ಯಾರಾದರೂ, ಯಾವುದಾದರೂ ನಿಮ್ಮ ಸಂವೇದನೆಯನ್ನು ಮುಟ್ಟಿ ಮಾತಾಡಿಸಿದಾಗಲೆಲ್ಲ ನಿಮ್ಮ ನಮನಗಳನ್ನು ಸಲ್ಲಿಸಿ. ಹೂವಿನ ಚೆಲುವು ನಿಮಗೆ ಖುಶಿಕೊಡುತ್ತಿದೆಯಾದರೆ ಅದರು ಎದುರು ತಲೆ ಬಾಗಿಸಿ ನಿಮ್ಮ ನಮನಗಳನ್ನು ಸಲ್ಲಿಸಿ… ~ ಓಶೋ ರನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮಹರ್ಷಿ ರಮಣರ ಆಶ್ರಮದಲ್ಲಿ ಒಂದು ಆಕಳು ತೀರಿಕೊಂಡಿತು. ಸಮಾಧಿಯ ಅನುಭವ ಪಡೆದ ಒಬ್ಬ ಮನುಷ್ಯನ ಅಂತ್ಯಸಂಸ್ಕಾರವನ್ನು ಎಷ್ಟು ಗೌರವದಿಂದ ಮಾಡಲಾಗುತ್ತದೆಯೋ ಅಷ್ಟೇ ಗೌರವದಿಂದ ರಮಣರು ಆ ಆಕಳಿನ ಅಂತ್ಯವಿಧಿಗಳನ್ನು ಪೂರೈಸಿದರು. ರಮಣರ ವರ್ತನೆಯಿಂದ ಜನರಿಗೆ ತುಂಬ ಆಶ್ಚರ್ಯವಾಯಿತು. ಆದರೆ ಆ ಆಕಳು ಸಾಮಾನ್ಯ ಆಕಳಾಗಿರಲಿಲ್ಲ. ಅದು ರಮಣರ ತುಂಬ ಅಚ್ಚುಮೆಚ್ಚಿನ ಆಕಳಾಗಿತ್ತು. ಅದು ರಮಣರ ಎಲ್ಲ ಸತ್ಸಂಗಗಳಲ್ಲಿ ಭಾಗವಹಿಸುತ್ತಿತ್ತು. ಕೆಲವೊಮ್ಮೆ ರಮಣರ ಶಿಷ್ಯರು ಸತ್ಸಂಗವನ್ನು ತಪ್ಪಿಸುವುದಿತ್ತು ಆದರೆ ಆಕಳು ಮಾತ್ರ ರಮಣರ ಯಾವ ಸತ್ಸಂಗವನ್ನೂ ತಪ್ಪಿಸುತ್ತಿರಲಿಲ್ಲ. ರಮಣರ ಇಡೀ ಸತ್ಸಂಗದಲ್ಲಿ ಆಕಳು ಕಿಟಕಿಯಲ್ಲಿ ತನ್ನ ಮುಖ ತೂರಿಸಿಕೊಂಡು ನಿಂತಿರುತ್ತಿತ್ತು. ಗಂಟೆ ಗಟ್ಟಲೇ ಜನ ಕುಳಿತುಕೊಂಡು ರಮಣರ ಜೊತೆ ಧ್ಯಾನದಲ್ಲಿ ನಿರತರಾಗಿರುತ್ತಿದ್ದರೆ ಆಕಳು ಮಾತ್ರ ನಿಂತೇ ಇರುತ್ತಿತ್ತು. ಕೆಲವೊಮ್ಮೆ ಸತ್ಸಂಗದ ಕೊನೆಯಲ್ಲಿ ಆಕಳಿನ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿರುತ್ತಿತ್ತು.
ಆಕಳಿಗೆ ಕಾಯಿಲೆಯಾಗಿ ಅದು ನೋವಿನಿಂದ ಬಳಲುತ್ತಿದ್ದಾಗ ಸ್ವತಃ ರಮಣರೇ ಆ ಆಕಳನ್ನು ನೋಡಲು ಬಂದರು. ರಮಣರನ್ನು ನೋಡುತ್ತಿದ್ದಂತೆಯೇ ಆಕಳು ಒಂದೇ ಸವನೇ ಕಣ್ಣೀರು ಹಾಕತೊಡಗಿತು. ರಮಣರ ಕೈ ಆಕಳಿನ ತಲೆಯನ್ನು ನೇವರಿಸುತ್ತಿರುವಾಗಲೇ ಆಕಳು ಸದ್ಗತಿಯನ್ನು ಹೊಂದಿತು. ಸಮಾಧಿಯನ್ನು ಸಾಧಿಸಿದ ಒಬ್ಬ ಮನುಷ್ಯನಿಗೆ ನೀಡಬಹುದಾದ ಎಲ್ಲ ಗೌರವವನ್ನೂ ರಮಣರು ಆಕಳಿಗೆ ನೀಡಿದರು. ಆಕಳಿಕಾಗಿ ಸಮಾಧಿಯೊಂದನ್ನು ನಿರ್ಮಿಸಿದರು.
“ ಮಹರ್ಷಿ, ಈ ಆಕಳು ನಿಮಗೆ ಅಷ್ಟು ಮುಖ್ಯವಾದದ್ದೇ ? “ ಜನ ಪ್ರಶ್ನೆ ಮಾಡುತ್ತಿದ್ದರು. “ ಇದು ಈ ಆಕಳಿನ ಕೊನೆಯ ಜನ್ಮ, ಆಕಳಿನ ಪ್ರಾರ್ಥನೆ ಕೊನೆಗೂ ಸಾರ್ಥಕವಾಯಿತು, ಆಕಳಿನ ನಮನಗಳು ತನ್ನ ಗಮ್ಯವನ್ನು ತಲುಪಿಕೊಂಡವು” ರಮಣರು ಜನರಿಗೆ ಉತ್ತರಿಸುತ್ತಿದ್ದರು.
ಹಾಗಾಗಿಯೇ ನಾನು ಹೇಳುವುದು ಪ್ರಾರ್ಥನೆ ಕೇವಲ ಮನುಷ್ಯನಿಗೆ ಸಂಬಂಧಿಸಿದ್ದಲ್ಲ, ಕೆಲವು ಪ್ರಾಣಿ ಪಕ್ಷಿಗಳು ಕೂಡ ಪ್ರಾರ್ಥನಾಮಯಿಗಳು. ಕೆಲವು ಗಿಡ ಮರಗಳು ಕೂಡ ಪ್ರಾರ್ಥನೆ ಮಾಡುತ್ತವೆ. ಒಂದು ಸಂಗತಿಯನ್ನಂತೂ ವಿಜ್ಞಾನಿಗಳು ನಿಖರವಾಗಿ ಸಿದ್ಧಮಾಡಿ ತೋರಿಸಿದ್ದಾರೆ, ಕೆಲವು ಸಸ್ಯಗಳ ಸೆನ್ಸಿಟಿವಿಟಿ ಮನುಷ್ಯನಿಗಿಂತಲೂ ಸೂಕ್ಷ್ಮವಾದದ್ದು.
ಯಾರಾದರೂ, ಯಾವುದಾದರೂ ನಿಮ್ಮ ಸಂವೇದನೆಯನ್ನು ಮುಟ್ಟಿ ಮಾತಾಡಿಸಿದಾಗಲೆಲ್ಲ ನಿಮ್ಮ ನಮನಗಳನ್ನು ಸಲ್ಲಿಸಿ. ಹೂವಿನ ಚೆಲುವು ನಿಮಗೆ ಖುಶಿಕೊಡುತ್ತಿದೆಯಾದರೆ ಅದರು ಎದುರು ತಲೆ ಬಾಗಿಸಿ ನಿಮ್ಮ ನಮನಗಳನ್ನು ಸಲ್ಲಿಸಿ. ಕೋಗಿಲೆಯ ಹಾಡು ನಿಮಗೆ ಮುದ ನೀಡಿತಾದರೆ, ತನ್ಮಯರಾಗಿ ನೀವು ಕೋಗಿಲೆಗೆ ನಮನಗಳನ್ನು ಸಲ್ಲಿಸಿ. ನಿಮ್ಮ ಮನೆಯ ಮಾಳಿಗೆಯ ಮೇಲೆ ಮಳೆ ಹನಿಗಳು ಬೀಳುತ್ತಿರುವ ಸಂಗೀತಕ್ಕೆ ನೀವು ಉಲ್ಲಾಸಗೊಂಡಿರಾದರೆ, ಮಳೆಯಲ್ಲಿ ಮಿಂದು ನಿಮ್ಮ ನಮನಗಳನ್ನು ಸಲ್ಲಿಸಿ. ಪ್ರಾರ್ಥನೆ ಮತ್ತು ಕೃತಜ್ಞತೆ ನಿಮ್ಮನ್ನ ಶುದ್ಧ ಮಾಡುವ ದಿವ್ಯಗಳು.