ಸ್ವ-ವಾಸ್ತವದ ಅರಿವು : ಓಶೋ ವ್ಯಾಖ್ಯಾನ

ಸ್ವ-ವಾಸ್ತವದ ಅರಿವಿನಲ್ಲಿ ನಿಮ್ಮ ಎಲ್ಲ ಸಾಧ್ಯತೆಗಳು ಸಾಕಾರಗೊಂಡದ್ದನ್ನು ನೀವು ಅನುಭವಿಸಿದ ಕ್ಷಣದಲ್ಲಿಯೇ ಬದುಕಿನ ತುಟ್ಟ ತುದಿಯನ್ನ , ಪ್ರೀತಿಯ ಅಸ್ತಿತ್ವದ ಶಿಖರವನ್ನ ತಲುಪುತ್ತೀರಿ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ತಾವೋ ಶಾಶ್ವತ, ಅನಂತ.

ಯಾಕೆ ಶಾಶ್ವತ ?
ಅದು ಹುಟ್ಟೇ ಇಲ್ಲ ಎಂದಮೇಲೆ
ಸಾಯುವ ಮಾತೆಲ್ಲಿಂದ ಬಂತು.

ಯಾಕೆ ಅನಂತ ?
ಸ್ವಂತದ್ದು ಏನೂ ಇಲ್ಲ ಎಂದಮೇಲೆ
ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ.

ಸಂತ ಹಿಂದಿದ್ದಾನೆ
ಹಾಗೆಂದೇ ತಾವೋ ಮುಂದಿದೆ.

ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ
ತಾವೋ ಎಲ್ಲದರಲ್ಲೂ ಒಂದಾಗಿದೆ.

ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ
ಪರಿಪೂರ್ಣವಾಗಿ ಮೈದುಂಬಿಕೊಂಡಿದೆ ತಾವೋ.

~ ಲಾವೋತ್ಸೇ


ಸ್ವ-ವಾಸ್ತವದ ಅರಿವು ಎಂದರೆ ವ್ಯಕ್ತಿ ತಾನು ಏನಾಗಬೇಕಿತ್ತೋ ಅದನ್ನ ಸಾಧಿಸಿಕೊಂಡಿರುವುದು. ಉದಾಹರಣೆಗೆ ಅವನು ಬೀಜವಾಗಿ ಹುಟ್ಟಿದ್ದ ಈಗ ಹೂವಾಗಿ ಅರಳಿದ್ದಾನೆ. ಅವನು ತನ್ನ ಬೆಳವಣಿಗೆಯನ್ನ ಸಂಪೂರ್ಣಗೊಳಿಸಿಕೊಂಡಿದ್ದಾನೆ, ಪೂರ್ಣವಾಗಿ ಅಂತರಂಗದ ಮಾಗುವಿಕೆಯನ್ನು ಸಾಧಿಸಿಕೊಂಡಿದ್ದಾನೆ. ನಿಮ್ಮ ಎಲ್ಲ ಸಾಧ್ಯತೆಗಳು ಸಾಕಾರಗೊಂಡದ್ದನ್ನು ನೀವು ಅನುಭವಿಸಿದ ಕ್ಷಣದಲ್ಲಿಯೇ ಬದುಕಿನ ತುಟ್ಟ ತುದಿಯನ್ನ , ಪ್ರೀತಿಯ ಅಸ್ತಿತ್ವದ ಶಿಖರವನ್ನ ತಲುಪುತ್ತೀರಿ.

ಜ್ಞಾನೋದಯ ಆದಮೇಲೆ ಬುದ್ಧ ಕಾಶಿಗೆ ಬರುತ್ತಾನೆ. ಬುದ್ಧನನ್ನು ಭೇಟಿಯಾಗಲು ಬಂದ ಕಾಶಿಯ ರಾಜ ಬುದ್ಧನನ್ನು ಪ್ರಶ್ನೆ ಮಾಡುತ್ತಾನೆ,

“ನಿನ್ನ ಬಳಿ ಏನೂ ಇಲ್ಲ, ನೀನೊಬ್ಬ ಶುದ್ಧ ಭಿಕ್ಷುಕ ಆದರೆ, ನಿನಗೆ ಹೋಲಿಸಿದರೆ ನಾನೇ ದೊಡ್ಡ ಭಿಕ್ಷುಕನಂತೆ ಕಾಣುತ್ತೇನೆ. ನಿನ್ನ ಹತ್ತಿರ ಏನೂ ಇಲ್ಲದಿರುವಾಗಲೂ ನೀನು ನಡೆಯುವ ಠೀವಿ, ಮಾತನಾಡುವ ರೀತಿ, ನಗುವ ಶೈಲಿ ನೋಡಿದರೆ ಇಡಿ ಜಗತ್ತು ನಿನ್ನ ಅಧೀನಕ್ಕೆ ಒಳಪಟ್ಟಿದೆ ಎಂದು ನನಗನಿಸುತ್ತದೆ. ಕಣ್ಣಿಗೆ ನಿನ್ನ ಬಳಿ ಏನೂ ಇರುವ ಹಾಗೆ ಕಾಣಿಸುವುದಿಲ್ಲ, ಆದರೆ ಎಲ್ಲವೂ ನಿನ್ನ ಅಧೀನಕ್ಕೆ ಒಳಗಾಗಿದೆ. ನಿನ್ನ ಈ ಸಾಮರ್ಥ್ಯದ ಗುಟ್ಟು ಏನು? ನೀನು ಜಗತ್ತಿನ ಚಕ್ರವರ್ತಿಯಂತೆ ಕಾಣಿಸುತ್ತೀಯ, ಬೇರೆ ಯಾವ ರಾಜನಿಗೂ ನಿಮಗಿರುವ ತೇಜಸ್ಸು ಇಲ್ಲ, ಇದರ ಗುಟ್ಟು ಏನು? ಮೂಲ ಏನು?”

“ ನೀನು ಹೇಳುವ, ಕಾಣುವ ನನ್ನ ಸಾಮರ್ಥ್ಯ ನನ್ನೊಳಗಿದೆಯೇ ಹೊರತು, ಅದನ್ನ ನನ್ನ ಬಳಿ ಇರುವ ಸಂಗತಿಗಳಲ್ಲಿ ಗುರುತಿಸುವುದು ಸಾಧ್ಯವಿಲ್ಲ. ನನ್ನ ಹೊರತಾಗಿ ನನ್ನ ಬಳಿ ಏನೂ ಇಲ್ಲ, ಇಷ್ಟು ಮಾತ್ರ ನನಗೆ ಸಾಕು. ನಾನು ತೃಪ್ತನಾಗಿದ್ದೇನೆ, ನನಗೆ ಯಾವುದರ ಬಯಕೆಯೂ ಇಲ್ಲ. ಬಹುಶಃ ಈ ಇಲ್ಲದಿರುವಿಕೆಯೇ ನಿನಗೆ ನನ್ನ ಶಕ್ತಿಯಾಗಿ ಕಾಣಿಸುತ್ತಿರಬಹುದು.”

ಬುದ್ಧ ರಾಜನಿಗೆ ಉತ್ತರಿಸಿದ.

ನಿಜದಲ್ಲಿ ಸ್ವ-ವಾಸ್ತವದ ಅರಿವು ಸಾಧಿಸಿದವರು, ಬಯಕೆಗಳಿಂದ ಅತೀತರಾಗುತ್ತಾರೆ. ಇದು ನಿಮಗೆ ನೆನಪಿರಲಿ, ಬಹುತೇಕ ನಾವು ಹೇಳುವುದು, ಬಯಕೆಗಳಿಂದ ಕಳಚಿಕೊಂಡಾಗ ನಿಮಗೆ ಅರಿವು ಸಾಧ್ಯ ಎಂದು ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಿಮಗೆ ನಿಮ್ಮ ವಾಸ್ತವದ ಅರಿವು ಸಾಧ್ಯವಾದಾಗ ಮಾತ್ರ ಬಯಕೆಗಳು ನಿಮ್ಮಿಂದ ದೂರವಾಗುತ್ತವೆ. ಆಮೇಲೆ ಬಯಕೆಗಳಿಲ್ಲದ ಭಾವವೇ ನಿಮ್ಮನ್ನು ಕೈಹಿಡಿದು ನಡೆಸುತ್ತದೆ.

ಝೆನ್ ಮಾಸ್ಟರ್ ಜೋಶು ನ ಆಶ್ರಮಕ್ಕೆ ಒಬ್ಬ ಅತಿಥಿ ಮೊದಲ ಬಾರಿ ಆಗಮಿಸಿದ್ದ. ಆಶ್ರಮದ ಉದ್ಯಾನವನದಲ್ಲಿ ಪ್ರಖರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಒಬ್ಬ ವೃದ್ಧ ಸನ್ಯಾಸಿ ಧ್ಯಾನ ಮಾಡುತ್ತ ಕುಳಿತಿರುವುದನ್ನ ಆ ಅತಿಥಿ ಗಮನಿಸಿದ. ಆ ವೃದ್ಧನ ಬಗ್ಗೆ ಅತಿಥಿಗೆ ಕುತೂಹಲ ಬೆಳೆಯಿತು.

ಉದ್ಯಾನವನದ ಬಾಗಿಲಲ್ಲೇ ಕುಳಿತಿದ್ದ ಕೆಲಸಗಾರನನ್ನು ಅತಿಥಿ ಪ್ರಶ್ನೆ ಮಾಡಿದ. “ ಯಾರು ಆ ತೇಜಸ್ವಿ ಸನ್ಯಾಸಿ? ಅವನೇನಾ ಝೆನ್ ಮಾಸ್ಟರ್ ಜೋಶೋ?

“ ಅಲ್ಲ, ಅಲ್ಲ ನಾನು ಜೋಶು, ಅವ ನನ್ನ ನೆಚ್ಚಿನ ಶಿಷ್ಯ” ಕೆಲಸಗಾರ ಮುದುಕ ಉತ್ತರಿಸಿದ.

Leave a Reply