ನಾವು ಅಶಾಶ್ವತ ಸಂಗತಿಗಳ ಮೂಲಕ ಶಾಶ್ವತ ಖುಶಿಯನ್ನ ಬಯಸುತ್ತಿದ್ದೇವೆ. ಹಾಗಾಗಿ ದುಗುಡ ನಮ್ಮ ನಿರಂತರ ಸಂಗಾತಿ ಮತ್ತು ಇದನ್ನ ಮೀರುವುದೇ ನಮ್ಮ ಬದುಕಿನ ಪ್ರಮುಖ ಸಮಸ್ಯೆ. ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು ಖುಶಿಯನ್ನು ಬಯಸುವುದು ಕೆಲವು ಸಂಗತಿಗಳ ಮೂಲಕ, ವಸ್ತುಗಳ ಮೂಲಕ, ಸಂಬಂಧಗಳ ಮೂಲಕ, ವಿಚಾರ, ಸಿದ್ಧಾಂತಗಳ ಮೂಲಕ. ಹಾಗಾಗಿ ನಮಗೆ ಸಂಗತಿಗಳು, ವಸ್ತುಗಳು, ಸಂಬಂಧಗಳು, ವಿಚಾರಗಳು, ಸಿದ್ದಾಂತಗಳು ಖುಶಿಗಿಂತ ಹೆಚ್ಚು ಮಹತ್ವದವು. ನಾವು ಖುಶಿಯನ್ನ ನೇರವಾಗಿ ಬಯಸದೇ ಯಾವುದಾದರೊಂದರ ಮೂಲಕ ಬಯಸುತ್ತೇವೆಯಾದರೆ, ಆಗ ನಮಗೆ ಆ ಸಂಗತಿ, ಖುಶಿಗಿಂತ ಹೆಚ್ಚು ಮೌಲಿಕವಾಗುತ್ತದೆ ಹೆಚ್ಚು ಆಪ್ತವಾಗುತ್ತದೆ. ಇದನ್ನ ಹೀಗೆ ಹೇಳಿದಾಗ, ಸಮಸ್ಯೆ ನಮಗೆ ಸರಳವಾಗಿ ಕಾಣಿಸುತ್ತದೆ ಮತ್ತು ಅದು ಸರಳವಾಗಿದೆ ಕೂಡ. ನಾವು ಖುಶಿಯನ್ನ ಆಸ್ತಿಯಲ್ಲಿ, ಕುಟುಂಬದಲ್ಲಿ, ಪ್ರಸಿದ್ಧಿಯಲ್ಲಿ ಗುರುತಿಸುತ್ತೇವೆ ಆಗ ಈ ಎಲ್ಲವುಗಳೇ ನಮಗೆ ಖುಶಿಗಿಂತ ಮುಖ್ಯವಾಗುತ್ತಹೋಗುತ್ತವೆ. ಯಾವಾಗ ನಾವು ಖುಶಿಯನ್ನ ಒಂದು ಸಾಧನದ ಮೂಲಕ ಬಯಸುತ್ತೆವೆಯೋ ಆಗ ಆ ಸಾಧನ ನಮ್ಮ ಅಂತಿಮ ಗುರಿಯನ್ನ ನಾಶ ಮಾಡುತ್ತದೆ.
ಯಾವುದಾದರೂ ಕೈಯಿಂದ ಸಿದ್ಧಪಡಿಸಿದ ಅಥವಾ ಮನಸ್ಸು ಹುಟ್ಟಿಸಿದ ಸಾಧನಗಳ ಮೂಲಕ, ಖುಶಿಯನ್ನ ಪಡೆದುಕೊಳ್ಳಬಹುದೆ? ವಸ್ತುಗಳು, ಸಂಬಂಧಗಳು, ವಿಚಾರ ಸಿದ್ಧಾಂತಗಳು ಇವೆಲ್ಲ ಎಷ್ಟು ಪಾರದರ್ಶಕವಾಗಿ ಅಶಾಶ್ವತವಾಗಿವೆಯೆಂದರೆ, ಅವು ಯಾವಾಗಲೂ ನಮ್ಮನ್ನು ದುಗುಡಕ್ಕೆ ದೂಡಿವೆ. ….. ವಸ್ತುಗಳು ಎಷ್ಟು ಅಶಾಶ್ವತ ಎಂದರೆ ಅವು ಸವೆಯುತ್ತವೆ, ಕಳೆದು ಹೋಗುತ್ತವೆ, ಸಂಬಂಧಗಳು ನಿರಂತರ ಬಿಕ್ಕಟ್ಟಿನಲ್ಲಿರುವಂಥವು, ಘರ್ಷಣೆಯನ್ನು ಪೋಷಿಸುವಂಥವು, ಸಾವು ಸದಾ ಸಂಬಂಧಗಳ ಬಾಗಿಲಲ್ಲಿ ಕಾಯುತ್ತಿರುತ್ತದೆ, ವಿಚಾರಗಳು ಮತ್ತು ನಂಬಿಕೆಗಳು ಬಹುಕಾಲ ಉಳಿಯುವಂಥವಲ್ಲ, ಒಂದಿಲ್ಲ ಒಂದು ದಿನ ಹಳತಾಗುವಂಥವು, ಬಿಟ್ಟು ಹೋಗುವಂಥವು. ನಾವು ಈ ಎಲ್ಲ ಅಶಾಶ್ವತ ಸಂಗತಿಗಳ ಮೂಲಕ ಶಾಶ್ವತ ಖುಶಿಯನ್ನ ಬಯಸುತ್ತಿದ್ದೇವೆ. ಹಾಗಾಗಿ ದುಗುಡ ನಮ್ಮ ನಿರಂತರ ಸಂಗಾತಿ ಮತ್ತು ಇದನ್ನ ಮೀರುವುದೇ ನಮ್ಮ ಬದುಕಿನ ಪ್ರಮುಖ ಸಮಸ್ಯೆ.
ಖುಶಿಯ ನಿಜವಾದ ಅರ್ಥವನ್ನು ಕಂಡುಕೊಳ್ಳಬೇಕಾದರೆ, ನಾವು ಸ್ವಂತ ತಿಳುವಳಿಕೆಯ ನದಿಯನ್ನು ಶೋಧಿಸಬೇಕು. ಸ್ವಂತ ತಿಳುವಳಿಕೆ ತನಗೆ ತಾನೇ ಅಂತಿಮವಲ್ಲ. ನದಿಗೆ ಮೂಲವಿದೆಯೇ? ನದಿ ಎಂದರೆ ಕೇವಲ ಮೂಲವೇ? ಶುರುವಾತಿನಿಂದ ಕೊನೆಯವರೆಗಿನ ಪ್ರತಿಯೊಂದು ನೀರ ಹನಿ ನದಿಯ ಸಂಯೋಜನೆಗೆ ಕಾರಣ. ಮೂಲದಲ್ಲಿಯೇ ನಾವು ಖುಶಿಯನ್ನ ಹುಡುಕುತ್ತೇವೆ ಎನ್ನುವುದು ತಪ್ಪು ತಿಳುವಳಿಕೆ. ನದಿಯ ಯಾವ ಜಾಗದಲ್ಲಿದ್ದರೂ ನೀವು ಖುಶಿಯನ್ನ ಕಂಡುಕೊಳ್ಳಬಹುದು, ಈಗ ನೀವು ನಿಂತಿರುವುದು ಸ್ವಂತ ತಿಳುವಳಿಕೆಯ ನದಿಯ ಮೇಲೆ.