ಬೇರು ಕತ್ತರಿಸುವುದು ಕಲೆಯೇ?: ಓಶೋ ವ್ಯಾಖ್ಯಾನ

ಜನ ಇದನ್ನು ಕಲೆ ಎನ್ನುತ್ತಾರೆ. ಆದರೆ ಇದು ಒಂದು ಶಿಸ್ತುಬದ್ಧ ಕೊಲೆ. ಮರಗಳ ವಿರುದ್ಧ ಮನುಷ್ಯ ಸತತವಾಗಿ ಮಾಡುತ್ತಿರುವ ಅಪರಾಧ. ಮತ್ತು ಇದೇ ರೀತಿಯ ಅಪರಾಧವನ್ನ ಮನುಷ್ಯ ಕುಲದ ವಿರುದ್ಧವೂ ಮಾಡಲಾಗಿದೆ, ಅವರ ಬೇರುಗಳನ್ನ ಕತ್ತರಿಸಿಬಿಡಲಾಗಿದೆ… – ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ

ಜಪಾನಿನಲ್ಲಿ ಒಂದು ಪುರಾತನ ಕಲೆಯನ್ನ ಪ್ರ್ಯಾಕ್ಟೀಸ್ ಮಾಡುತ್ತಾರೆ, ಅದನ್ನು ನಾನು “ಕಲೆ” ಎನ್ನುವುದಿಲ್ಲ ಕೊಲೆ ಎನ್ನುತ್ತೇನೆ. ಆದರೆ ಜಗತ್ತಿನ ಎಲ್ಲಕಡೆಯಿಂದ ಜನ ಇವನ್ನು ನೋಡಲು ಬರುತ್ತಾರೆ. ಇವು 500 ವರ್ಷ ಹಳೆಯ ಮರಗಳು ಆದರೆ ಇವುಗಳ ಎತ್ತರ ಕೇವಲ 6 ಇಂಚು. ಇವು ಕೇವಲ 6 ಇಂಚು ಎತ್ತರವಿದ್ದರೂ ಈ ಮರಗಳು ಖಂಡಿತವಾಗಿ 500 ವರ್ಷ ಹಳೆಯವು. ಈ ಮರಗಳ ಕಾಂಡಕ್ಕೆ, ಈ ಮರಗಳ ಎಲೆಗಳಿಗೆ 500 ವರ್ಷ ವಯಸ್ಸಾಗಿದೆ. ಕೇವಲ ಈ ಮರಗಳ ಎತ್ತರವನ್ನ ಮಾತ್ರ ನಿಯಂತ್ರಿಸಲಾಗಿದೆ.

ಈ ಸಂಗತಿಯ ಹಿಂದಿನ ತಂತ್ರ ಏನೆಂದರೆ ಈ ಮರಗಳನ್ನು ಬೆಳೆಸುವ ಕುಂಡಗಳಿಗೆ ತಳ ಇಲ್ಲದಿರುವುದು. ಈ ಮರಗಳನ್ನು ಸಾಕುವ ಪ್ರತಿ ಪೀಳಿಗೆಯ ಜನ ಮಾಡುವ ಕೆಲಸವೇನೆಂದರೆ ಅವರು ಈ ಮರಗಳ ಬೇರುಗಳನ್ನ ಕತ್ತರಿಸುತ್ತಾರೆ. ಅವರು ಮರದ ಬೇರಗಳು ಬೆಳೆಯಲು, ಆಳವಾಗಿ ಹರಡಿಕೊಳ್ಳಲು ಆಸ್ಪದವನ್ನೇ ಕೊಡುವುದಿಲ್ಲ. ಆ ಮರಗಳ ಕುಂಡಗಳಿಗೆ ತಳವೇ ಇಲ್ಲ, ಇದ್ದಿದ್ದರೆ ಏನೋ ಮಾಡಿ ಮರಗಳು ಭೂಮಿಯೊಳಗೆ ತಮ್ಮ ಬೇರುಗಳನ್ನು ಚಾಚಿಕೊಂಡು ಬಿಡುತ್ತಿದ್ದವು. ಮರದ ಬೇರುಗಳು ಹಳೆಯದಾಗುತ್ತ ಹೋದಂತೆ ಮರಗಳು ಹಳೆಯದಾಗುತ್ತ ಹೋಗುತ್ತವೆ. ಆದರೆ ಬೇರುಗಳಿಗೆ ನೆಲದೊಳಗೆ ಆಳವಾಗಿ ಹರಡಿಕೊಳ್ಳುವ ಅವಕಾಶವಿಲ್ಲವಾದ್ದರಿಂದ, ಮರ ಎತ್ತರಕ್ಕೆ ಬೆಳೆಯುವುದೇ ಇಲ್ಲ. ಜನ ಇದನ್ನು ಕಲೆ ಎನ್ನುತ್ತಾರೆ. ಆದರೆ ಇದು ಒಂದು ಶಿಸ್ತುಬದ್ಧ ಕೊಲೆ. ಮರಗಳ ವಿರುದ್ಧ ಮನುಷ್ಯ ಸತತವಾಗಿ ಮಾಡುತ್ತಿರುವ ಅಪರಾಧ. ಮತ್ತು ಇದೇ ರೀತಿಯ ಅಪರಾಧವನ್ನ ಮನುಷ್ಯ ಕುಲದ ವಿರುದ್ಧವೂ ಮಾಡಲಾಗಿದೆ, ಅವರ ಬೇರುಗಳನ್ನ ಕತ್ತರಿಸಿಬಿಡಲಾಗಿದೆ. ಅವರು ಸಹಜವಾಗಿ ಬೆಳೆಯಬೇಕಾದ ಎತ್ತರವನ್ನು ಸಾಧಿಸಿಕೊಳ್ಳಲಿಕ್ಕೆ ಅವಕಾಶ ನಿರಾಕರಿಸಲಾಗಿದೆ.

ಮನುಷ್ಯನ ಬುದ್ಧಿಶಕ್ತಿಗೆ (intellect) ಅಪಾರ ಸಾಧ್ಯತೆಗಳು. ಆದರೆ ಅದರ ಬೇರುಗಳನ್ನು ಕತ್ತರಿಸಿಬಿಡಲಾಗಿದೆ, ಅದನ್ನು ಪ್ರಕೃತಿಯಿಂದ ಬೇರ್ಪಡಿಸಲಾಗಿದೆ, ಆ ಬೇರುಗಳು ಹರಡಿಕೊಂಡು ಆಳವಾಗಿ ಬೆಳೆಯಲು ಅವಕಾಶ ನಿರಾಕರಿಸಲಾಗಿದೆ. ಆದ್ದರಿಂದಲೇ ಮೇಲಿಂದ ಮೇಲೆ, ಮನುಷ್ಯರೊಳಗೆ ಅವರ intellect ನ ಒತ್ತಡ ಹೆಚ್ಚಾದಾಗಲೆಲ್ಲ, ಅವರ ಆಲೋಚನೆಗಳು ಅಸಂಖ್ಯವಾಗಿ ಅವುಗಳಿಗೆ ಹರಡಿಕೊಳ್ಳಲು ಅವಕಾಶ ಸಾಧ್ಯವಾಗದಾಗಲೆಲ್ಲ ಅವರು ಹುಚ್ಚನಾಗುತ್ತಾರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಆದ್ದರಿಂದಲೇ ಮನುಷ್ಯ ತನ್ನ ಬೇರುಗಳಿಗೆ ಅವಕಾಶ ಮಾಡಿಕೊಡಲು ಹಲವಾರು ಹುಡುಕಾಟಗಳನ್ನು ಕೈಗೊಂಡಿದ್ದಾನೆ, ಕಲೆಯ ಮೂಲಕ, ಶ್ರಮದ ಮೂಲಕ, ಧ್ಯಾನದ ಮೂಲಕ, ಪ್ರೀತಿಯ ಮೂಲಕ ತನ್ನ intellect ನ ಒತ್ತಡಗಳಿಗೆ ಒಂದು ರಿಲೀಫ್ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಇದ್ಯೂವುದೂ ಅವನಿಗೆ ಸಾಧ್ಯವಾಗದಾಗ ಅವನು ವಿನಾಶಕ್ಕೆ ಕೈ ಹಾಕುತ್ತಾನೆ.


The Osho Upanishad
Master And Disciple, A Journey Hand In Hand

Leave a Reply