ದೇಗುಲ ಮತ್ತು ವಿಗ್ರಹಾರಾಧಾನೆಯನ್ನು ಗುರುಗಳು ನೇತ್ಯಾತ್ಮಕವಾಗಿ ನೋಡಿದವರಲ್ಲ. ಅದರ ಧನಾತ್ಮಕ ಅಂಶಗಳನ್ನು ಅವರು ಗ್ರಹಿಸುತ್ತಿದ್ದ ಬಗೆ ಭಿನ್ನ. ಇದನ್ನು ವಿವರಿಸುವ ಎರಡು ವಿಶಿಷ್ಟ ಘಟನೆಗಳು ಇಲ್ಲಿವೆ. ಇವನ್ನು ಐ.ಆರ್. ಕೃಷ್ಣನ್ ಮೇತ್ತಲ ಅವರು ‘ಯೋಗನಾದಂ’ ಪಾಕ್ಷಿಕಕ್ಕಾಗಿ ಬರೆಯುತ್ತಿದ್ದ ಅಂಕಣದಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ… । ಎನ್.ಎ.ಎಂ.ಇಸ್ಮಾಯಿಲ್
ನಾರಾಯಣ ಗುರುಗಳು ತ್ರಿಶ್ಶೂರಿನ ಅದ್ವೈತಾಶ್ರಮದಲ್ಲಿ ವಿಶ್ರಾಂತಿಯಲ್ಲಿದ್ದರು. ಗುರುಗಳು ಬಂದಿದ್ದಾರೆಂಬುದನ್ನು ಅರಿತ ಸ್ಥಳೀಯ ಪತ್ರಕರ್ತರೊಬ್ಬರು ಸಂದರ್ಶನಾಪೇಕ್ಷಿಯಾಗಿ ಬಂದರು. ಗುರುಗಳ ಸಮಾಜ ಸುಧಾರಣಾ ಕಾರ್ಯಗಳ ಚರ್ಚೆಯ ಮಧ್ಯೆ ವಿಗ್ರಹಾರಾಧನೆಯ ಮಾತು ಬಂತು.
ಆ ಪತ್ರಕರ್ತ ಕೇಳಿದರು: ‘ಮಾನವನ ಒಳಿತಿಗೆ ದೇಗುಲಗಳ ಅಗತ್ಯವಿದೆಯೇ ಎಂಬ ಸಂಶಯ ನನ್ನದು..’
ಇದಕ್ಕೆ ಉತ್ತರವಾಗಿ ಗುರುಗಳು ಹೇಳಿದರು: ‘ದೇವಸ್ಥಾನಕ್ಕೆ ಬರುವವರು ಸ್ನಾನ ಮಾಡಿ ಶುಚಿರ್ಭೂತರಾಗಿ ಬರುತ್ತಾರೆ. ದೇಗುಲ ದರ್ಶನದ ಕಾರಣಕ್ಕೆ ಮನಸ್ಸಿನಲ್ಲೂ ಒಳ್ಳೆಯ ಸಂಗತಿಗಳೇ ಇರುತ್ತವೆ. ದೇವಸ್ಮರಣೆಯಂತೂ ಇರಲೇಬೇಕಲ್ಲ. ದೇವಸ್ಥಾನದ ಸುತ್ತಲಿನ ಒಳ್ಳೆಯ ಗಾಳಿಯನ್ನು ಸೇವಿಸುತ್ತಾರೆ. ಕೆಲವರು ಭಜನೆ ಮತ್ತು ಉಪವಾಸಗಳ ಮೂಲಕ ಮನಸ್ಸನ್ನೂ ದೇಹವನ್ನೂ ಶುದ್ಧೀಕರಿಸುತ್ತಾರೆ. ಇಷ್ಟೆಲ್ಲಾ ಇರುವಾಗ ದೇಗುಲಗಳ ಅಗತ್ಯವೇ ಇಲ್ಲ ಎನ್ನಲು ಸಾಧ್ಯವೇ?’
ಗುರುಗಳ ಮಾತನ್ನು ಒಪ್ಪಿದ ಆ ಪತ್ರಕರ್ತ ಮತ್ತೊಂದು ಪ್ರಶ್ನೆ ಕೇಳಿದರು ‘ಹಲವರು ವಿಗ್ರಹಾರಾಧನೆಯನ್ನು ವಿರೋಧಿಸುತ್ತಿದ್ದಾರಲ್ಲಾ… ಅದರಿಂದ ಮೂಢನಂಬಿಕೆಯ ಪ್ರಸರಣ ಹೆಚ್ಚುತ್ತದೆಂಬುದು ಅವರ ವಾದ. ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಯುವ ಕುತೂಹಲವಿದೆ.’
ಈ ಪ್ರಶ್ನೆಗೆ ಗುರುಗಳು ಉತ್ತರಿಸಿದ್ದು ಹೀಗೆ: ‘ದೇವಾಲಯಕ್ಕೆ ಹೋಗುವಾಗ ನೆನಪಾಗುವುದು ವಿಗ್ರಹವಲ್ಲ, ದೇವರು ಮಾತ್ರ. ಅಷ್ಟೇ ಅಲ್ಲ ಅವರ ಮನಸ್ಸಿನೊಳಗಿರುವುದು ಅವರ ಸಂಕಲ್ಪದ ದೇವರೇ ಹೊರತು ವಿಗ್ರಹವಲ್ಲ. ದೇವಾಲಯವಿಲ್ಲಿ ಆನುಷಂಗಿಕ’
*
ಶಿವಗಿರಿಯಲ್ಲೊಮ್ಮೆ ಕಾಣಿಕೆ ಡಬ್ಬಿ ಕಳವಾಯಿತು. ಈ ವಿಷಯವನ್ನು ಗುರುಗಳಿಗೆ ಅರುಹಲು ಶಿಷ್ಯನೊಬ್ಬನನ್ನು ಕಳುಹಿಸಿದರು. ಗುರುಗಳಲ್ಲಿಗೆ ಹೋದ ಶಿಷ್ಯ ಹೇಳಿದ: ‘ಸ್ವಾಮಿ… ನಿನ್ನೆ ರಾತ್ರಿ ನಮ್ಮ ಕಾಣಿಕೆ ಡಬ್ಬಿ ಕಳವಾಗಿದೆ’
ಗುರುಗಳು ಮುಗುಳ್ನಗುತ್ತಲೇ ಉತ್ತರಿಸಿದರು: “ಈ ಹಣ ಕಾಣಿಕೆ ಸಲ್ಲಿಸಿದವರ ಬಳಿಯೇ ಇದ್ದಿದ್ದರೆ ಆ ಕಳ್ಳನಿಗೆಷ್ಟು ಕಷ್ಟವಾಗುತ್ತಿತ್ತು. ಒಬ್ಬೊಬ್ಬರ ಬಳಿಯೂ ಹೋಗಿ ಕದಿಯಬೇಕಿತ್ತಲ್ಲಾ… ಈಗ ಅದು ಒಂದೇ ಕಡೆ ಬಂದದ್ದರಿಂದ ಅವನ ಕೆಲಸ ಸುಲಭವಾಯಿತು…”
ಶಿಷ್ಯನಿಗೆ ತಕ್ಷಣಕ್ಕೆ ಗುರುಗಳ ಮಾತಿನರ್ಥ ತಿಳಿಯಲಿಲ್ಲ. ಆದರೆ ನಿಧಾನಕ್ಕೆ ಅದು ಅಲ್ಲಿದ್ದ ಎಲ್ಲರ ಆಳಕ್ಕೂ ಇಳಿಯಿತು.

