ಬುದ್ಧನನ್ನು ಯಾಕೆ ಪೂಜಿಸ್ತಿದ್ದೀಯ? : ಓಶೋ ವ್ಯಾಖ್ಯಾನ

ಬಹುತೇಕ ನೀವು ಉತ್ತರ ಕೊಡುವುದು, ಪ್ರಶ್ನೆಯನ್ನು ಕೊನೆಗಾಣಿಸಲು. ಆದರೆ ಮಾಸ್ಟರ್ ಉತ್ತರಿಸುತ್ತಿರುವುದು ಪ್ರಶ್ನೆಯನ್ನು ಇನ್ನೂ ಹರಿತಗೊಳಿಸಲು ಇನ್ನೂ ಮಹತ್ವದ್ದಾಗಿಸಲು ~ ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಬುದ್ಧನ ಮೂರ್ತಿಗೆ ಪೂಜೆ ಮಾಡುತ್ತಿದ್ದ, ಇದನ್ನ ಕುತೂಹಲದಿಂದ ಗಮನಿಸಿದ ಒಬ್ಬ ಸನ್ಯಾಸಿ ಪ್ರಶ್ನೆ ಮಾಡಿದ, “ ಬುದ್ಧನಿಗೆ ಯಾಕೆ ಪೂಜೆ ಮಾಡುತ್ತಿದ್ದೀಯ ಮಾಸ್ಟರ್ ?”

“ ನನಗೆ ಬುದ್ಧನನ್ನು ಪೂಜಿಸುವುದು ಇಷ್ಟ”

“ ಬುದ್ಧನನ್ನು ಪೂಜಿಸುವುದರಿಂದ ನಿರ್ವಾಣ ಸಾಧ್ಯವಿಲ್ಲ ಎಂದು ನೀನೇ ಒಮ್ಮೆ ಹೇಳಿದ್ದೆಯಲ್ಲವೆ ?”

“ ನಿರ್ವಾಣ ಹೊಂದಲು ನಾನು ಬುದ್ಧನನ್ನು ಪೂಜಿಸುತ್ತಿಲ್ಲ.”

“ ಮತ್ತೆ ಯಾಕೆ ಪೂಜೆ ಮಾಡುತ್ತಿದ್ದೀಯ ಬುದ್ಧನನ್ನ ? ಏನೋ ಕಾರಣ ಇರಲೇ ಬೇಕಲ್ಲ. “

“ ಕಾರಣ ಏನಿಲ್ಲ, ಬುದ್ಧನಿಗೆ ಪೂಜೆ ಮಾಡುವುದು ನನಗೆ ಇಷ್ಟ.”

“ ನೀನು ಏನೋ ಬಯಸುತ್ತಿರಬೇಕಲ್ಲ, ಏನೋ ಒಂದು ಕೊನೆಯ ಗುರಿ ?”

“ ನಾನು ಬುದ್ಧನನ್ನು ಪೂಜಿಸುವುದು ಯಾವುದೋ ಅಂತಿಮ ಗುರಿಯ ಸಾಧನೆಗಲ್ಲ.”

“ ಮತ್ತ್ಯಾಕೆ ಬುದ್ಧನನ್ನು ಪೂಜೆ ಮಾಡುತ್ತಿದ್ದೀಯ ? ಏನು ಕಾರಣ ?”

ಮಾತುಕತೆಯ ಈ ಹಂತದಲ್ಲಿ ಮಾಸ್ಟರ್ ತನ್ನ ಜಾಗದಿಂದ ಜಿಗಿದೆದ್ದು ಆ ಸನ್ಯಾಸಿಯ ಕಪಾಳಕ್ಕೆ ಬಿರುಸಿನಿಂದ ಬಾರಿಸಿದ. ಮಾಸ್ಟರ್ ನ ಈ ಪ್ರತಿಕ್ರಿಯೆ ಎಷ್ಟು ಅನಿರೀಕ್ಷಿತವಾಗಿತ್ತೆಂದರೆ, ಈ ಆಕ್ರಮಣಕ್ಕೆ ಸನ್ಯಾಸಿ ತಲ್ಲಣಿಸಿ ಹೋದ. ಆದರೆ ಆ ಸನ್ಯಾಸಿಯ ಪ್ರಶ್ನೆಯಲ್ಲಿ ತಪ್ಪೇನಿರಲಿಲ್ಲ, ಅದೊಂದು ಮನುಷ್ಯ ಸಹಜ ಕುತೂಹಲದ ಪ್ರಶ್ನೆ. ಝೆನ್ ಮಾಸ್ಟರ್ ಆ ಥರ ವರ್ತಿಸಬಾರದಿತ್ತು. ಯಾವ ಹಿಂದೂ, ಕ್ರಿಶ್ಚಿಯನ್, ಮುಸ್ಲೀಂ ಪುರೋಹಿತರೂ ಹೀಗೆ ಆ ಸನ್ಯಾಸಿಯ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ. ಆದರೆ ಒಬ್ಬ ಝೆನ್ ಮಾಸ್ಟರ್ ಮಾತ್ರ ಹೀಗೆ ವರ್ತಿಸಬಲ್ಲ, ಅವನ ಉದ್ದೇಶವೇ ಬೇರೆ.

ಆದರೆ ಝೆನ್ ಮಾಸ್ಟರ್ ಮೊದಲೇ ಯಾಕೆ ಆ ಸನ್ಯಾಸಿಯ ಕಪಾಳಕ್ಕೆ ಬಾರಿಸಲಿಲ್ಲ? ಇಷ್ಚು ಮಾತುಕತೆಯಾಗುವವರೆಗೆ ಯಾಕೆ ಸುಮ್ಮನಿದ್ದ? ಮಾಸ್ಟರ್ ಆ ಸನ್ಯಾಸಿಯಲ್ಲಿ ಕುತೂಹಲ ಕೆರಳಿಸುತ್ತಲೇ ಹೋದ. ಉತ್ತರ ಪಡೆಯಬೇಕೆಂಬ ಸನ್ಯಾಸಿಯ ಉತ್ಕಟತೆ ಹೆಚ್ಚುತ್ತಲೇ ಹೋಯಿತು. ಮಾಸ್ಟರ್, ಸನ್ಯಾಸಿಯನ್ನು ಯಾವ ಸ್ಥಿತಿಗೆ ಕರೆದೊಯ್ದನೆಂದರೆ ಕೇವಲ ಅವನ ಕಪಾಳಕ್ಕೆ ಹೊಡೆದ ಒಂದು ಹೊಡೆತ ಸನ್ಯಾಸಿಯ ಅರಿವಿಗೆ ಕಾರಣವಾಯಿತು.

ಮಾಸ್ಟರ್, ಸನ್ಯಾಸಿಯನ್ನು ಆಲೋಚನೆಯ ಉತ್ತುಂಗಕ್ಕೆ ಕರೆದೊಯ್ದ, ಆ ಜಾಗೆಯಿಂದ ಮಾತ್ರ ಒಂದು ಸಣ್ಣ ನೂಕುವಿಕೆ ಕಾರಣವಾಗಿ ಸನ್ಯಾಸಿಗೆ ಜ್ಞಾನೋದಯವಾಯಿತು. ಆದರೆ ಗಮನಿಸಿ, ಮಾಸ್ಟರ್ ನ ಈ ವರ್ತನೆಯ ಹಿಂದೆ ಯಾವ ದುರಹಂಕಾರ, ಯಾವ ಸಿಟ್ಟು ಇರಲಿಲ್ಲ. ಮಾಸ್ಟರ್ ನ ಉತ್ತರಗಳು ಸನ್ಯಾಸಿಯಲ್ಲಿ ಅವನ ಪ್ರಶ್ನೆಯ ಬಗೆಗಿನ ತುಡಿತವನ್ನು ಹೆಚ್ಚಿಸುತ್ತಲೇ ಹೋದವು. ಮಾಸ್ಟರ್ ನ ವರ್ತನೆ ಸನ್ಯಾಸಿಯ ಪ್ರಶ್ನೆಯನ್ನು ವಿಸ್ತರಿಸಿತು. ಈ ವಿಶೇಷವನ್ನು ಗಮನಿಸಿ.

ಬಹುತೇಕ ನೀವು ಉತ್ತರ ಕೊಡುವುದು, ಪ್ರಶ್ನೆಯನ್ನು ಕೊನೆಗಾಣಿಸಲು. ಆದರೆ ಮಾಸ್ಟರ್ ಉತ್ತರಿಸುತ್ತಿರುವುದು ಪ್ರಶ್ನೆಯನ್ನು ಇನ್ನೂ ಹರಿತಗೊಳಿಸಲು ಇನ್ನೂ ಮಹತ್ವದ್ದಾಗಿಸಲು. ಪ್ರಶ್ನೆ ತನ್ನ ಪೂರ್ಣತ್ವವನ್ನು ಹೊಂದಲು ಮಾಸ್ಟರ್ ಸಹಾಯ ಮಾಡುತ್ತಿದ್ದಾನೆ. ಹೀಗೆ ಪ್ರಶ್ನೆ ಪೂರ್ಣವಾದಾಗಲೇ ಅದು ಕಳಚಿ ಬೀಳುವುದು. ಝೆನ್ ಉತ್ತರಗಳನ್ನು ಪಡೆಯುವುದಿಲ್ಲ, ಪ್ರಶ್ನೆಗಳನ್ನು ಕಳೆದುಕೊಳ್ಳುತ್ತದೆ.

ಝೆನ್, ಬದುಕಿನೆಡೆಗೆ ಸಾಗುವುದು ತನ್ನ ಅಸ್ತಿತ್ವವಾದಿ ಧೋರಣೆಯ ಕಾರಣದಿಂದಾಗಿಯೇ ಹೊರತು ಫಿಲಾಸೊಫಿಕಲ್ ಧೋರಣೆಯಿಂದಲ್ಲ. ಝೆನ್, ಸಮಸ್ಯೆಯನ್ನು ವಿಷ್ಲೇಶಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ ಏಕೆಂದರೆ ಪ್ರಶ್ನೆಯ ಎತ್ತರದಲ್ಲಿಯೇ ನಿಂತು ಉತ್ತರಿಸುವುದು ಅಸಾಧ್ಯ , ಉತ್ತರಕ್ಕಾಗಿ ಪ್ರಜ್ಞೆಯನ್ನು ಪ್ರಶ್ನೆಗಿಂತ ಎತ್ತರಕ್ಕೆ ಕೊಂಡೊಯ್ಯಬೇಕು. ಇದು ಬಹಳ ಮುಖ್ಯವಾದದ್ದು.

ದೇವರಿದ್ದಾನೋ ಇಲ್ಲವೋ ಎನ್ನುವ ನಿಮ್ಮ ಪ್ರಶ್ನೆಗೆ ನಾನು ಇದ್ದಾನೆ ಅಥವಾ ಇಲ್ಲ ಎಂದು ಉತ್ತರಕೊಡಬಹುದು. ಆದರೆ ನೀವು ಆಸ್ತಿಕರೋ ಅಥವಾ ನಾಸ್ತಿಕರೋ ಎನ್ನುವುದರ ಮೇಲೆ, ನೀವು ನನ್ನ ಉತ್ತರವನ್ನು ಪುರಸ್ಕರಿಸಬಹುದು ಅಥವಾ ತಿರಸ್ಕರಿಸಬಹುದು. ಆದರೆ ನಿಮ್ಮ ಪ್ರಜ್ಞೆ ಮೊದಲು ಎಲ್ಲಿತ್ತೋ ಈಗಲೂ ಅಲ್ಲಿಯೇ ಇದೆ. ಅದರ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಹಾಗಾಗಿ ನಿಮಗೆ ಯಾವ ನಿಜವಾದ ಉತ್ತರವೂ ಸಿಕ್ಕಿಲ್ಲ. ದೇವರ ಬಗ್ಗೆ ನಿಮ್ಮ ವಾದ ಮುಂದುವರೆಯುತ್ತಿದೆ ಅಷ್ಟೇ.

ಸಮಸ್ಯೆಗೆ ಉತ್ತರ ಕಂಡುಕೊಳ್ಳಬಯಸುವಿರಾದರೆ ಸಮಸ್ಯೆಯನ್ನ ಅದರ ಪೂರ್ಣ ರೂಪದಲ್ಲಿ ಗ್ರಹಿಸಿ. ಈ ಗ್ರಹಿಕೆ ಸಾಧ್ಯವಾಗುವುದು ನಿಮ್ಮ ಪ್ರಜ್ಞೆ ಎತ್ತರಕ್ಕೇರಿದಾಗ, ವಿಸ್ತಾರಗೊಂಡಾಗ. ಝೆನ್ ನ ಉದ್ದೇಶವೇ ಪ್ರಜ್ಞೆಯ ವಿಕಾಸ. ಝೆನ್ ಎಂದರೆ ವಿಷಯದ, ಜ್ಞಾನದ ಕೊಡುಕೊಳ್ಳುವಿಕೆಯಲ್ಲ, ಪ್ರಜ್ಞೆ, ಇರುವಿಕೆಯ ಬಗೆಗಿನ ಎಚ್ಚರ, ವಿಕಾಸ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.