ಲೆವ್ ಟಾಲ್‌ಸ್ಟಾಯ್ ಅವರ Forbidden Textನ The Three Hermits, ಜಗತ್ತಿನಾದ್ಯಂತ ಬಹುಶ್ರುತ ಕಥೆ (ರಚನೆ: 1885). ಥಟ್ಟನೆ ಮೋಡ ಸರಿದು ಬೆಳಕು ಧುಮ್ಮಿಕ್ಕಿದಂತೆ ಮನೋಬುದ್ಧಿ ಹೊಳೆಯಿಸುವ ಈ ಕಥೆ, ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ನಮ್ಮ ನಡುವಿನ ಜನಪ್ರಿಯ ಕಥೆಗಾರರೂ ಅನುವಾದಕರೂ ಆದ ಶ್ರೀ ಕೇಶವ ಮಳಗಿಯವರು ಈ ಕಥೆಯನ್ನು ಕನ್ನಡಕ್ಕೆ ತಂದಿದ್ದಾರೆ. ಇದರ ಪ್ರಕಟಣೆಗೆ ಅನುಮತಿ ನೀಡಿದ್ದಕ್ಕಾಗಿ ಅರಳಿಮರ ಬಳಗ ಆಭಾರಿ.
“ಪ್ರಾರ್ಥಿಸುವಾಗ ‘ಪೇಗನ್ನ’ರಂತೆ ಹುರುಳಿಲ್ಲದ ಪುನರಾವರ್ತನೆ ಬೇಡ. ಹೆಚ್ಚು ವಾಚಾಳಿಯಾದಷ್ಟೂ ಎಲ್ಲರಿಗೂ ಕೇಳುತ್ತದೆ ಎಂಬುದು ಅಂಥವರ ಭಾವನೆ. ನೀವು ಅವರಂತೆ ಆಗಬೇಡಿ. ನೀವು ಬೇಡಿಕೊಳ್ಳುವ ಮೊದಲೇ ದೈವಕ್ಕೆ ನಿಮಗೆ ಏನು ಬೇಕಿದೆ ಎಂದು ತಿಳಿದಿದೆ.” ಮ್ಯಾಥು, (vi. 7)
ಬಿಷಪ್ಪರೊಬ್ಬರು ವಿರಕ್ತಮಠವೊಂದಕ್ಕೆ ಭೇಟಿ ನೀಡಲು ಪಯಣಿಸುತ್ತಿದ್ದರು. ಅದೇ ಹಡಗಿನಲ್ಲಿ ಆ ಪ್ರದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲೆಂದು ಹೊರಟ ಯಾತ್ರಾರ್ಥಿಗಳೂ ಇದ್ದರು. ಆಹ್ಲಾದಕರ ವಾತಾವರಣ, ಹೋಗುವ ದಿಕ್ಕಿನತ್ತಲೇ ಬೀಸುತ್ತಿದ್ದ ಗಾಳಿ. ಪಯಣ ಸುಖಕರವಾಗಿತ್ತು. ಯಾತ್ರಿಗಳು ಹಡಗಿನ ಜಗಲಿಕಟ್ಟೆಯಲಿ ಉಣ್ಣುತ್ತ, ಹರಟುತ್ತ ಕುಳಿತಿದ್ದರು. ಜಗುಲಿಕಟ್ಟೆಗೆ ಬಂದ ಬಿಷಪ್ಪರು ಹಡಗಿನ ಮೂಲೆಯಲ್ಲಿ ನಿಂತಿದ್ದ ಗುಂಪೊಂದಕ್ಕೆ ಸಮುದ್ರದ ಅಂಚಿನಲ್ಲಿರುವುದನ್ನು ತೋರಿಸಿ ಮೀನುಗಾರ ಅವರಿಗೆ ಏನನ್ನೋ ಹೇಳುತ್ತಿರುವುದನ್ನು ಗಮನಿಸಿದರು. ಬಿಷಪ್ಪರು ನಿಂತು ಎಲ್ಲರೂ ಗಮನಿಸುತ್ತಿರುವ ದಿಕ್ಕಿನೆಡೆ ದಿಟ್ಟಿಸಿದರು. ಸಮುದ್ರದಂಚಿನಲ್ಲಿ ಸೂರ್ಯ ಹೊಳೆಯುವುದನ್ನು ಬಿಟ್ಟರೆ ಅವರಿಗೇನೂ ವಿಶೇಷ ಕಾಣಲಿಲ್ಲ. ಗುಂಪು ಮಾತಾಡುವುದನ್ನು ಕೇಳಿಸಿಕೊಳ್ಳಲು ಅವರ ಸಮೀಪಕ್ಕೆ ನಡೆದರು. ಇವರನ್ನು ಕಂಡದ್ದೇ ತಲೆ ಮೇಲಿನ ಟೊಪ್ಪಿಗೆಯ್ನು ಗೌರವಪೂರ್ವಕವಾಗಿ ತೆಗೆದು, ಬಾಗಿ, ಶರಣು ಮಾಡಿ ಮೌನವಾದರು.
‘ನಿಮಗೆ ತೊಂದರೆ ಕೊಡಲಾರೆ. ಸಜ್ಜನರು ಏನು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೋ ಎಂದು ಕೇಳಿಸಿಕೊಳ್ಳಲು ಬಂದೆನಷ್ಟೇ!’
‘ಮೀನುಗಾರ ಆ ಸನ್ಯಾಸಿಗಳ ಬಗ್ಗೆ ಹೇಳುತ್ತಿದ್ದನಷ್ಟೇ’, ಎಂದು ಉಳಿದವರಿಗಿಂತ ತುಸು ಧೈರ್ಯವಂತ ಎನ್ನಬಹುದಾದ ವಣಿಜನೊಬ್ಬ ಬಿಷಪ್ಪರಿಗೆ ಸಮಾಧಾನ ನೀಡಿದ.
ಅಲ್ಲಿಯೇ ಇದ್ದ ಪೆಟ್ಟಿಗೆಯೊಂದರ ಮೇಲೆ ಕೂರುತ್ತ ಬಿಷಪ್ಪರು ಕೇಳಿದರು: ಯಾವ ಸನ್ಯಾಸಿಗಳೋ? ನೀವು ಸಮುದ್ರದಂಚಿನಲ್ಲಿ ಏನನ್ನು ತೋರಿಸುತ್ತಿದ್ದಿರಿ ಹೇಳಬಾರದೆ?’
‘ಅಗೋ! ಆ ಮೂಲೆಯಲ್ಲಿ ಕಾಣುತ್ತಿದ್ದೆಯಲ್ಲ ಗಡ್ಡೆ ಅಲ್ಲಿಯೇ ಆ ಮೋಕ್ಷ ಸಾಧನೆ ಮಾಡುತ್ತಿರೋ ಸನ್ಯಾಸಿಗಳು ಇರೋದು.’
‘ಆ ನಡುಗಡ್ಡೆ ಇರೋದು ಎಲ್ಲಿ? ನನಗಂತೂ ಏನೂ ಕಾಣಸ್ತಾ ಇಲ್ಲ!’
‘ಅದೇ ಅಯ್ಯನವರೇ, ಆ ಮೂಲೆ! ಮೋಡಗಳ ಕೆಳಗಡೆ ಮಿಂಚಿನ ಥರ ಹೊಳೀತ ಇದೆಯಲ್ಲ, ಅದೇ ನಡುಗಡ್ಡೆ!’
ಬಿಷಪ್ಪರು ಬಹಳ ಜಾಗರೂಕರಾಗಿ ದಿಟ್ಟಿಸಿ ನೋಡಿದರು. ರೂಢಿಯಿಲ್ಲದ ಅವರ ಕಂಗಳಿಗೆ ಏನೂ ಕಾಣಲಿಲ್ಲ! ‘ನನಗಂತೂ ಏನೂ ಕಾಣಸ್ತ ಇಲ್ಲ. ಅಲ್ಲಿ ವಾಸಿಸೋ ಸನ್ಯಾಸಿಗಳು ಯಾರು?’ ಇನ್ನೊಮ್ಮೆ ಕೇಳಿದರು.
‘ಪುಣ್ಯ ಪುರುಷರು ಅಯ್ಯನವರೆ. ಬಹಳ ಹಿಂದಿನಿಂದಲೂ ಅವರ ಮಹಿಮೆ ಕೇಳುತಲಿರುವೆ. ಆದರೆ ಕಳೆದ ವರ್ಷದವರೆಗೆ ಒಮ್ಮೆಯೂ ಅವರನ್ನು ಕಂಡಿರಲಿಲ್ಲ!’ ಮೀನುಗಾರ ಉತ್ತರಿಸಿದ. ಕೆಲ ತಿಂಗಳ ಹಿಂದೆ ಮೀನು ಅರಸುತ್ತ ದ್ವೀಪದಲಿ ದಾರಿ ತಪ್ಪಿದ್ದ ಅನುಭವ ಅರುಹಿದ, ಬೆಳಗ್ಗೆ ಅಲ್ಲೊಂದು ಮಣ್ಣಿನ ಗುಡಿಸಲಿದ್ದುದು ಗೊತ್ತಾಗಿತ್ತು. ಅಲ್ಲೊಬ್ಬ ವೃದ್ಧರು ನಿಂತಿದ್ದು ಕಂಡಿತ್ತು. ಸ್ವಲ್ಪ ಹೊತ್ತಿಗೆ ಗುಡಿಸಲಿನಿಂದ ಹೊರಬಂದ ಇನ್ನಿಬ್ಬರು ತನಗೆ ಉಣ್ಣಿಸಿ, ಬಟ್ಟೆಬರೆ ಒಣಗಿಸಿಕೊಟ್ಟು, ಮತ್ತೆ ದೋಣಿ ಹತ್ತಿ ಪಯಣಿಸಲು ಸಹಾಯ ಮಾಡಿದ್ದನ್ನು ಹೇಳಿಕೊಂಡ.
‘ಅವರು ಹೇಗೆ ಕಾಣುತ್ತಿದ್ದರು?’ ಬಿಷಪ್ಪರ ಪ್ರಶ್ನೆ.
ಒಬ್ಬರು ಕುಳ್ಳ, ಮೇಲಾಗಿ ಗೂನು ಬೆನ್ನು. ಅವರು ದೊಗಳೆ ಶಾಲು ಹೊದೆಯುತ್ತಾರೆ. ಬಹಳ ವೃದ್ಧರು. ವಯಸ್ಸು ನೂರಕ್ಕೂ ಮೇಲಿದ್ದೀತು. ಅವರೆಷ್ಟು ಮುದುಕರು ಅಂದ್ರೆ ಅವರ ಜೋತಾಡೋ ಬಿಳಿಗಡ್ಡ ಹಸಿರು ಬಣ್ಣಕ್ಕೆ ತಿರುಗಿದಂತೆನ್ನಿಸುತ್ತಿತ್ತು. ಆದರೆ, ಯಾವಾಗಲೂ ನಗೋರು. ಅವರ ಮುಖ ಸ್ವರ್ಗದ ದೇವತೆಯಂತೆ ಹೊಳೆಯೋದು. ಎರಡನೆಯವರು ಎತ್ತರದ ಆಸಾಮಿ. ಅವರೂ ಮುದುಕರೇ. ಅವರು ರೈತನ ಥರ ಕಂಬಳಿ ಹೊದ್ದಿದ್ದರು. ಅವರ ಗಡ್ಡ ಅಗಲಕ್ಕೆ ಹರಡಿ ಹಳದಿ ಬಿಳಿ ಮಿಶ್ರಣದಂತಿತ್ತು. ಭಾರೀ ಆಳು ಅನ್ನೋ ಥರ ಕಾಣೋರು. ನನ್ನ ಹಡಗನ್ನು ಅವರು ಬೊಗುಣಿ ಥರ ನದಿಮುಖಕ್ಕೆ ತಿರುಗಿಸಿ ಕೊಟ್ಟರು. ಒಳ್ಳೆ ತಮಾಶೆ ಮನುಷ್ಯ. ಮೂರನೆಯವರೂ ಎತ್ತರದ ಆಳೇ. ಮೊಳಕಾಲವರೆಗೂ ಬೆಳೆದ ಅವರ ಗಡ್ಡ ಹಿಮದಷ್ಟು ಬಿಳಿ. ಹುಬ್ಬುಗಳು ಇಳಿಬಿದ್ದ ಆತ ನಿಷ್ಠುರಿ, ಸೊಂಟಕ್ಕೆ ಗೋಣಿ ತಟ್ಟು ಬಿಟ್ಟರೆ ಮೈಮೇಲೆ ಬೇರೇನಿಲ್ಲ.
ಬಿಷಪ್ ಕೇಳಿದರು- ‘ಅವರು ನಿಮ್ಮೊಂದಿಗೆ ಮಾತನಾಡಿದರೆ?’
‘ಮೌನವೇ ಹೆಚ್ಚು. ಒಬ್ಬರಿಗೊಬ್ಬರು ಮಾತಾಡಿಕೊಂಡಿದ್ದೂ ಕಡಿಮೆಯೇ. ಒಬ್ಬರು ಇನ್ನೊಬ್ಬರನ್ನು ನೋಡಿಕೊಂಡಿದ್ದೇ ಅವರಿಗೆ ಅರ್ಥವಾಗಿಬಿಡುತ್ತಿತ್ತು. ಅವರಲ್ಲಿ ಎತ್ತರದ ವ್ಯಕ್ತಿಯನ್ನು ನೀವು ಇಲ್ಲಿ ಬಹಳ ವರ್ಷಗಳಿಂದ ಇದ್ದೀರ? ನಾನು ಕೇಳಿದ್ದೆ. ಆತ ಹುಬ್ಬುಗಂಟಿಕ್ಕಿ ಕೆರಳಿದವನಂತೆ ಗೊರಗೊರ ಸದ್ದು ಮಾಡಿದ್ದ. ಆದರೆ, ಹಿರೀಕ ಆತನ ಕೈಗಳನ್ನು ಹಿಡಿದು ನಸುನಕ್ಕಿದ್ದೆ ಲಂಬೂಧರನ ಕೋಪ ಶಮನವಾಯಿತು. ಹಿರೀಕ ನಸುನಕ್ಕು ಹೇಳಿದ್ದು: ‘ನಮ್ಮ ಮೇಲೆ ಕರುಣೆಯಿರಲಿ.’
ಮೀನುಗಾರ ಮಾತನಾಡುತ್ತಿರುವಂತೆಯೇ ಹಡಗು ದ್ವೀಪವನ್ನು ಸಮೀಪಿಸತೊಡಗಿತು. ಬಿಷಪ್ಪರು ದಿಟ್ಟಿಸಿ ನೋಡಿದರು. ಹಡಗಿನ ಮೂಲೆಯಿಂದ ನಡೆದು ನಾವಿಕನ ಬಳಿ ಹೋಗಿ, ’ಇದು ಯಾವ ದ್ವೀಪ?’ ಎಂದು ಕೇಳಿದರು.
‘ಈ ಸಮುದ್ರದಲ್ಲಿ ಇಂಥ ಹೆಸರು ಇಲ್ಲದಿರೋ ಹತ್ತಾರು ದ್ವೀಪಗಳಿವೆ’, ಆತ ನುಡಿದ.
‘ಆ ಗಡ್ಡೆಯಲ್ಲಿ ಮೋಕ್ಷಸಾಧನೆಯಲ್ಲಿ ನಿರತ ಮೂವರು ಯತಿಗಳು ಇದ್ದಾರಂತೆ, ನಿಜವೇ?’
‘ಹಾಗಂತ ಹೇಳ್ತಾರೆ ಅಯ್ಯನವರೇ, ಯಾವುದೂ ನಿಕ್ಕಿಯಿಲ್ಲ. ಮೀನುಗಾರರೇನೋ ಅವರನ್ನು ನೋಡಿದೀವಿ ಅಂತಾರೆ. ಎಲ್ಲವೂ ತಕಲಿ ಸುತ್ತುವ ಕಥೆಗಳು!’
‘ಈ ವ್ಯಕ್ತಿಗಳನ್ನ ನೋಡೋದಕ್ಕೆ ಈ ದ್ವೀಪಕ್ಕೆ ನಾನು ಹೋಗುವೆ. ಹೇಗೆ ಮಾಡೋಣ?’ ಬಿಷಪ್ಪರು ಕೇಳಿದರು.
ಈ ಹಡಗು ದ್ವೀಪಕ್ಕೆ ಹೋಗಲಾರದು. ಆದರೆ, ನಿಮ್ಮನ್ನು ದೋಣಿಯಲ್ಲಿ ಅಲ್ಲಿಗೆ ತಲುಪಿಸಬಹುದು. ಯಾವುದಕ್ಕೂ ನೀವು ನಮ್ಮ ಕಫ್ತಾನನೊಟ್ಟಿಗೆ ಮಾತನಾಡಿ,’ ನಾವಿಕ ಅರುಹಿದ.
ಕಫ್ತಾನನಿಗೆ ಹೇಳಿ ಕಳಿಸಲಾಗಿ, ಆತ ಬಂದ. ‘ನಾನು ಈ ವಿರಾಗಿಗಳನ್ನು ಕಾಣಬೇಕು. ನನ್ನನ್ನು ದ್ವೀಪಕ್ಕೆ ತಲುಪಿಸಲಾರಿರ?’ ಕಫ್ತಾನ ನುಣುಚಿಕೊಳ್ಳಲು ನೋಡಿದ. ತಲುಪಿಸಬಹುದು. ಆದರೆ ಕಾಲಹರಣ. ಆ ವೃದ್ಧರು ನಿಮ್ಮ ಶ್ರಮ-ಸಮಯಕ್ಕೆ ಯೋಗ್ಯರಲ್ಲ. ಆ ಮೂವರು ಮೂಳರು. ಅವಕ್ಕೆ ಏನೂ ಗೊತ್ತಿಲ್ಲ. ಒಂದು ಶಬ್ದ ಮಾತಾಡೋಕೆ ಬರುವುದಿಲ್ಲ. ಸಮುದ್ರದಲ್ಲಿರೋ ಅಸಂಖ್ಯ ಮೀನಿನಂತೆಯೇ ಅವರೂ!’
‘ಇರಲಿ, ನಾನವರನ್ನು ನೋಡ ಬಯಸುವೆ. ನೀವು ತೆಗೆದುಕೊಳ್ಳುತ್ತಿರೋ ಶ್ರಮಕ್ಕೆ ಹಣವನ್ನು ಕೊಡುವೆ. ನನಗೊಂದು ದೋಣಿಯನ್ನು ಸಿದ್ಧಪಡಿಸಿ.’
ಅಪ್ಪಣೆ ಕೊಟ್ಟಾದ ಮೇಲೆ ಚೌಕಾಸಿಗೆ ಸ್ಥಳವಿಲ್ಲ. ಹಡಗಿನ ಧಕ್ಕೆಗೆ ನಿಂತ ಕಫ್ತಾನ ದುರ್ಬಿನು ಹಾಕಿ ದ್ವೀಪದತ್ತ ನೋಡಿದ. ಬಿಷಪ್ಪರೂ ನೋಡಿದರು. ಅವರಿಗೆ ಅಸ್ಪಷ್ಟವಾಗಿ ಲಂಬೂಧರ, ಡೂಗಬೆನ್ನಿನ ಮುದುಕ ಮತ್ತು ಗಿಡ್ಡರು ಒಬ್ಬರಿಗೊಬ್ಬರು ಕೈಹಿಡಿದುಕೊಂಡು ನಿಂತಿದ್ದು ಕಂಡಿತು. ತಡಮಾಡುವುದೇಕೆ ಎಂದು ಬಿಷಪ್ಪರು ದೋಣಿ ಹತ್ತಿದರು.
*
ಬಂಡೆಗಳ ಮರೆಯಲ್ಲಿ ಮೂವರು ವಿರಾಗಿಗಳು ನಿಂತಿರುವುದು ಕಂಡಿತು. ಲಂಬೂಧರ ಸೊಂಟಕ್ಕೆ ಗೋಣಿತಟ್ಟು ಕಟ್ಟಿಕೊಂಡಿದ್ದ. ಗಿಡ್ಡ ರೈತನಂತೆ ದೊಗಳೆ ಗಂಜೀಫ್ರಾಕ್ ಧರಿಸಿದ್ದ. ತೀರಾ ಹಣ್ಣಾದ ಡೂಗಮುತ್ಯಾ ಕುರುಬ ಕಂಬಳಿ ಹೊದ್ದಿದ್ದ. ಮೂವರೂ ಒಬ್ಬರಿಗೊಬ್ಬರು ಕೈಹಿಡಿದು ನಿಂತಿದ್ದರು.
ಬಿಷಪ್ಪರನ್ನು ಕಂಡಿದ್ದೇ ಮೂವರೂ ತಲೆಬಾಗಿದರು. ಬಿಷಪ್ಪರು ಆಶೀರ್ವಚನ ನೀಡಿದ್ದೇ ಇನ್ನಷ್ಟು ಬಗ್ಗಿದರು. ಬಿಷಪ್ಪರು ಅವರೊಂದಿಗೆ ಮಾತನಾಡಗೊಡಗಿದರು.
‘ನೀವು ದೈವಾಂಶಸಂಭೂತರೆಂದು ನಾನು ಕೇಳಿರುವೆ. ಮೋಕ್ಷಸಾಧನೆಯಲ್ಲಿ ತೊಡಗಿದ್ದಿರೆಂದೂ, ನಮ್ಮ ದೈವ ಕ್ರಿಸ್ತನನ್ನು ಆರಾಧಿಸುತ್ತಿರುವೀರಿ ಎಂದು ಬಲ್ಲೆ. ನಾನೊಬ್ಬ ನಿಷ್ಪ್ರಯೋಜಕ. ದೈವ ಸೇವಕ. ದೈವಕರುಣೆಯಿಂದ ಭಗವನ್ನಾಮ ಸ್ಮರಣೆಯಲ್ಲಿ ತೊಡಗಿ, ಭಕ್ತಾದಿಗಳಿಗೆ ಬೋಧನೆ ಮಾಡುತ್ತಿರುವೆ. ದೈವಸೇವಕರಾದ ನಿಮ್ಮನ್ನು ಕಾಣುವ ಪ್ರೇರಣೆಯಾಯಿತು. ನಿಮಗೂ ಎಷ್ಟು ಸಾಧ್ಯವೋ ಅಷ್ಟು ಬೋಧನೆ ಮಾಡುವ ಮನಸ್ಸಾಯಿತು.’
ಮೂವರೂ ಮುದುಕರು ಒಬ್ಬರನ್ನೊಬ್ಬರು ನೋಡಿಕೊಂಡು ನಕ್ಕರು. ಆದರೆ ಮೌನವಾಗುಳಿದರು.
‘ಹೇಳಿ, ಮೋಕ್ಷ ಸಾಧಿಸಲು ನೀವೇನು ಮಾಡುತ್ತಿದ್ದೀರಿ, ಈ ದ್ವೀಪದಲ್ಲಿ ದೇವರ ಉಪಾಸನೆಯನ್ನು ಹೇಗೆ ಕೈಗೊಳ್ಳುತ್ತೀರಿ, ಹೇಳಿ!’ ಬಿಷಪ್ಪರು ಕೇಳಿದರು.
ಗಿಡ್ಡ ಸನ್ಯಾಸಿ ಕೆಮ್ಮಿ, ಎಲ್ಲರಿಗಿಂತ ಮುದುಕನಾದ ಡೂಗ ಮುತ್ಯಾನತ್ತ ನೋಡಿದ. ಮುತ್ಯಾ ಹೇಳಿದ:
‘ನಮಗೆ ದೇವರನ್ನು ಹೇಗೆ ಆರಾಧಿಸಬೇಕು ಅಂತ ಗೊತ್ತಿಲ್ಲ. ನಾವು ಒಬ್ಬರಿಗೊಬ್ಬರ ಆಸರೆಯಾಗಿ ಇದ್ದೇವೆ, ದೇವರ ಸೇವಕರು!’
‘ಇರಲಿ. ದೇವರನ್ನ ಹೇಗೆ ಪ್ರಾರ್ಥಿಸುತ್ತೀರಿ?’ ಬಿಷಪ್ಪರು ಕೇಳಿದರು.
‘ನಾವು ಹೀಗೆ ಪ್ರಾರ್ಥಿಸುತ್ತೇವೆ:
ನಾವಿರುವುದು ಮೂವರು
ಇರುವುದೇ ಮೂವರು
ನಮಗೆ ಕರುಣೆ ತೋರು
ಡೂಗ ಮುತ್ಯಾ ಹಾಗೆ ಹೇಳಿದ್ದೇ ಉಳಿದಿಬ್ಬರು ಆಕಾಶಕ್ಕೆ ಮುಖಮಾಡಿ ಅದನ್ನೇ ಪುನರಾವರ್ತಿಸಿದರು.
ಇದನ್ನು ನೋಡಿ ಬಿಷಪ್ಪರು ನಕ್ಕರು.
‘ನೀವು ಪವಿತ್ರ ತ್ರಿಮೂರ್ತಿಗಳ ಬಗ್ಗೆ ಕೇಳಿಯೇ ಇರುತ್ತೀರಿ. ಆದರೆ, ನೀವು ಪಾಗಿಂತವಾಗಿ ಪ್ರಾರ್ಥಿಸುತ್ತಿಲ್ಲ. ಇದ್ದರೂ, ನೀವು ನನ್ನ ಮನಸ್ಸನ್ನು ಗೆದ್ದಿದ್ದೀರಿ. ನೀವು ದೇವರನ್ನು ಸಂತೃಪ್ತಗೊಳಿಸಬಯಸುತ್ತೀರಿ. ಆದರೆ, ಆತನ ಸೇವೆ ಹೇಗೆ ಮಾಡಬೇಕೆಂದು ಅರಿತಿಲ್ಲ. ಪ್ರಾರ್ಥನೆ ಮಾಡೋ ವಿಧಾನ ಅದಲ್ಲ. ನನ್ನನ್ನು ಕೇಳಿ. ನಾವು ನಿಮಗೆ ಬೋಧನೆ ಮಾಡುವೆ. ಇದು ನನ್ನ ವಿಧಾನವಲ್ಲ! ದೇವರು ತನ್ನನ್ನು ಹೇಗೆ ಆರಾಧಿಸಬೇಕೆಂದು ಪುಣ್ಯಗ್ರಂಥಗಳ ಮೂಲಕ ಮನುಷ್ಯಮಾತ್ರರಿಗೆ ಹಸ್ತಾಂತರಿಸಿದ್ದು.’
ಬಳಿಕ ಬಿಷಪ್ಪರು ದೇವರು ಮನುಷ್ಯನಿಗೆ ತಂದೆಯಾಗಿ, ದೇವಪುತ್ರನಾಗಿ, ಪವಿತ್ರಾತ್ಮವಾಗಿ ಸಾಕ್ಷಾತ್ಕಾರಗೊಂಡನೆಂದು ಬೋಧಿಸತೊಡಗಿದರು.
ಬಿಷಪ್ಪರು ಹೇಳಿದ್ದನ್ನು ಡೂಗ ಮುತ್ಯಾ ಅನುಕರಿಸಿದ. ‘ನಮ್ಮ ತಂದೆಯೇ!’ ಉಳಿದಿಬ್ಬರು ಹೇಳಿದರು, ‘ನಮ್ಮ ತಂದೆಯೇ!’
ಬಿಷಪ್ಪರು ಒಂದೊಂದಾಗಿ ಹೇಳಿದಂತೆ ಮೊದಲಿಗೆ ಡೂಗ ಮುತ್ಯಾ ಬಳಿಕ ಇನ್ನಿಬ್ಬರು ಅನುಕರಿಸುತ್ತ ಹೋದರು. ಆದರೆ, ಅವರ ಮುದಿಹಲ್ಲು, ಬಾಯಿತುಂಬ ಬೆಳೆದ ಕೂದಲು ಅಡ್ಡಿಯಾದವು. ಬಿಷಪ್ಪರು ಕಲ್ಲುಬಂಡೆಯೊಂದರ ಮೇಲೆ ಕುಳಿತರು. ನೂರಾರು ಸಲ ಸರಿಯಾದ ವಿಧಾನವನ್ನು ಮೂವರು ವಿರಾಗಿಗಳಿಗೆ ಬೋಧಿಸಿದರು. ಮತ್ತೆ ಮತ್ತೆ ತಿಳಿ ಹೇಳಿದರು. ದೇವಪ್ರಾರ್ಥನೆಯನ್ನು ಮೂವರಿಗೂ ಬಾಯಿಪಾಠವಾಗಿ, ಮೂವರೂ ಸ್ವತಂತ್ರವಾಗಿ ಪ್ರತಿಯೊಂದನ್ನೂ ಉಚ್ಚರಿಸುವವರೆಗೆ ಬಿಡಲಿಲ್ಲ.
*
ಇರುಳು ಇಳಿಯತೊಡಗಿತ್ತು. ಚಂದ್ರ ನೀರಿನ ಮೇಲೆ ಪ್ರತಿಫಲಿಸತೊಡಗಿದ್ದ. ಬಿಷಪ್ಪರು ಮರಳಿ ಪಯಣಿಸಲು ದೋಣಿಯೆಡೆ ನಡೆದರು. ಮೂವರನ್ನು ಬೀಳ್ಕೊಡುವಾಗ ವಿರಾಗಿಗಳು ಬೆನ್ನುಬಾಗಿಸಿ ನಮಸ್ಕರಿಸಿದರು. ಅವರನ್ನು ಮೇಲೆತ್ತಿ ಬಿಷಪ್ಪರು ಮೂವರಿಗೂ ದೈವಚುಂಬನವನ್ನು; ಆಶೀರ್ವಚನವನ್ನು ನೀಡಿದರು. ತಾವು ಹೇಳಿಕೊಟ್ಟ ವಿಧಾನದಲ್ಲಿಯೇ ಪಾಂಗಿತವಾಗಿ ಪ್ರಾರ್ಥಿಸಲು ಹೇಳಿದರು. ಬಳಿಕ ದೋಣಿಯನ್ನು ನಡೆಸುತ್ತ ಹಡಗು ಸೇರಲು ಹೊರಟರು.
ದೋಣಿ ಚಲಿಸುತ್ತಿದ್ದಂತೆ ಮೂವರು ವಿರಾಗಿಗಳು ಜೋರಾಗಿ ಬಿಷಪ್ಪರು ಹೇಳಿಕೊಟ್ಟ ವಿಧಾನದಲ್ಲಿಯೇ ಪ್ರಾರ್ಥಿಸುತ್ತಿದ್ದ ದನಿ ಕೇಳಿಸಿತು. ಸ್ವಲ್ಪ ಹೊತ್ತಿಗೆ ಅವರ ದನಿಗಳು ಅಡಗಿದರೂ ಚಂದ್ರನ ಬೆಳಕಿನಲ್ಲಿ ಆ ಮೂವರನ್ನು ಕಾಣಬಹುದಿತ್ತು. ದೋಣಿ ಹಡಗನ್ನು ತಲುಪಿದ್ದೇ ಗಾಳಿ ಜೋರಾಗಿ ಬೀಸತೊಡಗಿತು. ಹಡಗು ಪಯಣ ಮುಂದುವರೆಸಿತು. ದೂರದಿಂದ ದ್ವೀಪ ಕಾಣಿಸುತ್ತಿದ್ದರು ವಿರಾಗಿಗಳು ಮರೆಯಾಗಿದ್ದರು. ಕೊನೆಗೆ ದ್ವೀಪವೂ ಮರೆಯಾಗಿ ಹೊಳೆವ ಚಂದ್ರನ ಬೆಳಕಷ್ಟೇ ಉಳಿಯಿತು.
ಪುಣ್ಯಕ್ಷೇತ್ರಕ್ಕೆ ಹೊರಟ ಪ್ರಯಾಣಿಕರು ಮಲಗಿ ನಿದ್ರಿಸುತ್ತಿದ್ದರು. ನಿದ್ರಿಸದ ಬಿಷಪ್ಪರು ದ್ವೀಪದತ್ತಲೇ ನೋಡುತ್ತ ಹಡಗಿನ ಅಂಚಿನಲ್ಲಿ ಕುಳಿತಿದ್ದರು. ದೇವರನ್ನು ಪ್ರಾರ್ಥಿಸಲು ಪಾಂಗಿತವಾದ ವಿಧಾನವನ್ನು ಅರಿತ ಅವರೆಷ್ಟು ಸಂತಸಗೊಂಡಿರಬಹುದು. ಅಂಥವರಿಗೆ ವಿಧಿವಿಧಾನ ಬೋಧಿಸುವ ಅವಕಾಶ ನೀಡಿದ್ದಕ್ಕಾಗಿ ಬಿಷಪ್ಪರು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಎದುರಿಗೆ ಚಂದ್ರನ ಬೆಳಕು. ಸಾಗುವ ಅಲೆಗಳು. ಇದ್ದಕ್ಕಿದ್ದಂತೆ ಬಿಷಪ್ಪರ ಕಂಗಳಿಗೆ ಚಂದ್ರನ ಬೆಳದಿಂದಳು ಸೃಷ್ಟಿಸುತ್ತಿದ್ದ ಸಮುದ್ರದ ಹಾದಿಯಲ್ಲಿ ಹೊಳೆವ ಯಾವುದೋ ಬಿಳಿವಸ್ತು ಕಂಡಂತಾಯಿತು. ಅದೊಂದು ಒಂಟಿ ಕಡಲು ಕಾಗೆಯೋ ಅಥವ ಸಣ್ಣ ಪಾತಿ ದೋಣಿಯೋ? ಏನಿರಬಹುದೆಂದು ಬಿಷಪ್ಪರು ಆ ಬೆಳಕಿನತ್ತ ಕಣ್ಣೆಟ್ಟರು.
ಅದು ರಭಸದಿಂದ ನಮ್ಮನ್ನು ಬೆನ್ನಟ್ಟಿ ಬರುತ್ತಿರುವುದರಿಂದ ದೋಣಿಯಿರಲಾರದು. ಎರಡು ಕ್ಷಣದ ಹಿಂದೆ ಅಂಚಿನಲ್ಲಿದ್ದುದು ಈಗ ಹತ್ತಿರ ಹತ್ತಿರವೇ ಬರುತ್ತಿದೆ, ಎಂದು ಬಿಷಪ್ಪರು ಚಕಿತರಾದರು. ಅವರಿಗೆ ಅದೇನೆಂದು ತಿಳಿಯಲಿಲ್ಲ. ಎದ್ದು ನಿಂತ ಬಿಷಪ್ಪರು ನಾವಿಕನಿಗೆ ಹೇಳಿದರು:
‘ಅಲ್ಲೇನು ಕಾಣುತ್ತಿದೆ ಕೊಂಚ ನೋಡಬಾರದೆ ಮಗೂ. ಅದು ಮೀನು, ಕಡಲಕಾಗೆ, ದೋಣಿ ಏನೊಂದೂ ಅಲ್ಲ!
ಬಿಷಪ್ಪರಿಗೆ ಕಾಣದಿದ್ದುದೆಂದರೆ ಬೆಳ್ಳಗೆ ಹೊಳೆಯುತ್ತ ಹಡಗಿನತ್ತ ಬರುತ್ತಿದ್ದುದು ಮೂವರು ವಿರಾಗಿಗಳೇ ಆಗಿದ್ದುದು!
ನಾವಿಕ ದಂಗಾಗಿ ಭಯದಿಂದ ನಡುಗಿದ. ‘ಅಯ್ಯೋ! ದೇವರೇ! ಮೂವರು ಸನ್ಯಾಸಿಗಳು ಹಡಗನ್ನು ಹಿಂಬಾಲಿಸಿಕೊಂಡು ನೀರಿನ ಮೇಲೆ ನೆಲದ ಮೇಲೆ ಓಡಿದಂತೆ ಅಟ್ಟಿಸಿಕೊಂಡು ಬರುತ್ತಿದ್ದಾರೆ. ಪ್ರಯಾಣಿಕರಿಗೆ ಆತ ಹೇಳಿದ್ದು ಕೇಳಿಸಿ ಧಸಭಸ ಎದ್ದು ಧಕ್ಕೆಯ ಮೂಲೆಗೆ ಬಂದು ನಿಂತರು. ಮೂವರು ಸನ್ಯಾಸಿಗಳು ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡು ನೀರಿನ ಮೇಲೆ ರಭಸದಲ್ಲಿ ಓಡಿಬರುವುದು ಅವರಿಗೆ ಕಂಡಿತು. ಮೂವರು ತಮ್ಮ ಕೈಗಳನ್ನು, ತಲೆಯನ್ನು ಎತ್ತಿ ಎತ್ತಿ ಬೀಸುತ್ತಿದ್ದರು. ಮೂವರಿಗೂ ಇರುವುದು ಒಂದೇ ದನಿ ಎಂಬಂತೆ, ಏಕಕಾಲಕ್ಕೆ ಅವರು ಕೂಗಿದರು:
‘ನೀವು ನೀಡಿದ ಬೋಧನೆಯನ್ನು ನಾವು ಮರೆತು ಹೋಗಿದ್ದೇವೆ. ನಾವು ಬಾಯಿಪಾಠ ಮಾಡುವವರೆಗೆ ಅದು ನಮ್ಮ ನೆನಪಿನಲ್ಲಿತ್ತು. ಆದರೆ, ನಿಲ್ಲಿಸಿದ್ದೇ ಅಕ್ಷರಗಳು ಜಾರಿ ಹೋಗಿ ಎಲ್ಲವೂ ಒಡೆದು ಚೂರಾದವು. ನಮಗೀಗ ಏನೂ ನೆನಪಿಲ್ಲ. ದಯವಿಟ್ಟು ನಮಗೆ ಇನ್ನೊಮ್ಮೆ ಬೋಧನೆಯನ್ನು ಮಾಡಿ!’
ಬಿಷಪ್ಪರು ತಮ್ಮ ದೇಹಾದ್ಯಂತ ಶಿಲುಬೆಯ ಸಂಕೇತ ಮಾಡಿಕೊಂಡರು. ಹಡಗಿನ ಒಂದು ಬದಿಗೆ ಬಾಗಿ ಕೂಗಿದರು:
‘ದೈವಾಂಶ ಸಂಭೂತರೇ ನಿಮ್ಮ ಸ್ವಂತ ಪ್ರಾರ್ಥನೆಯೇ ದೇವರನ್ನು ತಲುಪುವುದು. ನಿಮಗೆ ಬೋಧನೆ ಮಾಡುವ ಯೋಗ್ಯತೆ ನನಗಿಲ್ಲ. ಪಾಪಿಗಳಾದ ನಮಗಾಗಿಯೂ ಪ್ರಾರ್ಥಿಸಿ!’
ಬಳಿಕ ಬಿಷಪ್ಪರು ವೃದ್ಧ ವಿರಾಗಿಗಳತ್ತ ಮಂಡಿಯೂರಿದರು.
ಆಮೇಲೆ ಮೂವರೂ ವಿರಾಗಿಗಳು ಹಡಗಿನತ್ತ ಬೆನ್ನು ಮಾಡಿ ಸಮುದ್ರದ ವಿರುದ್ಧ ದಿಕ್ಕಿಗೆ ಹೋಗತೊಡಗಿದರು. ಅವರು ಕಣ್ಮರೆಯಾದ ಮೇಲೂ ಅವರು ತೆರಳಿದ ದಾರಿಯಲಿ ನಸುಕಿನವರೆಗು ಬೆಳಕು ಹೊಳೆಯುತ್ತಿತ್ತು.