ಬಳಸಿಕೊಳ್ಳುವುದೇ ಭಯಕ್ಕೆ ಕಾರಣ : ‘ಜಿಡ್ಡು’ ಚಿಂತನೆ

ಇನ್ನೊಬ್ಬರನ್ನು ಬಳಸಿಕೊಳ್ಳುವುದರಲ್ಲಿ ನಮಗೆ ಎಷ್ಟೇ ಸಮಾಧಾನ, ಸಂತೃಪ್ತಿ ಸಿಗುತ್ತದೆಯೆಂದುಕೊಂಡರೂ ಅಲ್ಲೊಂದು ಭಯಕ್ಕೆ ಕಾರಣವಿದೆ. ಈ ಭಯದ ಕಾರಣವಾಗಿಯೇ ನಾವು ಇನ್ನೊಬ್ಬರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುವುದು ಮತ್ತು ಈ ಮೇಲಾಟದಲ್ಲಿಯೇ ಅಸೂಯೆ, ಸಂಶಯ, ನಿರಂತರ ತಕರಾರುಗಳ ಹುಟ್ಟು ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪರಸ್ಪರರ ಅಗತ್ಯಗಳ ಮೇಲೆ ನಿರ್ಮಿತವಾದ ಸಂಬಂಧಗಳು ಕೊನೆಗೂ ಸಂಘರ್ಷದಲ್ಲಿಯೇ ಮುಗಿತಾಯವನ್ನು ಕಾಣುತ್ತವೆ. ನಾವು ಪರಸ್ಪರರ ಮೇಲೆ ಎಷ್ಟೇ ಅವಲಂಬಿತರಾಗಿದ್ದರೂ ಒಬ್ಬರನ್ನೊಬ್ಬರು ಒಂದು ಉದ್ದೇಶಕ್ಕಾಗಿ, ಒಂದು ಗುರಿಯ ಸಾಧನೆಗಾಗಿ ಬಳಸಿಕೊಳ್ಳುತ್ತಿರುತ್ತೇವೆ. ನಾನು ನಿಮ್ಮನ್ನು ಬಳಸಿಕೊಳ್ಳಬಹುದು, ನೀವು ನನ್ನನ್ನು ಬಳಸಿಕೊಳ್ಳಬಹುದು ಆದರೆ ಈ ಬಳಸಿಕೊಳ್ಳುವ ಕ್ರಿಯೆಯಲ್ಲಿ ನಾವು ನಮ್ಮ ನಡುವಿನ ಸಂಪರ್ಕ ಕಳೆದುಕೊಳ್ಳುತ್ತೇವೆ. ಹಾಗಾಗಿಯೇ ಪರಸ್ಪರರ ಬಳಕೆಯನ್ನು ತಳಹದಿಯಾಗಿಸಿಕೊಂಡ ಸಮಾಜದಲ್ಲಿ ಹಿಂಸೆ ಹುಟ್ಟಿಕೊಳ್ಳುತ್ತದೆ. ನಾವು ಇನ್ನೊಬ್ಬರನ್ನು ಬಳಸಿಕೊಳ್ಳುವಾಗ ನಮಗೆ ನಮ್ಮ ಉದ್ದೇಶ, ನಮ್ಮ ಗುರಿ ಮಾತ್ರ ಕಾಣಿಸುತ್ತಿರುತ್ತವೆ. ಈ ಉದ್ದೇಶ, ಗುರಿ ಸಾಧನೆಗಳೇ ನಮ್ಮ ನಡುವಿನ ಸಂಬಂಧ, ಸಂವಹನಕ್ಕೆ ಅಡೆತಡೆಗಳು.

ಇನ್ನೊಬ್ಬರನ್ನು ಬಳಸಿಕೊಳ್ಳುವುದರಲ್ಲಿ ನಮಗೆ ಎಷ್ಟೇ ಸಮಾಧಾನ, ಸಂತೃಪ್ತಿ ಸಿಗುತ್ತದೆಯೆಂದುಕೊಂಡರೂ ಅಲ್ಲೊಂದು ಭಯಕ್ಕೆ ಕಾರಣವಿದೆ. ಈ ಭಯದ ಕಾರಣವಾಗಿಯೇ ನಾವು ಇನ್ನೊಬ್ಬರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುವುದು ಮತ್ತು ಈ ಮೇಲಾಟದಲ್ಲಿಯೇ ಅಸೂಯೆ, ಸಂಶಯ, ನಿರಂತರ ತಕರಾರುಗಳ ಹುಟ್ಟು. ಇಂಥ ಸಂಬಂಧಗಳಲ್ಲಿ ಖುಶಿ ಸಾಧ್ಯವೇ ಇಲ್ಲ.

ಕೇವಲ ದೈಹಿಕ, ಮಾನಸಿಕ ಅಗತ್ಯಗಳ ಪೂರೈಕೆಗಾಗಿ ರಚನೆಯಾಗಿರುವ ಸಮಾಜ ವ್ಯವಸ್ಥೆಯಲ್ಲಿ ಸಂಶಯ, ಸಂಘರ್ಷ, ಗೊಂದಲ, ದುಗುಡ ಅಲ್ಲದೇ ಬೇರೆ ಏನು ಇರುವುದು ಸಾಧ್ಯ? ಸಮಾಜ ಬೇರೇನೂ ಅಲ್ಲ ನೀವು ಇನ್ನೊಬ್ಬರೊಡನೆ ಹೊಂದಿರುವ ಸಂಬಂಧದ ಪ್ರತಿರೂಪ ಮತ್ತು ಇಂಥ ಸಮಾಜದಲ್ಲಿ ಅಗತ್ಯ ಮತ್ತು ಬಳಕೆಗಳೇ ಬಹುಮುಖ್ಯವಾದವು.

ನೀವು ಇನ್ನೊಬ್ಬರನ್ನು ದೈಹಿಕ ಅಥವಾ ಮಾನಸಿಕ ಅಗತ್ಯಗಳಿಗೆ ಬಳಸಿಕೊಂಡಾಗ ಅಲ್ಲಿ ಸಂಬಂಧ ಎನ್ನುವುದೇ ಇರುವುದಿಲ್ಲ, ನಿಮಗೆ ಆ ಇನ್ನೊಬ್ಬರ ಜೊತೆ ಸಂಪರ್ಕ, ಸಂವಹನವೇ ಇರುವುದಿಲ್ಲ. ಇನ್ನೊಬ್ಬರು ನಿಮ್ಮ ಅಗತ್ಯಗಳಿಗಾಗಿ ಬಳಕೆಯಾಗುತ್ತಿರುವಾಗ ಅಂಥ ವ್ಯವಸ್ಥೆ ವ್ಯವಹಾರದ ರೂಪ ಪಡೆಯುತ್ತದೆ. ಹಾಗಾಗಿಯೇ ನಮ್ಮ ದಿನನಿತ್ಯದ ಕ್ರಿಯೆಗಳಲ್ಲಿ ಸಂಬಂಧ ಮತ್ತು ವ್ಯವಹಾರದ ಸ್ವರೂಪಗಳನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

Leave a Reply