ಪವಾಡ ಎಂದರೆ ಇದು – ನೀವು ನಿಮ್ಮ ಸಾಮನ್ಯತೆಯನ್ನ (nobodyness) ಒಪ್ಪಿಕೊಳ್ಳುವುದು, ಎಲ್ಲರಂತೆ ಸಾಮಾನ್ಯ ಆಗಿರುವುದು, ಗುರುತಿಸಿಕೊಳ್ಳುವುದಕ್ಕಾಗಿ ಚಡಪಡಿಸದಿರುವುದು, ಇರದಂತೆ ಇರುವುದು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀರಿನ ಮೇಲೆ ಅಥವಾ
ತೆಳು ಗಾಳಿಯ ಮೇಲೆ ನಡೆಯುವುದು
ಪವಾಡ ಎನ್ನುತ್ತಾರೆ ಜನ.
ಆದರೆ ನನ್ನ ಪ್ರಕಾರ ನಿಜದ ಪವಾಡ,
ನೀರಿನ ಮೇಲೆ
ಗಾಳಿಯ ಮೇಲೆ ನಡೆಯುವುದಲ್ಲ,
ಬದಲಾಗಿ ನೆಲದ ಮೇಲೆ ಕಾಲೂರಿ
ಹೆಜ್ಜೆ ಹಾಕುವುದು.
ಪ್ರತೀದಿನ ನಮಗೆ ಎದುರಾಗುವ
ಪವಾಡಗಳನ್ನು ಗುರುತಿಸುವುದು
ಸಾಧ್ಯವಾದರೆ,
ನೀಲಿ ಆಕಾಶ, ಬೆಳ್ಳಿ ಮೋಡಗಳು
ಹಸಿರು ಕಾಡುಗಳು ಮತ್ತು
ಪುಟ್ಟ ಮಗುವಿನ
ಕುತೂಹಲಭರಿತ ಕಪ್ಪು ಕಣ್ಣುಗಳಿಂತ
ಹೆಚ್ಚಿನ ಬೆರಗು ಸಾಧ್ಯಮಾಡುವ
ಪವಾಡವಿದೆಯೆ ಇನ್ನೊಂದು?
Thich Nhat Hanh
*************
ಒಂದೇ ಒಂದು ಪವಾಡ, ನಮ್ಮಿಂದ ಸಾಧ್ಯವಾಗಬಹುದಾದ ಒಂದೇ ಒಂದು ಅಸಾಧ್ಯ ಪವಾಡ ಎಂದರೆ ನಾವು ಕೇವಲ ಸಾಮಾನ್ಯರಂತೆ (ಆರ್ಡಿನರಿ) ಇರುವುದು . ನಮ್ಮೊಳಗಿನ ಅಹಂ ಗೆ ನೀನು ಕೇವಲ ನೀನಲ್ಲ ಬೇರೆ ಯಾರೋ ಎಂದು ತೋರಿಸಿಕೊಳ್ಳುವ ಹಸಿವು. ಅಹಂ ಇನ್ನೊಬ್ಬರಂತೆ ನಾವು ಗುರುತಿಸಿಕೊಳ್ಳಬೇಕೆಂದು ಶತ ಪ್ರಯತ್ನ ಮಾಡುತ್ತಿರುತ್ತದೆ. ಕೆಲವರು ಈ ಕನಸನ್ನು ಸಂಪತ್ತಿನ ಮೂಲಕ ಸಾಧಿಸಿಕೊಂಜರೆ, ಇನ್ನೂ ಕೆಲವರು ಅಧಿಕಾರ, ರಾಜಕಾರಣದ ಮೂಲಕ ಸಾಧಿಸಿಕೊಳ್ಳುತ್ತಾರೆ ಮತ್ತು ಹಲವರು ಪವಾಡ, ತಂತ್ರಗಳ ಮೂಲಕ ತಾವು ಸಾಮಾನ್ಯರಲ್ಲ, ಅಸಾಮಾನ್ಯರು ಎಂದು ತೋರಿಸಿಕೊಳ್ಳುತ್ತಾರೆ. ಕೊನೆಗೂ ನಮಗೆ ಸಾಧ್ಯ ಆಗದಿರುವುದು ಯಾವುದೆಂದರೆ ನಾವು ಸಾಮಾನ್ಯರು ಎಂದು ಒಪ್ಪಿಕೊಳ್ಳುವುದು.
ಪವಾಡ ಎಂದರೆ ಇದು – ನೀವು ನಿಮ್ಮ ಸಾಮನ್ಯತೆಯನ್ನ (nobodyness) ಒಪ್ಪಿಕೊಳ್ಳುವುದು, ಎಲ್ಲರಂತೆ ಸಾಮಾನ್ಯ ಆಗಿರುವುದು, ಗುರುತಿಸಿಕೊಳ್ಳುವುದಕ್ಕಾಗಿ ಚಡಪಡಿಸದಿರುವುದು, ಇರದಂತೆ ಇರುವುದು. ಪವಾಡ ಎಂದರೆ, ಗೈರು ಹಾಜರಿಯೇ ನಮ್ಮ ಹಾಜರಿಯ ಪ್ರಮಾಣವಾಗುವುದು.
ಒಂದು ಸುಂದರ ಝೆನ್ ಕಥೆ ಹೀಗಿದೆ……
ಝೆನ್ ಆಶ್ರಮದಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಇಬ್ಬರು ಸನ್ಯಾಸಿಗಳು ತಮ್ಮ ಮುಂದಿನ ಸಾಧನೆಗಾಗಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಂಡು ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಬೆಳೆಸಿದರು.
ಹಿರಿಯ ಸನ್ಯಾಸಿ, ತಂತ್ರ ಸಾಧನೆಯಲ್ಲಿ ತನ್ನನ್ನು ತಾನು ತೀವ್ರವಾಗಿ ತೊಡಗಿಸಿಕೊಂಡು ವಿಶೇಷ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡ.
ಕಿರಿಯ ಸನ್ಯಾಸಿ ಸಹಜ ಕೃಷಿಯಲ್ಲಿ ತೊಡಗಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ.
ಇಬ್ಬರೂ ಸನ್ಯಾಸಿಗಳು ಹಳೆಯ ಆಶ್ರಮಕ್ಕೆ ಹೋಗಿ ಗುರುಗಳನ್ನು ಭೇಟಿಯಾಗಿ ತಮ್ಮ ತಮ್ಮ ಸಾಧನೆಗಳ ಬಗ್ಗೆ ಗುರುಗಳಿಗೆ ತಿಳಿಸಬೇಕೆಂದು ನಿಶ್ಚಯಿಸಿದರು.
ಆಶ್ರಮ ಮಾರ್ಗವಾಗಿ ಹೋಗುತ್ತಿದ್ದಾಗ, ಸನ್ಯಾಸಿಗಳಿಗೆ ಒಂದು ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ನದಿ ದಾಟುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ದೋಣಿಯೊಂದು ದಂಡೆಗೆ ಬಂತು.
ಹಿರಿಯ ಸನ್ಯಾಸಿ ತನ್ನ ತಂತ್ರ ಶಕ್ತಿಯನ್ನು ಬಳಸಿ, ನಾವಿಕನಿಗೆ ಮಂಕು ಕವಿಸಿ ದೋಣಿ ಎತ್ತಿಕೊಂಡು ಕ್ಷಣಾರ್ಧದಲ್ಲಿ ಆಚೆ ದಡ ಸೇರಿದ.
ಕಿರಿಯ ಸನ್ಯಾಸಿ, ಕೊಂಚ ಹೊತ್ತು ಕಾಯ್ದು, ಇನ್ನೊಂದು ದೋಣಿಯಲ್ಲಿ ಆಚೆ ದಡ ಸೇರಿದ. ದಡ ಸೇರಿದ ಮೇಲೆ ನಾವಿಕನಿಗೆ ಒಂದು ರೂಪಾಯಿ ಬಾಡಿಗೆ ಕೊಟ್ಟ.
ಸನ್ಯಾಸಿಗಳು ಮಾತನಾಡಿಕೊಳ್ಳುತ್ತ ತಮ್ಮ ಮುಂದಿನ ದಾರಿ ಕ್ರಮಿಸತೊಡಗಿದರು.
ಹಿರಿಯ ಸನ್ಯಾಸಿ : ನೀನು ಸಮಯವನ್ನೆಲ್ಲ ಹಾಳು ಮಾಡಿಕೊಂಡುಬಿಟ್ಟೆ. ನಿನ್ನ ಕಂಡರೆ ನನಗೆ ಅನುಕಂಪ. ನಾನು ನೋಡು ತಂತ್ರ ಸಾಧನೆ ಮಾಡಿ ಎಷ್ಟು ಅತೀಂದ್ರಿಯ ಶಕ್ತಿಗಳನ್ನು ಗಳಿಸಿದ್ದೇನೆ.
ಕಿರಿಯ ಸನ್ಯಾಸಿ : ಅಯ್ಯೋ ! ನಾನು ನೋಡಲಿಲ್ವಾ, ಒಂದು ರೂಪಾಯಿ ಬೆಲೆ ಬಾಳುವ ತಂತ್ರ ಶಕ್ತಿಗಳಿಗಾಗಿ ನೀನು ಇಷ್ಟು ಸಮಯ ವ್ಯರ್ಥ ಮಾಡಿದ್ದೀಯಲ್ಲಾ ನನಗೆ ಆಶ್ಚರ್ಯವಾಗುತ್ತಿದೆ.

