ಬುದ್ಧನನ್ನು ಅನುಸರಿಸಬೇಡಿ! : ಓಶೋ

ಬುದ್ಧ ತನಗೆ ತಾನೇ ಅನನ್ಯ, ವಿಶಿಷ್ಟ. ಅವನನ್ನು ಅನುಸರಿಸುವವರು ಕೂಡ ಅನನ್ಯರಾಗಿರಬೇಕು, ವಿಶಿಷ್ಟರಾಗಿರಬೇಕು, ತಮ್ಮತನವನ್ನ ಕಂಡುಕೊಂಡವರಾಗಿರಬೇಕು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ಬೋಕುಜು ತನ್ನ ನಡೆ ನುಡಿಗಳಿಂದಾಗಿ ಸುತ್ತಮುತ್ತೆಲ್ಲ ಹೆಸರುವಾಸಿಯಾಗಿದ್ದ. ಒಮ್ಮೆ ಬೋಕುಜು ನ ಭೇಟಿಯಾಗಲು ಬಂದಿದ್ದ ಮನುಷ್ಯ ಅವನನ್ನು ಪ್ರಶ್ನೆ ಮಾಡಿದ,

“ ನೀನು ನಿನ್ನ ಗುರುವಿನ ನಡೆ ನುಡಿಯನ್ನ ಅನುಸರಿಸುತ್ತೀಯಾ ?”

“ ಖಂಡಿತ, ನಾನು ನನ್ನ ಮಾಸ್ಟರ್ ನ ನಡೆ ನುಡಿಯನ್ನ ಪರಿಪೂರ್ಣವಾಗಿ ಅನುಸರಿಸುತ್ತೇನೆ” ಬೋಕುಜು, ಆ ಮನುಷ್ಯನ ಪ್ರಶ್ನೆಗೆ ಉತ್ತರಿಸಿದ.

ಬೋಕುಜು ನ ಉತ್ತರ ಕೇಳಿ ಆ ಮನುಷ್ಯ ಅಪ್ರತಿಭನಾದ. ಸುತ್ತ ಮುತ್ತಲಿನ ಎಲ್ಲರಿಗೂ ಗೊತ್ತಿತ್ತು, ಬೋಕುಜು ತನ್ನ ಗುರುವಿನ ಮಾತುಗಳನ್ನ ಯಾವತ್ತೂ ಅನುಸರಿಸುತ್ತಿರಲಿಲ್ಲ ಎನ್ನುವುದು.

“ನೀನು ನನಗೆ ಮೋಸ ಮಾಡುತ್ತಿದ್ದೀಯ. ನಿನ್ನ ಬಲ್ಲ ಎಲ್ಲರಿಗೂ ಗೊತ್ತು ನೀನು ನಿನ್ನ ಗುರುವಿನ ಒಂದು ಮಾತನ್ನೂ ಪಾಲಿಸುವುದಿಲ್ಲ ಎನ್ನುವುದು. ಈ ವಿಷ್ಯ ನಿನಗೂ ಗೊತ್ತು ಆದರೂ ನೀನು ನನಗೆ ಸುಳ್ಳು ಹೇಳುತ್ತಿದ್ದೀಯ. ನಿನ್ನ ಮಾತಿನ ಅರ್ಥ ಏನು ?”
ಆ ಮನುಷ್ಯ ಮಾಸ್ಟರ್ ಬೋಕುಜು ನನ್ನು ಸಿಟ್ಟಿನಿಂದ ಪ್ರಶ್ನೆ ಮಾಡಿದ.

“ ಅದು ಹಾಗಲ್ಲ ನನ್ನ ಮಾಸ್ಟರ್ ಯಾವತ್ತೂ ತನ್ನ ಗುರುವನ್ನು ಅನುಸರಿಸಲಿಲ್ಲ, ಆದ್ದರಿಂದ ನಾನು ನನ್ನ ಗುರುವನ್ನ ಅನುಸರಿಸುತ್ತಿಲ್ಲ. ನನ್ನ ಮಾಸ್ಟರ್ ಇಂದ ನಾನು ಕಲಿತದ್ದು ಇದನ್ನೇ, ಯಾರನ್ನೂ ಅನುಸರಿಸದಿರುವುದು, ನಾನು ನನ್ನ ಹಾಗೆ ಇರುವುದು.” ಬೋಕುಜು ಆ ಮನುಷ್ಯನಿಗೆ ತನ್ನ ಮಾತನ್ನು ವಿವರಿಸಿ ಹೇಳಿದ.

ಬುದ್ಧನನ್ನು ನಾವು ಅನುಸರಿಬೇಕಾಗಿರುವುದು ಹೀಗೆ. ಬುದ್ಧ ತನಗೆ ತಾನೇ ಅನನ್ಯ, ವಿಶಿಷ್ಟ. ಅವನನ್ನು ಅನುಸರಿಸುವವರು ಕೂಡ ಅನನ್ಯರಾಗಿರಬೇಕು, ವಿಶಿಷ್ಟರಾಗಿರಬೇಕು, ತಮ್ಮತನವನ್ನ ಕಂಡುಕೊಂಡವರಾಗಿರಬೇಕು.

ಬುದ್ಧ ಯಾರನ್ನೂ ಅನುಸರಿಸಲಿಲ್ಲ. ಎಲ್ಲ ಅನುಕರಣೆಯನ್ನ, ಸಿದ್ಧಾಂತಗಳನ್ನ, ಪರಂಪರೆ, ಸಂಪ್ರದಾಯಗಳನ್ನ ಕಳಚಿಟ್ಟ ಕ್ಷಣದಲ್ಲಿಯೇ ಬುದ್ಧನಿಗೆ ಜ್ಞಾನೋದಯವಾಯಿತು. ಅವನು ತನ್ನ ಸಹಜ ಪ್ರಕೃತಿಯನ್ನ ಮರಳಿ ಪಡೆದುಕೊಂಡಾಗ, ಎಲ್ಲ ದಾರಿಗಳನ್ನು ನಿರಾಕರಿಸಿದಾಗ, ಎಲ್ಲ ಕಲಿಕೆ, ಎಲ್ಲ ಸಿದ್ಧಾಂತಗಳನ್ನು ತಿರಸ್ಕರಿಸಿದಾಗ ಅವನಿಗೆ ಜ್ಞಾನೋದಯ ಸಾಧ್ಯವಾಯಿತು. ನೀವು ಬುದ್ಧನನ್ನು ಅನುಸರಿಸುತ್ತಿದ್ದೀರೆಂದರೆ, ನೀವು ಅವನನ್ನು ಅನುಸರಿಸುತ್ತಿಲ್ಲ! ಇದು ದ್ವಂದ್ವ ಅಲ್ಲ, ಹಾಗೆ ಅನಿಸುತ್ತದೆ ಅಷ್ಟೇ. ನೀವು ಬುದ್ಧನನ್ನ ಸಂಪ್ರದಾಯ ಎನ್ನುವಂತೆ, ನಿತ್ಯಕರ್ಮ ಎನ್ನುವಂತೆ ಅನುಸರಿಸುತ್ತಿದ್ದೀರಾದರೆ, ಅವನ ಮಾತುಗಳನ್ನ ಮತ್ತೆ ಮತ್ತೆ ಹೇಳುತ್ತ ಅನುಕರಣೆ ಮಾಡುತ್ತಿದ್ದೀರಾದರೆ, ನಿಜ ಅರ್ಥದಲ್ಲಿ ನೀವು ಬುದ್ಧನಿಂದ ದೂರ ದೂರ ಹೋಗುತ್ತಿದ್ದೀರಿ. ಬುದ್ಧನನ್ನ ಅನುಸರಿಸಬೇಡಿ, ಅರ್ಥ ಮಾಡಿಕೊಳ್ಳಿ, ಆಗ ನಿಮಗೆ ಸೂಕ್ಷ್ಮವಾಗಿ ನಿಜವಾದ ಅರ್ಥದಲ್ಲಿ ಬುದ್ಧ ದಾರಿಯಾಗುತ್ತಾನೆ. ಇದು ಅನುಕರಣೆ ಅಲ್ಲ, ನಿಮ್ಮ ಆಂತರ್ಯಕ್ಕೆ ಸಂಬಂಧಿಸಿದ್ದು.

Leave a Reply