ಕಾಲದ ಪರಿಧಿ ಮೀರಿ… : ಓಶೋ ವ್ಯಾಖ್ಯಾನ

ಕಾಲದ ಅಳತೆಯಲ್ಲಿ ಮೀರಾ ಕೃಷ್ಣನಿಂದ ಅಪಾರ ದೂರದಲ್ಲಿರಬಹುದು ಆದರೆ ಕೃಷ್ಣ ಅವಳಿಗೆ ತೀರ ಹತ್ತಿರ. ಇದು ಒಂದು ಬೇರೆ ಆಯಾಮ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಭೂತ ಕಾಲದ ವಿಷಯ
ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ ,
ಭವಿಷ್ಯದ ನಿರೀಕ್ಷೆಗಳು
ಭ್ರಮೆಯ ಭಾಗ.

ಭೂತದಿಂದ ಭವಿಷ್ಯಕ್ಕೆ
ಕಾಲದ ಮೂಲಕ ಸಾಗುವ
ಜಗತ್ತಿನ ಪಯಣ
ಸರಳ ರೇಖೆಯಲ್ಲಲ್ಲ

ಬದಲಾಗಿ
ಕಾಲದ ಚಲನೆ
ನಮ್ಮ ಮೂಲಕ, ನಮ್ಮೊಳಗೆ
ಕೊನೆಯಿಲ್ಲದ ಸುರುಳಿಯಾಕಾರದ
ದಿವ್ಯ ಪಥದಲ್ಲಿ.

ಶಾಶ್ವತ ಎಂದರೆ ಅನಂತ ಕಾಲವಲ್ಲ,
ಬದಲಾಗಿ ಶಾಶ್ವತ
ಕಾಲದ ಪರಿವೆಯೇ ಇಲ್ಲದ್ದು.

ಭೂತ, ಭವಿಷ್ಯಗಳನ್ನು
ಬುದ್ಧಿಯ ಪರೀಧಿಯಿಂದ ಹೊರಗಿಟ್ಟು
ವರ್ತಮಾನದ ಕ್ಷಣಗಳಲ್ಲಿ
ಬದುಕು ಸಾಧ್ಯವಾದಾಗ
ಶಾಶ್ವತದ ಬೆಳಕು
ಒಳಗೆ ಇಳಿಯುವುದು

~ ಶಮ್ಸ್ ತಬ್ರೀಝಿ


ನನಗೆ ಮೀರಾಳ ಕಥೆ ನೆನಪಾಗುತ್ತಿದೆ.

ದೊರೆಯ ಹೆಂಡತಿಯಾದ ಮೀರಾ ಕೃಷ್ಣನನ್ನು ಅಪಾರವಾಗಿ ಪ್ರೇಮಿಸಿದವಳು. ಆಕೆಯ ಕೃಷ್ಣ ಪ್ರೇಮವನ್ನು ಕಂಡು ದೊರೆಗೆ ಅಸೂಯೆ. ಕೃಷ್ಣ ಈಗ ದೈಹಿಕವಾಗಿ ಇಲ್ಲ ಆದರೆ ಮಾನಸಿಕವಾಗಿ ಮೀರಾಳನ್ನು ತುಂಬಿಕೊಂಡು ಬಿಟ್ಟಿದ್ದಾನೆ. ಕೃಷ್ಣ ಮತ್ತು ಮೀರಾಳ ನಡುವೆ ಸುಮಾರು ಐದು ಸಾವಿರ ವರ್ಷಗಳ ಅಂತರ ಇದೆ. ಇಷ್ಟು ದೂರದ ಕೃಷ್ಣನನ್ನು ಇಷ್ಟು ಹಚ್ಚಿಕೊಳ್ಳುವುದು ಮೀರಾಳಿಗೆ ಹೇಗೆ ಸಾಧ್ಯವಾಯಿತು?

ಒಂದು ದಿನ ದೊರೆ ಮೀರಾಳನ್ನು ಪ್ರಶ್ನೆ ಮಾಡುತ್ತಾನೆ, “ಕೃಷ್ಣನ ಕುರಿತಾದ ನಿನ್ನ ಪ್ರೇಮವನ್ನು ಹೇಳುತ್ತಲೇ ಇರುತ್ತೀಯ, ಅವನ ನೆನಪಲ್ಲಿ ಕುಣಿಯುತ್ತೀಯ, ಹಾಡುತ್ತೀಯ ಆದರೆ ಎಲ್ಲಿದ್ದಾನೆ ನಿನ್ನ ಕೃಷ್ಣ? ಯಾರ ಜೊತೆಗೆ ನಿನ್ನ ಪ್ರೇಮ? ಯಾರ ಜೊತೆ ಸತತವಾಗಿ ಮಾತನಾಡುತ್ತಿರುತ್ತೀಯ?”

ಮೀರಾ ಕೃಷ್ಣನ ಜೊತೆ ನಿರಂತರವಾಗಿ ಮಾತನಾಡುತ್ತಿದ್ದಳು, ಹಾಡುತ್ತಿದ್ದಳು, ಕುಣಿಯುತ್ತಿದ್ದಳು, ಜಗಳ ಮಾಡುತ್ತಿದ್ದಳು, ಸುತ್ತಲಿನ ಜನ ಅವಳಿಗೆ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. “ನಿನಗೇನಾದರೂ ಹುಚ್ಚು ಹಿಡಿದಿದೆಯಾ? ಯಾರ ಧ್ಯಾನದಲ್ಲಿ ಇರುತ್ತೀಯ? ಯಾರ ಜೊತೆ ಮಾತನಾಡುತ್ತೀಯ? ನಾನು ನಿನ್ನ ಎದುರಿಗಿರುವಾಗಲೂ ನೀನು ನನ್ನ ಸಂಪೂರ್ಣವಾಗಿ ಮರೆತುಬಿಟ್ಟಿದ್ದೀಯ” ದೊರೆ ಮೀರಾಳ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾನೆ.

ಮೀರಾ ಉತ್ತರಿಸುತ್ತಾಳೆ……

“ನನಗೆ ನೀವು ಕಾಣಿಸುತ್ತಿಲ್ಲ ಕೃಷ್ಣ ಕಾಣಿಸುತ್ತಿದ್ದಾನೆ. ಕೃಷ್ಣ ಶಾಶ್ವತ, ನೀವಲ್ಲ. ಕೃಷ್ಣ ಸದಾ ನನ್ನ ಜೊತೆ ಇರುತ್ತಾನೆ, ನೋಡಿ ಇಲ್ಲಿ ಕೃಷ್ಣನ್ನ. ನೀವು ಈವತ್ತು ಅಷ್ಟೇ ಅಲ್ಲ ಯಾವತ್ತೂ ನನ್ನ ಜೊತೆ ಇಲ್ಲ. ನೀವು ನನ್ನ ಜೊತೆ ಇಲ್ಲ, ನೀವು ನನ್ನ ಜೊತೆ ಇರುವುದಿಲ್ಲ. ಈ ಎರಡು ಅನಸ್ತಿತ್ವಗಳ ನಡುವೆ ನಾನು ನಿಮ್ಮ ಅಸ್ತಿತ್ವವನ್ನ ಎಲ್ಲಿ ಅಂತ ಹುಡುಕಲಿ?

ದೊರೆ ಕಾಲದ ಪರಿಧಿಯಲ್ಲಿ ಬಂಧಿತನಾಗಿದ್ದರೆ, ಕೃಷ್ಣನಿಗೆ ಕಾಲದ ಹಂಗಿಲ್ಲ, ಅವನು ಎಟರ್ನಲ್. ಹಾಗಾಗಿ ದೊರೆ ಹತ್ತಿರವಿದ್ದರೂ ನಡುವಿನ ಅಂತರವನ್ನು ನಾಶ ಮಾಡುವುದು ಸಾಧ್ಯವಿಲ್ಲ, ದೊರೆ ಆಗಲೂ ದೂರವಾಗಿಯೇ ಇರುತ್ತಾನೆ. ಕಾಲದ ಅಳತೆಯಲ್ಲಿ ಮೀರಾ ಕೃಷ್ಣನಿಂದ ಅಪಾರ ದೂರದಲ್ಲಿರಬಹುದು ಆದರೆ ಕೃಷ್ಣ ಅವಳಿಗೆ ತೀರ ಹತ್ತಿರ. ಇದು ಒಂದು ಬೇರೆ ಆಯಾಮ.

ನಾನು ನನ್ನ ಎದುರು ನೋಡುವಾಗ ಅಲ್ಲೊಂದು ಗೋಡೆಯಿದೆ, ಆದರೆ ನಾನು ದೃಷ್ಟಿ ಬದಲಿಸಿ ಮೇಲೆ ನೋಡಿದಾಗ ಅಲ್ಲಿ ಆಕಾಶ ಕಾಣಿಸುತ್ತದೆ. ಹಾಗೆಯೇ ನೀವು ಕಾಲದ ಜಗತ್ತನ್ನು ನೋಡುತ್ತಿರುವಿರಾದರೆ ನಿಮಗೆ ಸದಾ ಗೋಡೆ ಕಾಣಿಸುತ್ತದೆ, ಕಾಲದ ಪರಿಧಿಯನ್ನು ದಾಟಿ ನೋಡುವುದು ಸಾಧ್ಯವಾದರೆ ಅನಂತ ವಿಶ್ವ ನಿಮಗಾಗಿ ಕಾಯುತ್ತಿದೆ.

Leave a Reply