ಕುಂಡಲಿನಿ ಶಕ್ತಿ : ಓಶೋ ವ್ಯಾಖ್ಯಾನ

ಪ್ರತಿ ಮನುಷ್ಯನಲ್ಲೂ ಅವನ ಮೂಲಾಧಾರ ಚಕ್ರದಲ್ಲಿ ಮೂರು ಸುತ್ತು ಹಾಕಿಕೊಂಡು ಕುಳಿತಿರುವ ಸರ್ಪವನ್ನ ಅವನ ಧೀಶಕ್ತಿಯ ಮೂಲ ಎಂದು ಸಂಕೇತೀಕರಿಸಲಾಗುತ್ತದೆ. ಹಲವಾರು ಧ್ಯಾನ ಪದ್ಧತಿಗಳ ಮೂಲಕ, ತಂತ್ರ ವಿಜ್ಞಾನದ ಮೂಲಕ ಮೂಲಾಧಾರದಲ್ಲಿ ಕೇಂದ್ರೀಕೃತವಾಗಿರುವ ಶಕ್ತಿಯನ್ನ ಉದ್ದೀಪನಗೊಳಿಸಿ, ಹಲವಾರು ಚಕ್ರ ಕೇಂದ್ರಗಳ ಮೂಲಕ ಸಹಸ್ರಾರವನ್ನು ಮುಟ್ಟಿಸಿದಾಗ ಮನುಷ್ಯ ಸುತ್ತಲಿನ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸುತ್ತಾನೆ ಎಂದು ಸಾಧಕರು ಒಪ್ಪಿಕೊಳ್ಳುತ್ತಾರೆ. ಹೀಗೆ ಸರ್ಪ, ಮನುಷ್ಯನ ಧೀಶಕ್ತಿಯ ಚಲನೆಯ ರೂಪಕವಾಗಿ ಬಳಕೆಯಾಗುತ್ತದೆ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ಈ ಚಿಹ್ನೆಯನ್ನ ನೋಡಿರಬಹುದು, ಇದು ಬಹಳ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಚಿಹ್ನೆ. ಹಾವು ತನ್ನ ಬಾಲಕ್ಕೆ ಬಾಯಿ ಹಾಕಿರುವ ಈ ಚಿಹ್ನೆ ಬಹಳ ಮಹತ್ತರವಾದದ್ದು, ಅನೇಕ ರಹಸ್ಯ ಕಲಿಕಾ ಕೇಂದ್ರಗಳಲ್ಲಿ ಈ ಚಿಹ್ನೆಯನ್ನ ಉಪಯೋಗ ಮಾಡುತ್ತಾರೆ ; ಖಂಡಿತ ಈ ಚಿಹ್ನೆ ಸಾಂಕೇತಿಕವಾದದ್ದು, ಹಲವಾರು ನಿಗೂಢಗಳನ್ನ ತನ್ನೊಳಗೆ ತುಂಬಿಕೊಂಡಿರುವಂಥದು. ಹಾವು ತನ್ನ ಬಾಲಕ್ಕೆ ಬಾಯಿ ಹಾಕುವುದೆಂದರೆ 180 ಡಿಗ್ರೀ ಹೊರಳುವಿಕೆ. ಹಾವು ತನ್ನನ್ನು ತಾನೇ ಸುತ್ತಿಕೊಂಡಿದೆ, ಪ್ರಜ್ಞೆ ತನ್ನನ್ನು ತಾನೇ ಆವರಿಸಿಕೊಂಡಿರುವ ಸಂಕೇತವಾಗಿ, the consciousness has recoiled upon itself.

ಹಾವನ್ನು ಜ್ಞಾನದ ಜಗತ್ತಿನ ಸಂಕೇತವಾಗಿ ಹಲವಾರು ಸಂಸ್ಕೃತಿಗಳಲ್ಲಿ ಬಳಸಲಾಗುತ್ತದೆ. ಜೀಸಸ್ ಹೇಳುವುದನ್ನ ಗಮನಿಸಿದ್ದೀರಾ? “ಹಾವಿನಷ್ಟೇ ಜ್ಞಾನಿಗಳಾಗಿ” ಎನ್ನುತ್ತಾನೆ ಜೀಸಸ್. ಪೂರ್ವದ ದೇಶಗಳಲ್ಲಿ ಹಾವು, ಸರ್ಪ, ಮನುಷ್ಯನ ಒಳಗೆ ಸುಪ್ತ ಶಕ್ತಿಯ ಸಂಕೇತವಾಗಿದೆ. ಇದನ್ನೇ ಭಾರತೀಯ ಯೋಗ ಪದ್ಧತಿಯಲ್ಲಿ ಕುಂಡಲಿನಿ, ಸರ್ಪೆಂಟ್ ಪಾವರ್ ಎಂದು ಗುರುತಿಸಲಾಗುತ್ತದೆ. ಪ್ರತಿ ಮನುಷ್ಯನಲ್ಲೂ ಅವನ ಮೂಲಾಧಾರ ಚಕ್ರದಲ್ಲಿ ಮೂರು ಸುತ್ತು ಹಾಕಿಕೊಂಡು ಕುಳಿತಿರುವ ಸರ್ಪವನ್ನ ಅವನ ಧೀಶಕ್ತಿಯ ಮೂಲ ಎಂದು ಸಂಕೇತೀಕರಿಸಲಾಗುತ್ತದೆ. ಹಲವಾರು ಧ್ಯಾನ ಪದ್ಧತಿಗಳ ಮೂಲಕ, ತಂತ್ರ ವಿಜ್ಞಾನದ ಮೂಲಕ ಮೂಲಾಧಾರದಲ್ಲಿ ಕೇಂದ್ರೀಕೃತವಾಗಿರುವ ಶಕ್ತಿಯನ್ನ ಉದ್ದೀಪನಗೊಳಿಸಿ, ಹಲವಾರು ಚಕ್ರ ಕೇಂದ್ರಗಳ ಮೂಲಕ ಸಹಸ್ರಾರವನ್ನು ಮುಟ್ಟಿಸಿದಾಗ ಮನುಷ್ಯ ಸುತ್ತಲಿನ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸುತ್ತಾನೆ ಎಂದು ಸಾಧಕರು ಒಪ್ಪಿಕೊಳ್ಳುತ್ತಾರೆ. ಹೀಗೆ ಸರ್ಪ, ಮನುಷ್ಯನ ಧೀಶಕ್ತಿಯ ಚಲನೆಯ ರೂಪಕವಾಗಿ ಬಳಕೆಯಾಗುತ್ತದೆ.

ಹಾವು 180 ಡಿಗ್ರೀ ಹೊರಳಿ ತನ್ನ ಬಾಲವನ್ನು ಬಾಯಿಗೆ ಹಾಕಿಕೊಳ್ಳಬಲ್ಲದು ಆದರೆ ನಾಯಿಗೆ ಇದು ಸಾಧ್ಯವಿಲ್ಲ. ನಾಯಿಗಳೂ ಬಾಲವನ್ನು ತಲುಪಲು ಮಾಡುವ ಪ್ರಯತ್ನಗಳನ್ನ ನೀವು ಗಮನಿಸಿರಬಹದು, ನಾಯಿಗಳು ಸತತ ಪ್ರಯತ್ನ ಮಾಡುತ್ತವೆ ಆದರೆ ಯಾವುದೇ ಫಲಶ್ರುತಿಯಿಲ್ಲದೆ. ನಾಯಿ ಹೊರಳಿದಾಗಲೆಲ್ಲ ಬಾಲವೂ ಹೊರಳುತ್ತದೆ, ಬಾಲ ಒಂದು ಪ್ರತ್ಯೇಕ ಭಾಗ ಎಂದುಕೊಂಡಂತೆ ನಾಯಿ ಪ್ರಯತ್ನ ಮಾಡುತ್ತ ಹೋಗುತ್ತದೆ. ಪ್ರಯತ್ನ ಹೆಚ್ಚಾದಂತೆಲ್ಲ ನಾಯಿಯ ಅಸಹನೆಯೂ ಹೆಚ್ಚಾಗುತ್ತ ಹೋಗುತ್ತದೆ. ಕೇವಲ ಹಾವಿಗೆ ಮಾತ್ರ ಹೀಗೆ ತನ್ನ ಬಾಲಕ್ಕೆ ಬಾಯಿ ಹಾಕುವುದು ಸಾಧ್ಯ.

ಜ್ಞಾನೋದಯವೂ (enlightenment) ಹೀಗೆಯೇ, ನಿಮ್ಮ ಒಳಗಿನ ಶಕ್ತಿ ಚಲಿಸಲು ಶುರುಮಾಡಿ ವೃತ್ತವಾಗುತ್ತದೆ.

ಭಗವಂತನಿಗೆ ನೀವು ನಿಷ್ಠರು, ಆದರೆ ದೇವರನ್ನು ನೀವು ಬೇರೆಲ್ಲೂ ಕಾಣಲಾರಿರಿ. ನೀವು ನಿಮ್ಮೊಳಗೆ ಇರುವ ದೇವರನ್ನು ಕಂಡುಕೊಂಡಾಗ, ದೇವರು ನಿಮಗೆ ಎಲ್ಲೆಲ್ಲೂ ಕಾಣತೊಡಗುತ್ತಾನೆ.

Leave a Reply