ನ್ಯೂ ಯಿಯರ್ ರೆಸಲ್ಯೂಶನ್ ಬಗ್ಗೆ ಓಶೋ ಮಾತು… | ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಸಂಕಲ್ಪ, ಕೇವಲ ಈ ರೆಸಲೂಷನ್ ಮಾತ್ರ ನಮ್ಮ ಹೊಸ ವರ್ಷದ ಸಂಕಲ್ಪವಾಗಲಿ. ಎಲ್ಲ ರೆಸಲೂಷನ್ ಗಳು ನನ್ನ ಭವಿಷ್ಯಕ್ಕೆ ನಿರ್ಬಂಧಗಳನ್ನು ಹಾಕುವುದರಿಂದ ಈ ಹೊಸವರ್ಷಕ್ಕೆ ಯಾವ ರೆಸಲೂಷನ್ ಗಳನ್ನೂ ಹಾಕಿಕೊಳ್ಳಬೇಡಿ. ಎಲ್ಲ ರೆಸಲೂಷನ್ ಗಳು ಒಂದು ರೀತಿಯ ಬಂದೀಖಾನೆಯಂತೆ, ನಾಳೆಗಾಗಿ ನೀವು ಇವತ್ತು ನಿರ್ಧಾರ ಮಾಡುತ್ತಿರುವಿರಾದರೆ ನೀವು ನಾಳೆಯನ್ನು ನಾಶ ಮಾಡಿಕೊಂಡಂತೆ.
ನಾಳೆಗೆ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಿ. ಅದು ತನ್ನ ವಿಜೃಂಭಣೆಯಲ್ಲಿ, ತನ್ನ ಸಂಭ್ರಮದಲ್ಲಿ ಬಂದು ನಿಮ್ಮನ್ನು ಸೇರಲಿ. ನಾಳೆ ತನ್ನ ಇಷ್ಟದ ಹೊಸ ಹೊಸ ಉಡುಗೊರೆಗಳೊಂದಿಗೆ ನಿಮ್ಮನ್ನು ಎದುರುಗೊಳ್ಳಲಿ.
ರೆಸಲೂಷನ್ ಎಂದರೆ ಕೇವಲ ಒಂದು ಸಂಗತಿಯನ್ನು ಮಾತ್ರ ಸಾಧಿಸಿಕೊಳ್ಳುವಲ್ಲಿ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಇನ್ವೆಸ್ಟ್ ಮಾಡುವ ಸಂಕಲ್ಪ. ಮತ್ತು ಇದು ಧೃಡವಾಗಿದ್ದರೆ ಬದುಕು ನಮಗೆ ಪ್ರತಿದಿನ ಕೊಡಮಾಡುವ ಹೊಸ ಹೊಸ ಸವಾಲುಗಳಿಗೆ ಸಂತೋಷಗಳಿಗೆ ಮುಖತಿರುಗಿಸಿಕೊಳ್ಳಬೇಕಾಗುತ್ತದೆ. ರೆಸಲೂಷನ್ ಎಂದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಬೇಕೆಂದು ನೀವು ಬಯಸುತ್ತೀರಿ ಪೂರ್ವದಲ್ಲಿ ಅಲ್ಲ. ಅಕಸ್ಮಾತ್ ಸೂರ್ಯ ಏನಾದರೂ ಪೂರ್ವದಲ್ಲಿ ಹುಟ್ಟಿದರೆ ನೀವು ನಿಮ್ಮ ಕಿಟಕಿಯ ಬಾಗಿಲು ತೆರೆಯುವುದಿಲ್ಲ. ನೀವು ನಿಮ್ಮ ಪಶ್ಚಿಮದ ಕಿಟಕಿಯ ಬಾಗಿಲುಗಳನ್ನು ತೆರೆದುಕೊಂಡು ಸೂರ್ಯನಿಗಾಗಿ ಕಾಯುತ್ತ ಕುಳಿತಿರುತ್ತೀರಿ.
ರೆಸಲೂಷನ್ ಎಂದರೇನು? ರೆಸಲೂಷನ್ ಒಂದು ಸಂಘರ್ಷ, ರೆಸಲೂಷನ್ ಒಂದು ಅಹಂ. ರೆಸಲೂಷನ್ ಎಂದರೆ “ನಾನು spontaneously ಬದುಕುವುದಿಲ್ಲ” ಎಂದು ಪ್ರಮಾಣ ಮಾಡಿದ ಹಾಗೆ. ಮತ್ತು ನೀವು spontaneously ಬದುಕುವುದಿಲ್ಲವಾದರೆ, ನೀವು ಬದುಕನ್ನ ಬಾಳುತ್ತಿಲ್ಲ ಕೇವಲ ಪ್ರಿಟೆಂಡ್ ಮಾಡುತ್ತಿದ್ದೀರಿ.
ಈ ಹೊಸವರ್ಷಕ್ಕೆ ಕೇವಲ ಈ ಒಂದು ರೆಸಲೂಷನ್ ಮಾತ್ರ ನಿಮ್ಮದಾಗಲಿ, “ ನಾನು ಯಾವ ರೆಸಲೂಷನ್ ಗಳನ್ನೂ ಮಾಡುವುದಿಲ್ಲ.” ಎಲ್ಲ ರೆಸಲೂಷನ್ ಗಳನ್ನೂ ಡ್ರಾಪ್ ಮಾಡಿ, ಬದುತನ್ನು ಸಹಜವಾಗಿ ಸ್ವಾಭಾವಿಕವಾಗಿ ಎದುರುಗೊಳ್ಳಿ. ಇರುವ ಗೋಲ್ಡನ್ ರೂಲ್ ಒಂದೇ, ಅದು ಏನೆಂದರೆ “ ಯಾವ ಗೋಲ್ಡನ್ ರೂಲ್ಗಳೂ ಇಲ್ಲ” ಎನ್ನುವುದು.
ಒಂದು ದಿನ ಮಸಿದಿಗೆ ಹೋಗುವಾಗ ಒಬ್ಬ ಅಪರಿಚಿತ ತನ್ನನ್ನು ಹಿಂಬಾಲಿಸುತ್ತಿರುವುದನ್ನ ಮುಲ್ಲಾ ನಸ್ರುದ್ದೀನ ಗಮನಿಸಿದ. ಆತ ತನ್ನ ಚಪ್ಪಲಿ ಕದಿಯಲು ಬಂದಿದ್ದಾನೆಂದು ಮುಲ್ಲಾನಿಗೆ ಮನವರಿಕೆಯಾಯಿತು.
ಮಸಿದಿಯ ಒಳಗೆ ಹೊಕ್ಕ ಮುಲ್ಲಾ, ಚಪ್ಪಲಿ ಹಾಕಿಕೊಂಡೇ ಪ್ರಾರ್ಥನೆ ಮಾಡಲು ಶುರು ಮಾಡಿದ. ಇದನ್ನು ಗಮನಿಸಿದ ಆ ಅಪರಿಚಿತ ಮುಲ್ಲಾನನ್ನು ಪ್ರಶ್ನಿಸಿದ,
“ಇದು ಧರ್ಮ ವಿರೋಧಿ ಕೆಲಸ ಅಲ್ಲವೆ? ಹೀಗೆ ಪ್ರಾರ್ಥನೆ ಮಾಡಿದರೆ ನೀನು ಯಾವ ಪಾಪವನ್ನೂ ಕಳೆದುಕೊಳ್ಳುವುದಿಲ್ಲ, ದೇವರು ನಿನ್ನನ್ನು ಮೆಚ್ಚುವುದಿಲ್ಲ, ನಾಳಿನ ನಿನ್ನ ಬದುಕು ಸಂಕಟಮಯವಾಗಿರುತ್ತದೆ”
“ ನೀನು ಹೇಳೋದು ಸರಿ ಇರಬಹುದು ಆದರೆ ಈಗ, ಇವತ್ತು ನನಗೆ ನನ್ನ ಚಪ್ಪಲಿ ಕಳೆದುಕೊಳ್ಳಗಿರುವುದು ಆದ್ಯತೆಯ ವಿಷಯವಾಗಿದೆ.
ಮುಲ್ಲಾ ಉತ್ತರಿಸಿದ.