ಪ್ರೇಮ, ಸೆಕ್ಸ್ ಮತ್ತು ಅಸೂಯೆ ~ ಓಶೋ ವ್ಯಾಖ್ಯಾನ

ಯಾವಾಗ ನೀವು ನಿಮ್ಮ ಸಂಗಾತಿಯನ್ನ ಕಟ್ಟಿ ಹಾಕುತ್ತೀರೋ, ಅವರ ಎಲ್ಲ ದಾರಿಗಳನ್ನು ಮುಚ್ಚಿ ಹಾಕುತ್ತೀರೋ ಆಗ ನಿಮ್ಮ ಸಂಗಾತಿ ಜೀವಂತ ಶವ. ಜೈಲಿನಲ್ಲಿರುವ ಕೈದಿ ಹಾಗು ಸ್ವಾತಂತ್ರ್ಯ ಕಳೆದುಕೊಂಡ ಯಾವುದರೊಡನೆಯೂ ನೀವು ಬಯಸಿದರೂ ಪ್ರೀತಿ ಸಾಧ್ಯವಿಲ್ಲ… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಇಲ್ಲಿ ಅಸೂಯೆ ಮೂಲಭೂತ ಸಂಗತಿಯಲ್ಲ ಅದು ಸಂಬಂಧಿತವಾದದ್ದು. ಅದು ಸೆಕ್ಸ್ ಗೆ ಸಂಬಂಧಿಸಿದ್ದು. ಯಾವಾಗ ನಿಮ್ಮ ಮನಸ್ಸಿನಲ್ಲಿ ಲೈಂಗಿಕ ಒತ್ತಾಯಗಳು ಹುಟ್ಟುತ್ತವೆಯೋ, ಲೈಂಗಿಕ ಕ್ರಿಯೆಯಲ್ಲಿ ನಿಮ್ಮ ದೇಹ ಭಾಗವಹಿಸುತ್ತದೆಯೋ, ಯಾವಾಗ ನೀವು ಇನ್ನೊಬ್ಬರನ್ನು ಲೈಂಗಿಕ ಆಕರ್ಷಣೆ ಕಾರಣವಾಗಿ ನೋಡುತ್ತೀರೋ, ಆಗ ಅಸೂಯೆ ನಿಮ್ಮನ್ನ ಪ್ರವೇಶ ಮಾಡುತ್ತದೆ. ಈ ನಿಮ್ಮ ಭಾವನೆಯಲ್ಲಿ , ಕ್ರಿಯೆಯಲ್ಲಿ ಕೇವಲ ಲೈಂಗಿಕತೆ ಇದೆಯೇ ಹೊರತು ಪ್ರೇಮವಿಲ್ಲ. ಪ್ರೇಮ ಇರುವ ಕಡೆ ಅಸೂಯೆಗೆ ಜಾಗವಿಲ್ಲ.

ಈ ವಿದ್ಯಮಾನವನ್ನ ಸಮಗ್ರವಾಗಿ ತಿಳಿದುಕೊಳ್ಳಲು ಪ್ರಯತ್ನ ಮಾಡಿ. ಯಾವಾಗ ನೀವು ಲೈಂಗಿಕತೆಯ ಕಾರಣವಾಗಿ ಸಂಬಂಧಿತರಾಗಿರುತ್ತೀರೋ ಆಗ ನೀವು ಭಯಗ್ರಸ್ಥರಾಗಿರುತ್ತೀರಿ ಏಕೆಂದರೆ ಲೈಂಗಿಕತೆ ಯಾವತ್ತೂ ಒಂದು ಸಂಬಂಧವಾಗಲು ಸಾಧ್ಯವಿಲ್ಲ, ಪ್ರೀತಿಯಿಲ್ಲದ ಲೈಂಗಿಕತೆ ಒಂದು ಶೋಷಣೆ.

ನೀವು ಒಂದು ಹೆಣ್ಣಿನೊಡನೆ/ಗಂಡಿನೊಡನೆ ಲೈಂಗಿಕ ಸಂಬಂಧದಲ್ಲಿರುವಿರಾದರೆ ಯಾವಾಗಲೂ ನಿಮ್ಮನ್ನ, ನಿಮ್ಮ ಸಂಗಾತಿ ಇನ್ನೊಬ್ಬರಿಗಾಗಿ ಬಿಟ್ಟು ಹೋಗುವ ಭಯ ಕಾಡುತ್ತಿರುತ್ತದೆ. ಇಲ್ಲಿರುವುದು ಒಂದು ನಿಜವಾದ ಸಂಬಂಧದ ಅನುಪಸ್ಥಿತಿ, ಪರಸ್ಪರರ ಶೋಷಣೆ ಮಾತ್ರ.

ನಿಮ್ಮ ನಡುವೆ ಪ್ರೀತಿಯಿಲ್ಲ, ನೀವು ಪರಸ್ಪರರನ್ನ ಶೋಷಿಸುತ್ತಿದ್ದೀರಿ ಮತ್ತು ಇದು ನಿಮಗೆ ಗೊತ್ತಿದೆ ಆದ್ದರಿಂದಲೇ ನಿಮ್ಮನ್ನ ಭಯ ಕಾಡುತ್ತಿದೆ.

ಈ ಭಯವೇ ನಿಮ್ಮ ಅಸೂಯೆಗೆ ಕಾರಣ. ಎಷ್ಟೇ ನಿರ್ವಿಕಾರದಿಂದ ನೀವು ಈ ಸಂಬಂಧದಲ್ಲಿದ್ದರೂ, ಎಷ್ಟೇ ನೀವು ಈ ಸಂಬಂಧ ಕೇವಲ ಲೈಂಗಿಕತೆಗೆ ಸಂಬಂಧಿಸಿದ್ದು ಎಂದು ನಿಮ್ಮನ್ನ ನೀವು ಒಪ್ಪಿಸಿಕೊಂಡಿದ್ದರೂ, ಮನುಷ್ಯನ ಸಹಜ ಸ್ವಭಾವದ ಕಾರಣವಾಗಿ, ನಿಮ್ಮ ಸಂಗಾತಿಯನ್ನ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿರಿ, ನಿಮ್ಮ ಸಂಗಾತಿ ನಿಮ್ಮನ್ನ ಬಿಟ್ಟು ಇನೊಬ್ಬರೆಡೆಗೆ ಆಕರ್ಷಿತರಾಗದಂತೆ ತಡೆಯಲು ಹರ ಸಾಹಸ ಮಾಡುತ್ತೀರಿ. ನಿಮ್ಮ ಸಂಗಾತಿ ಇನ್ನೊಬ್ಬರೊಡನೆ ಮಾತನಾಡುವುದನ್ನ, ಇನ್ನೊಬ್ಬರನ್ನ ನೋಡುವುದನ್ನ ನೀವು ಸಹಿಸುವುದಿಲ್ಲ. ಹಾಗಾಗಿ ಅವನ / ಅವಳ ಎಲ್ಲ ದಾರಿಗಳನ್ನೂ ಮುಚ್ಚುವ ಪ್ರಯತ್ನ ಮಾಡುತ್ತೀರಿ. ಒಂದೊಮ್ಮೆ ನಿಮ್ಮ ಸಂಗಾತಿ ನಿಮ್ಮನ್ನ ಬಿಟ್ಟು ಹೋದಾಗ, ನೀವು ಎಷ್ಟೇ ಧೈರ್ಯದ ಮುಖವಾಡ ಹಾಕಿದರೂ ನಿಮ್ಮೊಳಗಿನ ಅಸೂಯೆಯಿಂದ ನೀವು ತಪ್ಪಿಸಿಕೊಳ್ಳಲಾರಿರಿ.

ಯಾವಾಗ ನೀವು ನಿಮ್ಮ ಸಂಗಾತಿಯನ್ನ ಕಟ್ಟಿ ಹಾಕುತ್ತೀರೋ, ಅವರ ಎಲ್ಲ ದಾರಿಗಳನ್ನು ಮುಚ್ಚಿ ಹಾಕುತ್ತೀರೋ ಆಗ ನಿಮ್ಮ ಸಂಗಾತಿ ಜೀವಂತ ಶವ. ಜೈಲಿನಲ್ಲಿರುವ ಕೈದಿ ಹಾಗು ಸ್ವಾತಂತ್ರ್ಯ ಕಳೆದುಕೊಂಡ ಯಾವುದರೊಡನೆಯೂ ನೀವು ಬಯಸಿದರೂ ಪ್ರೀತಿ ಸಾಧ್ಯವಿಲ್ಲ. ಯಾರ ಮೇಲೆ ನೀವು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದೀರೋ ಮಾನಸಿಕವಾಗಿ ಅವರು ನಿಮ್ಮ ಗುಲಾಮರು. ಅವರನ್ನು ನೀವು ಬೇರೆ ಎಲ್ಲ ಕಾರಣಗಳಿಗೆ ಬಳಸಿಕೊಳ್ಳಬಹುದು ಆದರೆ ಪ್ರೀತಿಗಾಗಿ ಅಲ್ಲ. ನಿಮ್ಮ ಪ್ರೀತಿ, ಸುಂದರ ಸ್ವಾತಂತ್ರ್ಯವಿರುವಾಗ, ಒತ್ತಾಯವಿಲ್ಲದಿರುವಾಗ.

ಅಸೂಯೆ ಮೂಲಭೂತವಾದದ್ದಲ್ಲ, ಸೆಕ್ಸ್ ನ ಕಾರಣವಾಗಿ ಹುಟ್ಟಿಕೊಂಡಿದ್ದು. ಹಾಗಾಗಿ ಪ್ರಶ್ನೆ ಇರುವುದು ಅಸೂಯೆಯಿಂದ ಹೇಗೆ ಮುಕ್ತರಾಗುವುದು ಎನ್ನುವುದಲ್ಲ, ಅಸೂಯೆಯನ್ನ ಹಾಗೇ ಬಿಟ್ಟು ಬಿಡಲಾಗುವುದಿಲ್ಲ, ಏಕೆಂದರೆ ನೀವು ಸೆಕ್ಸ್ ನ ಬಿಡುವುದು ಸಾಧ್ಯವಿಲ್ಲ. ನಾವು ಕೇಳಬೇಕಾಗಿರುವ ಪ್ರಶ್ನೆ, ಸೆಕ್ಸ್ ನ ಹೇಗೆ ಪ್ರೇಮವಾಗಿ ಬದಲಾಯಿಸಿಕೊಳ್ಳುವುದು. ಸೆಕ್ಸ್ , ಪ್ರೇಮವಾಗಿ ಅರಳಿದ ಕ್ಷಣದಲ್ಲಿಯೇ, ಅಸೂಯೆ ತಾನಾಗಿಯೇ ಕಳಚಿ ಬೀಳುವುದು.

SourceOsho / A Bird on a Wing
Chapter :6 / The Miracle of Ordinariness

1 Comment

Leave a Reply