ಹೃದಯ ಕೇಂದ್ರಿತ ಸ್ಥಿತಿ… : ಓಶೋ ವ್ಯಾಖ್ಯಾನ

ಇದು ಹೃದಯ ಕೇಂದ್ರಿತ ಮನುಷ್ಯನ ಸ್ಥಿತಿ, ತಾಯಿಯನ್ನು ಬಿಡಲು ಕೂಡ ತಾಯಿಯ ಆಜ್ಞೆ ಅವಶ್ಯಕ ಅವರಿಗೆ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ರಾಮಕೃಷ್ಣರು ಸಂಪೂರ್ಣ ಅನಕ್ಷರಸ್ಥ ವ್ಯಕ್ತಿ ಅವರು ತರ್ಕವನ್ನು ಅವಲಂಬಿಸಿದವರಲ್ಲ. ಅವರದು ಶುದ್ಧ ಹೃದಯ ಕೇಂದ್ರಿತ ವ್ಯಕ್ತಿತ್ವ. ಅವರ ಇಡೀ ಚೈತನ್ಯ ಕೇವಲ ಒಂದು ಕೇಂದ್ರದ ಮೂಲಕ ಹಾಡುತ್ತಿತ್ತು ಮತ್ತು ಆ ಕೇಂದ್ರ ಅವರ ಹೃದಯವಾಗಿತ್ತು.

ಆದರೆ ಜಿಡ್ಡು ಕೃಷ್ಣಮೂರ್ತಿ ಶುದ್ಧ ತರ್ಕದ ಮನುಷ್ಯ. ಅವರು ಬೆಳೆದು ಬಂದದ್ದು ಜಗತ್ತಿನ ಪ್ರಖರ ತಾರ್ಕಿಕ ವ್ಯಕ್ತಿತ್ವಗಳ ನಡುವೆ – Annie Besant, Leadbeater and the Theosophists. ಇವರು ಜಗತ್ತಿನ ಅತ್ಯಂತ ಶ್ರೇಷ್ಠ system makers ಎಂದು ಗುರುತಿಸಲ್ಪಡುತ್ತಾರೆ. ನಿಜವಾಗಿಯೂ ಥಿಯಾಸೊಫಿ ಎನ್ನುವುದು ಈ ಜಗತ್ತಿನಲ್ಲಿ ಕಟ್ಟಲಾಗಿರುವ ಅತ್ಯಂತ ಶ್ರೇಷ್ಠ ವ್ಯವಸ್ಥೆ, absolutely rational. ಜಿಡ್ಡು ಅವರನ್ನ ತರಬೇತುಗೊಳಿಸಿದ್ದು ಇಂಥ ಶುದ್ಧ ತರ್ಕಾಧಾರಿತ ವ್ಯವಸ್ಥೆ. ಜಿಡ್ಡು ಹೃದಯ, ಪ್ರೇಮದ ಬಗ್ಗೆ ಮಾತಾಡಿದಾಗ ಕೂಡ ಅದು ಅವರ ತಾರ್ಕಿಕ ವ್ಯವಸ್ಥೆಯ ಅಭಿವ್ಯಕ್ತಿಯೇ.

ಆದರೆ ರಾಮಕೃಷ್ಣರು ತಮ್ಮನ್ನು ಅಭಿವ್ಯಕ್ತಿಸಿಕೊಳ್ಳುವುದು ಹೃದಯದ ಮೂಲಕ. ಅವರು ಹೃದಯವನ್ನು ತಮ್ಮ ಸಂದೇಶದ ವಾಹಕವಾಗಿ ಬಳಸುತ್ತಾರೆ. ತಮ್ಮ ಹೊಕ್ಕಳದ ಬಳಿ ಅವರಿಗೆ ಏನು ದೊರೆತಿದೆಯೋ ಅದನ್ನ ಅವರು ತಮ್ಮ ಹೃದಯದ ಮೂಲಕ ವ್ಯಕ್ತಮಾಡುತ್ತಾರೆ. ಅವರು ಹಾಡುತ್ತಾರೆ, ಕುಣಿಯುತ್ತಾರೆ – ಇದು ಅವರು ತಮ್ಮ ಆನಂದವನ್ನು ವ್ಯಕ್ತಮಾಡುವ ವಿಧಾನ. ಅವರಿಗೆ ಬ್ಲಿಸ್ ದೊರೆತದ್ದು ಬೇರೆಲ್ಲೂ ಅಲ್ಲ ಹೊಕ್ಕಳದ ಒಳಗೆ. ಅವರ ಚೈತನ್ಯ ಸ್ಥಿರವಾಗಿರುವುದು ಹೊಕ್ಕಳದಲ್ಲಿ, ಆದರೆ ಬೇರೆಯವರಿಗೆ ಹೇಗೆ ಹೇಳುವುದು? ಆದ್ದರಿಂದಲೇ ಅವರು ಹೃದಯವನ್ನು ತಮ್ಮ ಅಭಿವ್ಯಕ್ತಿಗೆ ಬಳಸುತ್ತಾರೆ.

ರಾಮಕೃಷ್ಣರದು ಸಂಪೂರ್ಣ ವಿಭಿನ್ನ ವ್ಯಕ್ತಿತ್ವ, ಅವರು ತರ್ಕದ ಬಗ್ಗೆ ಮಾತನಾಡುವಾಗ ಅದು ಅಸಂಗತವಾಗಿರುತ್ತದೆ. ಅವರು ತೋತಾಪುರಿ ಗುರುವಿನ ಬಳಿ ವೇದಾಂತದ ಅಧ್ಯಯನ ಮಾಡುತ್ತಿದ್ದರು. ಒಮ್ಮೆ ತೋತಾಪುರಿಗಳು ರಾಮಕೃಷ್ಣರುಗೆ ಹೇಳುತ್ತಾರೆ, “ ಈ ಭಕ್ತಿ ಗಿಕ್ತೀ ಎನ್ನುವ ಮೂರ್ಖತನ ಎಲ್ಲ ಬಿಟ್ಟುಬಿಡು, ತಾಯಿ, ಕಾಳಿಯನ್ನ ಸಂಪೂರ್ಣವಾಗಿ ಮರೆತುಬಿಡು. ಈ ಎಲ್ಲವನ್ನೂ ತ್ಯಜಿಸಿದ ಹೊರತು ನಾನು ನಿನಗೆ ವೇದಾಂತವನ್ನು ಹೇಳಿಕೊಡುವುದಿಲ್ಲ ಏಕೆಂದರೆ ವೇದಾಂತ ಎನ್ನುವುದು ಭಕ್ತಿಯಲ್ಲ ಅದು ಶುದ್ಧ ಜ್ಞಾನ.

“ಸರಿ ನನಗೆ ಒಂದು ಕ್ಷಣ ಕೊಡಿ ನಾನು ತಾಯಿ ಕಾಳಿಯನ್ನ ಕೇಳಿಕೊಂಡು ಬರುತ್ತೇನೆ ಈ ಮೂರ್ಖತನವನ್ನು ಬಿಡಬಹುದಾ ಅಂತ, ಕೊಂಚ ಸಮಯ ಕೊಡಿ” ರಾಮಕೃಷ್ಣರು ತೋತಾಪುರಿಯವರನ್ನು ಬೇಡಿಕೊಳ್ಳುತ್ತಾರೆ.

ಇದು ಹೃದಯ ಕೇಂದ್ರಿತ ಮನುಷ್ಯನ ಸ್ಥಿತಿ, ತಾಯಿಯನ್ನು ಬಿಡಲು ಕೂಡ ತಾಯಿಯ ಆಜ್ಞೆ ಅವಶ್ಯಕ ಅವರಿಗೆ. ರಾಮಕೃಷ್ಣ ಮುಂದುವರೆದು ಹೇಳುತ್ತಾರೆ “ ತಾಯಿ ಅತ್ಯಂತ ಪ್ರೀತಿಯವಳು ಅವಳು ಯಾವಾಗಲೂ ನನಗೆ ಯಾವುದನ್ನೂ ಬೇಡ ಅಂದಿಲ್ಲ. ತಾಯಿ, ವೇದಾಂತ ಕಲಿಯಲು ನಾನು ನಿನ್ನ ಬಿಡಲೇಬೇಕಾಗಿದೆ, ಈ ಮೂರ್ಖ ಭಕ್ತಿಯನ್ನ ನಾನು ಮುಂದುವರೆಸಲಾರೆ ಎಂದು ನಾನು ತಾಯಿಯನ್ನ ಬೇಡಿಕೊಂಡರೆ ಆಕೆ ಬೇಡ ಎನ್ನುವುದಿಲ್ಲ. ಆಕೆ ಈ ಎಲ್ಲವನ್ನೂ ಬಿಟ್ಟುಬಿಡಲು ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತಾಳೆ”.

ತೋತಾಪುರಿಯವರಿಗೆ ರಾಮಕೃಷ್ಣರ ಈ ಮಾತು ಅರ್ಥ ಆಗಲಿಲ್ಲ.

ನಿಮ್ಮ ಮೆದುಳು ಮತ್ತು ಹೃದಯದ ನಡುವೆ ಒಂದು ಸೇತುವೆ ನಿರ್ಮಾಣ ಆಗಲಿ. ಆಗ ನಿಮಗೆ ಈ ಜ್ಞಾನೋದಯ ಆದ ಮನುಷ್ಯರ ಮಾತುಗಳು ಅರ್ಥವಾಗಲು ಆರಂಭಿಸುತ್ತವೆ. ಈ ಎಲ್ಲರೂ ಒಂದೇ ಮಾತು ಮಾತನಾಡುತ್ತಿದ್ದಾರೆ ಭಾಷೆ , ಅಭಿವ್ಯಕ್ತಿ ಬೇರೆ ಬೇರೆ ಅಷ್ಟೇ.

Leave a Reply