ಬಿಟ್ಟು ಬಿಡುವಿಕೆ: ಓಶೋ ವ್ಯಾಖ್ಯಾನ

ಸೋಲನ್ನು ಮುಚ್ಚಿಡಲು ನೀವು “ಬಿಟ್ಟು ಬಿಡುವಿಕೆ” ಯ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಈ “ಬಿಟ್ಟು ಬಿಡುವಿಕೆ” ನೈಜವಲ್ಲ, ನಕಲಿ. ನೈಜ ಬಿಟ್ಟು ಬಿಡುವಿಕೆ ಹೋರಾಟದ ವಿರುದ್ಧ ಇರುವುದಲ್ಲ, ನೈಜ ಬಿಟ್ಟು ಬಿಡುವಿಕೆ ಹೋರಾಟದ ಗೈರು ಹಾಜರಿ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ನಿನ್ನ ದುಃಖಕ್ಕೆ
ಪರಿಹಾರವೇ ಇಲ್ಲ ಎನ್ನುವುದನ್ನ ಕಂಡುಕೊಂಡಾಗಲೇ
ನೀನು ಪರಮ ಸುಖಿ.

ತಲೆಬಾಗಿ ಹೂಂ ಗುಡುವುದಕ್ಕೂ,
ತಲೆಯೆತ್ತಿ ಹೂಂ ಗುಡುವುದಕ್ಕೂ ಏನು ವ್ಯತ್ಯಾಸ?
ಗೆಲುವು, ಸೋಲುಗಳ ನಡುವೆ?
ಅವರ ಹೂಂ, ನಿನ್ನ ಹೂಂ ಆಗಲೇಬೇಕೆ?
ಅವರು ಉಹೂಂ ಎಂದರೆ, ನೀನೂ ?
ಎಂಥ ನಗೆಪಾಟಲಿನ ಸಂಗತಿ.

ಅವರು ಯುದ್ಧಕ್ಕೆ ಹೊರಟವರಂತೆ ಉತ್ತೇಜಿತರು
ನನಗೆ ಆ ಸಂಭ್ರಮವಿಲ್ಲ
ನಿರ್ಲಿಪ್ತ ನಾನು
ಇನ್ನೂ ನಗು ಕಲಿಯದ ಹಸುಗೂಸು.

ಬೇಕಾದದ್ದು ಇದ್ದೇ ಇದೆ ಎಲ್ಲರ ಬಳಿ
ನಾನೊಬ್ಬನೇ ಬರಿಗೈ ದೊರೆ
ನೂಕಿದಂತೆ ನೂಕಿಸಿಕೊಳ್ಳುವವನು
ಅಪ್ಪಟ ದಡ್ಡ, ಪೂರ್ತಿ ಖಾಲಿ.

ಅವರು ಖಚಿತಮತಿಗಳು, ನಾನು ಮಹಾ ಗೊಂದಲದ ಮನುಷ್ಯ
ಅವರು ಚುರುಕು, ನಾನು ಮಬ್ಬು
ಅವರಿಗೋ ಒಂದು ಉದ್ದೇಶ
ನಾನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡವನು
ಅಲೆ ಕರೆದುಕೊಂಡು ಹೋದಲ್ಲಿ, ಗಾಳಿ ಬೀಸಿದ ದಿಕ್ಕಿನಲ್ಲಿ
ಹರಿದು ಹೋಗುವವನು

ಎಲ್ಲರಂಥವನಲ್ಲ ನಾನು
ಸೀದಾ ಮಹಾ ಮಾಯಿಯ ಮೊಲೆಗೆ
ಬಾಯಿ ಇಟ್ಟವನು.

~ ಲಾವೋತ್ಸೇ

ಹೋರಾಟ ಮಾಡುವುದೋ ಅಥವಾ ಬಿಟ್ಟು ಬಿಡುವುದೋ ; ಇದು ಕೇವಲ ನಿಮ್ಮ ಪ್ರಶ್ನೆ ಮಾತ್ರ ಅಲ್ಲ ಪ್ರತಿಯೊಬ್ಬರ ಪ್ರಶ್ನೆ ಕೂಡ, – to fight or to let go ?

ಆದರೆ ನಿಮ್ಮ “ಬಿಟ್ಟು ಬಿಡುವಿಕೆ” ಮತ್ತು ನನ್ನ “ಬಿಟ್ಟು ಬಿಡುವಿಕೆ” ಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ . ನಿಮ್ಮ “ಬಿಟ್ಟು ಬಿಡುವಿಕೆ” ಒಂದು ಸೋಲಿನ ಮನೋಭಾವ. ಮೂಲಭೂತವಾಗಿ ನಿಮ್ಮದು ಹೋರಾಟದ ನಿಲುವು, ಆದರೆ ಪರಿಸ್ಥಿತಿ ಹೇಗಿದೆಯೆಂದರೆ, ನಿಮಗೆ ಈ ಹೋರಾಟ ಸಾಧ್ಯವಾಗುತ್ತಿಲ್ಲ ಅಥವಾ ನೀವು ಈ ಹೋರಾಟದ ಕೊನೆ ತಲುಪಿದ್ದೀರಿ ಮತ್ತು ನಿಮ್ಮೊಳಗೆ ಹೋರಾಡಲು ಇನ್ನು ಯಾವ ಸಾಮರ್ಥ್ಯವೂ ಉಳಿದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸೋಲನ್ನು ಮುಚ್ಚಿಡಲು ನೀವು “ಬಿಟ್ಟು ಬಿಡುವಿಕೆ” ಯ ಬಗ್ಗೆ ಮಾತನಾಡುತ್ತಿದ್ದೀರಿ. ನಿಮ್ಮ ಈ “ಬಿಟ್ಟು ಬಿಡುವಿಕೆ” ನೈಜವಲ್ಲ, ನಕಲಿ.

ನೈಜ ಬಿಟ್ಟು ಬಿಡುವಿಕೆ ಹೋರಾಟದ ವಿರುದ್ಧ ಇರುವುದಲ್ಲ, ನೈಜ ಬಿಟ್ಟು ಬಿಡುವಿಕೆ ಹೋರಾಟದ ಗೈರು ಹಾಜರಿ. ಹೋರಾಟದ ಮನೋಭಾವದ ಜೊತೆ ನೈಜ ಬಿಟ್ಟು ಬಿಡುವಿಕೆ ಯನ್ನು ಮಿಕ್ಸ್ ಮಾಡುವುದು ಸಾಧ್ಯವಿಲ್ಲ, ಏಕೆಂದರೆ ನೈಜ ಬಿಟ್ಟು ಬಿಡುವಿಕೆ ಇದೆ ಎಂದಾದರೆ ಅಲ್ಲಿ ಹೋರಾಟ ಇಲ್ಲ ಎಂದೇ ಅರ್ಥ. ಹಾಜರಿ ಮತ್ತು ಗೈರು ಹಾಜರಿಗಳನ್ನು ಮಿಕ್ಸ್ ಮಾಡುವುದು ಹೇಗೆ ಸಾಧ್ಯ? ಥೇಟ್ ಕತ್ತಲೆಯಲ್ಲಿ ಹೇಗೆ ಬೆಳಕನ್ನು ಮಿಕ್ಸ್ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೆ. ನೀವು ಎಷ್ಟೇ ದೊಡ್ಡ ಕಲಾವಿದರಿರಬಹುದು, ನಿಮಗೆ ಕತ್ತಲೆಯಲ್ಲಿ ಬೆಳಕನ್ನು ಮಿಕ್ಸ್ ಮಾಡುವುದು ಸಾಧ್ಯವಿಲ್ಲ ಏಕೆಂದರೆ ಒಂದರ ಉಪಸ್ಥಿತಿ ಎಂದರೆ ಇನ್ನೊಂದರ ಅನುಪಸ್ಥಿತಿ ಎಂದೇ ಅರ್ಥ.

ಎಲ್ಲರೂ ನೆನಪಿಡಬೇಕಾದ ಮೊದಲ ಸಂಗತಿಯೆಂದರೆ ಮೂಲತಃ ಮನುಷ್ಯರದು ಹೋರಾಟದ ಮನೋಭಾವ. ಹಾಗಾಗಿ ಇದು ಕೇವಲ ನಿಮ್ಮೊಬ್ಬರ ಸಮಸ್ಯೆ ಮಾತ್ರ ಅಲ್ಲ. ಇದನ್ನ ತಿಳಿದುಕೊಂಡಾಗ ಮಾತ್ರ ನಿಮಗೆ ದೂರ ನಿಂತು ಈ ಮನೋಭಾವವನ್ನ ನೋಡುವುದು, ಗಮನಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಸಾಧ್ಯ.

ಹೋರಾಟ ಮನುಷ್ಯರ ಮೂಲ ಮನೋಭಾವ ಏಕೆಂದರೆ ಅದು ನಮ್ಮ ಅಹಂ ನ ಪೋಷಿಸುತ್ತದೆ. ನೀವು ಹೋರಾಟ ಮಾಡಿದಷ್ಟು ನಿಮ್ಮ ಅಹಂ ಶಕ್ತಿಶಾಲಿಯಾಗುತ್ತ ಹೋಗುತ್ತದೆ. ಈ ಹೋರಾಟದಲ್ಲಿ ನೀವು ಜಯಶಾಲಿಯಾದರೆ ನಿಮ್ಮ ಅಹಂ ತಾನೂ ಸುಖ ಅನುಭವಿಸುತ್ತದೆ. ನಿಮ್ಮ ವಿಜಯಗಳಿಂದ ನೀವು ನಿಮ್ಮ ಅಹಂ ಗೆ ಜೀವ ತುಂಬುತ್ತಾ ಹೋಗುತ್ತಿದ್ದೀರಿ. ಹೀಗಾಗುತ್ತಿರುವ ಸಮಯದಲ್ಲಿಯೇ ಒಂದು ಬದಿಯಲ್ಲಿ ನಿಮ್ಮ ಅಹಂ ಹೆಚ್ಚು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದರೆ ಇನ್ನೊಂದು ಬದಿಯಲ್ಲಿ ನಿಮ್ಮ being ನಿಮ್ಮಿಂದ ದೂರ ದೂರ ದೂರ ಸರಿದು ಹೋಗುತ್ತಿದೆ.

ನಿಮ್ಮ ಅಹಂ ಗಟ್ಟಿಯಾದಂತೆಲ್ಲ, ನಿಮ್ಮನ್ನು ನೀವು ಕಳೆದುಕೊಳ್ಳುತ್ತ ಹೋಗುತ್ತೀರಿ. ನೀವು ಹೋರಾಟ ಮಾಡುತ್ತ ವಿಜಯಶಾಲಿಗಳಾಗುತ್ತ ಇರಬಹುದು ಆದರೆ ಕಳೆದುಕೊಳ್ಳುತ್ತಿರುವುದರ ಬಗ್ಗೆ ನಿಮಗೆ ಗೊತ್ತೇ ಆಗುವುದಿಲ್ಲ. ಪ್ರತಿ ಮಗುವಿಗೂ ನಾವು ಹೋರಾಟದ ವಿವಿಧ ವಿಧಾನಗಳನ್ನು ಹೇಳಿಕೊಡುತ್ತೇವೆ. ಸ್ಪರ್ಧೆ ಎನ್ನುವುದು ಹೋರಾಟ, ಕ್ಲಾಸ್ ನಲ್ಲಿ ಮೊದಲಿಗರಾಗುವುದು ಹೋರಾಟ, ಆಟದಲ್ಲಿ ಫಸ್ಟ್ ಬರುವುದು ಹೋರಾಟ. ಇವು ನಿಮ್ಮ ಮುಂದಿನ ಬದುಕಿನ ತಯಾರಿಗಳು. ನಂತರ ಹಣಕ್ಕಾಗಿ, ಪ್ರತಿಷ್ಠೆಗಾಗಿ, ಅಧಿಕಾರಕ್ಕಾಗಿ ಹೋರಾಟ. ಇಡೀ ಸಮಾಜದ ಸಂರಚನೆಯೇ ಹೋರಾಟ, ಸ್ಪರ್ಧೆ, ಒದ್ದಾಟ, ಒಬ್ಬರನ್ನ ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವುದರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಇದು ಪ್ರತಿಯೊಬ್ಬರ ಸಮಸ್ಯೆ ಕೂಡ ಆಗಿದೆ.

ಈಗ ಬಿಟ್ಟು ಬಿಡುವಿಕೆಯ ಬಗ್ಗೆ ಸ್ವಲ್ಪ ಕೇಳಿ. ಬಿಟ್ಟು ಬಿಡುವಿಕೆ ಎಂದರೆ ಮೊದಲೇ ಹೇಳಿದಂತೆ ಹೋರಾಟದ ಅನುಪಸ್ಥಿತಿ, ಬಿಟ್ಟು ಬಿಡುವಿಕೆ ಎಂದರೆ ಅಲ್ಲಿ ಸ್ಪರ್ಧೆ ಇಲ್ಲ, ಒದ್ದಾಟ ಇಲ್ಲ, ನಾನು ನೀನು ಎಂಬ ಬೇರ್ಪಡಿಸುವಿಕೆ ಇಲ್ಲ. ಬಿಟ್ಟು ಬಿಡುವಿಕೆ ಎಂದರೆ ಅಸ್ತಿತ್ವದ ದೊತೆ ರಿಲ್ಯಾಕ್ಸ್ ಆಗುವುದು, ಅದು ಕರೆದುಕೊಂಡು ಹೋದಕಡೆ ಹಿಂಬಾಲಿಸುವುದು. ಭವಿಷ್ಯವನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ, ಪರಿಣಾಮಗಳನ್ನು ಕಂಟ್ರೋಲ್ ಮಾಡದೇ , ಅವುಗಳ ಬಗ್ಗೆ ಯೋಚನೆ ಕೂಡ ಮಾಡದೇ ಆದರೆ ಅವುಗಳು ಸಂಭವಿಸಲು ಅನುವು ಮಾಡಿಕೊಡುವುದು. Let go ಈಗಿನದು, ಸಧ್ಯದ್ದು, ಆದರೆ ಭವಿಷ್ಯ, ಪರಿಣಾಮಗಳು ನಾಳೆ ಆಗುವಂಥವು. ಸಧ್ಯದ ಜೊತೆ ಬದುಕು ಸಾಧ್ಯವಾಗಿಬಿಟ್ಟರೆ, ಅಸ್ತಿತ್ವದ ಫ್ರಿಕ್ವೆನ್ಸಿಯ ಜೊತೆ ಒಂದಾಗುವಿಕೆ ನಿಮಗೆ ಸಾಧ್ಯವಾಗುತ್ತದೆ. ಆಗ ಗೆಲ್ಲುವ ಹಂಬಲವಿಲ್ಲ, ಸೋಲುವ ಭಯ ಇಲ್ಲ, ನಾನು ಎನ್ನುವುದಿಲ್ಲ, ನೀನು ಎನ್ನುವುದಿಲ್ಲ. ಎಲ್ಲ ಒಂದೇ ರಾಗದಲ್ಲಿ ಒಂದಾಗಿ ಬದುಕಿನ ಸಂಗೀತ ಎಲ್ಲೆಡೆ ತುಂಬಿಕೊಳ್ಳುತ್ತದೆ.

ಒಮ್ಮೆ ತನ್ನ ಶಿಷ್ಯರಿಗೆ ಝೆನ್ ಮಾಸ್ಟರ್ ಪ್ರಶ್ನೆ ಮಾಡಿದ.

“ ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “

ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ.

ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.

ಮಾಸ್ಟರ್ ಗೆ ಈ ಉತ್ತರವೂ ಇಷ್ಟವಾಗಲಿಲ್ಲ.

ನೀವೇ ಹೇಳಿ ಮಾಸ್ಟರ್, ಶಿಷ್ಯರೆಲ್ಲ ಒತ್ತಾಯಿಸಿದರು.

ಮಾಸ್ಟರ್ : ಯಾವಾಗ ಅಪರಿಚಿತನೊಬ್ಬ ಎದುರಾದಾಗ, ನಮಗೆ ನಮ್ಮ ಮನೆಯವನ ಹಾಗೆ ಕಾಣುತ್ತಾನೋ ಆವಾಗ.

Leave a Reply