಥಿತಿ ಉಂಟಾಗುತ್ತದೆಯೇ ಇಲ್ಲವೇ ಎಂಬ ಸಂದೇಹಗಳಿಗೆ ಸ್ವಲ್ಪವೂ ಎಡೆಕೊಡದೆ ಸ್ವರೂಪ ಧ್ಯಾನವನ್ನೇ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಒಬ್ಬನು ಎಷ್ಟೇ ಪಾಪಿಯಾಗಿದ್ದರೂ ‘‘ನಾನು ಪಾಪಿಯಾಗಿದ್ದೇನೆ, ಹೇಗೆ ತಾನೆ ನಾನು ಸಂಸಾರ ಸಾಗರವನ್ನು ದಾಟಬಲ್ಲೆ?’’ ಎನ್ನುವ ಸಂತಾಪ ಚಿಂತೆಯನ್ನೇ ಬುಡಸಹಿತವಾಗಿ ತೆಗೆದುಹಾಕಿ ದೃಢವಾಗಿ ಸ್ವರೂಪಧ್ಯಾನದಲ್ಲಿ ತತ್ಪರನಾಗಿದ್ದಲ್ಲಿ ನಿಶ್ಚಯವಾಗಿಯೂ ಅವನು ಕೃತಕೃತ್ಯನಾಗುವನು.
ಒಳ್ಳೆಯ ಮನಸ್ಸು ಮತ್ತು ಕೆಟ್ಟ ಮನಸ್ಸು ಎಂಬ ಎರಡು ಬಗೆಯ ಮನಸ್ಸುಗಳಿಲ್ಲ. ಮನಸ್ಸು ಒಂದೇ. ಆದರೆ ವಾಸನೆಗಳಲ್ಲಿ ಶುಭ, ಅಶುಭವೆಂದು ಎರಡು ವಿಧ. ಮನಸ್ಸು ಶುಭವಾದ ವಾಸನೆಗಳ ವಶವಾಗಿದ್ದರೆ ಒಳ್ಳೆಯದೆಂದೂ, ಅಶುಭವಾದ ವಾಸನೆಗಳ ವಶವಾಗಿದ್ದರೆ ಕೆಟ್ಟದ್ದೆಂದೂ ಕರೆಯಲ್ಪಡುತ್ತದೆ. ಮನಸ್ಸನ್ನು ಪ್ರಪಂಚದ ವಿಷಯಗಳಲ್ಲಿಯಾಗಲೀ ಇತರರ ವಿಷಯಗಳಲ್ಲಿಯಾಗಲೀ ತೊಡಗಿಸಿಕೊಳ್ಳಕೂಡದು. ಇತರರು ಎಷ್ಟೇ ಕೆಟ್ಟ ಸ್ವಭಾವದವರಾಗಿರಲಿ ಅವರನ್ನು ದ್ವೇಷಿಸಕೂಡದು. ರಾಗದ್ವೇಷಗಳೆರಡನ್ನೂ ತ್ಯಜಿಸಬೇಕು. ಇತರರಿಗೆ ಮಾಡುವ ಉಪಕಾರಗಳೆಲ್ಲವೂ ತನಗೇ ಮಾಡಿಕೊಂಡಂತೆಯೇ ಆಗುತ್ತವೆ.
ಈ ತತ್ತ್ವವನ್ನು ಅರಿತರೆ ಯಾರು ಇನ್ನೊಬ್ಬರಿಗೆ ಕೊಡದಿರಲು ಸಾಧ್ಯ? ನಾನು ಎಂಬುದು ಹುಟ್ಟಿದ ಕೂಡಲೇ ಎಲ್ಲವೂ ಹುಟ್ಟುವುದು. ನಾನು ಎಂಬುದು ಇಲ್ಲವಾದರೆ ಎಲ್ಲವೂ ಇಲ್ಲವಾಗುವುದು. ಎಲ್ಲಿಯವರೆಗೆ ನಾವು ವಿನಯದಿಂದ ವರ್ತಿಸುತ್ತೇವೆಯೋ ಅಲ್ಲಿಯವರೆಗೆ ಎಲ್ಲವೂ ಒಳ್ಳೆಯದೇ ಆಗುವುದು. ಮನಸ್ಸು ಶಾಂತವಾಗಿದ್ದರೆ ಯಾರು ಎಲ್ಲಿ ಬೇಕಾದರೂ ನೆಲೆಸಬಹುದು. ಎಲ್ಲವೂ ನೆಮ್ಮದಿಯಾಗಿಯೇ ಇರುತ್ತದೆ.

ಶಿವಪ್ರಕಾಶಂ ಪಿಳ್ಳೈ :  ವಿಚಾರವನ್ನು ಎಷ್ಟು ಕಾಲದವರೆಗೆ ಮಾಡಬೇಕು?
ರಮಣ ಮಹರ್ಷಿ : ಮನಸ್ಸಿನಲ್ಲಿ ಎಲ್ಲಿಯವರೆಗೆ ವಿಷಯ ವಾಸನೆಗಳು ಉಳಿದುಕೊಂಡಿರುತ್ತವೆಯೋ ಅಲ್ಲಿಯವರೆಗೆ ‘ನಾನು ಯಾರು?’ ಎನ್ನುವ ವಿಚಾರವನ್ನು ಮಾಡುತ್ತಿರಬೇಕು. ಆಲೋಚನೆಗಳು ಉದಿಸುತ್ತಿದ್ದಂತೆಯೇ ಕೂಡಲೇ ಅವುಗಳನ್ನು ಅವುಗಳ ಉಗಮ ಸ್ಥಾನದಲ್ಲಿಯೇ ವಿಚಾರದಿಂದ ನಶಿಸುವಂತೆ ಮಾಡುತ್ತಿರಬೇಕು. ಆತ್ಮಸಾಕ್ಷಾತ್ಕಾರವಾಗುವವರೆಗೆ ಎಡೆಬಿಡದೆ ಸ್ವರೂಪ ಧ್ಯಾನವನ್ನೇ ಮಾಡುತ್ತಿದ್ದರೆ ಅಷ್ಟೇ ಸಾಕು. ಕೋಟೆಯೊಳಗೆ ಶತ್ರುಗಳು ಇರುವವರೆಗೂ ಅವರು ಹೊರಬರುತ್ತಲೇ ಇರುತ್ತಾರೆ. ಅವರು ಹೊರ ಬರುತ್ತಿದ್ದಂತೆಯೇ ಅವರನ್ನು ನಾಶಗೊಳಿಸಿದರೆ ಅಂತ್ಯದಲ್ಲಿ ಕೋಟೆಯು ನಮ್ಮ ವಶವಾಗುತ್ತದೆ.

Leave a Reply