ಜನ ಚಪ್ಪಾಳೆ ಹೊಡೆದರೆ… | ಓಶೋ ವ್ಯಾಖ್ಯಾನ

ಈ ಭೂಮಿಯ ಮೇಲಿನ ನಿಮ್ಮ ಸಾಧನೆಗಾಗಿ ನೀವು ಮೆಚ್ಚುಗೆ ಬಯಸುತ್ತಿದ್ದೀರಿ ಎಂದರೆ, ನೀವು ಮಹಾ ಮೂರ್ಖರಿಂದ ಮೆಚ್ಚುಗೆ ಬಯಸುತ್ತಿದ್ದೀರಿ ಮತ್ತು ನಿಮಗಿಂತ ದೊಡ್ಡ ಮೂರ್ಖರು ಯಾರೂ ಇಲ್ಲ. ನಿಮ್ಮ ಸಾಧನೆಗಳಿಂದ ಮತ್ತು ಅದರಿಂದ ನಿಮಗೆ ದೊರೆತ ಶಕ್ತಿಗಳನ್ನು ದೇವರ ಎದುರು ಸಾಬೀತು ಮಾಡಿ ಅವನ ಮೆಚ್ಚುಗೆ ಬಯಸುವಿರಾದರೆ ನೀವು ಜಗತ್ತಿನ ಅತೀ ದೊಡ್ಡ ಮೂರ್ಖರು! ~ ಓಶೋ| ಕನ್ನಡಕ್ಕೆ : ಚಿದಂಬರ ನರೇಂದ್ರ

ಸೂಫಿ ಸಂತ ಫರೀದ್ ನ ಕುರಿತಾದ ಒಂದು ವಿಷಯ ನೆನಪಾಗುತ್ತಿದೆ. ಅವನು ಮಾತನಾಡುವಾಗ ಜನ ಚಪ್ಪಾಳೆ ಹೊಡೆದರೆ ಅತ್ತು ಬಿಡುತ್ತಿದ್ದ. ಒಂದು ದಿನ ಫರೀದ್ ನ ಶಿಷ್ಯರು ಅವನು ಹೀಗೆ ಅಳುವ ಕಾರಣದ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಅವನನ್ನು ಪ್ರಶ್ನೆ ಮಾಡಿದರು. ಫರೀದ್ ಶಿಷ್ಯರಿಗೆ ಉತ್ತರಿಸಿದ,

“ ನಾನು ಮಾತನಾಡುವಾಗ ಜನ ಚಪ್ಪಾಳೆ ಹೊಡೆದರೆ ನನಗೆ ಒಮ್ಮೆಲೇ ಗೊತ್ತಾಗಿಬಿಡುತ್ತದೆ ನಾನೇನೊ ತಪ್ಪು ಮಾತನಾಡಿದೆನೆಂದು, ಇಲ್ಲವಾದರೆ ಅವರು ಚಪ್ಪಾಳೆ ಹೊಡೆಯುತ್ತಿರಲಿಲ್ಲ. ಅವರು ಯಾವಾಗ ಚಪ್ಪಾಳೆ ಹೊಡೆಯುವುದಿಲ್ಲವೋ ಆಗ ನನಗೆ ಗೊತ್ತಾಗುತ್ತದೆ ಅವರಿಗೆ ನನ್ನ ಮಾತು ಅರ್ಥವಾಗಿಲ್ಲವೆಂದು, ಮತ್ತು ಆಗ ನಾನು ಮಾತನಾಡಿರುವುದೆಲ್ಲ ನಿಜವೆಂದು. “

ತಪ್ಪು ತಿಳುವಳಿಕೆಯ ಜನರ ಚಪ್ಪಾಳೆಯಿಂದ ಏನು ಪ್ರಯೋಜನ? ಯಾರ ಎದುರಿಗೆ ನೀವು ನಿಮ್ಮನ್ನ ಸಾಬೀತುಮಾಡಿಕೊಳ್ಳಲು ಬಯಸುತ್ತಿದ್ದೀರಿ? ಈ ಭೂಮಿಯ ಮೇಲಿನ ನಿಮ್ಮ ಸಾಧನೆಗಾಗಿ ನೀವು ಮೆಚ್ಚುಗೆ ಬಯಸುತ್ತಿದ್ದೀರಿ ಎಂದರೆ, ನೀವು ಮಹಾ ಮೂರ್ಖರಿಂದ ಮೆಚ್ಚುಗೆ ಬಯಸುತ್ತಿದ್ದೀರಿ ಮತ್ತು ನಿಮಗಿಂತ ದೊಡ್ಡ ಮೂರ್ಖರು ಯಾರೂ ಇಲ್ಲ. ನಿಮ್ಮ ಸಾಧನೆಗಳಿಂದ ಮತ್ತು ಅದರಿಂದ ನಿಮಗೆ ದೊರೆತ ಶಕ್ತಿಗಳನ್ನು ದೇವರ ಎದುರು ಸಾಬೀತು ಮಾಡಿ ಅವನ ಮೆಚ್ಚುಗೆ ಬಯಸುವಿರಾದರೆ ನೀವು ಜಗತ್ತಿನ ಅತೀ ದೊಡ್ಡ ಮೂರ್ಖರು. ಏಕೆಂದರೆ ದೇವರ ಎದುರು ಅಹಂಗೆ ಯಾವ ಜಾಗವೂ ಇಲ್ಲ. ದೇವರ ಎದುರು ನೀವು ಅತ್ಯಂತ ವಿನೀತರಾಗಬೇಕಾಗುತ್ತದೆ, ನಿಮ್ಮೊಳಗಿನ ಅಹಂನ ಪೂರ್ಣವಾಗಿ ವಿನಾಶ ಮಾಡಿದಾಗ ಮಾತ್ರ ನೀವು ಸ್ವೀಕರಿಸಲ್ಪಡುತ್ತೀರಿ. ನೀವು ನಿಮ್ಮ ಅಹಂಕಾರದ ಜೊತೆ ಅವನ ಬಳಿ ಹೋದಿರಾದರೆ, ಅದೇ ಒಂದು ದೊಡ್ಡ ಅಡ್ಡಗಾಗಲು ಅವನನ್ನು ತಲುಪಲು.

ಹಲವು ಸಿದ್ಧಿಗಳನ್ನ ಗಳಿಸಿಕೊಂಡ ಎಷ್ಟೋ ಸಿದ್ಧರಿದ್ದಾರೆ ಆದರೆ ಅವರ್ಯಾರು ದೇವರನ್ನ ತಲುಪಿದವರಲ್ಲ. ಅವರು ಹಲವು ಶಕ್ತಿಗಳನ್ನ ಗಳಿಸಿಕೊಂಡಿದ್ದಾರಾದರೂ ನಿಜದ ಶಕ್ತಿಯಿಂದ ವಂಚಿತರಾಗಿದ್ದಾರೆ. ಸ್ವ-ಸಾಕ್ಷಾತ್ಕಾರ ( Self-realisation) ಅತ್ಯಂತ ನಿಜವಾದ ಶಕ್ತಿ. ಯಾಕೆ ಎಲ್ಲರೂ ಈ ಶಕ್ತಿಯಿಂದ ವಂಚಿತರಾಗುತ್ತಾರೆ? ಎಲ್ಲ ಅತೀಂದ್ರಿಯ ಶಕ್ತಿಗಳೂ ಪ್ರದರ್ಶನ ಕಲೆಗಳಂತೆ ಇನ್ನೊಬ್ಬರ ಮನೊರಂಜನೆಗಾಗಿ ಮತ್ತು ಆ ಮೂಲಕ ಸ್ವಂತದ ಅಹಂನ ತೃಪ್ತಿಗಾಗಿ ಇರುವಂಥವು. ಜಗತ್ತಿನಲ್ಲಿ ಬೇರೆ ಯಾವ ಅಸ್ತಿತ್ವ ಇಲ್ಲದಿರುವಾಗಲೂ ನೀವು ಇಂಥ ಶಕ್ತಿಗಳಿಗಾಗಿ ಹಂಬಲಿಸುತ್ತೀರಾ? ನೀವು ನೀರನ್ನು ಮುಟ್ಟಿ ಔಷಧಿ ಮಾಡ ಬಯಸುತ್ತೀರಾ? ಸತ್ತ ಮನುಷ್ಯನನ್ನು ಮುಟ್ಟಿ ಅವನನ್ನು ಮತ್ತೆ ಜೀವಂತ ಮಾಡಬಯಸುತ್ತೀರಾ? ಜಗತ್ತಿನಲ್ಲಿ ಬೇರೆ ಯಾರೂ ಇಲ್ಲದಿರುವಾಗಲೂ ನೀವು ಇಂಥ ಶಕ್ತಿಗಳನ್ನು ಬಯಸುತ್ತೀರಾ ? ಪ್ರೇಕ್ಷಕರೇ ಇಲ್ಲದಿರುವಾಗ ಇಂಥ ಶಕ್ತಿಗಳನ್ನು ಗಳಿಸುವುದರಿಂದ ಏನು ಉಪಯೋಗ? ಈ ಶಕ್ತಿಗಳೆಲ್ಲ ಪ್ರೇಕ್ಷಕರಿಗಾಗಿ ಎಂದ ಮೇಲೆ ಇದು ಕಪಟ ನಾಟಕವಲ್ಲವೆ?

ಎಲ್ಲಿಯವರೆಗೆ ನಿಮ್ಮ ಗಮನ ಇತರರ ಮೇಲೆ ಕೇಂದ್ರೀಕೃತವಾಗಿದೆಯೋ ಅಲ್ಲಿಯವರೆಗೆ ನಿಮಗೆ ನಿಮ್ಮನ್ನು ತಲುಪುವುದು ಸಾಧ್ಯವಿಲ್ಲ. ನಿಜವಾದ self-realisation ಎಂದರೆ ಇನ್ನೊಬ್ಬರಿಂದ ನಮ್ಮ ಗಮನವನ್ನು ಬದಿಗೆ ಸರಿಸಿ ನಮ್ಮನ್ನು ನಾವು ನೋಡಿಕೊಳ್ಳುವುದು ಆಗ ಮಾತ್ರ ಇತರರು ನಮ್ಮಿಂದ ನಿಜವಾದ ತೃಪ್ತಿಯನ್ನೂ, ಸಮಾಧಾನವನ್ನೂ ಪಡೆಯಬಲ್ಲರು. ಇದು ಒಂದು ಶುದ್ಧ ಕಲೆ. ಆಗ ನೀವು ಸ್ವತಃ ಭಗವಂತನನ್ನು ತಲುಪುತ್ತಲೇ ಇತರರನ್ನೂ ಅವನ ಹತ್ತಿರ ಕರೆದೊಯ್ಯುತ್ತೀರಿ.

Leave a Reply