“ಲೌಕಿಕ ಸಂಗತಿಗಳನ್ನೆಲ್ಲ ಬಿಟ್ಟುಬಿಡಿ ಎಂದು ನಾನು ಹೇಳುತ್ತಿಲ್ಲ. ನಿಮ್ಮ ಮನೆ, ನಿಮ್ಮ ಗಂಡ/ಹೆಂಡತಿ, ನಿಮ್ಮ
ಮಕ್ಕಳು ಈ ಎಲ್ಲವನ್ನೂ ಬಿಟ್ಟುಬಿಡಿ ಎಂದು ನಾನು ಹೇಳುತ್ತಿಲ್ಲ, ಆದರೆ ನೆನಪಿರಲಿ ಈ ಎಲ್ಲವೂ ನಿಮ್ಮ ಜೊತೆಯಾದದ್ದು ಆಕಸ್ಮಿಕವಾಗಿ ಮಾತ್ರ. ಇವು ಎಂದೂ ಮುಗಿಯದ ಸಂಬಂಧಗಳೇನಲ್ಲ, ಈ ಸಂಬಂಧಗಳಿಗೊಂದು ಶುರುವಾತು ಇದೆ ಹಾಗೆಯೇ ಮುಕ್ತಾಯ ಕೂಡ. ಇವು ಶುರುವಾಗುವುದಕ್ಕಿಂತ ಮೊದಲೂ ಮತ್ತು ಮುಕ್ತಾಯ ಆದಮೇಲೂ ನಿಮ್ಮ ಜೊತೆ ಇರುವುದು ನಿಮ್ಮ ಪ್ರಜ್ಞೆ ಮಾತ್ರ…” ಅನ್ನುತ್ತಾರೆ ಓಶೋ । ಚಿದಂಬರ ನರೇಂದ್ರ.
ನಿಮಗೆ ಊಟದಲ್ಲಿನ ರುಚಿ ಬೇಕೊ?
ಅಥವಾ ನೀವು
ಊಟದಲ್ಲಿ ರುಚಿ ಬೆರೆಸುವವನ
ರುಚಿ ನೋಡಬೇಕೊ?
ಸಾಗರದಲ್ಲಿ ಅದ್ಬುತ ಸಂಗತಿಗಳಿವೆ,
ಒಪ್ಪುವ ಮಾತು,
ಮತ್ತು ಸ್ವತಃ ಇಡೀ ಸಾಗರವೇ ಇದೆಯಲ್ಲ?
ಮನೆ ಕಟ್ಟುವವನ ತಿಳುವಳಿಕೆಯ ಬಗ್ಗೆ
ಗೌರವ ಸರಿ,
ಈಗ ಆ ತಿಳುವಳಿಕೆಯನ್ನೇ ಕಟ್ಟಿದವನ ಬಗ್ಗೆ
ಒಮ್ಮೆ ಯೋಚಿಸಿ.
ಬೀಜದಿಂದ ಎಣ್ಣೆ ತೆಗೆಯುವುದು ಕಲೆ ಹೌದು,
ಕಣ್ಣೊಳಗೆ ದೃಷ್ಟಿ ಮನೆಮಾಡಿರುವ
ಅದ್ಭುತದ ಮೇಲೊಮ್ಮೆ ಕಣ್ಣು ಹಾಯಿಸಿ.
ಇಡೀ ರಾತ್ರಿ, ಬೇಕುಗಳ ಹುಚ್ಚಾಟ.
ಬೆಳಕು ಹರಿಯುತ್ತಿದ್ದಂತೆಯೇ
ನಿನ್ನ ಅಂಗೈಯಲ್ಲಿ ನನ್ನ ಅಂಗೈ ಹಿಡಿದುಕೊ.
ಇದು ಸಾಧ್ಯವೇ ಎಂದು
ಸಂದೇಹ ಪಡುವವರು ಇದ್ದಾರೆ ಇನ್ನೂ.
ಅವರು ಬಂಗಾರದ ಹುಡಿಯನ್ನು
ಬಿಸಾಕುತ್ತಾರೆ ಖಾಲಿ ತೊಟ್ಟಿಯಲ್ಲಿ,
ಕೊಟ್ಟಿಗೆಗೆ ಹೋಗುತ್ತಾರೆ
ಕತ್ತೆಗಳನ್ನು ಹುಡುಕಿಕೊಂಡು.
ಈಗ ಮಾತು ಸಾಕು ಗೆಳೆಯ,
ಕಿವಿಗೆ ಕಣ್ಣು ಹಚ್ಚುವ ಸಾಧ್ಯತೆ ನಿನ್ನಲ್ಲಿದೆ.
ಕವಿತೆಯ ಉಳಿದ ಭಾಗವನ್ನು
ಆ ಭಾಷೆಯಲ್ಲಿ ಹಾಡು.
- ರೂಮಿ.
“ಸದಾ ಎಚ್ಚರಿಕೆಯಿಂದಿರಿ, ಜಾಗ್ರತರಾಗಿರಿ ಯಾವ ಆಕಸ್ಮಿಕಕ್ಕೂ ಅಂಟಿಕೊಳ್ಳದಿರಿ. ಹಾಗೆ ನೋಡಿದರೆ ನಮ್ಮ ಪ್ರಜ್ಞೆ ಮತ್ತು ಅರಿವನ್ನು ಹೊರತುಪಡಿಸಿ ಎಲ್ಲವೂ ಆಕಸ್ಮಿಕವೇ.” ಅನ್ನುತ್ತಾರೆ ಓಶೋ.
“ಸುಖ-ದುಃಖ, ಸೋಲು-ಗೆಲವು, ಪ್ರಸಿದ್ಧಿ-ಅವಮಾನ ಎಲ್ಲವೂ ಆಕಸ್ಮಿಕಗಳೇ. ಕೇವಲ ಸಾಕ್ಷಿಯಾಗಿರುವ ನಿಮ್ಮ ಪ್ರಜ್ಞೆ ಮಾತ್ರ ಅವಶ್ಯಕವಾದದ್ದು. ಅದನ್ನು ಮಾತ್ರ ಗಟ್ಟಿಯಾಗಿ ಹಿಡಿದುಕೊಳ್ಳಿ, ಹೆಚ್ಚು ಹೆಚ್ಚು ಅದರ ಆಳಕ್ಕಿಳಿದು ಬಲಪಡಿಸಿಕೊಳ್ಳಿ. ಬಾಕಿ ಎಲ್ಲ ಲೌಕಿಕ ಅನುಭವಗಳು ಅವು ಎಷ್ಟೇ ಮೈಮರೆಸುವಂತಿದ್ದರೂ ಜವಾಬ್ದಾರಿಯಿಂದ ನಿಭಾಯಿಸಿ ಆದರೆ ಅಂಟಿಕೊಳ್ಳಬೇಡಿ” ಅನ್ನುವ ಓಶೋ, “ಲೌಕಿಕ ಸಂಗತಿಗಳನ್ನೆಲ್ಲ ಬಿಟ್ಟುಬಿಡಿ ಎಂದು ನಾನು ಹೇಳುತ್ತಿಲ್ಲ. ನಿಮ್ಮ ಮನೆ, ನಿಮ್ಮ ಗಂಡ/ಹೆಂಡತಿ, ನಿಮ್ಮ
ಮಕ್ಕಳು ಈ ಎಲ್ಲವನ್ನೂ ಬಿಟ್ಟುಬಿಡಿ ಎಂದು ನಾನು ಹೇಳುತ್ತಿಲ್ಲ, ಆದರೆ ನೆನಪಿರಲಿ ಈ ಎಲ್ಲವೂ ನಿಮ್ಮ ಜೊತೆಯಾದದ್ದು ಆಕಸ್ಮಿಕವಾಗಿ ಮಾತ್ರ. ಇವು ಎಂದೂ ಮುಗಿಯದ ಸಂಬಂಧಗಳೇನಲ್ಲ, ಈ ಸಂಬಂಧಗಳಿಗೊಂದು ಶುರುವಾತು ಇದೆ ಹಾಗೆಯೇ ಮುಕ್ತಾಯ ಕೂಡ. ಇವು ಶುರುವಾಗುವುದಕ್ಕಿಂತ ಮೊದಲೂ ಮತ್ತು ಮುಕ್ತಾಯ ಆದಮೇಲೂ ನಿಮ್ಮ ಜೊತೆ ಇರುವುದು ನಿಮ್ಮ ಪ್ರಜ್ಞೆ ಮಾತ್ರ” ಎಂದು ಸ್ಪಷ್ಟಪಡಿಸುತ್ತಾರೆ.
“ಪ್ರಜ್ಞೆ ನಿಮ್ಮ ಜೊತೆಗಿದ್ದರೆ ಬದುಕಿನಲ್ಲಿ ಯಾವುದು ಆಕಸ್ಮಿಕ ಮತ್ತು ಯಾವುದು ಆವಶ್ಯಕ ಎನ್ನುವುದು ನಿಮಗೆ ಸ್ಪಷ್ಟವಾಗುತ್ತ ಹೋಗುತ್ತದೆ. ನಮ್ಮ ಜೊತೆ ಸದಾ ಇರುವಂಥದು ಮಾತ್ರ ಸತ್ಯ ಮತ್ತು ಆಕಸ್ಮಿಕವಾಗಿ ನಮ್ಮೊಡನೆ ಘಟಿಸಿದ್ದೆಲ್ಲ ಮಿಥ್ಯೆ” ಅನ್ನುವುದು ಓಶೋ ಕಿವಿಮಾತು.
ಈ ಸಂದರ್ಭದಲ್ಲಿ ನಸ್ರುದ್ದೀನನ ಒಂದು ಕತೆ ನೆನಪಾಗುತ್ತದೆ.
ಒಮ್ಮೆ ಗೆಳೆಯನೊಬ್ಬ, ಮುಲ್ಲಾ ನಸ್ರುದ್ದೀನ್ ನ ಕೇಳಿಕೊಂಡ. “ ನಸ್ರುದ್ದೀನ್, ನಾನು ಈ ಊರು ಬಿಟ್ಟು ನಾನು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “
ಮುಲ್ಲಾ ನಗು ನಗುತ್ತ ಉತ್ತರಿಸಿದ… “ನೀನು ಉಂಗುರ ಕಳೆದುಕೊಂಡು ಬಿಡಬಹುದು ಆಗ ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ!”
source: Osho / A sudden clash of thunder

