ನಮಗೆ ಬೇಕಿದ್ದನ್ನು ಮತ್ತೊಬ್ಬರ ಬಾಯಲ್ಲಿ ಹೇಳಿಸುವ ಕಲೆ! : ಅಧ್ಯಾತ್ಮ ಡೈರಿ

ಅಡ್ಡಿಯಿಲ್ಲ, ನಿಮ್ಮ ಅಭಿಪ್ರಾಯ ಮತ್ತೊಬ್ಬರ ಬಾಯಲ್ಲಿ ಹೇಳಿಸಿ. ಹಾಗೆ ಸುತ್ತಿಸೀ ಸುತ್ತಿಸೀ ಅವರು ನಮಗೇನು ಬೇಕೋ ಅದನ್ನೇ ಹೇಳುವಂತೆ ಮಾಡೋದೂ ಒಂದು ಕಲೆ. ಅದೊಂದು ಮಜಾ. ಆದರೆ, ನಿಮ್ಮ ಈ ಕಳ್ಳತನ ನಿಮಗೆ ಗೊತ್ತಿರಲಿ… । ಅಲಾವಿಕಾ

ಗಂಡ ಹೆಂಡತಿ ಮನೆಗೆ ಹೊಸ ಫ್ರಿಜ್ ತರುವ ಬಗ್ಗೆ ಮಾತಾಡ್ತಿದ್ರು. ಗಂಡ ಗೂಗಲ್ ಮಾಡ್ತಾ ಹೇಳಿದ, “ನನ್ಗೇನೋ X ಕಂಪನಿಯದು ಚೆನಾಗಿದೆ ಅನಿಸ್ತು, ನಿನ್ ಒಪೀನಿಯನ್ ಹೇಳು, ನಿಂಗ್ ಇಷ್ಟ ಆಗೋದ್ ಮುಖ್ಯ”

ಹೆಂಡತಿ ತನ್ನ ಮೊಬೈಲಲ್ಲಿ ಕಣ್ಣಾಡಿಸ್ತಾ “Y ಕಂಪನಿಯದು ಚೆನಾಗಿದೆ, ಹಾಲು ಮೊಸರಿಡಕ್ಕೇ ಬೇರೆ ಜಾಗ ಇದೆ, ಕಂಫರ್ಟಬಲ್ ಆಗಿದೆ” ಅಂದ್ಲು.

ಗಂಡ ತಾನೂ ಸ್ಕ್ರಾಲ್ ಮಾಡುತ್ತಾ ಮೂತಿ ಚೊಟ್ಟಗೆ ಮಾಡಿ, ಹಾಲು ಮೊಸರು ಇಟ್ಬಿಟ್ರೆ ಸಾಕಾ, ಬಾಟ್ಲಿಡಕ್ಕೇ ಜಾಗ ಸರಿಯಾಗಿಲ್ಲ, ಉದ್ದನೆ ಬಾಟ್ಲಿಡಕ್ಕೆ ಆಗಲ್ಲ ಮೇಲ್ಗಡೆ ಅರೆ ತಡಿಯತ್ತೆ” ಅಂದ.

ಹೆಂಡತಿ ಮತ್ತಷ್ಟು ಸ್ಕ್ರಾಲ್ ಮಾಡುತ್ತಾ “ಈ Z ಕಂಪನೀದು ನೋಡಿ, ಇದ್ರಲ್ಲಿ ಬಾಟ್ಲೂ ಹಿಡ್ಸತ್ತೆ, ಹಾಲು ಕೊಸರು ತರಕಾರಿಗೂ ಸಪ್’ಸಪರೇಟ್ ಜಾಗ ಇದೆ” ಅಂದ್ಲು.

ಅವ ತಾನೂ ಮೊಬೈಲನ್ನ ಉಲ್ಟಾ ಸೀದಾ ಅಡ್ಡಡ್ಡ ಎಲ್ಲಾ ಥರದಲ್ಲೂ ಹಿಡ್ಕೊಂಡ್ ನೋಡಿ ಮತ್ತೆ ಮೂತಿ ಚೊಟ್ಟ ಮಾಡಿ ಹದ ಹೇಳಿದ. ಹೆಂಡತಿ ಮತ್ತಷ್ಟು ಕಂಪನಿಗಳ ಹೆಸರೇಳಿದಳು. ಅವನ ಮುಖ ಚೊಟ್ಟಗೇ ನಿಂತುಬಿಟ್ತಿತ್ತು. ಕೊನೆಗೆ ಅವಳು “ಈ X ಕಂಪನಿದು ನೋಡಿ, ಅಷ್ಟೇನ್ ಇಷ್ಟ ಆಗಿಲ್ಲ ನನ್ಗೆ, ಬಟ್ ಓಕೆ” ಅಂದ್ಲು. ಗಂಡನ ಮುಖ ಸಹಜಸ್ಥಿತಿಗೆ ಬಂದು ಅಗಾಲ ಹರಡಿಕೊಂಡಿತು. “ನೋಡಿದ್ಯಾ, ನನ್ಗೂ X ಕಂಪನೀದೇ ಇಷ್ಟ ಆಗಿತ್ತು. ನಿನ್ಗೂ ಇಷ್ಟ ಆಯ್ತಲ್ಲ ಸಧ್ಯ, ನಿನ್ಗೆ ಇಷ್ಟ ಆಗೋದು ಮುಖ್ಯ” ಅಂದ!

ಇದನ್ನು ಓದುತ್ತಾ ನಾವೆಲ್ಲರೂ ನಮ್ಮ ಸಂಗಾತಿಗಳನ್ನೋ ಅಥವಾ ಒಡನಾಡಿಗಳನ್ನೋ ನೆನೆದು ಮುಗುಳ್ನಕ್ಕಿರುತ್ತೇವೆ ಅಲ್ಲವೆ? ಆದರೆ ಆ ಗಂಡನ ಜಾಗದಲ್ಲಿ ತಮ್ಮ ಬಿಂಬ ಕಂಡವರೇ ನಿಜವಾದ ಪ್ರಾಮಾಣಿಕರು!

ನಾವೆಲಲ್ರೂ ಬಹುತೇಕ ಮಾಡೋದೇ ಹೀಗೆ. ನಮಗೆ ನಮ್ಮದೇ ಒಂದು ಅಭಿಪ್ರಾಯ ಅದಾಗಲೇ ಇದ್ದುಬಿಟ್ಟಿರುತ್ತೆ. ಅದನ್ನ ಬದಲಿಸಿಕೊಳ್ಳುವ ಇರಾದೆ ನಮಗಿಲ್ಲದೆ ಹೋದರೂ ಮತ್ತೊಬ್ಬರ ಬಳಿ ಅಭಿಪ್ರಾಯ ಕೇಳಲು ಹೋಗ್ತೇವೆ. ಅವರು ನಮ್ಮ ಅಭಿಪ್ರಾಯವನ್ನೇ ಹೇಳಿದರೆ ಅಡ್ಡಿಯಿಲ್ಲ. ಒಂದುವೇಳೆ ಅದರ ಹೊರತಾಗಿ ಬೇರೆ ಏನಾದ್ರೂ ಹೇಳತೊಡಗಿದರೆ ಅದನ್ನು ನಿರಾಕರಿಸುತ್ತಾ ನಿರಾಕರಿಸುತ್ತಾ ಅವರು ನಮ್ಮ ಅಭಿಪ್ರಾಯಕ್ಕೇ ಬರುವವರೆಗೂ ಸುತ್ತಿಸುತ್ತೇವೆ! ಕೊನೆಗೂ ಅವರು ನಮ್ಮ ಅಭಿಪ್ರಾಯಕ್ಕೆ ಬಂದಾಗ, “ಸರಿಯಾಗ್ ಹೇಳಿದ್ರಿ, ಇದ್ ಚೆನಾಗಿದೆ” ಅಂತ ಅವರಿಗೆ ಅದರ ಕ್ರೆಡಿಟ್ ಕೊಟ್ಟು ಖುಷಿಪಡುತ್ತೇವೆ! ಒಟ್ಟಾರೆ ನಮ್ಮ ಅಭಿಪ್ರಾಯ ಬೇರೆಯವರ ಬಾಯಲ್ಲಿ ಹೇಳಿಸೋ ಹುಕಿ ನಮಗೆ!!

ಯಾಕೆ ಹೀಗೆ?

ಮೊದಲನೆಯದಾಗಿ, ತಮ್ಮ ಆಯ್ಕೆ ಯಶಸ್ವಿಯಾದರೆ ಕ್ರೆಡಿಟ್ಟು ಯಾರಿಗಾದರೂ ಹೋಗಲಿ, ನಮಗೆ ಬೇಕಾದ್ದು ಸಿಗಲಿ ಅನ್ನುವ ಯೋಚನೆ. ಇದು ತೀರಾ ನಿರಪಾಯ.

ಎರಡನೆಯದು, ಅಕಸ್ಮಾತ್… ಅಕಸ್ಮಾತ್ ವಿಫಲ ಆಗ್ಬಿಟ್ರೆ, ಅದರ ಹೊಣೆ ನಮ್ಮ ಮೇಲೆ ಬೀಳದೆ ಮತ್ತೊಬ್ಬರ ತಲೆ ಮೇಲೆ ಹೊರಿಸಬಹುದು ಅನ್ನುವ ಅಂತರಾಳದ ಸುಪ್ತಾಲೋಚನೆ! ಸೋಲಿನ, ವೈಫಲ್ಯದ ಹೊಣೆ ಹೊರುವುದು ಸುಮ್ಮನೆ ಮಾತಲ್ಲ. ಅದರ ಜವಾಬ್ದಾರಿಯ ಭಾರಕ್ಕೆ ನಾವು ಎಷ್ಟೋ ಸಲ ಮತ್ತೆಂದೂ ಏಳಲಾಗದಂತೆ ಕುಸಿದುಬಿಡುತ್ತೇವೆ. ಅಂಥಾ ಸಂದರ್ಭದಲ್ಲಿ ನಮ್ಮನ್ನು ನಾವು ಬೈದುಕೊಳ್ಳುವುದಕ್ಕಿಂತ ತಮ್ಮ ಸ್ಥಿತಿಗೆ ಮತ್ತೊಬ್ಬರನ್ನು ಜವಾಬ್ದಾರರನ್ನಾಗಿಸೋದು ಸುಲಭ ಮತ್ತು ಮಾನಸಿಕವಾಗಿ ಒಂದಷ್ಟು ಸಮಾಧಾನ ಕೊಡುವ ಅಂಶ!

ನಮ್ಮ ದುಃಖದ ನಡುವೆ ಮತ್ತೊಬ್ಬರನ್ನು ಶಪಿಸುತ್ತಾ ಗಮನ ಅತ್ತಲೂ ಚೂರು ಹರಿದು, ಪರಿಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಮತ್ತೊಬ್ಬರಿಗೆ ಹೊರಿಸುವ ದೂರಾಲೋಚನೆ!!

ಇದು ಚಿಕ್ಕ ಪುಟ್ಟ ಬಟ್ಟೆ ಆಯ್ಕೆಯಿಂದ ಹಿಡಿದು ಸಂಗಾತಿಯ ಆಯ್ಕೆ, ಉದ್ಯೋಗದ ಆಯ್ಕೆಯಂಥ ಸಂಗತಿಗಳಿಗೂ ಅಪ್ಲೇ ಆಗುತ್ತದೆ. ಒಟ್ಟಾರೆ ನಮಗೆ, ನಾವು ಜಾರಿಕೊಳ್ಳಲೊಂದು ಬಂಡೆ ಬೇಕು. ಅದಕ್ಕೇ ಮತ್ತೊಬ್ಬರ ಮೂಲಕ ನಮ್ಮ  ಅಭಿಪ್ರಾಯ ಹೇಳಿಸಿ, ಕೊನೆಗೆ ಅದನ್ನು ಅವರ ತಲೆಗೇ ಕಟ್ಟುವ ಜಾಣತನ ಮಾಡೋದು!

ಫ್ರಿಜ್ ಮನೆಗೆ ಬಂದ ವರ್ಷಕ್ಕೆಲ್ಲಾ ಅದು ಕೈಕೊಟ್ಟರೆ, ಅಥವಾ ಕಂಫರ್ಟಬಲ್ ಅನಿಸದಿದ್ದರೆ, “ನಿನ್ಗೇನೋ ಗೊತ್ತಾಗತ್ತೆ, ನಿನ್ ಟೇಸ್ಟ್ ಚೆನಾಗಿದೆ ಅಂತ ನಿನ್ನನ್ ಕೇಳಿದ್ರೆ…” ಅಂತ ಹೆಂಡತಿಯನ್ನ ಆಡಿಕೊಳ್ತಾ ಗೊಣಗ್ತಾನೆ ಗಂಡ. ನಾವೂ ಹಾಗೇನೇ. ನಾವು ಮತ್ತೊಬ್ಬರ ಬಾಯಲ್ಲಿ ಹೇಳಿಸಿದ ಅಭಿಪ್ರಾಯ, ಮಾಡಿಸಿದ ಆಯ್ಕೆ ವಿಫಲವಾದರೆ ಅವರನ್ನು ಹೀಗೇ ದೂರುತ್ತೇವೆ.

ಆದ್ದರಿಂದ, ಅಡ್ಡಿಯಿಲ್ಲ, ನಿಮ್ಮ ಅಭಿಪ್ರಾಯ ಮತ್ತೊಬ್ಬರ ಬಾಯಲ್ಲಿ ಹೇಳಿಸಿ. ಹಾಗೆ ಸುತ್ತಿಸೀ ಸುತ್ತಿಸೀ ಅವರು ನಮಗೇನು ಬೇಕೋ ಅದನ್ನೇ ಹೇಳುವಂತೆ ಮಾಡೋದೂ ಒಂದು ಕಲೆ. ಅದೊಂದು ಮಜಾ. ಆದರೆ, ನಿಮ್ಮ ಈ ಕಳ್ಳತನ ನಿಮಗೆ ಗೊತ್ತಿರಲಿ. ನಿಮ್ಮ ಆಯ್ಕೆ/ಅಭಿಪ್ರಾಯ ಯಶಸ್ವಿಯಾದಾಗ ಅದರ ಕ್ರೆಡಿಟ್ ಹಂಚಿಕೊಳ್ಳಲು ಹಿಂದೆಮುಂದೆ ನೋಡಬೇಡಿ. ಅದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಾಗೇ, ವಿಫಲವಾದರೆ ಅದನ್ನು ಮತ್ತೊಬ್ಬರ ಮೇಲೆ ಹೊರಿಸಿ ಕೈಕೊಡವಿಕೊಳ್ಳಬೇಡಿ. ನೀವೇ ಅದಕ್ಕೆ ಮೊದಲ ಹೊಣೆಗಾರರು ಅನ್ನೋದನ್ನು ನೆನಪಿಟ್ಟುಕೊಳ್ಳಿ. ಇದರಿಂದ ನಿಮಗೆ ತಪ್ಪು ಎಲ್ಲಿದೆ ಅಂತ ಕಂಡುಕೊಳ್ಳುವ ಮತ್ತು ಅದನ್ನು ನೀವಾಗೇ ಸರಿಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ.

ಅಂದಹಾಗೆ; ಮತ್ತೊಬ್ಬರು ನಿಮ್ಮ ಬಾಯಲ್ಲಿ ತಮ್ಮ ಅಭಿಪ್ರಾಯ ಹೇಳಿಸುವಾಗ ಎಚ್ಚರವಾಗಿರಿ!!

Leave a Reply