ಹೆಜ್ಜೆ ಹೆಜ್ಜೆ ನಡಿಗೆ, ಪದ ಪದಕ್ಕೂ ದಾರಿ! : ಅಧ್ಯಾತ್ಮ ಡೈರಿ

ಮನೆಯ ಮುಚ್ಚಟೆಯಲ್ಲಿ, ತಲೆ ಎತ್ತಿದರೆ ಛಾವಣಿ. ಅಲ್ಲೆಲ್ಲಿ ನಕ್ಷತ್ರ? ಕಂಫರ್ಟ್ ಜೋನಿನಲ್ಲಿ ಕುಂತರೆ ನಕ್ಷತ್ರ ಕಾಣುವುದೆ? ಹೊರಗೆ ಬರಬೇಕು. ಸವಲತ್ತಿನ ಸುಖ ಮುರಿಯಬೇಕು. ಅಲೆಮಾರಿಯಾಗಿ ತೆರೆದುಕೊಂಡಷ್ಟೂ ದಾರಿ ನಡೆಯಬೇಕು. ಬಯಲಾಗಬೇಕು. ಮುಚ್ಚಟೆಯಲ್ಲಿ ಬದುಕಿಲ್ಲ. ಹೆಜ್ಜೆ ಕೀಳಬೇಕು. ಛಾವಣಿ ಒಡೆಯಬೇಕು. ಆಗಷ್ಟೇ, ವಿದುರ ಹೇಳಿದಂತೆ ‘ನಕ್ಷತ್ರಗಳು ದಿಕ್ಕು ತೋರುವವು’! ~ ಚೇತನಾ ತೀರ್ಥಹಳ್ಳಿ

ಚರನ್ ಮಾರ್ಗಾನ್ ವಿಜಾನಾತಿ । ಅಲೆಮಾರಿಗೆ ದಾರಿ ತೆರೆದುಕೊಳ್ಳುವುದು…

ಹೌದಲ್ಲ? ನಿಂತಲ್ಲೇ ಉಳಿದವರಿಗೆ ದಾರಿಯಾದರೂ ಎಲ್ಲಿ? ನಡೆವವರಿಗೆ ಮಾತ್ರ ನಡೆದಷ್ಟೂ ದಾರಿ.

ಈ ನಡಿಗೆ ಎಂಥದ್ದು? ಬರೀ ಕಾಲುಗಳ ಚಲನೆಯೇ? ಅಲ್ಲ, ನಮ್ಮ ಅಸ್ತಿತ್ವದ ಚಲನೆ. ನಮ್ಮ ಬದುಕಿನ ಚಲನೆ.

ಬರಿದೇ ಕಾಲುಗಳನ್ನ ದಣಿಸುತ್ತಿದ್ದರೆ ನಮಗೆ ಉದ್ದಕ್ಕೂ ಅಂಗಾತ ಬಿದ್ದ ಸವೆದ ನೆಲವಷ್ಟೆ ಸಿಗುವುದು.

ಅದನ್ನು ದಾರಿ ಅನ್ನಲಾಗದು.

ದಾರಿ ಅಂದರೆ ಅದು, ನಮ್ಮನ್ನು ಎಲ್ಲಿಗಾದರೂ ತಲುಪಿಸುವಂಥದ್ದು. ಮುಖ್ಯವಾಗಿ ಗುರಿ ಮುಟ್ಟಿಸುವಂಥದ್ದು.

ಅಥವಾ,

ಖುದ್ದು ತಾನೇ ಗುರಿಯಾಗುವಂಥದ್ದೂ!

ಯಾರು ನಡೆಯುವ ಬಗೆ ತಿಳಿದಿರುತ್ತಾರೋ ಅವರ ಪಾಲಿಗೆ ಗುರಿ ಮುಟ್ಟಿಸುವ ದಾರಿಯೂ ತೆರೆದುಕೊಳ್ಳುವುದು.

 

ಚರನ್ ಮಾರ್ಗಾನ್ ವಿಜಾನಾತಿ ನಕ್ಷತ್ರೈರ್ವಿಂದತೇ ದಿಶಃ ॥

ಯುಧಿಷ್ಠಿರನಿಗೆ ವಿದುರ ಹೇಳುವ ಮಾತಿದು.

ನಡೆಯುತ್ತಲೇ ಇರುವವನಿಗೆ ದಾರಿಯೂ ಅರಿವಾಗುವುದು, ನಕ್ಷತ್ರಗಳು ದಿಕ್ಕು ತೋರುವವು – ಎಂದು.

ಯುಧಿಷ್ಠಿರ ಮತ್ತವನ ತಮ್ಮಂದಿರು, ಅಮ್ಮನೊಟ್ಟಿಗೆ ಸುರಂಗದಲ್ಲಿ ಸಿಕ್ಕಿಕೊಂಡಿದ್ದರು. ಎರಡೂ ಬದಿ ಕಾರ್ಗತ್ತಲು, ನಟ್ಟನಡುವೆ ಅವರು.

ಹೋಗುವುದು ಹೇಗೆ?

ವಿದುರ ಹೇಳಿದ, “ನಡೆಯುತ್ತಲೇ ಇರು, ದಾರಿಯೂ ಅರಿವಾಗುವುದು!”

ಅಷ್ಟಕ್ಕೆ ಮುಗಿಯಿತೇ? “ಹೋಗುವುದೆಲ್ಲಿಗೆ!”

“ನಕ್ಷತ್ರಗಳು ದಿಕ್ಕು ತೋರುವವು!!”

 

ನಾವೂ ಸುರಂಗದಲ್ಲಿ ಸಿಕ್ಕಿಕೊಂಡಿದ್ದೇವೆ. ನಮ್ಮ ನಮ್ಮ ವರ್ತಮಾನವೇ ಈ ಸುರಂಗ.

ಗತವೆಲ್ಲ ಸಂದುಹೋದ ಕತ್ತಲು, ಭವಿಷ್ಯ ಏನೆಂದರಿಯದ ಕತ್ತಲು.

ಬೆಳಕು ಬೇಕೆಂದರೆ ನಡೆಯಬೇಕು. ನಾವು ಮಾಡುವುದೇನು?

ಬರಿದೇ ಕಾಲು ದಣಿಸುವುದು, ಜಾತಕ ನಕ್ಷತ್ರಗಳ ತಾರಾಬಲ ನೋಡಿಸುವುದು!

ಜಾತಕದೊಳಗಿನ ನಕ್ಷತ್ರಗಳು ಬದುಕಿನ ದಿಕ್ಕು ತೋರಿಸುವುದೂ ಇಲ್ಲ, ನಿರ್ಧರಿಸುವುದೂ ಇಲ್ಲ.

ಗಂತವ್ಯದ ಪಯಣಕ್ಕೆ ಆಕಾಶದಲ್ಲಿ ಮಿನುಗುವ ನಕ್ಷತ್ರಗಳೇ ದಿಕ್ಸೂಚಿ.

ಎಲ್ಲಿಂದ ಹೊರಟೆ, ಎಲ್ಲಿಗೆ ಹೋಗುತ್ತಿರುವೆ ಎಂದೆಲ್ಲ ಅರಿವಾಗುವುದು ಬಯಲಿಗೆ ಬಂದು ನಿಂತಾಗಲಷ್ಟೇ.

ಮನೆಯ ಮುಚ್ಚಟೆಯಲ್ಲಿ, ತಲೆ ಎತ್ತಿದರೆ ಛಾವಣಿ. ಅಲ್ಲೆಲ್ಲಿ ನಕ್ಷತ್ರ? ಕಂಫರ್ಟ್ ಜೋನಿನಲ್ಲಿ ಕುಂತರೆ ನಕ್ಷತ್ರ ಕಾಣುವುದೆ?

ಹೊರಗೆ ಬರಬೇಕು. ಸವಲತ್ತಿನ ಸುಖ ಮುರಿಯಬೇಕು.

ಅಲೆಮಾರಿಯಾಗಿ ತೆರೆದುಕೊಂಡಷ್ಟೂ ದಾರಿ ನಡೆಯಬೇಕು. ಬಯಲಾಗಬೇಕು.

ಮುಚ್ಚಟೆಯಲ್ಲಿ ಬದುಕಿಲ್ಲ. ಹೆಜ್ಜೆ ಕೀಳಬೇಕು. ಛಾವಣಿ ಒಡೆಯಬೇಕು.

ಆಗ ನಕ್ಷತ್ರಗಳು ದಿಕ್ಕು ತೋರುವವು.

 

ಇದೆಲ್ಲ ಎಷ್ಟು ಕಷ್ಟ!

ಮನಸ್ಸು ನಿಶ್ಚಲವಾಗಿರಬೇಕು, ಬದುಕು ಚಲಿಸುತ್ತಿರಬೇಕು.

ಆದರೆ ನಮ್ಮ ಬದುಕು ಬಹುತೇಕ ಜಡ, ಮನಸ್ಸಿಗೆ ಬುಲೆಟ್ ಟ್ರೈನಿನ ವೇಗ.

ಇದೆಲ್ಲ ಎಷ್ಟು ಕಷ್ಟ… ಹೀಗೆ ಒಳಗನ್ನು ನಿಲ್ಲಿಸಿ ಹೊರಗನ್ನು ಅಲೆಸುತ್ತಲೇ ಇರುವುದು!

ಅದಾಗದೇ ಇದ್ದರೆ ಇನ್ನೂ ಒಂದು ಉಪಾಯವಿದೆ. ಹೊರಗನ್ನು ಸಂಪೂರ್ಣ ನಿಲ್ಲಿಸಿ ಅಂತರಂಗದಲ್ಲಿ ಪಯಣಿಸುವುದು.

 

“ಕುಂತಲ್ಲೇ ಒಂದು ಅದ್ಭುತ ಯಾತ್ರೆ ಮಾಡಿಬರಬೇಕು!”  ಒಮ್ಮೆ ಸೂಫಿ ಹಫೀಜ್ ಶಿರಾಜಿಗೆ ಅನಿಸಿತು.

ಅದಕ್ಕೇ ಅಂವ ಅಲ್ಲಾಡದೆ ಕುಂತ, ಮೂರು ದಿನಗಟ್ಟಲೆ!

ಶಿರಾಜಿ ಕುಂತಲ್ಲೇ ಕುಂತು ಪಯಣಿಸಿದ್ದು ಎಲ್ಲಿಗೆ? ಅಂತರಂಗದ ಆಳಕ್ಕೆ!

 

ಹೊರಗನ್ನು ಚಲನೆಗೆ ಒಡ್ಡಿಕೊಂಡು ಒಳಗನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದಾದರೆ, ಶಿರಾಜಿಯ ಉಪಾಯವೇ ಉಪಾಯ –

ದೈಹಿಕವಾಗಿ ಏನೂ ಮಾಡದೆ ಇರುವುದು, ಮೌನದಲ್ಲಿ ಮುಳುಗಿ ಮನಸ್ಸನ್ನು ಅಸ್ತಿತ್ವದೊಳಕ್ಕೆ ಅಡ್ಡಾಡಲು ಬಿಟ್ಟುಕೊಳ್ಳುವುದು.

ಮತ್ತೆ ಇಲ್ಲೂ, ಚರನ್ ಮಾರ್ಗಾನ್ ವಿಜಾನಾತಿ!

ಇಂಥದೊಂದು ಅಂತರ್ ಯಾತ್ರೆಗೆ ಸಜ್ಜಾದ ಕ್ಷಣದಲ್ಲೆ, ನಿಮಗೆ ಒಳಗಿನಾಳದ ದಾರಿಯೂ ಅರಿವಾಗುವುದು.

ನಕ್ಷತ್ರೈರ್ವಿಂದತೇ ದಿಶಃ –

ಕಾಣ್ಕೆಗಳೇ ನಕ್ಷತ್ರಗಳಾಗಿ ದಾರಿ ತೋರುವವು. ನಮ್ಮೊಳಗೇ ಅಡಗಿರುವ ಇಡೀ ಬ್ರಹ್ಮಾಂಡ ಸುತ್ತಾಡಿಸುವವು.

 

ಆದರೆ ನಾವು ಮಾಡುವುದೇನು?

ಚಲಿಸಬೇಕಾದಲ್ಲಿ ಜಡವಾಗುವುದು, ನಿಶ್ಚಲವಿರಬೇಕಾದಲ್ಲಿ ಚಂಚಲವಾಗುವುದು!

ಕಾರಣ ಇಷ್ಟೇ, ನಮ್ಮ ಪಂಚೇಂದ್ರಿಯಗಳನ್ನು ತಣಿಸುವ ತಹತಹ.

ಎಲ್ಲಿ ಅವು ನೋಟ, ಗಂಧ, ರಸ, ಸ್ಪರ್ಶ, ಆಲಿಸುವ ಸುಖದಿಂದ ವಂಚಿತವಾಗ್ತವೋ ಅನ್ನುವ ಆತಂಕ.

ನಮ್ಮ ಅಸ್ತಿತ್ವವನ್ನು ಈ ಐದರ ತೃಪ್ತಿಗೇ ಬಲಿಗೊಟ್ಟು ಬಾಳ್ವೆ ನಡೆಸುವವರಲ್ಲವೆ ನಾವು!?

 

ವಿದುರ ಮತ್ತೂ ಹೇಳುತ್ತಾನೆ,

ಆತ್ಮನಾ ಚಾತ್ಮನಃ ಪಂಚ ಪೀಡಯನ್ ನಾನುಪೀಡ್ಯತೇ

-ನಿಮ್ಮನ್ನೂ ನಿಮ್ಮ ಜೊತೆಗೆ ಐವರನ್ನೂ ಪೀಡನೆಗೆ ಒಡ್ಡಿಕೊಂಡರಷ್ಟೆ ಮುಂದೆ ನಿಶ್ಚಿಂತರಾಗಿರಲು ಸಾಧ್ಯ.

ವಿದುರ ಹೇಳುವ ಐವರು, ನಮ್ಮ ಪಂಚೇಂದ್ರಿಯಗಳು.

ಅವುಗಳ ಸುಖವನ್ನೆ ಚಿಂತಿಸುತ್ತಿದ್ದರೆ ಹೊರಗಿನ ಚಲನೆಯೂ ಸಾಧ್ಯವಾಗದು, ಒಳಗಿನ ಚಲನೆಯೂ ಸಾಧ್ಯವಾಗದು.

ಅವನ್ನು ಶ್ರಮಕ್ಕೆ ಒಡ್ಡಿಕೊಂಡರಷ್ಟೆ ನಮಗೆ ಸುಖ ಸಿಗುವುದು.

 

ಕಂಫರ್ಟ್ ಝೋನ್ ಬಿಟ್ಟುಕೊಟ್ಟರೆ ಕಾಲಕಾಲದ ಸಂಬಳ, ಇ ಎಮ್ ಐ, ಹೊತ್ತು ಹೊತ್ತಿನ ಆಟೋಟ – ನೋಟ ಎಲ್ಲಕ್ಕೂ ಸಂಚಕಾರ. ಅಥವಾ,

ಎಲ್ಲೂ ಹೋಗದೆಯೇ ಕುಳಿತು ಅಂತರಾಳಕ್ಕಿಳಿದರೂ ಅವೆಲ್ಲ ಸವಲತ್ತೂ ಖೋತಾ!

ನಮ್ಮ ಪಂಚೇಂದ್ರಿಯಗಳನ್ನು ಪಾಡುಪಡಲು ಬಿಡಲಾಗದ ಸಂಕಟಕ್ಕೇ ನಾವು ಚಲನೆ ಕಳೆದುಕೊಳ್ಳೋದು.

ಚಲನೆಯಿಲ್ಲದ್ದು ಕೊಳೆಯೋದು ಸಹಜ. ಬಾಹ್ಯದ ಬದುಕಾದರೂ ಸರಿ, ಅಂತರಂಗದ ಮೊಳಕೆಯಾದರೂ ಸರಿ.

 

ಅದಕ್ಕೇ, ಪಂಚ ಪೀಡಯನ್ ನಾನುಪೀಡ್ಯತೇ – ಪಂಚೇಂದ್ರಿಯಗಳನ್ನು (ಕಾಯಕದಲ್ಲಿ ತೊಡಗಿಸಿ ಅಥವಾ ಸುಖ ನಿರಾಕರಿಸಿ) ಕಷ್ಟಕ್ಕೀಡು ಮಾಡಿದರಷ್ಟೆ ನಾವು ಲೌಕಿಕಾಲೌಕಿಕದ ಯಾವುದೇ ಪೀಡೆಗೆ ಒಳಗಾಗದಿರಲು ಸಾಧ್ಯ.

 

ಚಲಿಸಲು ಹೆಜ್ಜೆ ಕೀಳಬೇಕು. ಆಗ,

ನಿಂತ ನೆಲ ಕಳೆದುಕೊಳ್ಳುವೆವು. ಆದರೆ,

ಹೆಜ್ಜೆ ಮುಂದಿಟ್ಟ ಕ್ಷಣದಲ್ಲಿ ಹೊಸ ನೆಲವೂ ಹುಟ್ಟಿಕೊಳ್ಳುವುದು, ಪಾದಕ್ಕೆ ಆಸರೆಯಾಗುವುದು. ಆಮೇಲೆ,

ಹೆಜ್ಜೆ ಹೆಜ್ಜೆ ನಡಿಗೆ, ಪದ ಪದಕ್ಕೂ ದಾರಿ!

 

“ಒಂದು ಹೆಜ್ಜೆ ಎತ್ತುವುದು ಸಾವಿರ ಮೈಲುಗಳ ಪಯಣಕ್ಕೆ ನಾಂದಿ” ಅಂದವನು ಲಾವೋತ್ಸು.

ಲೌಕಿಕದ ಗುರಿಯತ್ತಲೋ, ಅಲೌಕಿಕದ ಗಮ್ಯದತ್ತಲೋ… ಹೆಜ್ಜೆ ಇಡಿ, ನಡೆಯುತ್ತಿರಿ.

ಚರಾನ್ ಮಾರ್ಗಾನ್ ವಿಜಾನಾತಿ – ದಾರಿ ತಾನಾಗೇ ಅರಿವಾಗುವುದು.

 

 

 

 

Leave a Reply