ಪ್ರಾರ್ಥನೆ ಎಂದರೇನು ? : ಓಶೋ ವ್ಯಾಖ್ಯಾನ

ಹೇಗೆ ಪ್ರೀತಿ ಸಾಧನವಾಗಲಾರದೋ (means) ಹಾಗೆ ಪ್ರಾರ್ಥನೆ ಕೂಡ ಯಾವತ್ತೂ ಒಂದು ಸಾಧನವಾಗುವುದು ಸಾಧ್ಯವಿಲ್ಲ. ಪ್ರೀತಿ, ಒಂದು ಅಂತಿಮ ಗುರಿ ಹಾಗೆಯೇ ಪ್ರಾರ್ಥನೆಯೂ. ನೀವು ಪ್ರೀತಿಸುವುದು ಯಾವುದೋ ಬಯಕೆಯನ್ನು ಪೂರೈಸಿಕೊಳ್ಳುವುದಕ್ಕಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಾರ್ಥನೆಯ ಕುರಿತಾದ ಸಾಮಾನ್ಯ ತಿಳುವಳಿಕೆಯೆಂದರೆ, ಏನಾದರೊಂದನ್ನು ಬೇಡುವುದು, ಒತ್ತಾಯ ಮಾಡಿ ಕೇಳುವುದು, ದೂರು ಹೇಳುವುದು ; ನಿಮ್ಮಲ್ಲಿ ಕೆಲವೊಂದು ಬೇಡಿಕೆಗಳಿವೆ ಮತ್ತು ಅವನ್ನು ಪೂರೈಸಲು ದೇವರು ನಿಮಗೆ ಸಹಾಯ ಮಾಡಬೇಕು. ಆಗ ನೀವು ದೇವರ ಬಾಗಿಲಿಗೆ ಹೋಗಿ ಭಿಕ್ಷೆ ಕೇಳುತ್ತೀರಿ ಭಿಕ್ಷುಕನಂತೆ. ಆದರೆ ಪ್ರಾರ್ಥನೆ ಯಾವತ್ತೂ ಭಿಕ್ಷೆಯಾಗಲಾರದು. ಪ್ರಾರ್ಥನೆ ಕೇವಲ ಒಂದು ಕೃತಜ್ಞತಾ ಭಾವದ ಸ್ಥಿತಿ. ನೀವು ಏನಾದರೊಂದನ್ನು ಬೇಡುವಾಗ ಪ್ರಾರ್ಥನೆ ನಿಮ್ಮ ಅಂತಿಮ ಗುರಿಯಲ್ಲ, ಅದು ಕೇವಲ ನಿಮಗೆ ಒಂದು ಸಹಾಯಕ ಸಾಧನವಷ್ಟೇ. ಇಲ್ಲಿ ನಿಮಗೆ ಪ್ರಾರ್ಥನೆ ಮುಖ್ಯವಲ್ಲ ಏಕೆಂದರೆ ನೀವು ಏನೋ ಒಂದನ್ನು ಪಡೆಯಲು ಪ್ರಾರ್ಥನೆ ಮಾಡುತ್ತಿದ್ದೀರಿ, ಹಾಗಾಗಿ ನಿಮಗೆ ನೀವು ಬೇಡುತ್ತಿರುವ ಸಂಗತಿ ಮುಖ್ಯ. ಕೆಲವೊಮ್ಮೆ ನಿಮ್ಮ ಬೇಡಿಕೆ ಪೂರೈಕೆಯಾಗದಿದ್ದಾಗ ನೀವು ಪ್ರಾರ್ಥನೆಯನ್ನ ನಿಲ್ಲಿಸುತ್ತೀರಿ, ಪ್ರಾರ್ಥನೆ ಒಂದು ವ್ಯರ್ಥ ಕ್ರೀಯೆ ಎಂದು ದೂರುತ್ತೀರಿ. ಇದಕ್ಕೆ ಕಾರಣ ಪ್ರಾರ್ಥನೆ ನಿಮಗೆ ಬೇಡುವ ಸಾಧನ ಮಾತ್ರ ಅದೇ ನಿಮ್ಮ ಅಂತಿಮ ಗುರಿಯಲ್ಲ.

ಹೇಗೆ ಪ್ರೀತಿ ಸಾಧನವಾಗಲಾರದೋ (means) ಹಾಗೆ ಪ್ರಾರ್ಥನೆ ಕೂಡ ಯಾವತ್ತೂ ಒಂದು ಸಾಧನವಾಗುವುದು ಸಾಧ್ಯವಿಲ್ಲ. ಪ್ರೀತಿ, ಒಂದು ಅಂತಿಮ ಗುರಿ ಹಾಗೆಯೇ ಪ್ರಾರ್ಥನೆಯೂ. ನೀವು ಪ್ರೀತಿಸುವುದು ಯಾವುದೋ ಬಯಕೆಯನ್ನು ಪೂರೈಸಿಕೊಳ್ಳುವುದಕ್ಕಲ್ಲ.

ಪ್ರೀತಿಗೆ ಅದರದ್ದೇ ಆದ ಒಂದು ಅಂತರ್ಗತ ಸೌಂದರ್ಯವಿದೆ. ನೀವು ಸುಮ್ಮನೇ ಪ್ರೀತಿಸುವುದಕ್ಕಾಗಿಯೇ ಪ್ರೀತಿಸುತ್ತೀರಿ, ಬೇರೆ ಯಾವ ಬೇಡಿಕೆಯನ್ನೂ ಪೂರೈಸಿಕೊಳ್ಳುವುದಕ್ಕಲ್ಲ. ಇದು ಒಂದು ಅದ್ಭುತ ಆನಂದದ ಸ್ಥಿತಿ. ಪ್ರೀತಿಯ ಆಚೆಗೆ ಸಾಧಿಸುವಂಥದು ಬೇರೇನೂ ಇಲ್ಲ, ಪ್ರೀತಿಸಿರುವ ಕಾರಣಕ್ಕಾಗಿ ನೀವು ಯಾವ ಫಲಿತಾಂಶವನ್ನೂ ನಿರೀಕ್ಷಿಸುವ ಹಾಗಿಲ್ಲ, ಪ್ರೀತಿಯ ಮೂಲಕ ನೀವು ಏನನ್ನೂ ತಲುಪುವ ಹಾಗಿಲ್ಲ. ಪ್ರೀತಿ ನಿಮ್ಮನ್ನ ಯಾವುದೋ ಒಂದು ಗುರಿ ತಲುಪಿಸುವ ಸಾಧನವಲ್ಲ, ಅದು ತಾನೇ ಒಂದು ಅಂತಿಮ ಗುರಿ.

ಪ್ರಾರ್ಥನೆಯೂ ಪ್ರೀತಿಯೇ, ನೀವು ಸುಮ್ಮನೇ ಆನಂದಿಸುವಂಥದು ಯಾವ ಬೇಡಿಕೆಗಳಿಲ್ಲದೆ ಯಾವ ನಿರೀಕ್ಷೆಗಳನ್ನೂ ಹೊಂದದೆ. ಪ್ರಾರ್ಥನೆ ತನ್ನ ಅಂತರಾಳದಲ್ಲಿಯೇ ಚೆಲುವಿನೊಂದಿಗೆ ಒಂದಾಗಿರುವಂಥದು. ಪ್ರಾರ್ಥಿಸುವಾಗ ನಿಮ್ಮನ್ನು ಖುಶಿ, ಭಾವತೀವ್ರತೆ ಹೇಗೆ ತುಂಬಿಕೊಳ್ಳುತ್ತದೆಯೆಂದರೆ, ನೀವು ಸುಮ್ಮನೇ ನಿಮಗೆ ನಿಮ್ಮ ಅಸ್ತಿತ್ವವನ್ನು ಹೊಂದಲು, ಉಸಿರಾಡಲು, ಬದುಕಿನ ಬಣ್ಣಗಳನ್ನು ಕಾಣಲು, ಜೀವನದ ರಾಗಗಳನ್ನು ಕೇಳಲು, ನಿಮ್ಮ ಸುತ್ತಲಿನ ಸೌಂದರ್ಯದ ಬಗ್ಗೆ ಅರಿವು ಹೊಂದಲು ಅವಕಾಶ ಮಾಡಿಕೊಟ್ಟ ದಿವ್ಯಕ್ಕೆ ಮನದುಂಬಿ ಕೃತಜ್ಞತೆ ಹೇಳುತ್ತೀರಿ. ಈ ಯಾವುದೂ ನೀವು ಗಳಿಸಿದ್ದಲ್ಲ , ಇದೆಲ್ಲ ಬದುಕು ನಿಮಗೆ ಕೊಡಮಾಡಿರುವ ಉಡುಗೊರೆ.

ಆಳ ಕೃತಜ್ಞತಾ ಭಾವದಲ್ಲಿ ನೀವು ಭಗವಂತನ ಎದುರು ನಿಲ್ಲುತ್ತೀರಿ, ಅವನು ನಿಮಗೆ ಕೊಟ್ಟಿರುವ ಉಡುಗೊರೆಗಳಿಗಾಗಿ ಕೃತಜ್ಞತೆ ಹೇಳಲು, “ ನನಗೆ ನೀನು ಕೊಟ್ಟಿರುವುದೆಲ್ಲ ನನ್ನ ಅರ್ಹತೆಯನ್ನ ಮೀರಿರುವಂಥದು “ ಎನನ್ನಾದರೂ ಪಡೆದುಕೊಳ್ಳುವ ಅರ್ಹತೆ ನಿಮಗಿದೆಯೆ ? ನೀವು ಈಗಾಗಲೇ ಹೊಂದಿರುವುದನ್ನೆಲ್ಲ ಪಡೆಯಲು ನಿಮಗೆ ಯಾವ ಅರ್ಹತೆ ಇತ್ತು ? ನಿಮ್ಮ ಬಳಿ ಈಗ ಇರುವುದೆಲ್ಲ ಆ ಭಗವಂತನ ಉಡುಗೊರೆಯೇ ಅಲ್ಲವೆ? ಭಗವಂತ ನಿಮ್ಮನ್ನು ಪ್ರೀತಿಸುತ್ತಿರುವ ಕಾರಣಕ್ಕಾಗಿಯಲ್ಲವೆ ಈ ಎಲ್ಲವೂ ನಿಮ್ಮ ಪಾಲಾಗಿರುವುದು?

ಭಗವಂತ ಪ್ರೀತಿಯಿಂದ ತುಂಬಿ ತುಳುಕುತ್ತಿದ್ದಾನೆ. ಅವನ ಅಪಾರ ಪ್ರೇಮದ ಕಾರಣವಾಗಿಯೇ ನಿಮ್ಮೊಳಗೆ ಹುಟ್ಟಿಕೊಂಡಿರುವ ಕೃತಜ್ಞತಾ ಭಾವದ ಬಗ್ಗೆ ನೀವು ಅವನಿಗೆ ತಿಳಿಸಬೇಕಲ್ಲವೆ? ಈ ವಿಷಯ ನಿಮಗೆ ಮನವರಿಕೆಯಾದಾಗ ನೀವು ಅವನ ಮುಂದೆ ಬೇರೆ ಯಾವ ಬೇಡಿಕೆಗಳನ್ನೂ ಇಡುವುದಿಲ್ಲ, ಅವನು ಈಗಾಗಲೇ ನಿಮಗೆ ಕೊಟ್ಟಿರುವ ಉಡುಗೊರೆಗಳಿಗಾಗಿ ಅವನಿಗೆ ಕೃತಜ್ಞತೆ ಹೇಳುತ್ತೀರಿ. ಕೃತಜ್ಞತೆಯೇ ಪ್ರಾರ್ಥನೆ, ಅದರಂತೆ ನಿಮಗೆ ಖುಶಿ ನೀಡುವ ಇನ್ನೊಂದು ಸಂಗತಿಯಿಲ್ಲ. ನಿಮ್ಮ ಖುಶಿಯ ತುಟ್ಟ ತುದಿಯಲ್ಲಿಯೇ ಪ್ರಾರ್ಥನೆ ತನ್ನ ಧನ್ಯತೆಯನ್ನು ಪಡೆದುಕೊಳ್ಳುತ್ತದೆ. ಪ್ರಾರ್ಥನೆ ಖುಶಿಯ ಉತ್ತುಂಗಕ್ಕೆ ನಿಮ್ಮನ್ನು ಕರೆದೊಯ್ಯುವ ಸಾಧನವಲ್ಲ , ಅದೇ ಖುಶಿಯ ತುಟ್ಟ ತುದಿ.


(source : The Mustard Seed by Osho)

Leave a Reply