“ವ್ಯಕ್ತಿಯೊಬ್ಬ ಧಾರ್ಮಿಕ ಮನುಷ್ಯ, ಸಮಾಜದಲ್ಲಿ ಗೌರವಾನ್ವಿತ ಮನುಷ್ಯ, ನೈತಿಕ ಮನುಷ್ಯ ಎಲ್ಲ ಸರಿ, ಆದರೆ ಈ ಎಲ್ಲವೂ ಅವನ ಅಹಂ ನ ಸಪೋರ್ಟ್ ಮಾಡುವ ಸಂಗತಿಗಳೇ ಆಗಿವೆ” ಅನ್ನುತ್ತಾರೆ ಓಶೋ… | ಚಿದಂಬರ ನರೇಂದ್ರ
ನಿಮ್ಮ
ಒಂದೇ ಒಂದು ತುಣುಕು
ನಿಮ್ಮೊಳಗೆ ಉಳಿದು ಹೋದರೂ
ವಿಗ್ರಹಗಳನ್ನು ಪೂಜಿಸುವ ಕರ್ಮದಿಂದ
ನೀವು ಪಾರಾಗಲಾರಿರಿ.
ಹಾಗಂತ
ಕಾರಣದ ಕೊಡಲಿಯಿಂದ
ಸಂಶಯ, ಅನುಮಾನಗಳನ್ನೆಲ್ಲ
ಕೊಚ್ಚುತ್ತ ಹೋದರೆ
ಅಲ್ಲೊಂದು ಸುಳ್ಳು ಮೂರ್ತಿ
ಹುಟ್ಟಿಕೊಳ್ಳುತ್ತದೆ.
ಅದರ ಹೆಸರೇ ‘ ಆತ್ಮವಿಶ್ವಾಸ ‘
– ರೂಮಿ
ಮುಲ್ಲಾ ನಸ್ರುದ್ದೀನ್ ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಜನರ ಬದುಕನ್ನ ಕಠಿಣ ಮಾಡಿಬಿಟ್ಟಿದ್ದ. ನಸ್ರುದ್ದೀನ್ ತನ್ನ ಯಾವ ತಪ್ಪನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ತನ್ನಿಂದ ತಪ್ಪಾಗುವುದು ಸಾಧ್ಯವೇ ಇಲ್ಲ ಎಂದು ಅವನು ನಂಬಿದ್ದ. ನಸ್ರುದ್ದೀನ್ ನ ಈ ಸ್ವಭಾವದ ಕಾರಣವಾಗಿ ಅವನ ಜೊತೆ ಕೆಲಸ ಮಾಡುವವರಿಗೆಲ್ಲ ಇರುಸುಮುರುಸಾಗುತ್ತಿತ್ತು.
ಕೊನೆಗೊಮ್ಮೆ ಒಬ್ಬ ಸಹವರ್ತಿ ಪ್ರಶ್ನೆ ಮಾಡಿದ, “ನಸ್ರುದ್ದೀನ್ ನೀನು ಮಾಡುವುದು ಯಾವಾಗಲೂ ಸರಿಯಾಗಿರುವುದು ಹೇಗೆ ಸಾಧ್ಯ, ಒಮ್ಮಿಲ್ಲ ಒಮ್ಮೆ ನೀನು ತಪ್ಪು ಮಾಡಿರಲೇಬೇಕಲ್ಲವೆ?”
“ಹೌದು ಒಮ್ಮೆ ಮಾತ್ರ ನನ್ನಿಂದ ತಪ್ಪು ಆಗಿದೆ ಎಂದು ನನಗೆ ಅನಿಸಿದೆ” ನಸ್ರುದ್ದೀನ ಒಪ್ಪಿಕೊಂಡ.
“ಯಾವಾಗ ಯಾವಾಗ?” ಸಹವರ್ತಿ ಆಶ್ಚರ್ಯದಿಂದ ಕೇಳಿದ. ನಸ್ರುದ್ದೀನ್ ಹೀಗೆ ಇಷ್ಟು ಸುಲಭವಾಗಿ ಒಪ್ಪಿಕೊಳ್ಳಬಹುದೆಂದು ಅವನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.
“ ಒಮ್ಮೆ ಮಾತ್ರ ನನ್ನಿಂದ ತಪ್ಪು ಆಗಿದೆ ಅಂತ ನನಗೆ ಅನಿಸಿತ್ತು ಆದರೆ ವಾಸ್ತವದಲ್ಲಿ ಅದು ತಪ್ಪು ಆಗಿರಲಿಲ್ಲ” ನಸ್ರುದ್ದೀನ್ ಉತ್ತರಿಸಿದ.
ಓಶೋ ಹೇಳುತ್ತಾರೆ,
ಅಹಂ ಎನ್ನುವುದು ಭಯಂಕರ ರಕ್ಷಣಾತ್ಮಕ. ತನ್ನದು ತಪ್ಪು ಎಂದು ಅಹಂ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದಲೇ ಜನ ಸಂಕಟದಲ್ಲಿದ್ದಾರೆ. ನಿಮ್ಮೊಳಗಿನ ಲೋಪದೋಷಗಳನ್ನ ನೀವೇ ಹುಡುಕಿ, ಇನ್ನೊಬ್ಬರು ಗಮನಿಸಿ ಹೇಳಿದರೆ ಒಪ್ಪಿಕೊಳ್ಳಿ, ನಿಮ್ಮ ಅಹಂ ನ ನಿಧಾನವಾಗಿ ದುರ್ಬಲಗೊಳಿಸುತ್ತ ಹೋಗಿ ಕೊನೆಗೊಮ್ಮೆ ಅದು ಸಂಪೂರ್ಣವಾಗಿ ಮುರಿದು ಬೀಳುತ್ತದೆ. ಯಾವತ್ತೂ ಅಹಂ ನ ಸಪೋರ್ಟ ಮಾಡಬೇಡಿ, ಅಹಂ ಗೆ ಸಹಕಾರ ಕೊಡುವುದೆಂದರೆ ನಿಮ್ಮ ಸಂಕಟಕ್ಕೆ ನೀವೇ ಇಂಬು ಕೊಟ್ಟಂತೆ. ಕೆಲವೊಮ್ಮೆ ಒಳ್ಳೆಯ ರೀತಿಯಲ್ಲಿ ಕೆಲವೊಮ್ಮೆ ಕೆಟ್ಟ ರೀತಿಯಲ್ಲಿ ನಾವೆಲ್ಲರೂ ಅಹಂ ಗೆ ನೀರೆರೆಯುವವರೇ.
ನೀವು ಒಬ್ಬ ಮನುಷ್ಯನನ್ನು ಒಳ್ಳೆಯವ, ನೈತಿಕ, ಗೌರವಾನ್ವಿತ ವ್ಯಕ್ತಿ ಎಂದು ಸಮಾಜದಲ್ಲಿ ಗುರುತಿಸುತ್ತೀರಿ. ಆದರೆ ಅವನು ಕೂಡ ತನ್ನ ಅಹಂ ನ ಸಲಹುವ ಸಂಗತಿಗಳನ್ನ ಸಾಕಿಕೊಂಡಿದ್ದಾನೆ. ಆ ವ್ಯಕ್ತಿ ಪ್ರತಿದಿನ ಮಂದಿರ, ಮಸೀದಿ, ಚರ್ಚ್ ಗೆ ಹೋಗುತ್ತಾನೆ. ಗೀತಾ, ಕುರಾನ್, ಬೈಬಲ್ ಓದುತ್ತಾನೆ, ಸಮಾಜದ ನಿಯಮಗಳನ್ನು ಅನುಸರಿಸುತ್ತಾನೆ. ಹೀಗೆಲ್ಲ ಮಾಡುವ ಮೂಲಕ ಅವನು ಕೂಡ ತನ್ನ ಅಹಂ ನ ಸಲಹುವ ಸಾಮಗ್ರಿಗಳನ್ನು ಒಟ್ಟು ಮಾಡುತ್ತಿದ್ದಾನೆ. ಅವನು ಧಾರ್ಮಿಕ ಮನುಷ್ಯ, ಸಮಾಜದಲ್ಲಿ ಗೌರವಾನ್ವಿತ ಮನುಷ್ಯ, ನೈತಿಕ ಮನುಷ್ಯ ಎಲ್ಲ ಸರಿ, ಆದರೆ ಈ ಎಲ್ಲವೂ ಅವನ ಅಹಂ ನ ಸಪೋರ್ಟ್ ಮಾಡುವ ಸಂಗತಿಗಳೇ ಆಗಿವೆ.
ಇನ್ನೊಬ್ಬ ಮನುಷ್ಯ ಇದ್ದಾನೆ. ಅವನು ಯಾವತ್ತೂ ಸಮಾಜದ ನಿಯಮಗಳನ್ನು ಫಾಲೋ ಮಾಡುವುದಿಲ್ಲ. ಅವನು ಯಾವ ಗುಡಿ ಗುಂಡಾರಗಳಿಗೂ ಹೋಗುವುದಿಲ್ಲ, ಅವಕಾಶ ಸಿಕ್ಕಾಗಲೆಲ್ಲ ಅವನು ಸಮಾಜದ ನಿಯಮಗಳನ್ನು ಮುರಿಯುತ್ತಾನೆ. ನಿಯಮಗಳನ್ನು ಮುರಿಯುವುದೆಂದರೆ ಅವನಿಗೆ ಎಲ್ಲಿಲ್ಲದ ಸಂತೋಷ. ಅವನು ಇನೊಂದು ಬಗೆಯಲ್ಲಿ ತನ್ನ ಅಹಂ ನ ಸಪೋರ್ಟ ಮಾಡಿಕೊಳ್ಳುತ್ತಿದ್ದಾನೆ, ಆನಂದಿಸುತ್ತಿದ್ದಾನೆ. ಇದು ಅನೈತಿಕ ಮನುಷ್ಯನ ಕ್ರಿಮಿನಲ್ ಅಹಂ.
ಲೋಕ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎನ್ನುವವರು ಮತ್ತು ಮುರಿಯುತ್ತಿದ್ದೇವೆ ಎನ್ನುವವರು ಇಬ್ಬರೂ ಮಾಡುತ್ತಿರುವುದು ಒಂದೇ ಕೆಲಸ. ಅವರಿಬ್ಬರೂ ತಮ್ಮ ಅಹಂ ನ ಪೋಷಿಸುವ ಸಾಮಗ್ರಿಗಳನ್ನು ಒಟ್ಟು ಮಾಡುತ್ತಿದ್ದಾರೆ. ಹೀಗೆ ಮಾಡುವ ಮೂಲಕ ತಮ್ಮ ಸಂಕಟವನ್ನು ತಾವೇ ಪೋಷಿಸಿಕೊಳ್ಳುತ್ತಿದ್ದಾರೆ – ಅನ್ನುತ್ತಾರೆ ಓಶೋ.
OSHO: The Discipline of Transcendence, Vol 2
Discourses on the 42 Sutras of Buddha
Chapter_8: A distant star

