ಕ್ಷಮಿಸುವುದು ಎಂದರೆ…

ಕ್ಷಮೆ, ಅಸಮಾಧಾನ ಎನ್ನುವ ನರಕದಿಂದ ಮತ್ತು ದ್ವೇಷ ಎನ್ನುವ ಬೇಡಿಯ ಬಂಧನದಿಂದ ನಿಮ್ಮನ್ನ ಮುಕ್ತಗೊಳಿಸುವ ಕೀಲಿ ಕೈ… | ಚಿದಂಬರ ನರೇಂದ್ರ

ಕ್ಷಮಾಗುಣ ದುರ್ಬಲತೆಯ ಸಂಕೇತವಲ್ಲ, ಬಹಳ ಧೈರ್ಯ ಬೇಕಾಗುತ್ತದೆ ಕ್ಷಮಿಸಲು.

ಕ್ಷಮೆ ಎನ್ನುವುದು, ನಿಮ್ಮನ್ನ ನೋಯಿಸಿದವರ, ಮೋಸಮಾಡಿದವರ, ಅಪಮಾನಿಸಿದವರ ಮೇಲಿರುವ ನಿಮ್ಮ ಅಸಮಾಧಾನವನ್ನ ಮನಪೂರ್ವಕವಾಗಿ ಇಲ್ಲವಾಗಿಸುವ ಪ್ರಯತ್ನ. ಕ್ಷಮೆ, ಆದದ್ದನ್ನೆಲ್ಲ ಒಪ್ಪಿಕೊಂಡು ಮರೆತುಬಿಡುವುದಲ್ಲ, ನಿಮ್ಮ ಸಿಟ್ಟನ್ನ, ಅಸಮಾಧಾನವನ್ನ ನುಂಗಿಕೊಂಡು ಸುಮ್ಮನಿರುವುದಲ್ಲ ಬದಲಾಗಿ ಕ್ಷಮೆ, ಅಸಮಾಧಾನ, ಸಿಟ್ಟು, ದ್ವೇಷ ನಿಮ್ಮನ್ನು ಆವಾಹಿಸಿಕೊಳ್ಳದಂತೆ, ಇಚ್ಛಾಪೂರ್ವಕವಾಗಿ ನಿಮ್ಮ ಭಾವನೆಗಳನ್ನ, ಧೋರಣೆಗಳನ್ನ, ನಡುವಳಿಕೆಯನ್ನ ಬದಲಾಯಿಸಿಕೊಳ್ಳುವುದು, ನಿಮ್ಮನ್ನು ಅಸಮಾಧಾನಕ್ಕೆ ಈಡು ಮಾಡಿದವರ ಮೇಲೆ ಕೂಡ ಕರುಣೆ, ಅಂತಃಕರಣವನ್ನು ಸಾಧ್ಯ ಮಾಡಿಕೊಳ್ಳುವುದು.

ಮನಶಾಸ್ತ್ರಜ್ಞರ ಪ್ರಕಾರ ಕ್ಷಮೆ ಎನ್ನುವುದು, ನಿಮ್ಮನ್ನು ಘಾಸಿ ಮಾಡಿದ ವ್ಯಕ್ತಿಯ ಅಥವಾ ಗುಂಪಿನ ಮೇಲಿನ ಅಸಮಾಧಾನವನ್ನ, ದ್ವೇಷವನ್ನ ಪ್ರಜ್ಞಾಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಕೊಳ್ಳುವುದು. ಆ ವ್ಯಕ್ತಿ ಅಥವಾ ಗುಂಪು ನಿಮ್ಮ ಕ್ಷಮೆಗೆ ಅರ್ಹವಾಗಿದ್ದರೂ ಅಥವಾ ಅರ್ಹವಾಗಿರದೇ ಇದ್ದರೂ… ಕ್ಷಮೆ, ಅಸಮಾಧಾನ ಎನ್ನುವ ನರಕದಿಂದ ಮತ್ತು ದ್ವೇಷ ಎನ್ನುವ ಬೇಡಿಯ ಬಂಧನದಿಂದ ನಿಮ್ಮನ್ನ ಮುಕ್ತಗೊಳಿಸುವ ಕೀಲಿ ಕೈ.

ಕ್ಷಮೆ, ಇನ್ನೊಬ್ಬರಿಗೆ ಸಹಾಯ ಮಾಡಲು ನಾವು ಮಾಡಿಕೊಳ್ಳುವ ಆಯ್ಕೆಯಲ್ಲ, ಇದು ನಾವು ಸ್ವತಃ ನಮಗೆ ಮಾಡಿಕೊಳ್ಳುವ ಸಹಾಯ. ಕ್ಷಮೆ ನಮ್ಮ ಬದುಕಿನ ಪ್ರಯಾಣವನ್ನು ಹಗುರಾಗಿಸುತ್ತದೆ, ಈ ಪ್ರಯಾಣದಲ್ಲಿ ನಾವು ಇನ್ನುಮುಂದೆ ದ್ವೇಷ, ಅಸಮಾಧಾನ, ಮತ್ತು ಕಹಿ ಭಾವನೆಗಳನ್ನು ಹೊತ್ತು ನಡೆಯಬೇಕಿಲ್ಲ.

ಇನ್ನೊಬ್ಬರನ್ನು ಕ್ಷಮಿಸುವುದು ಅವರು ಕ್ಷಮೆಗೆ ಅರ್ಹರಾಗಿದ್ದಾರೆ ಅಂತ ಅಲ್ಲ, ನೀವು ಶಾಂತಿಗೆ, ಸಮಾಧಾನಕ್ಕೆ ಅರ್ಹರಾಗಿದ್ದೀರಿ ಎಂದು.

ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು ನದಿಯಲ್ಲಿ ತಮ್ಮ ಊಟದ ತಟ್ಚೆ ತೊಳೆಯುತ್ತಿದ್ದಾಗ ಒಂದು ಚೇಳು ನದಿಯಲ್ಲಿ ಕೊಚ್ಚಿಕೊಂಡು ಹೋಗುವುದನ್ನು ಕಂಡರು.
ತಟ್ಚನೆ ಒಬ್ಬ ಸನ್ಯಾಸಿ ಅದನ್ನು ನದಿಯಿಂದ ಹೊರ ತೆಗೆದು ದಂಡೆಯ ಮೇಲೆ ಬಿಟ್ಟ. ಹೀಗೆ ಮಾಡುವಾಗ ಚೇಳು ಸನ್ಯಾಸಿಯ ಬೆರಳಿಗೆ ಕಚ್ಚಿಬಿಟ್ಟಿತು. ಸನ್ಯಾಸಿ ತಲೆ ಕೆಡಿಸಿಕೊಳ್ಳದೆ ಮತ್ತೆ ತಟ್ಟೆ ತೊಳೆಯುವುದನ್ನು ಮುಂದುವರೆಸಿದ.

ಸ್ವಲ್ಪ ಹೊತ್ತಿನ ನಂತರ ಚೇಳು ಮತ್ತೆ ಜಾರಿ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗ ತೊಡಗಿತು. ಸನ್ಯಾಸಿ ಮತ್ತೆ ಆ ಚೇಳನ್ನು ಎತ್ತಿ ದಂಡೆಯ ಮೇಲೆ ಬಿಟ್ಟ. ಚೇಳು ಮತ್ತೆ ಸನ್ಯಾಸಿಯ ಬೆರಳನ್ನು ಕಚ್ಚಿತು.

ಇದನ್ನೆಲ್ಲ ಗಮನಿಸುತ್ತಿದ್ದ ಇನ್ನೊಬ್ಬ ಸನ್ಯಾಸಿ ಕೇಳಿದ,

“ ಗೆಳೆಯಾ, ಕಚ್ಚುವುದು ಚೇಳಿನ ಸಹಜ ಧರ್ಮ, ಅದನ್ನು ಕಾಪಾಡಿ ಏನು ಪ್ರಯೋಜನ? ”

ಮೊದಲ ಸನ್ಯಾಸಿ ಉತ್ತರಿಸಿದ

“ ಗೆಳೆಯಾ, ನಾನು ಚೇಳನ್ನು ಕಾಪಾಡುತ್ತಿಲ್ಲ, ನನ್ನ ಸಹಜ ಧರ್ಮವನ್ನು ಕಾಪಾಡುತ್ತಿದ್ದೇನೆ ”

Leave a Reply