ನೀರಿನಂತಿರು, ಹರಿಯುತ್ತಿರು…

ನಮ್ಮ ಬದುಕಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸುವ ಸಂತೋಷ ಮತ್ತು ಸೃಜನಶೀಲ ಪ್ರಕ್ರಿಯೆ ಯಾವುದೋ ಒಂದು ಬಿಂದುವಿನಲ್ಲಿ ನಿಲ್ಲುವಂಥದಲ್ಲ. ಅದು ನಮ್ಮನ್ನೂ ಹೊತ್ತುಕೊಂಡು ಸಾಗುವಂಥದ್ದು. ಆದ್ದರಿಂದಲೇ ನಮ್ಮನ್ನು ಯಾವುದಕ್ಕೂ ಅಂಟಿಕೊಳ್ಳಲು ಬಿಡದೆ ತೇಲಿಸುತ್ತಲೇ ಸಾಗುವ ಈ ಪ್ರಕ್ರಿಯೆಯನ್ನು, ಈ ಅನುಭವವನ್ನು “ಹರಿವು” ಎಂದು ಕರೆಯಲಾಗಿದೆ । ಆಕರ: ಇಕಿಗಾಯ್ (ಜಪಾನಿ ಪುಸ್ತಕ) – ಭಾವಾನುವಾದ : ಅಲಾವಿಕಾ

ಊಹಿಸಿಕೊಳ್ಳಿ.  ಒಂದು ಎತ್ತರದ ಹಿಮದಿಬ್ಬದಿಂದ ನೀವು ಸ್ಕೀಯಿಂಗ್ ಮಾಡುತ್ತಾ ಕೆಳಗೆ ಜಾರಿ ಬರುತ್ತಿದ್ದೀರಿ. ನಿಮ್ಮ ಅಕ್ಕ ಪಕ್ಕ ಹಿಮದ ನುಣ್ಣನೆ ಹುಡಿ ಎದ್ದು ನಿಮ್ಮನ್ನು ಮತ್ತಷ್ಟು ತಂಪಾಗುತ್ತಿದೆ. ನಿಮ್ಮ ಸಂಪೂರ್ಣ ಗಮನ, ಇರುವು, ಖುದ್ದು ನೀವೇ ಆ ಜಾರುವಿಕೆಯಲ್ಲಿ ಒಂದಾಗಿಬಿಟ್ಟಿದ್ದೀರಿ. ನಿಮ್ಮ ಹಿಂದೆ ಏನಿತ್ತೋ, ನಿಮ್ಮ ಮುಂದೆ ಏನಿದೆಯೋ ನೀವು ಯೋಚಿಸುತ್ತಿಲ್ಲ, ನಿಮಗೆ ಅದು ಬೇಕಾಗಿಯೂ ಇಲ್ಲ. ಈ ಕ್ಷಣ ನೀವು ಜಾರುತ್ತಿದ್ದೀರಿ, ಖುದ್ದು ನೀವೇ ಜಾರುವಿಕೆ ಆಗಿಬಿಟ್ಟಿದ್ದೀರಿ! ಗತವೇನಿದೆಯೋ, ಮುಂದೇನು ಬರುವುದೋ ಏನೂ ಬೇಕಿಲ್ಲ. ಈ ಕ್ಷಣ, ಜಾರುತ್ತಿರುವಷ್ಟು ಹೊತ್ತು ಪ್ರತಿಯೊಂದು ಕ್ಷಣ, ನಿಮಗೆ ಜಾರುವುದಷ್ಟೆ ಗೊತ್ತು. ನಿಮ್ಮ ಜಾರು ಬೂಟುಗಳು, ನಿಮ್ಮ ದೇಹ, ನಿಮ್ಮ ಪ್ರಜ್ಞೆ ಎಲ್ಲವೂ ಒಂದೇ ಅಸ್ತಿತ್ವ ಅನ್ನುವಂತೆ ಒಗ್ಗೂಡಿಬಿಟ್ಟಿವೆ. ನೀವು ಆ ಅನುಭವದ ಒಳಗೆ ಮುಳುಗಿಹೋಗಿದ್ದೀರಿ. ನಿಮಗೆ ಬೇರೆ ಯಾವುದರ ಪರಿವೆಯೂ ಇಲ್ಲ. ನಿಮ್ಮ ಅಹಂಕಾರ (ಇರುವಿಕೆಯ ಅರಿವು) ಕೂಡಾ ಆ ಅನುಭವದಲ್ಲಿ ಕರಗಿಬಿಟ್ಟಿದೆ, ಮತ್ತು ನೀವು ಈ ಕ್ಷಣ ಏನು ಮಾಡುತ್ತಿದ್ದೀರೋ ಅದೇ ಆಗಿಬಿಟ್ಟಿದ್ದೀರಿ.

ಇಂಥದೊಂದು ಅನುಭವವನ್ನು ವಿವರಿಸಲೆಂದೇ ಬ್ರೂಸ್ ಲೀ, “ನೀರಿನಂತಿರು, ನನ್ನ ಗೆಳೆಯಾ” ಅಂದಿದ್ದು.

ಇದನ್ನು ನಾವೆಲ್ಲರೂ ಕೂಡ ಅನುಭವಿಸಿರುತ್ತೇವೆ. ನಮ್ಮ ಇಷ್ಟದ, ನಮಗೆ ಖುಷಿ ಕೊಡುವ ಏನಾದರೊಂದು ಚಟುವಟುಕೆ ಕಾಡುವಾಗ ನಾವು ಲೋಕದ ಪರಿವೆಯನ್ನೆ ಕಳೆದುಕೊಂಡುಬಿಟ್ಟಿರುತ್ತೇವೆ. ಅಡುಗೆ ಮಾಡುವಾಗಲೇ ನೋಡಿ. ನಾವು ಶುರು ಮಾಡಿದ್ದೊಂದು ಗೊತ್ತು. ಮಾಡುತ್ತ ಮಾಡುತ್ತ ಅಡುಗೆ ಮಾಡುವ ಪ್ರಕ್ರಿಯೆಯೇ ನಾವಾಗಿಬಿಟ್ಟಿರುತ್ತೇವೆ. ಅಷ್ಟೂ ಹೊತ್ತು ನಮಗೆ ಬೇರೆ ಯಾವುದರತ್ತಲೂ ಗಮನ ಹೋಗುವುದಿಲ್ಲ. ಹಾಗೇ ಪುಸ್ತಕ ಹಿಡಿದು ಓದಲು ಕುಳಿತರೆ ಗಂಟೆಗಟ್ಟಲೆ ಕಳೆದುಬಿಟ್ಟಿರುತ್ತೇವೆ. ಎಷ್ಟೋ ಸಲ ಹಸಿವು ನಿದ್ದೆಗಳೂ ನಮ್ಮನ್ನು ಕಾಡುವುದಿಲ್ಲ, ಅಷ್ಟು ತಲ್ಲೀನರಾಗಿಬಿಡುತ್ತೇವೆ ಓದಿನಲ್ಲಿ. ಈಜಲು ನದಿಗೆ ಧುಮುಕಿದಾಗಲೂ ಅಷ್ಟೇ. ನೀರಲ್ಲಿ ಎಷ್ಟು ಹೊತ್ತು ಕಳೆದೆವೆಂದು ಅಂದಾಜು ಸಿಗುವುದು ಮಾರನೆ ದಿನ ಮೈ ನೋಯುವಾಗಲೇ!

ಇದಕ್ಕೆ ಪೂರಾ ವಿರುದ್ಧ ಸನ್ನಿವೇಶಗಳನ್ನೂ ನೀವು ಅನುಭವಿಸಿರುತ್ತೀರಿ. ನಮಗೆ ಇಷ್ಟವಿಲ್ಲದ ಕೆಲಸ ಮಾಡಿ ಮುಗಿಸುವಾಗ ಪ್ರತಿಯೊಂದು ಕ್ಷಣವೂ ಯುಗದಂತೆ ಭಾಸವಾಗುತ್ತದೆ. ಆಗೆಲ್ಲ ನಿಮಿಷ ನಿಮಿಷಕ್ಕೂ ಕೈಗಡಿಯಾರ ನೋಡುತ್ತಾ ನಾವು ನಿಟ್ಟುಸಿರು ದಬ್ಬುತ್ತೇವೆ ತಾನೆ! ಇದನ್ನೇ ಐನ್`ಸ್ಟೀನ್, “ಬಿಸಿ ಒಲೆಯ ಮೇಲೆ ನಿಮ್ಮ ಕೈಗಳನ್ನಿಡಿ, ಘಳಿಗೆಯೂ ನಿಮಗೆ ಗಂಟೆಯಾಗಿ ತೋರುತ್ತದೆ. ಸುಂದರವಾದ ಹುಡುಗಿಯ ಪಕ್ಕ ಒಂದು ಗಂಟೆ ಕೂತಿರಿ, ಗಂಟೆಯೂ ಘಳಿಗೆಯಲ್ಲಿ ಸಂದುಹೋಗುತ್ತದೆ. ಇದನ್ನೇ ಸಾಪೇಕ್ಷತೆ ಅನ್ನುವುದು” ಎಂದು ತನ್ನ “ಸಾಪೇಕ್ಷ ಸಿದ್ಧಾಂತ”ದ ವಿವರಣೆ ನೀಡಿದ್ದರು.

ಇಲ್ಲೊಂದು ತಮಾಷೆ ಅಂದರೆ, ನಮಗೆ ಬೇಸರ ತಂದು ಕ್ಷಣವನ್ನು ಯುಗವಾಗಿಸುವ ಅಥವಾ ಯುಗವನ್ನು ಕ್ಷಣವಾಗಿಸುವ ಕೆಲಸವೇ ಮತ್ತೊಬ್ಬರ ಪಾಲಿಗೆ ಅದರ ವ್ಯತಿರಿಕ್ತ ಅನುಭವ ನೀಡಬಹುದು. ನಮಗೆ ಇಷ್ಟವಿಲ್ಲದ ಕೆಲಸ ನಮ್ಮನ್ನು ಅದರಲ್ಲಿ ಮುಳುಗುವಂತೆ ಮಾಡುವುದಿಲ್ಲ. ಆದ್ದರಿಂದ, ನಮ್ಮ ಪ್ರಜ್ಞೆಯನ್ನೂ ಲುಪ್ತಗೊಳಿಸಿ, ಮಾಡುತ್ತಿರುವ ಕೆಲಸವೇ ನಾವಾಗಿಬಿಡುವಂತೆ ಮಾಡುವ ನಮ್ಮ ಆಸಕ್ತಿಯ ಕೆಲಸಗಳನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಈಗ, ನಮಗೆ ಸಂತಸ ನೀಡುವ ಕೆಲಸ ಮಾಡುವಾಗ, ನಮ್ಮನ್ನು ಅದರಲ್ಲಿ ಸಂಪೂರ್ಣ ಒಂದಾಗಿಸಿಬಿಡುವ ಆ ಅಂಶ ಯಾವುದು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹಾದಿಯೇ ನಮ್ಮನ್ನು ನಾವು ನಮ್ಮ ಜೀವಿತದ ಉದ್ದೇಶ ಕಂಡುಕೊಳ್ಳುವ ದಾರಿಯತ್ತ ಕೊಂಡೊಯ್ಯುವುದು.

ಈ ಹುಡುಕಾಟವನ್ನು ಹೊತ್ತು ನಡೆದ ಸೈಕಾಲಜಿಸ್ಟ್ ಮಿಹಾಲಿ ( Mihaly Csikszentmihalyi), ಈ ಅನುಭವವನ್ನು “ಹರಿವು” ಎಂದು ಕರೆದಿದ್ದಾರೆ. ನಮ್ಮ ಬದುಕಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸುವ ಸಂತೋಷ ಮತ್ತು ಸೃಜನಶೀಲ ಪ್ರಕ್ರಿಯೆ ಯಾವುದೋ ಒಂದು ಬಿಂದುವಿನಲ್ಲಿ ನಿಲ್ಲುವಂಥದಲ್ಲ. ಅದು ನಮ್ಮನ್ನೂ ಹೊತ್ತುಕೊಂಡು ಸಾಗುವಂಥದ್ದು. ಆದ್ದರಿಂದಲೇ ನಮ್ಮನ್ನು ಯಾವುದಕ್ಕೂ ಅಂಟಿಕೊಳ್ಳಲು ಬಿಡದೆ ತೇಲಿಸುತ್ತಲೇ ಸಾಗುವ ಈ ಪ್ರಕ್ರಿಯೆಯನ್ನು, ಈ ಅನುಭವವನ್ನು “ಹರಿವು” ಎಂದು ಕರೆಯಲಾಗಿದೆ.

ಪ್ರಾಚೀನ ಚಿಂತನೆಗಳು “ಹರಿವಿನಲ್ಲಿ ಒಂದಾಗು”, “ನೀನೇ ಹರಿವಾಗು” ಅನ್ನುವ ನಿರ್ದೇಶನ ನೀಡುತ್ತವೆ. ಇದರ ಅರ್ಥ, ನಮಗೆ ಸಂತೋಷ ಕೊಡುವ ಕೆಲಸಗಳನ್ನು ತಲ್ಲೀನತೆಯಿಂದ ಮಾಡುವುದು, ಅಥವಾ ಮಾಡುವ ಕೆಲಸವನ್ನೇ ಆನಂದಿಸುತ್ತಾ ದೇಶಕಾಲಗಳ ಪರಿವೆ ಕಳೆದು ಪ್ರತಿಕ್ಷಣವೂ ಬದುಕುವುದು! ಹರಿವಿನಲ್ಲಿ ಪ್ರತಿ ಕ್ಷಣವೂ ಶುರುವಾತು ಮತ್ತು ಪ್ರತಿ ಕ್ಷಣವೂ ಗುರಿ. ಪ್ರತಿ ಕಣವೂ ಹೊಸತು ಮತ್ತು ಪ್ರತಿ ಕಣವೂ ಹಳತು. ಹೀಗೆ ಸಾಗುವ ಬದುಕು ಲೌಕಿಕ/ ಭೌತಿಕವಾಗಿ ತನ್ನ ಗಡಿ ಮುಟ್ಟುತ್ತದಲ್ಲ, ಆಗ ನಮ್ಮಲ್ಲಿ ಹೊಮ್ಮುವ ಸಾರ್ಥಕತೆಯೇ ಪ್ರತಿಯೊಂದು ಜೀವಿಯ ಬದುಕಿನ ಉದ್ದೇಶ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.