ಓಶೋ ಹೇಳಿದ ಸೂಫಿ ನೀತಿ ಕಥೆ…

ಯಾರು ಸಂಗೀತ ವಾದ್ಯವನ್ನು ನುಡಿಸಬಲ್ಲರೋ, ವಾದ್ಯ ಅವರಿಗೇ ಸೇರಿದ್ದು. ಬದುಕು ಕೂಡ ಹೀಗೆಯೇ. ಯಾರು ಬದುಕಿನ ಆಳಕ್ಕಿಳಿದು ಬದುಕನ್ನ ಅನುಭವಿಸಬಲ್ಲರೋ, ಬದುಕು ಅವರಿಗೇ ಸೇರಿದ್ದು! ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಾಚೀನ ಕುಟುಂಬವೊಂದರ ಮನೆಯಲ್ಲಿ ಒಂದು ಸಂಗೀತ ವಾದ್ಯವಿತ್ತು. ಆದರೆ ಆ ಮನೆಯಲ್ಲಿ ಯಾರಿಗೂ ಆ ವಾದ್ಯವನ್ನು ಹೇಗೆ ಉಪಯೋಗಿಸಬೇಕೆನ್ನುವುದು ಗೊತ್ತಿರಲಿಲ್ಲ. ಕೆಲವು ಪಿಳಿಗೆಯ ನಂತರ ಅದು ಒಂದು ಸಂಗೀತ ವಾದ್ಯವೆನ್ನುವುದೂ ಆ ಮನೆಯವರಿಗೆ ಮರೆತು ಹೋಗಿತ್ತು. ಆ ವಾದ್ಯದ ಮೇಲೆ ಮಣಗಟ್ಟಲೇ ಧೂಳು ಕುಳಿತುತೊಂಡಿತ್ತು.

ಅದೊಂದು ತುಂಬ ದೊಡ್ಡದಾದ ಸಂಗೀತ ವಾದ್ಯ, ಮವೆಯಲ್ಲಿ ಅದು ಹೆಚ್ಚಿನ ಜಾಗ ಆಕ್ರಮಿಸಿಕೊಂಡಿತ್ತು. ಇದರಿಂದಾಗಿ ಮನೆಯ ಸದಸ್ಯರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿತ್ತು. ಕೊನೆಗೊಮ್ಮೆ ಆ ಮನೆಯವರು ಈ ಉಪದ್ರವವನ್ನು ಮನೆಯಿಂದ ಆಚೆ ಬಿಸಾಕಲು ನಿರ್ಧರಿಸಿದರು. ಒಂದು ದಿನ ಆ ವಾದ್ಯವನ್ನು ಮನೆಯ ಮುಂದಿನ ರಸ್ತೆಯ ಆಚೆಯಿದ್ದ ಖಾಲೀ ಜಾಗದಲ್ಲಿ ಇಟ್ಟು ಬಂದುಬಿಟ್ಟರು.

ಸ್ವಲ್ಪ ಹೊತ್ತಿನ ನಂತರ ಮನೆಯವರಿಗೆ ರಸ್ತೆಯಾಚೆಯಿಂದ ಮಧುರ ಸಂಗೀತ ಕೇಳಿ ಬರತೊಡಗಿತು. ಮನೆಯವರು ಹೊರಗೆ ಹೋಗಿ ನೋಡಿದಾಗ ಭಿಕ್ಷುಕನಂತಿದ್ದ ಒಬ್ಬ ಫಕೀರ ಆ ಸಂಗೀತ ವಾದ್ಯವನ್ನು ನುಡಿಸುತ್ತಿದ್ದ. ಸುತ್ತ ಮುತ್ತ ಓಡಾಡುತ್ತಿದ್ದ ಜನ ಫಕೀರನ ಸುತ್ತ ಜಮಾಯಿಸತೊಡಗಿದರು. ಹತ್ತಿರದ ಮನೆಗಳಿಂದ ಜನ ಹೊರಗೆ ಬಂದು ಆ ಸಂಗೀತಕ್ಕೆ ಕಿವಿಯಾದರು. ಎಲ್ಲ ಜನರೂ ಆ ಸಂಗೀತಕ್ಕೆ ಮೈ ಮರೆತು ಬಿಟ್ಟಿದ್ದರು. ಕಾಲ ಅಲ್ಲಿ ನಿಂತು ಹೋಗಿಬಿಟ್ಟಿತ್ತು. ಫಕೀರ ತನ್ಮಯತೆಯಿಂದ ಸಂಗೀತ ನುಡಿಸುತ್ತಲೇ ಇದ್ದ. ಸುತ್ತ ನೆರೆದಿದ್ದ ಜನ ವಶೀಕರಣಕ್ಕೊಳಗಾದವರಂತೆ ಫಕೀರನ ಸುತ್ತ ಕಣ್ಣು ಮುಚ್ಚಿಕೊಂಡು ನಿಂತು ಬಿಟ್ಟಿದ್ದರು. ಸತತ ಎರಡು ಗಂಟೆ ನುಡಿಸಿದ ಮೇಲೆ ಫಕೀರ ಆ ವಾದ್ಯವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊರಡಲು ಸಿದ್ಧನಾದ. ಆಗ ಆ ಸಂಗೀತವಾದ್ಯ ತಮ್ಮದೆಂದೂ ಅದನ್ನು ಫಕೀರ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದೂ ವಾದ್ಯದ ಮೂಲ ಮಾಲಿಕರು ತಗಾದೆ ತೆಗೆದರು.

“ ಈ ವಾದ್ಯ ನಿಮ್ಮದಲ್ಲ, ಯಾರು ಆ ವಾದ್ಯವನ್ನು ನುಡಿಸಬಲ್ಲರೋ ಅವರೇ ಆ ವಾದ್ಯದ ನಿಜವಾದ ಮಾಲಿಕರು. ಇದರ ಹೊರತಾದ ಬೇರೆ ಯಾವ ಮಾಲಿಕತ್ವವೂ ಇಲ್ಲ. ಶತಮಾನಗಳಿಂದ ಈ ವಾದ್ಯ ನಿಮ್ಮ ಮನೆಯಲ್ಲಿರಬಹುದು ಆದರೆ ನೀವು ಇದರ ಮಾಲಿಕರಲ್ಲ, ಇದರ ಮಾಲಿಕರಾಗುವ ಅರ್ಹತೆಯೂ ನಿಮಗಿಲ್ಲ. ನನಗೆ ಈ ವಾದ್ಯ ನುಡಿಸುವುದು ಗೊತ್ತು ಹಾಗಾಗಿ ನಾನೇ ಇದರ ವಾರಸುದಾರ “ ಫಕೀರ ವಾದ್ಯವನ್ನು ಮಾಲಿಕರಿಗೆ ಹಿಂತಿರುಗಿಸಲು ನಿರಾಕರಿಸಿದ.

ಯಾರು ಸಂಗೀತ ವಾದ್ಯವನ್ನು ನುಡಿಸಬಲ್ಲರೋ, ವಾದ್ಯ ಅವರಿಗೇ ಸೇರಿದ್ದು.

ಬದುಕು ಕೂಡ ಹೀಗೆಯೇ. ಯಾರು ಬದುಕಿನ ಆಳಕ್ಕಿಳಿದು ಬದುಕನ್ನ ಅನುಭವಿಸಬಲ್ಲರೋ, ಬದುಕು ಅವರಿಗೇ ಸೇರಿದ್ದು.

(source: Osho / God is not for sale)

Leave a Reply