ಅಪಾಯದ ಸಂದರ್ಭ : Zen ಕತೆ

ನಾವು ಹೊಸ, ಅಪಾಯಕಾರಿ ಸಂದರ್ಭಗಳನ್ನು ತಲುಪಿದಾಗ ಬಹಳ ಎಚ್ಚರದಲ್ಲಿ ಮೈಯೆಲ್ಲ ಕಣ್ಣಾಗಿರುತ್ತೇವೆ. ಆದರೆ ಎಲ್ಲ ಅಪಾಯ ತೀರಿತು ಇನ್ನೇನು ನಮ್ಮ ಗುರಿ ತಲುಪಿದೆವು ಎಂದಾಗ ಅಜಾಗರೂಕರಾಗಿಬಿಡುತ್ತೇವೆ… | ಚಿದಂಬರ ನರೇಂದ್ರ

ಒಮ್ಮೆ ಒಬ್ಬ ವಿದ್ಯಾರ್ಥಿ ಮರ ಕತ್ತರಿಸುವ ವಿದ್ಯೆ ಕಲಿಯಲು ಗುರುವಿಗಾಗಿ ಹುಡುಕಾಡತೊಡಗಿದ. ಕೆಲದಿನಗಳ ಹುಡುಕಾಟದ ನಂತರ ಎಂಥ ಭವ್ಯ ಮರವನ್ನೂ ಸರಸರನೇ ಹತ್ತಿ ಮಟ್ಟಸವಾಗಿ ಕತ್ತರಿಸುವ ಮಾಸ್ಟರ್ ಒಬ್ಬ ವಿದ್ಯಾರ್ಥಿಗೆ ದೊರೆತ. ಮಾಸ್ಟರ್ ಕೂಡ ವಿದ್ಯಾರ್ಥಿಯನ್ನ ತನ್ನ ಶಿಷ್ಯನಾಗಿ ಸ್ವೀಕರಿಸಲು ಒಪ್ಪಿಕೊಂಡ.

ಕೆಲದಿನಗಳ ಶಿಷ್ಯವೃತ್ತಿಯ ನಂತರ ಒಂದು ದಿನ ಮಾಸ್ಟರ್, ವಿದ್ಯಾರ್ಥಿಯನ್ನು ಹಳ್ಳಿಯ ಅಂಚಿನಲ್ಲಿದ್ದ ಎತ್ತರದ ವಿಶಾಲ ಮರದ ಬಳಿ ಕರೆದುಕೊಂಡು ಹೋದ. ಮಾಸ್ಟರ್ ಏನು ಮಾಡುತ್ತಿದ್ದಾನೆ ಎನ್ನುವುದನ್ನ ನೋಡಲು ಹಳ್ಳಿಯ ಜನ ಕುತೂಹಲದಿಂದ ಅಲ್ಲಿ ಬಂದು ಸೇರಿದರು. ಮಾಸ್ಟರ್ ವಿದ್ಯಾರ್ಥಿಗೆ ಮರ ಹತ್ತಲು ಹೇಳಿದ.

ಮಾಸ್ಟರ್ ಕಲಿಸುತ್ತಿರುವ ಈ ಪಾಠ ನೋಡಲು ಹಳ್ಳಿಗರು ಉತ್ಸುಕರಾಗಿದ್ದರು. ಗರಗಸ ಹಿಡಿದುಕೊಂಡು ವಿದ್ಯಾರ್ಥಿ ಮರ ಹತ್ತುತ್ತಿದ್ದರೆ, ಹಳ್ಳಿಗರು ಮಾಸ್ಟರ ಹತ್ತಿರ ಹೋಗಿ ನಿಂತುಕೊಂಡರು. ಮರ ಹತ್ತಿದ ವಿದ್ಯಾರ್ಥಿ, ಸಣ್ಣ ಸಣ್ಣ ರೆಂಬೆಗಳನ್ನು ಟ್ರಿಮ್ ಮಾಡುತ್ತ ಮೇಲೆ ಹತ್ತುತ್ತಿದ್ದ. ಮೇಲೆ ಹತ್ತಿ ಅಚ್ಚುಕಟ್ಟಾಗಿ ಮರದ ರೆಂಬೆ ಕೊಂಬೆಗಳನ್ನ ಕತ್ತರಿಸತೊಡಗಿದ. ಕೆಲವೊಮ್ಮೆ ಅಪಾಯಕಾರಿಯಾಗಿ ರೆಂಬೆಗಳ ಮೇಲೆ ಕಾಲಿಟ್ಟು ಶಿಷ್ಯ ಮರ ಕತ್ತರಿಸುತ್ತಿದ್ದರೂ, ಮಾಸ್ಟರ್ ಒಂದೂ ಮಾತನಾಡದೇ ಮೌನದಿಂದ ಶಿಷ್ಯನ ಕೆಲಸ ಗಮನಿಸುತ್ತಿದ್ದ.

ಮರದ ತುಟ್ಟ ತುದಿ ತಲುಪಿದ ಶಿಷ್ಯ ಮಟ್ಟಸವಾಗಿ ತುದಿಯನ್ನ ಪೂರ್ಣವಾಗಿ ಕತ್ತರಿಸಿದ. ಮಾಸ್ಟರ್ ಏನಾದರೂ ಸಲಹೆ ನೀಡಬಹುದೆಂದು ವಿದ್ಯಾರ್ಥಿ ಸ್ವಲ್ಪಹೊತ್ತು ಕಾಯುತ್ತಿದ್ದ. ಆದರೆ ಮಾಸ್ಟರ್ ಒಂದು ಮಾತೂ ಆಡಲಿಲ್ಲ. ಕೊನೆಗೆ ವಿದ್ಯಾರ್ಥಿ ಮರದಿಂದ ಕೆಳಗೆ ಇಳಿಯತೊಡಗಿದ. ಉಳಿದಿಕೊಂಡಿದ್ದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತ ವಿದ್ಯಾರ್ಥಿ ಬಹುತೇಕ ಮರದ ಕೆಳಗಿನ ರೆಂಬೆಯ ಹತ್ತಿರ ಬಂದು ತಲುಪಿದ.

ಅತ್ಯಂತ ಕೆಳ ರೆಂಬೆಯನ್ನು ತಲುಪಿದ ವಿದ್ಯಾರ್ಥಿ ಇನ್ನೇನು ಮರದಿಂದ ನೆಲಕ್ಕೆ ಇಳಿಯುವ ಹೊತ್ತಿನಲ್ಲಿ ಮಾಸ್ಟರ್ ಜೋರಾಗಿ ಕೂಗಿದ, “ಹುಷಾರು”

ವಿದ್ಯಾರ್ಥಿಯನ್ನೂ ಸೇರಿ ಅಲ್ಲಿ ನೆರೆದಿದ್ದ ಹಳ್ಳಿಗರಿಗೆಲ್ಲ ಮಾಸ್ಟರ್ ನ ಈ ಆತಂಕಭರಿತ ದನಿ ಕೇಳಿ ಸಖೇದಾಶ್ಚರ್ಯವಾಯಿತು. ಮರದ ತುದಿಯಲ್ಲಿ ವಿದ್ಯಾರ್ಥಿ ಅಪಾಯಕಾರಿಯಾಗಿ ಮರ ಕತ್ತರಿಸುತ್ತಿದ್ದಾಗ ನಿರಾಳವಾಗಿ ಒಂದು ಮಾತನಾಡದೇ ನಿಂತಿದ್ದ ಮಾಸ್ಟರ್, ವಿದ್ಯಾರ್ಥಿ ಇನ್ನೇನು ಒಂದು ಹೆಜ್ಜೆಯಷ್ಟು ಹತ್ತಿರದಿಂದ ಮರ ಇಳಿಯುತ್ತಿದ್ದಾಗ ಆತಂಕದಿಂದ ಎಚ್ಚರಿಸಿದ್ದರ ಕಾರಣ ತಿಳಿದುಕೊಳ್ಳಲು ಎಲ್ಲರೂ ಮಾಸ್ಟರ್ ನ ಪ್ರಶ್ನೆ ಮಾಡಿದರು,

“ಯಾಕೆ ಮಾಸ್ಟರ್ ಹುಡುಗ ಇಷ್ಟು ಹತ್ತಿರದಿಂದ ಮರ ಇಳಿಯುವಾಗ ನಿಮಗೆ ಆತಂಕ ಆಯ್ತು?”.

“ನಾವು ಹೊಸ, ಅಪಾಯಕಾರಿ ಸಂದರ್ಭಗಳನ್ನು ತಲುಪಿದಾಗ ಬಹಳ ಎಚ್ಚರದಲ್ಲಿ ಮೈಯೆಲ್ಲ ಕಣ್ಣಾಗಿರುತ್ತೇವೆ. ಆದರೆ ಎಲ್ಲ ಅಪಾಯ ತೀರಿತು ಇನ್ನೇನು ನಮ್ಮ ಗುರಿ ತಲುಪಿದೆವು ಎಂದಾಗ ಅಜಾಗರೂಕರಾಗಿಬಿಡುತ್ತೇವೆ. ಅಪಾಯಕಾರಿ ಮರವನ್ನ ಬಹಳ ಜಾಗರೂಕತೆಯಿಂದ ಹತ್ತಿ ಇಳಿದ ನನ್ನ ಶಿಷ್ಯ, ಇಳಿಯುವ ಕೊನೆಯ ಹೆಜ್ಜೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಅಜಾಗರೂಕನಾಗಿ ತನ್ನ ಸಮತೋಲನವನ್ನ ಕಳೆದುಕೊಂಡಿದ್ದು ನನಗೆ ಕಾಣಿಸಿತು. ಅದಕ್ಕೆ ನನಗೆ ಅವನ ಬಗ್ಗೆ ಆತಂಕವಾಯ್ತು” ಮಾಸ್ಟರ ಹಳ್ಳಿಗರಿಗೆ ತನ್ನ ಆತಂಕದ ಕಾರಣ ವಿವರಿಸಿದ.

Leave a Reply