ಆಯ್ಕೆ ನಿಮ್ಮದು… : ಓಶೋ ವ್ಯಾಖ್ಯಾನ

ಎಂಥ ಸಂಕಟದ ಪರಿಸ್ಥಿತಿಯಲ್ಲೂ ಖುಶಿಯಿಂದ ಬದುಕುವ ಜನ ಇದ್ದಾರೆ ಮತ್ತು ಅರಮನೆಯ ರಾಜ ಭೋಗಗಳಲ್ಲಿಯೂ ದುಃಖದಿಂದ ನರಳುವ ಜನ ಇದ್ದಾರೆ. ಆಯ್ಕೆ ನಿಮ್ಮದು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮ್ಮ ಎದುರು
ಎಲ್ಲ
ಎಡವಟ್ಟು ಆಯ್ಕೆಗಳೇ ಇದ್ದರೆ
ಈ ಪ್ರೇಮ ಎನ್ನುವ ಎಡವಟ್ಟನ್ನೇ
ಆಯ್ಕೆ ಮಾಡಿಕೊಳ್ಳಿ.

ಭಗವಂತನನ್ನು ಮುಟ್ಟಲು ಇದು
ಬಲು ಸುಲಭದ ದಾರಿ.
ಐಶ್ವರ್ಯ ಅಂತಸ್ತು ಇರದಿದ್ದರೂ
ಅಂಥ ಹೆದರುವ ಕಾರಣ ಇಲ್ಲ,
ಆದರೆ
ಈ ಪ್ರೇಮದ ಎಡವಟ್ಟು ನಿಮ್ಮನ್ನ
ಸತಾಯಿಸದೇ ಹೋದರೆ ಹೇಗೆ?

ಒಮ್ಮೆ ಶಾಂತ ಮನಸ್ಸಿನಿಂದ
ಯೋಚನೆ ಮಾಡಿ ದಯವಿಟ್ಟು.

– ರೂಮಿ.


ಸದಾ ಖುಶಿಯಾಗಿರುತ್ತಿದ್ದ ಒಬ್ಬ ಸೂಫಿ ಅನುಭಾವಿಯನ್ನ ಜನ ಪ್ರಶ್ನೆ ಮಾಡಿದರು.

“ಸುಮಾರು ಎಪ್ಪತ್ತು ವರ್ಷಗಳಿಂದ ನಿನ್ನ ನೋಡುತ್ತಿದ್ದೇವೆ, ಒಂದು ದಿನವೂ ನೀನು ದುಃಖದಲ್ಲಿರುವುದನ್ನ ನಾವು ನೋಡಿಲ್ಲ, ಸದಾ ಹಸನ್ಮುಖಿಯಾಗಿ ಖುಷಿಯಿಂದ ಇರುತ್ತೀಯ, ಇದರ ರಹಸ್ಯ ಏನು?”

“ಇದರಲ್ಲಿ ಅಂಥ ರಹಸ್ಯ ಏನಿಲ್ಲ. ಪ್ರತಿದಿನ ಮುಂಜಾನೆ ನಾನು ನಿದ್ದೆಯಿಂದ ಎದ್ದ ಮೇಲೆ ಐದು ನಿಮಿಷ ಧ್ಯಾನ ಮಾಡುತ್ತೇನೆ. ಆಗ ನನ್ನನ್ನು ನಾನು ಕೇಳಿಕೊಳ್ಳುತ್ತೇನೆ, ಈಗ ನಿನ್ನ ಮುಂದಿರುವುದು ಎರಡು ಆಯ್ಕೆಗಳು, ಒಂದು ಖುಶಿಯಾಗಿರುವುದು ಮತ್ತು ಇನ್ನೊಂದು ಶೋಚನೀಯವಾಗಿರುವುದು. ಒಂದು ಸಾಧ್ಯತೆಯನ್ನ ಆಯ್ಕೆ ಮಾಡು. ನಂತರ ನಾನು ಸಾವಾಗಲೂ ಖುಷಿಯ ಸಾಧ್ಯತೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ”.
ಸೂಫಿ ಉತ್ತರಿಸಿದ.

ನಿಮ್ಮ ಮುಂದೆ ಹಲವಾರು ಸಾಧ್ಯತೆಗಳಿವೆ. ಸದಾ ಖುಷಿಯ ಸಾಧ್ಯತೆಯನ್ನೇ ಆಯ್ಕೆ ಮಾಡಿಕೊಳ್ಳಿ. ಎಂಥ ಸಂಕಟದ ಪರಿಸ್ಥಿತಿಯಲ್ಲೂ ಖುಶಿಯಿಂದ ಬದುಕುವ ಜನ ಇದ್ದಾರೆ ಮತ್ತು ಅರಮನೆಯ ರಾಜ ಭೋಗಗಳಲ್ಲಿಯೂ ದುಃಖದಿಂದ ನರಳುವ ಜನ ಇದ್ದಾರೆ.

ಆಯ್ಕೆ ನಿಮ್ಮದು.

ಒಮ್ಮೆ ಒಬ್ಬ ಮನುಷ್ಯ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ತುಂಬ ಹೊತ್ತು ಪ್ರವಾಸ ಮಾಡಿದ್ದರಿಂದ ಬಹಳ ದಣಿದಿದ್ದ. ಅವನ ಹೊಟ್ಟೆ ಚುರುಗುಡುತ್ತಿತ್ತು. ದಣಿವಾರಿಸಿಕೊಳ್ಳಲು ಅವ ಒಂದು ದೊಡ್ಡ ಮರದ ಕೆಳಗೆ ಹೋಗಿ ಕುಳಿತುಕೊಂಡ.

ಆ ಮರ ಜನರಿಗೆ ಕೇಳಿಕೊಂಡಿದ್ದನ್ನು ಕೊಡುವ ಅಪರೂಪದ ಮರ. ಅವನಿಗೆ ಮರದ ಈ ಅದ್ಭುತ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ. ಆ ಮನುಷ್ಯ ಸ್ವಲ್ಪ ಹೊತ್ತು ಅಲ್ಲಿ ಕುಳಿತು ದಣಿವಾರಿಸಿಕೊಂಡ.

“ ಇಲ್ಲೇ ಎಲ್ಲಾದರೂ ಒಂದಿಷ್ಟು ಊಟ ಸಿಕ್ಕಿದ್ದರೆ ಚೆನ್ನಾಗಿತ್ತು” ಎಂದು ಮನಸ್ಸಿನಲ್ಲೇ ಅಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ಒಬ್ಬ ಸುಂದರ ಸ್ತ್ರೀ ಊಟದೊಂದಿಗೆ ಅವನ ಮುಂದೆ ಪ್ರತ್ಯಕ್ಷಳಾದಳು. ಆ ಮನುಷ್ಯನಿಗೆ ಎಷ್ಟು ಹಸಿವಾಗಿತ್ತೆಂದರೆ ಆ ಊಟ ಎಲ್ಲಿಂದ ಬಂತು ಎನ್ನುವುದನ್ನ ವಿಚಾರ ಮಾಡದೇ ಹೊಟ್ಟೆ ತುಂಬ ಊಟ ಮಾಡಿದ.

ಊಟ ಮುಗಿದ ಮೇಲೆ ಅವನಿಗೆ, ಒಂದು ಗಂಟೆ ನಿದ್ದೆ ಮಾಡಿದರೆ ಚೆನ್ನ ಅನಿಸಿತು. ಆದರೆ ಅಲ್ಲಿ ತುಂಬ ಕಲ್ಲು ಮುಳ್ಳುಗಳಿದ್ದವು. ಮಲಗಿಕೊಳ್ಳಲು ಒಂದು ಹಾಸಿಗೆ ಇರಬೇಕಾಗಿತ್ತು ಎಂದುಕೊಂಡ. ಕೂಡಲೇ ಒಬ್ಬ ಸ್ತ್ರೀ ಒಂದು ಭವ್ಯ ಹಾಸಿಗೆಯೊಂದಿಗೆ ಪ್ರತ್ಯಕ್ಷವಾದಳು. ಅವನಿಗೆ ನಿದ್ದೆ ಎಷ್ಟು ತೀವ್ರವಾಗಿತ್ತೆಂದರೆ ಯಾವ ಆಲೋಚನೆಯನ್ನೂ ಮಾಡದೆ ಆ ಹಾಸಿಗೆಯ ಮೇಲೆ ಮಲಗಿಕೊಂಡು ಬಿಟ್ಟ.

ನಿದ್ದೆ ಮಾಡಿ ಎದ್ದ ಮೇಲೆ ಅವನು ಯೋಚನೆ ಮಾಡಲು ಶುರು ಮಾಡಿದ. ಈ ಕಾಡಿನಲ್ಲಿ ನನ್ನ ಬಿಟ್ಟು ಬೇರೆ ಯಾರೂ ಕಾಣುತ್ತಿಲ್ಲ ಹಾಗೆಂದ ಮೇಲೆ ಈ ಊಟ ಮತ್ತು ಹಾಸಿಗೆ ತಂದು ಕೊಟ್ಟವರು ಯಾರು? ಇದು ಯಾವುದೂ ದೆವ್ವಗಳ ಕೆಲಸವೇ ಎಂದು ಎಂದುಕೊಂಡ. ಅವನು ಹಾಗೆ ಎಂದುಕೊಳ್ಳುವುದೇ ತಡ ದೆವ್ವಗಳು ಅವನ ಮುಂದೆ ಹಾಜರಾದವು.

ದೆವ್ವಗಳನ್ನು ನೋಡುತ್ತಿದ್ದಂತೆಯೇ ಆ ಮನುಷ್ಯ ಗಾಬರಿಯಾದ. ಅಯ್ಯೋ ದೇವರೇ ಈ ದೆವ್ವಗಳು ನನ್ನ ಬಿಡುವುದಿಲ್ಲ ಕೊಂದು ಬಿಡುತ್ತವೆ ಎಂದುಕೊಂಡ. ಅವನು ಹಾಗೆ ಅಂದು ಕೊಳ್ಳುವುದೇ ತಡ ದೆವ್ವಗಳು ಅವನನ್ನು ಕೊಂದು ಹಾಕಿಬಿಟ್ಟವು.


—Osho—
Unio Mystica
Vol 2, Ch #10: We shall meet again
am in Buddha Hall
[ via Bodhisattva Shree Amithaba
Subhuti ]

Leave a Reply