ಶ್ರದ್ಧೆ ಮತ್ತು ಮಂತ್ರ ರಹಸ್ಯ : ಬೆಳಗಿನ ಹೊಳಹು

ಶ್ರದ್ಧೆಯ ಕುರಿತು ಶ್ರೀರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ… 

ಮ್ಮೆ ಒಬ್ಬ ಸಮುದ್ರವನ್ನು ದಾಟಬೇಕಿತ್ತು. ಹಡಗು, ದೋಣಿಯಂಥಾ ಯಾವ ಸಾಧನವೂ ಲಭ್ಯವಿರಲಿಲ್ಲ. ಸಮುದ್ರ ದಡದಲ್ಲಿ ನಿಂತು ಅವನು ಯೋಚಿಸುತ್ತ ದುಃಖಿಸುತ್ತಿದ್ದ.

ಅದೇ ವೇಳೆಗೆ ಜಾಂಬವಂತ ಅಲ್ಲಿಗೆ ಬಂದ. “ಯಾಕೆ ದುಃಖದಲ್ಲಿದ್ದೀಯ?” ಎಂದು ಪ್ರಶ್ನಿಸಿದ.
“ನಾನು ಈ ಸಮುದ್ರವನ್ನು ದಾಟಬೇಕಿದೆ. ಯಾವ ನೌಕೆಯೂ ಇಲ್ಲವೆಂದು ಬೇಸರವಾಗಿದೆ” ಅಂದ ಆ ವ್ಯಕ್ತಿ.

ಜಾಂಬವಂತ ಅವನ ಮೇಲೆ ಅನುಕಂಪವಿಟ್ಟು, ಎಲೆಯೊಂದರಲ್ಲಿ ಒಂದು ಮಂತ್ರ ಬರೆದು, ಅದನ್ನು ಮಡಚಿ ಅವನ ಕೈಗೆ ಕೊಟ್ಟ.
“ನೋಡು! ಇದನ್ನು ಭದ್ರವಾಗಿಟ್ಟುಕೋ. ಇದರೊಳಗೆ ಮಂತ್ರವಿದೆ. ಈ ಮಂತ್ರದ ಶಕ್ತಿ ನಿನ್ನನ್ನು ಸಮುದ್ರ ದಾಟಿಸುತ್ತದೆ.” ಅಂದ.

ಆ ವ್ಯಕ್ತಿ ಎಲೆಯನ್ನು ಭದ್ರವಾಗಿ ಹಿಡಿದುಕೊಂಡು, ಮಂತ್ರದ ಮೇಲಿನ ಶ್ರದ್ಧೆಯಿಂದ ಸಮುದ್ರದ ಮೇಲೆ ನಡೆಯತೊಡಗಿದ. ಯಾವ ಅಡ್ಡಿಯೂ ಇಲ್ಲದೆ ಸಾಗುತ್ತಿದ್ದ ಅವನಿಗೆ, ಮಾರ್ಗ ಮಧ್ಯದಲ್ಲಿ ಆ ಎಲೆಯೊಳಗೆ ಏನು ಬರೆದಿರಬಹುದು ಎಂಬ ಕುತೂಹಲ ಹುಟ್ಟಿತು. ತೆರೆದು ನೋಡೇಬಿಡೋಣ ಎಂದು ಕೊಂಡ.
ನೋಡಿದರೆ, ಅದರಲ್ಲಿ ‘ಶ್ರೀ ರಾಮ’ ಎಂದಷ್ಟೇ ಬರೆದಿತ್ತು!

“ಅಯ್ಯೋ, ಇಷ್ಟೆಯೇ ಇದರಲ್ಲಿರುವುದು! ನಾನೇನೋ ಭಾರೀ ರಹಸ್ಯ ಮಂತ್ರ ಬರೆದಿದ್ದಾರೆ ಅಂದುಕೊಂಡಿದ್ದರೆ ಬರೀ ರಾಮನಾಮವೇ!?” ಅಂದುಕೊಂಡ.
ಅವನು ಹಾಗೆ ಅಂದುಕೊಂಡ ಕೂಡಲೇ ಸಮುದ್ರದ ಮೇಲಿನ ನಡಿಗೆಯ ಸಮತೋಲನ ತಪ್ಪಿ ನೀರಿನಲ್ಲಿ ಮುಳುಗಿಹೋದ.

(ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ)

Leave a Reply