ಬಯಕೆ ಆರೋಗ್ಯಕರ, ಸಹಜ ಪ್ರತಿಕ್ರಿಯೆ : ಜಿಡ್ಡು ಚಿಂತನೆ

ನಾನು ಗಮನಿಸಿದಂತೆ ಬಯಕೆ ಹುಟ್ಟುವುದು ಒಂದು ಪ್ರತಿಕ್ರಿಯೆಯಾಗಿ, ಇದು ಬಹಳ ಆರೋಗ್ಯಕರವಾದದ್ದು, ತುಂಬ ಸಹಜವಾದದ್ದು; ಹೀಗಾಗದಿದ್ದರೆ ನಾನು ಹೆಣವಾಗಿರಬೇಕಿತ್ತು…! ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ: ಚಿದಂಬರ ನರೇಂದ್ರ

ನನ್ನ ಬದುಕಿನಲ್ಲಿ ಯಾಕೆ ಬಯಕೆಗಳು ಇಷ್ಟೊಂದು ಪ್ರಾಧಾನ್ಯತೆಯನ್ನ, ಇಷ್ಟೊಂದು ಪ್ರಾಬಲ್ಯತೆಯನ್ನ ಗಳಿಸುತ್ತಿವೆ ಎನ್ನುವುದನ್ನ ನಾನು ಮೊದಲು ಕಂಡುಕೊಳ್ಳಬೇಕು. ಈ ಬಯಕೆಗಳು ಒಳ್ಳೆಯವು ಆಗಿರಬಹುದು ಕೆಟ್ಟದ್ದೂ ಆಗಿರಬಹುದು ಆದರೆ ಇವು ಯಾಕೆ ನನ್ನ ಬದುಕನ್ನ ಆಳುತ್ತಿವೆ ಎನ್ನುವುದನ್ನ ನಾನು ತಿಳಿದುಕೊಳ್ಳಬೇಕು.

ನಾನು ಗಮನಿಸಿದಂತೆ ಬಯಕೆ ಹುಟ್ಟುವುದು ಒಂದು ಪ್ರತಿಕ್ರಿಯೆಯಾಗಿ, ಇದು ಬಹಳ ಆರೋಗ್ಯಕರವಾದದ್ದು, ತುಂಬ ಸಹಜವಾದದ್ದು; ಹೀಗಾಗದಿದ್ದರೆ ನಾನು ಹೆಣವಾಗಿರಬೇಕಿತ್ತು. ಒಂದು ಸುಂದರ ವಸ್ತುವನ್ನ ನೋಡಿದಾಗ “ ಓಹ್ ದೇವರೇ ಈ ಸೌಂದರ್ಯ ನನ್ನದಾಗಿರಬಾರದಿತ್ತೆ” ಎಂದನಿಸುವುದು ಸಹಜ, ಹೀಗನಿಸದಿದ್ದರೆ ನಾನು ಸತ್ತು ಹೋಗಿದ್ದೆನೆ ಎಂದರ್ಥ. ಆದರೆ ನಾವು ಇಷ್ಟಕ್ಕೆ ಇದನ್ನು ಮುಗಿಸಿಬಿಡಲು ನಮ್ಮ ಮೈಂಡ್ ಒಪ್ಪುವುದಿಲ್ಲ, ಈ ಬಯಕೆಯನ್ನ ನಿರಂತರವಾಗಿ ಹಿಂಬಾಲಿಸುವುದು ನೋವಿಗೆ ಕಾರಣವಾಗುತ್ತದೆ. ಇದು ನನ್ನ ಸಮಸ್ಯೆ – ಸುಖದ ಹಿಂದೆ ನೋವು ನೆರಳಿನಂತೆ ಬರುತ್ತದೆ.

ಸುಂದರವಾದ ಹೆಣ್ಣೊಬ್ಬಳನ್ನು (ಅಥವಾ ಗಂಡು) ನೋಡಿದಾಗ, ಆಕೆ ನಮಗೆ ಚೆಲುವೆ ಅನಿಸಿರುವಾಗಲೂ “ ಇಲ್ಲ ಇವಳು ಚೆಲುವೆಯಲ್ಲ” ಎನ್ನುವುದು ಅಸಂಗತವಾಗುತ್ತದೆ. ಆ ಹೆಣ್ಣು ಸುಂದರಿ ಎನ್ನುವುದು ನಮಗೆ ವಾಸ್ತವ ಅನಿಸಿರುವಾಗ, ಈ ಸುಖದ ಮುಂದುವರಿಕೆಗೆ ಯಾವುದು ಕಾರಣವಾಗುತ್ತದೆ? ಖಂಡಿತ ನಮ್ಮ ಆಲೋಚನೆಗಳು, ಈ ಕುರಿತಾದ ನಮ್ಮ ಮುಂದುವರೆಯುತ್ತಿರುವ ಆಲೋಚನೆಗಳು.

ನಾನು ಯೋಚಿಸುತ್ತಿದ್ದೆನೆ ಎಂದರೆ ಆ ವಸ್ತು – ವಿಶೇಷದೊಂದಿಗೆ ನಾನು ನೇರವಾದ ಕ್ರಿಯಾತ್ಮಕ ಸಂಬಂಧದಲ್ಲಿ ಇಲ್ಲ ಎನ್ನುವುದು ಸ್ಪಷ್ಟ, ಇದು ಬಯಕೆ. ಆದರೆ ಆಲೋಚನೆ ಈ ಬಯಕೆಯನ್ನು ತನ್ನ ಪರಿಧಿಯ ಕೇಂದ್ರವಾಗಿಸಿಕೊಂಡು ಮತ್ತಷ್ಟು ಹಿಗ್ಗಿಸುತ್ತದೆ. ಆಲೋಚನೆ, ಬಯಕೆಗೆ ಬಣ್ಣ, ರೂಪ, ಜೀವ, ವಿಚಾರ ತುಂಬಿ ಜೀವಂತ ಮಾಡುತ್ತದೆ. ಒಮ್ಮೆ ಜೀವಂತವಾದ ಮೇಲೆ ಬಯಕೆ ಬೆಳೆಯುತ್ತಲೇ ಹೋಗುತ್ತದೆ.

ಆಗ ಆಲೋಚನೆ, “ ದಯವಿಟ್ಟು ಈ ವಸ್ತುವನ್ನ , ಈ ವ್ಯಕ್ತಿಯನ್ನ ನಿನ್ನದಾಗಿಸಿಕೋ, ಇದು ನಿನ್ನ ಬೆಳವಣಿಗೆಯ ಸೂಚನೆ, ಇದು ಮುಖ್ಯ ಇದು ಅಮುಖ್ಯ, ಇದು ನಿನ್ನ ಬದುಕಿಗೆ ಅನಿವಾರ್ಯ, ಇದು ಅನಿವಾರ್ಯ ಅಲ್ಲ” ಎಂದೆಲ್ಲ ಒತ್ತಾಯ ಮಾಡತೊಡಗುತ್ತದೆ.

ಆದರೆ ನಾನು ಒಂದು ಚೆಲುವನ್ನು ಕಂಡಾಗ ಅದನ್ನು ಒಮ್ಮೆ ಬಯಸಿ, ಆಲೋಚನೆಯ ಕೈಗೆ ಈ ಬಯಕೆಯನ್ನು ವಹಿಸಿಕೊಡದೇ, ಅಷ್ಟಕ್ಕೆ ಮುಗಿಸಿಬಿಡುವುದು ಅಸಾಧ್ಯವೆನಲ್ಲ.

Leave a Reply