ನಾರಾಯಣ ಗುರುಗಳ ಸಂವಾದಗಳು, ಮಾತುಕತೆಗಳು, ಕಿರು ಆಶೀರ್ವಚನಗಳು ಇತ್ಯಾದಿಗಳನ್ನು ಆ ಕಾಲದ ಹಲವು ಪತ್ರಿಕೆಗಳು ಪ್ರಕಟಿಸಿವೆ. ಸ್ವಾಮಿ ಧರ್ಮತೀರ್ಥರ ನೇತೃತ್ವದಲ್ಲಿ ಶಿವಗಿರಿ ಮಠದ ಮುಖವಾಣಿಯಾಗಿ ಪ್ರಕಟಣೆ ಆರಂಭಿಸಿದ ‘ಧರ್ಮಂ’ ಎಂಬ ಪತ್ರಿಕೆಯಲ್ಲಿ ಗುರುಗಳ ಅನೇಕ ಸಂವಾದಗಳು ಹಾಗೂ ಮತ್ತಿತರ ಕೃತಿಗಳು ಮೊದಲು ಪ್ರಕಟವಾದವು.’ಧರ್ಮಂ’ನ 1927ರ ಡಿಸೆಂಬರ್ 19ರ ಸಂಚಿಕೆಯಲ್ಲಿ ಪ್ರಕಟವಾದ ಸಂವಾದವೊಂದರ ಆಯ್ದ ಭಾಗವನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ । ಎನ್.ಎ.ಎಂ.ಇಸ್ಮಾಯಿಲ್
ಜಾತಿಯನ್ನು ಹುಟ್ಟು ಹಾಕಿದವರು, ಜಾತಿಯಿಂದ ಲಾಭ ಪಡೆಯುತ್ತಿರುವವರು ಜಾತಿಯೇಕೆ ಅಗತ್ಯ ಎಂಬುದಕ್ಕೆ ಹಲವು ತರ್ಕಗಳನ್ನೂ ಹುಟ್ಟು ಹಾಕಿದ್ದಾರೆ. ಅಂಥದ್ದೊಂದು ತರ್ಕದ ಪೊಳ್ಳುತನವನ್ನು ಗುರುಗಳು ಈ ಸಂವಾದದಲ್ಲಿ ತೋರಿಸಿ ಕೊಟ್ಟಿದ್ದಾರೆ.
ಗುರು: ಮನುಷ್ಯನಿಗೆ ಜಾತಿಯಿಲ್ಲ ಎಂದು ನಾವು ಹೇಳಿದ್ದನ್ನು ಬರೆದು ಓದುವುದೇನೋ ಸರಿಯೇ. ಆದರೆ ಅದಷ್ಟೇ ಸಾಕಾಗದು. ಜಾತಿ ಇದೆಯೆಂಬ ವಿಚಾರವನ್ನೇ ಅಳಿಸಿ ಹಾಕುವುದು ಅಗತ್ಯ. ಜಾತಿ ಸೂಚಕ ಹೆಸರುಗಳನ್ನು ಬಳಸಬಾರದು. ಅವುಗಳ ಹೊರತಾಗಿಯೂ ಒಳ್ಳೆಯ ಹೆಸರುಗಳು ಇವೆಯಲ್ಲವೇ? ದಾಖಲೆಗಳಲ್ಲಿ ಜಾತಿಯನ್ನು ಸೂಚಿಸಬಾರದು. ಅದಕ್ಕೆ ಅಗತ್ಯವಿರುವ ಅನುಮತಿಯನ್ನು ಸರ್ಕಾರದಿಂದ ಪಡೆಯಬೇಕು. ಮತ ಯಾವುದೆಂದು ಹೇಳಲೂ ಹಾಗೆಯೇ ಯಾವ ಮತಕ್ಕೂ ಸೇರಿಲ್ಲವೆಂದು ಹೇಳಲೂ ಸ್ವಾತಂತ್ರ್ಯವಿರಬೇಕು. ಎಲ್ಲರೂ ಪ್ರಯತ್ನಿಸಿದರೆ ಸರ್ಕಾರದಿಂದಲೂ ಇದಕ್ಕೆ ವಿರೋಧವಿರಲಾರದು. ಇದೆಲ್ಲವೂ ನಡೆದರೆ ಜಾತಿ ತಾನಾಗಿಯೇ ಇಲ್ಲವಾಗುತ್ತದೆ.
ಭಕ್ತ: ಮಹಾತ್ಮಾಗಾಂಧಿ ವರ್ಣಾಶ್ರಮ ಒಳ್ಳೆಯದೆಂದು ಅಭಿಪ್ರಾಯಪಟ್ಟಿದ್ದಾರಲ್ಲಾ…
ಗುರು: ವರ್ಣ ಮತ್ತು ಆಶ್ರಮ ಎರಡೂ ಬೇರೆ ಬೇರೆ. ಸಾಮಾನ್ಯವಾಗಿ ಜಾತಿಯ ಬಗ್ಗೆ ಹೇಳುವಾಗ ವರ್ಣಾಶ್ರಮ ಎಂದು ಹೇಳುತ್ತಾರೆ. ಅದಿರಲಿ, ವರ್ಣ ಎಂಬುದನ್ನು ಗಾಂಧಿ ಹೇಗೆ ವಿವರಿಸುತ್ತಾರೆ?
ಭಕ್ತ: ವರ್ಣ ಜಾತಿಯಲ್ಲ. ವರ್ಣಕ್ಕೂ ಜಾತಿಗೂ ಸಂಬಂಧವಿಲ್ಲ ಎಂದು ಗಾಂಧೀಜಿ ಹೇಳುತ್ತಾರೆ…
ಗುರು: ಗುಣಕರ್ಮಗಳನ್ನು ಆಧಾರವಾಗಿಟ್ಟುಕೊಂಡು ಹೀಗೆ ಹೇಳುತ್ತಿರಬಹುದು. ಗುಣಕರ್ಮಗಳಲ್ಲಿ ಸ್ಥಾಯಿಯಾಗಿರುವಂಥದ್ದು ಯಾವುದೂ ಇಲ್ಲವಲ್ಲ. ಅದು ಸದಾ ಬದಲಾಗುತ್ತಲೇ ಇರುವಂಥದ್ದು. ಹಾಗಿರುವಾಗ ಒಬ್ಬರದ್ದು ಇಂಥದ್ದೇ ವರ್ಣ ಎಂದು ನಿರ್ಧರಿಸುವುದು ಹೇಗೆ?
ಭಕ್ತ: ವರ್ಣಾಶ್ರಮದ ಕುರಿತ ಗಾಂಧೀಜಿಯ ಮಾತು ಸಂಪ್ರದಾಯವಾದಿಗಳ ಶಕ್ತಿ ಹೆಚ್ಚಿಸಿದೆ.
ಗುರು: ಗಾಂಧಿ ಹೀಗೇಕೆ ಹೇಳುತ್ತಿದ್ದಾರೆ…? ಈ ಬಗ್ಗೆ ಅವರು ಹೆಚ್ಚು ಆಲೋಚಿಸಿಲ್ಲ ಎಂಬಂತೆ ಕಾಣಿಸುತ್ತದೆ. ನಮ್ಮ ಪ್ರಕಾರ ಜಾತಿ ಇಲ್ಲ. ಅದು ಇದೆ ಎಂದು ಭಾವಿಸುವುದರಿಂದ ದೋಷವೇ ಹೊರತು ಉಪಯೋಗಗಳಾವುವೂ ಇಲ್ಲ. ಮಹಾ ಕಷ್ಟ… ಇನ್ನೂ ಜಾತಿಯ ಕುರಿತ ನಂಬಿಕೆ ಹೋಗಲಿಲ್ಲವಲ್ಲ…
ಭಕ್ತ: ಜಾತಿಯಿಂದ ಅನೇಕ ಉಪಯೋಗಗಳಿವೆ ಎಂದು ಹಲವರು ಹೇಳುತ್ತಿದ್ದಾರೆ. ಜನರು ಪಾರಂಪರಿಕವಾಗಿ ಕುಲಕಸುಬುಗಳನ್ನು ಅನುಸರಿಸುವುದರಿಂದ ತಜ್ಞತೆ ಹೆಚ್ಚುತ್ತದೆಯಂತೆ…
ಗುರು: ಜಾತಿಯಿಂದ ಯಾವ ಉಪಯೋಗವೂ ಇಲ್ಲ. ಅದು ಮನುಷ್ಯನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಬುದ್ಧಿಯನ್ನು ನಾಶಮಾಡುತ್ತದೆ. ಬುದ್ಧಿಯೇ ಇಲ್ಲದಿರುವಾಗ ಯಾವುದಾದರೂ ಕೆಲಸ ಸಮರ್ಪಕವಾಗುವುದು ಸಾಧ್ಯವೇ? ಒಂದನ್ನು ಮಾತ್ರ ಮಾಡುತ್ತಾ ಜಗತ್ತಿನಲ್ಲಿರುವ ಇತರ ಯಾವುದರ ಕುರಿತೂ ಅರಿಯದವರಿಗೆ ಯಾವ ಕೆಲಸವನ್ನೂ ಚೆನ್ನಾಗಿ ಮಾಡಲು ಸಾಧ್ಯವಿಲ್ಲ. ಜನರು ಅವರವರ ಆಸಕ್ತಿಗೆ ಅನುಗುಣವಾದ ವೃತ್ತಿಗಳನ್ನು ಕೈಗೊಳ್ಳುವುದಕ್ಕೂ ಜಾತಿ ಬಿಡುವುದಿಲ್ಲ. ಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ನಿರ್ದಿಷ್ಟ ವೃತ್ತಿಯನ್ನು ಮಾಡಲೇಬೇಕಾಗುತ್ತದೆ. ಆಸಕ್ತಿ ಮತ್ತು ಶ್ರದ್ಧೆ ಇಲ್ಲದೆ ಮಾಡುವ ವೃತ್ತಿಯಲ್ಲಿ ಯಾರೂ ತಜ್ಞರಾಗಲು ಸಾಧ್ಯವಿಲ್ಲ.
ಭಕ್ತ: ತಂದೆಯ ಕೆಲಸದಲ್ಲಿ ಮಗನಿಗೆ ಸಹಜವಾಗಿಯೇ ಆಸಕ್ತಿ ಇರುತ್ತದೆ ಎಂದು ತಜ್ಞರು ಭಾವಿಸುತ್ತಾರೆ..
ಗುರು: ಹೌದೇ… ಹಾಗಾದರೆ ಜಾತಿ ಅಪ್ರಸ್ತುತ ತಾನೇ. ತಂದೆಯ ಕೆಲಸದಲ್ಲಿ ಮಗನಿಗೆ ಸಹಜವಾಗಿ ಆಸಕ್ತಿ ಹುಟ್ಟಿದರೆ ಅವನದನ್ನು ಕಲಿಯುತ್ತಾನೆ. ಅದಕ್ಕೆ ಜಾತಿ ವ್ಯವಸ್ಥೆಯ ಅಗತ್ಯವೇನು? ಎಲ್ಲರಿಗೂ ತಮಗಿಷ್ಟವಿರುವ ಕೆಲಸ ಮಾಡುವ ಸ್ವಾತಂತ್ರ್ಯವಿರಬೇಕು. ಇಂಥದ್ದನ್ನಷ್ಟೇ ಕಲಿಯಬೇಕು ಎಂಬ ಒತ್ತಾಯ ಇರಕೂಡದು. ಎಲ್ಲರಿಗೂ ಏನು ಬೇಕಾದರೂ ಕಲಿತು ಮಾಡಲು ಅವಕಾಶವಿರಬೇಕು.
ಭಕ್ತ: ಹೀಗೆ ಸ್ವಾತಂತ್ರ್ಯ ನೀಡಿದರೆ ಸ್ಪರ್ಧೆ ಹೆಚ್ಚಾಗಿ ಜಗತ್ತಿನಲ್ಲಿ ಸುಖಕ್ಕಿಂತ ಹೆಚ್ಚು ದುಃಖವುಂಟಾಗುತ್ತದೆಂದು ಹಲವರು ಹೇಳುತ್ತಾರೆ.
ಗುರು: ಇದು ಜಾತಿಯನ್ನು ಹುಟ್ಟುಹಾಕಿದವರ ವಾದ ತಾನೇ…? ಜಾತಿಯಿಂದ ಸಕಲ ಲಾಭಗಳನ್ನು ಪಡೆದವರು ಹಾಗೆ ಹೇಳುವುದು ಸಹಜ. ಇತರರು ಕಷ್ಟಪಡುವುದು ಅವರ ಲಾಭಕ್ಕೆ, ಸುಖಕ್ಕೆ ಅಗತ್ಯವಿರಬಹುದು. ಜಾತಿಗೋ, ಲೋಕ ಸುಖಕ್ಕೋ ಅಥವಾ ಅಂಥ ಮತ್ಯಾವುದಕ್ಕಾಗಿಯೋ ಮನುಷ್ಯ ಬದುಕುತ್ತಿದ್ದಾನೆಯೇ? ಮನುಷ್ಯ ಕೆಟ್ಟು, ಲೋಕದಲ್ಲಿ ಸುಖವಿದ್ದರೆ ಏನು ಪ್ರಯೋಜನ? ಜಾತಿ ಮನುಷ್ಯನನ್ನೇ ಕೆಡಿಸುತ್ತಿದೆ. ಅದರಿಂದಾಗಿಯೇ ಅದು ಬೇಡ. ಜಾತಿ ಇಲ್ಲ. ಇದೆಯೆಂದು ಭಾವಿಸುವುದೂ ಮೂರ್ಖತನ.