ಜ್ಞಾನೋದಯ, ನಿರ್ವಾಣ ಎನ್ನುವುದೆಲ್ಲ… | ಓಶೋ ವ್ಯಾಖ್ಯಾನ

ಜ್ಞಾನೋದಯ, ನಿರ್ವಾಣ ಎನ್ನುವುದೆಲ್ಲ ಬಹಳ ಸಾಮಾನ್ಯ ಸಂಗತಿ. ಆದರೆ ಹಾಗೆ ಹೇಳಲು ಅಹಂ ಗೆ ಇಷ್ಟವಿಲ್ಲ! ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಮ್ಮೆ ಶಿಷ್ಯ ಒಂದು ಮೆಥೊಡಿಸ್ಟ್ ಚರ್ಚ್ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ ಚರ್ಚ್ ನ ಅಂಗಳದಲ್ಲಿ ಝೆನ್ ಮಾಸ್ಟರ್ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತದ್ದನ್ನು ಕಂಡ. ಹತ್ತಿರ ಹೋಗಿ ನೋಡಿ ಆಶ್ಚರ್ಯಚಕಿತನಾದ.

ಮಾಸ್ಟರ್, ಚರ್ಚ್ ನ ಚಿತ್ರ ಬಿಡಿಸುತ್ತಿರಲಿಲ್ಲ, ಬದಲಾಗಿ ಚೀನಾ ದೇಶದ ಪ್ರಕೃತಿ ಚಿತ್ರ ಬಿಡಿಸುತ್ತಿದ್ದ. ಅಲ್ಲಿ ದೊಡ್ಡ ಪರ್ವತ ಶ್ರೇಣಿ, ನದಿ, ಸುಂದರ ಜಲಪಾತ ಮತ್ತು ತನ್ನ ಪುಟ್ಟ ಗುಡಿಸಲಿನ ಮುಂದೆ ಕಸ ಗುಡಿಸುತ್ತಿದ್ದ ಗೂನು ಬೆನ್ನಿನ ಹಸನ್ಮುಖಿ ಮುದುಕ.

ಶಿಷ್ಯ : ಏನು ಚಿತ್ರ ಇದು ಮಾಸ್ಚರ್ ?

ಮಾಸ್ಟರ್ : ಕೆಲವು ಕ್ಷಣಗಳ ಹಿಂದೆಯಷ್ಟೆ ಈ ಮುದುಕನಿಗೆ ಜ್ಞಾನೋದಯವಾಗಿದೆ.

ಶಿಷ್ಯ : ಮುಂದೆ ಏನು ಮಾಡುತ್ತಾನೆ ಮುದುಕ?

ಮಾಸ್ಟರ್ : ಅದನ್ನೆ ನೋಡುತ್ತಿದ್ದೆ, ಕಸ ಗುಡಿಸುವುದನ್ನು ಮುಂದುವರೆಸಿದ್ದಾನೆ.

ಅಷ್ಟು ಸಾಮಾನ್ಯ ಸಂಗತಿ ಈ ಜ್ಞಾನೋದಯ.

ಮಾಸ್ಟರ್ ಲಿನ್ ಚೀ ಗೆ ಜ್ಞಾನೋದಯವಾದಾಗ ಅವ ಬಿದ್ದು ಬಿದ್ದು ನಕ್ಕುಬಿಟ್ಟನಂತೆ. ಲಿನ್ ಚೀ ಯ ವಿಚಿತ್ರ ವರ್ತನೆಯಿಂದ ಕುತೂಹಲಗೊಂಡ ಅವನ ಶಿಷ್ಯರು ಪ್ರಶ್ನೆ ಮಾಡುತ್ತಾರೆ,

“ಯಾಕೆ ಮಾಸ್ಟರ್ ಇಷ್ಟು ನಗುವಂಥದೇನಾಯಿತು?”

“ಈ ಜ್ಞಾನೋದಯಕ್ಕಾಗಿ ನಾನು ವರ್ಷಾನುಗಟ್ಟಲೇ ಚಡಪಡಿಸಿದೆ, ಎಷ್ಟೆಲ್ಲ ಕಠಿಣ ವೃತಗಳನ್ನು ಆಚರಿಸಿದೆ ಆದರೆ ಇವತ್ತು ಆ ಗಳಿಗೆ ಕೂಡಿಬಂದಾಗ ನನಗೆ ನಗು ಬರುತ್ತಿದೆ, ಎಂಥ ಸಾಮಾನ್ಯ ಸಂಗತಿ ಇದು.”

ಮಾಸ್ಟರ್ ಲಿನ್ ಚೀ ಶಿಷ್ಯರಿಗೆ ಉತ್ತರಿಸುತ್ತ ಮತ್ತೆ ನಗಲು ಶುರುಮಾಡಿದ.

ಮಾಸ್ಟರ್ ಡೂ ಜೆನ್ ಜೊತೆ ಕೂಡ ಹೀಗಾಗಿತ್ತು. “ಮಾಸ್ಟರ್, ಜ್ಞಾನೋದಯವಾದ ಕೂಡಲೇ ನಿನಗೆ ಏನು ಮಾಡಬೇಕೆನಿಸಿತು?” ಡೂ ಜೆನ್ ನ ಶಿಷ್ಯರು ಅವನನ್ನು ಪ್ರಶ್ನೆ ಮಾಡಿದ್ದರು.

“ಏನಿಲ್ಲ, ಒಂದು ಕಪ್ ಚಹಾ ಕುಡಿಯಬೇಕನಿಸಿತು.”
ಮಾಸ್ಟರ್ ಡೂ ಜೆನ್ ಉತ್ತರಿಸಿದ್ದ.

ಹೌದು ಜ್ಞಾನೋದಯ, ನಿರ್ವಾಣ ಎನ್ನುವುದೆಲ್ಲ ಬಹಳ ಸಾಮಾನ್ಯ ಸಂಗತಿ. ಆದರೆ ಹಾಗೆ ಹೇಳಲು ಅಹಂ ಗೆ ಇಷ್ಟವಿಲ್ಲ. ನಿರ್ವಾಣ ಎಷ್ಟು ಸಾಮಾನ್ಯ ಸಂಗತಿ ಎಂದರೆ ನಿರ್ವಾಣದ ನಂತರ ನಿಮಗೆ ಕೇವಲ ಒಂದು ಕಪ್ ಚಹಾ ಕುಡಿಯುವ ಮನಸ್ಸಾಗುತ್ತದೆ ಎಂದು ನಾನು ನಿಮಗೆ ಹೇಳಿದರೆ, ಈ ಇಡೀ ಪ್ರಕ್ರಿಯೆಯೇ ನಾನ್ಸೆನ್ಸ್ ಅನಿಸುತ್ತದೆ ನಿಮಗೆ. ಕೇವಲ ಇಂಥ ಸಾಮಾನ್ಯ ಸಂಗತಿಗಾಗಿ ಯಾಕೆ ಸಾಧನೆಯ ಹಾದಿಯಲ್ಲಿ ಕಷ್ಟಪಡಬೇಕು ಎಂದು ನೀವು ಹಿಂಜರಿಯುತ್ತೀರಿ. ಆದರೆ ಅಹಂ ಸುಮ್ಮನಿರುವುದಿಲ್ಲ, ಕಣಕ್ಕಿಳಿಯುತ್ತದೆ. ನಿಮಗೆ ಒಂದು ವಿಶೇಷವಾದ, ಅಪರೂಪದ, ಯಾವುದು ಸಾಮಾನ್ಯವಾಗಿ ಸಾಧ್ಯವಿಲ್ಲವೋ ಅಂಥದೊಂದು ಪ್ರಕ್ರಿಯೆಗೆ ನೀವು ಒಳಗಾಗುತ್ತೀರಿ ಎಂದು ಅಹಂ ನಿಮ್ಮನ್ನು ಒಪ್ಪಿಸುತ್ತದೆ. ಮತ್ತು ಅಹಂ ತೋಡಿದ ಖೆಡ್ಡಾದಲ್ಲಿ ನೀವು ಸಂತೋಷದಿಂದ ಬೀಳುತ್ತೀರಿ.

ಸತ್ಯ, ವಾಸ್ತವ ಎನ್ನುವುದೆಲ್ಲ ಅಸಾಮಾನ್ಯವಲ್ಲ. ಅದು ಎಲ್ಲೆಲ್ಲೂ ಇದೆ. ನಿರ್ವಾಣ ಅತ್ಯಂತ ಸಾಮಾನ್ಯ. ಅದು ನಿಮ್ಮ ಸುತ್ತ ನಡೆಯುತ್ತಲೇ ಇರುತ್ತದೆ. ಇಂಥ ಸಾಮಾನ್ಯ ಸಂಗತಿಯೊಂದಿಗೆ ನಿಮ್ಮ ಭೇಟಿ ಆಗಿಲ್ಲ ಎಂದರೆ ಅದು ವಿಶೇಷ. ಏಕೆಂದರೆ ಅಷ್ಟು ಸಾಮಾನ್ಯ ಈ ಪ್ರಕ್ರಿಯೆ. ಜ್ಞಾನೋದಯ ಪ್ರತಿ ಕ್ಷಣ ಘಟಿಸುತ್ತಿದೆ, ಅದು ಇಡೀ ಅಸ್ತಿತ್ವದ ತಿರುಳು – ಆದರೆ ನೀವು ಈ ಸಂಗತಿಗೆ ಕುರುಡರಾಗಿದ್ದೀರಿ, ಕಿವುಡರಾಗಿದ್ದೀರಿ. ಬಹಳ ಸಾಮಾನ್ಯ ಈ ಜ್ಞಾನೋದಯ, ನಿರ್ವಾಣ ಎಲ್ಲ.


Leave a Reply