ಮೌನ ಮುರಿದ ಝೆನ್ ಸನ್ಯಾಸಿಗಳು : ಓಶೋ ವ್ಯಾಖ್ಯಾನ

ಈ ಪ್ರತಿಯೊಂದು ಕಾರಣವೂ ನಮ್ಮ ಧೃಡ ನಿಶ್ಚಯಕ್ಕೆ, ನಮ್ಮ ಅಂತರಂಗದ ಪ್ರಯಾಣಕ್ಕೆ ಸದಾ ಅಡ್ಡಗಾಲು ; ಏಕಾಗ್ರತೆ ಇಲ್ಲದಿರುವುದು (distraction), ಸರಿ ತಪ್ಪುಗಳ ನಿರ್ಣಯಕ್ಕೆ ಮುಂದಾಗುವುದು (judgement), ಕೋಪ (anger), ಮತ್ತು ಅಭಿಮಾನ (pride)… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಾಲ್ವರು ಸನ್ಯಾಸಿಗಳು ಎರಡು ವಾರಗಳ ಮಟ್ಟಿಗೆ ಒಂದೇ ಒಂದು ಮಾತನಾಡದೇ ಮೌನವ್ರತ ಕೈಗೊಳ್ಳುವ ಧೃಡ ನಿಶ್ಚಯ ಮಾಡಿದರು. ಅವರು ಬಹಳ ಉತ್ಸಾಹದಿಂದ ಮೌನ ವ್ರತ ಶುರು ಮಾಡಿದರು. ಒಂದು ಕ್ಯಾಂಡಲ್ ಹಚ್ಚಿಕೊಂಡು ಅದರ ಸುತ್ತ ನಾಲ್ವರೂ ಕುಳಿತುಕೊಂಡು ಮೌನವ್ರತ ಆರಂಭಿಸಿದರು. ಮೊದಲ ದಿನ ಒಬ್ಬರೂ ಒಂದು ಮಾತೂ ಆಡಲಿಲ್ಲ. ರಾತ್ರಿ ಸರಿಹೊತ್ತಿನಲ್ಲಿ ಕ್ಯಾಂಡಲ್ ನಿಧಾನವಾಗಿ ಸಣ್ಣಗಾಗುತ್ತ ಕೊನೆಗೊಮ್ಮೆ ಜೋರಾಗಿ ಉರಿದು ಆರಿಹೋಯಿತು.

ಇದನ್ನು ಗಮನಿಸಿದ ಒಬ್ಬ ಸನ್ಯಾಸಿ ಆತಂಕದಿಂದ ಕೂಗಿಕೊಂಡ, “ ಓಹ್ ಕ್ಯಾಂಡಲ್ ಆರಿಹೋಯಿತು.”

“ನಾವು ಮೌನ ವ್ರತದಲ್ಲಿದ್ದೇವೆ, ಮಾತನಾಡಬಾರದೆಂಬುದು ನಿನಗೆ ನೆನಪಿಲ್ಲವೆ?” ಇನ್ನೊಬ್ಬ ಸನ್ಯಾಸಿ, ಮೊದಲ ಸನ್ಯಾಸಿಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ.

ಈ ಇಬ್ಬರು ಸನ್ಯಾಸಿಗಳ ಮಾತಿನಿಂದ ಮೂರನೇಯ ಸನ್ಯಾಸಿಗೆ ಕಿರಿಕಿರಿಯಾಯ್ತು, ಅವನು ಕೊಂಚ ಸಿಟ್ಟಿನಿಂದ ಮಾತನಾಡಿದ, “ ಏನಾಗಿದೆ ನಿಮಗಿಬ್ಬರಿಗೂ ? ಯಾಕೆ ನೀವು ಮೌನ ವ್ರತ ಮುರಿದಿರಿ ?”

ನಾಲ್ಕನೇಯ ಸನ್ಯಾಸಿ ಖುಶಿಯಿಂದ ಚೀರಿದ, “ವಾಹ್! ನೀವು ಮೂವರೂ ಮಾತನಾಡಿದಿರಿ, ನಾನೊಬ್ಬನೇ ಮಾತನಾಡಲಿಲ್ಲ”

ಪ್ರತಿಯೊಬ್ಬ ಸನ್ಯಾಸಿಯೂ ಒಂದೊಂದು ಕಾರಣಕ್ಕಾಗಿ ಮಾತನಾಡಿ, ತಮ್ಮ ಮೌನ ವ್ರತ ಮುರಿದರು. ಈ ಪ್ರತಿಯೊಂದು ಕಾರಣವೂ ನಮ್ಮ ಧೃಡ ನಿಶ್ಚಯಕ್ಕೆ, ನಮ್ಮ ಅಂತರಂಗದ ಪ್ರಯಾಣಕ್ಕೆ ಸದಾ ಅಡ್ಡಗಾಲು ; ಏಕಾಗ್ರತೆ ಇಲ್ಲದಿರುವುದು (distraction), ಸರಿ ತಪ್ಪುಗಳ ನಿರ್ಣಯಕ್ಕೆ ಮುಂದಾಗುವುದು (judgement), ಕೋಪ (anger), ಮತ್ತು ಅಭಿಮಾನ (pride).

ಕ್ಯಾಂಡಲ್ ಆರಿಹೋಗಿದ್ದರಿಂದ ಮೊದಲ ಸನ್ಯಾಸಿಯ ಏಕಾಗ್ರತೆ ಭಂಗವಾಯಿತು. ಅವನಿಗೆ ಯಾವುದು ಮುಖ್ಯ ಎನ್ನುವುದೇ ಮರೆತುಹೋಯಿತು. ಯಾವುದಕ್ಕೂ ಪ್ರತಿಕ್ರಯಿಸದೇ ಮೌನವನ್ನು ಆಚರಿಸುವುದು ತಮ್ಮ ಸಂಕಲ್ಪ ಎನ್ನುವುದನ್ನ, ಕ್ಯಾಂಡಲ್ ಆರಿಹೋಗಿದ್ದರಿಂದ ವಿಚಲಿತನಾದ ಸನ್ಯಾಸಿ ಮರೆತುಬಿಟ್ಟಿದ್ದ.

ಎರಡನೇಯ ಸನ್ಯಾಸಿಗೆ ತಾನು ಮೌನ ಆಚರಿಸುವುದಕ್ಕಿಂತ ಬಾಕಿ ಮೂವರು ಮೌನವೃತದ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎನ್ನುವುದನ್ನ ಗಮನಿಸುವುದೇ ಮುಖ್ಯವಾಗಿತ್ತು. ಅವನು ತಾನು ವೃತ ಮುರಿಯುತ್ತಿದ್ದೇನೆ ಎನ್ನುವುದನ್ನ ಗಮನಿಸದೇ, ಮೊದಲ ಸನ್ಯಾಸಿಯ ತಪ್ಪಿನ ಬಗ್ಗೆ ಟೀಕೆ ಮಾಡಲು ಸಿದ್ಧನಾದ.

ಮೊದಲ ಇಬ್ಬರ ವರ್ತನೆಯಿಂದ ಸಿಟ್ಟಿಗೆದ್ದ ಮೂರನೇಯ ಸನ್ಯಾಸಿ ಆವೇಶದಲ್ಲಿ ಸಿಟ್ಟಿನ ಕೈಗೆ ತನ್ನ ಬುದ್ಧಿಯನ್ನು ಕೊಟ್ಟು ತನ್ನ ಇಡೀ ದಿನದ ಸಾಧನೆಯನ್ನು ಮಣ್ಣುಪಾಲು ಮಾಡಿದ.

ಈ ಮೂವರು ಸನ್ಯಾಸಿಗಳಿಗಿಂತ ತಾನೇ ಹೆಚ್ಚು ಧೃಡ ನಿಶ್ಚಯದವ ಎನ್ನುವ ಆಭಿಮಾನ ನಾಲ್ಕನೇಯ ಸನ್ಯಾಸಿಯಿಂದಲೂ ಮೌನವೃತ ಮುರಿಯಿಸಿತು. ಈ ಮೂವರಿಗಿಂತಲೂ ತಾನು ಶ್ರೇಷ್ಠ ಎನ್ನುವ ಅಹಂ ಅವನನ್ನು ತಪ್ಪು ದಾರಿಗೆಳೆಯಿತು.

ನಾಲ್ಕನೇಯ ಸನ್ಯಾಸಿ ಮಾತನಾಡಿದ್ದಾದರೂ ಏಕೆ? ಅವನು ತನ್ನ ಮೌನವನ್ನು ಮುಂದುವರಿಸಿದ್ದರೆ ತನ್ನ ನಿಶ್ಚಯವನ್ನ ಸಾರ್ಥಕಗೊಳಿಸಿದ ಹಾಗಾಗುತ್ತಿತ್ತು. ಅವನು ಸುಮ್ಮನಿದ್ದುಬಿಟ್ಟಿದ್ದರೆ ಉಳಿದ ಮೂವರು ತಮ್ಮ ಪಾಡಿಗೆ ತಮ್ಮ ವಾದ ವಿವಾದ ಮುಂದುವರೆಸುತ್ತಿದ್ದರು. ಆದರೆ ಕೆಲವರಿಗೆ ತಾವು ಉಳಿದವರಿಂತ ಹೆಚ್ಚಿನ ಸಾಧನ ಮಾಡಿದ್ದಷ್ಟೇ ಸಾಕಾಗುವುದಿಲ್ಲ, ಅವರಿಗೆ ತಮ್ಮ ಸಾಧನೆಯನ್ನು ಇನ್ನೊಬ್ಬರು ಗಮನಿಸಬೇಕು, ತಮ್ಮ ಸಾಧನೆಯನ್ನು ಮೆಚ್ಚಿಕೊಳ್ಳಬೇಕು, ಗೌರವಿಸಬೇಕು ಎನ್ನುವ ಬಯಕೆ. ಅವರದು ಇನ್ನೊಬ್ಬರು ತಮ್ಮ ಸಾಧನೆಯನ್ನ ಗಮನಿಸದಿದ್ದರೆ ತಮ್ಮ ಸಾಧನೆ ವ್ಯರ್ಥ ಎನ್ನುವ ತಿಳುವಳಿಕೆ. ಸಾಧನೆ ಮಾಡಿದ್ದು ಅಲ್ಲ ತಮ್ಮ ಬಹುಮಾನ, ಅದನ್ನ ಇನ್ನೊಬ್ಬರು ಗಮನಿಸುವುದು, ಹೊಗಳುವುದು ಮುಖ್ಯ ಎನ್ನುವುದು ಅವರ ಅನಿಸಿಕೆ.

ನಮಗೆ ನಿಜವಾಗಿಯೂ ಒಂದು ಮಾತನ್ನು ಕೇಳುವುದು ಸಾಧ್ಯವಾದರೆ, ಸರಿ ತಪ್ಪುಗಳ ಯಾವ ನ್ಯಾಯನಿರ್ಣಯವಿಲ್ಲದೆ, ಪ್ರತಿಕ್ರಿಯೆ ನೀಡುವ ಯಾವ ಹುಕಿ ಇಲ್ಲದೆ, ಆ ಮಾತು ನಮ್ಮೊಳಗೆ ಹುಟ್ಟಿಸಬಹುದಾದ ಯಾವ ಸಿಟ್ಟು, ಯಾವ ಅಭಿಮಾನಕ್ಕೂ ಅವಕಾಶ ನೀಡದೆ ಕೇವಲ ಆ ಮಾತನ್ನ ಏಕಾಗ್ರತೆಯಿಂದ ನಾವು ಕೇಳಬಹುದಾದರೆ ನಮಗೆ ಮೌನದ ನಿಜವಾದ ಅರ್ಥದ ಅರಿವಾಗುತ್ತದೆ.

Leave a Reply