ನಿಮ್ಮೊಳಗಿನ ಬುದ್ಧತನವನ್ನು ಗುರುತಿಸಿಕೊಳ್ಳಿ | ಓಶೋ

ಬುದ್ಧರಾಗುವುದು ಪ್ರತಿಯೊಬ್ಬರ ಹಕ್ಕು. ನೀವು ನಿಮ್ಮ ಬುದ್ಧತನವನ್ನ ಕ್ಲೇಮ್ ಮಾಡಿಕೊಳ್ಳದಿರುವುದು ನಿಮ್ಮ ತಪ್ಪು. ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಅವನನ್ನು ಮುಟ್ಟುವ ತನಕ
ಅವನ ಮಾತನ್ನು ಕೇಳುತ್ತಲೇ ಇರು.
ನಿನ್ನನ್ನು ಬಿಟ್ಟು ಬರುವವರೆಗೂ
ನೀನು ಅವನನ್ನು ಮುಟ್ಟಲಾರೆ.
ಮುಟ್ಟಿದೊಡನೇ ಸುಮ್ಮನಾಗಿಬಿಡು
ಇನ್ನು ಹೇಳುವುದು, ಕೇಳುವುದು
ಯಾವದೂ ಉಳಿದಿಲ್ಲ.
ಇಲ್ಲಿನ ಬಾಷೆಯ
ಕಣ್ಣೊಂದೇ ಬಲ್ಲದು

– ರೂಮಿ


ಪ್ರತಿಯೊಬ್ಬರು ಈಗಾಗಲೇ ಬುದ್ಧರಾಗಿದ್ದಾರೆ, ಕೇವಲ ಅವರು ಅದನ್ನು ಗುರುತಿಸಿಕೊಳ್ಳುವುದು ಮಾತ್ರ ಬಾಕಿ ಇದೆ. ಬುದ್ಧ ಈಗಾಗಲೇ ಅಲ್ಲಿದ್ದಾನೆ, ನೀವು ಮರೆತಿರಬಹುದು ಅದು ಸರಿ, ಹಾಗೆಂದ ಮಾತ್ರಕ್ಕೆ ನೀವು ಬುದ್ಧ ಅಲ್ಲ ಅಂತಲ್ಲ. ನೀವು ಯಾರೆಂದು ನೀವು ಮರೆತಿರಬಹುದು , ನಿಮಗೆ ನೆನಪಿಲ್ಲ ಎಂದ ಮಾತ್ರಕ್ಕೆ ನೀವು ಬೇರೆ ಯಾರೋ ಆಗುವುದಿಲ್ಲ. ನೀವು ಬುದ್ಧರಾಗಿಯೇ ಉಳಿದುಕೊಂಡಿರುತ್ತೀರಿ.

ಬೌದ್ಧರಲ್ಲಿ ಒಂದು ಬಹಳ ಮಹತ್ವದ ಪದ ಇದೆ, ಬುದ್ಧಾನುಸ್ಮೃತಿ – ತನ್ನ ಬೌದ್ಧತನದ (Buddhahood) ನೆನಪಿಸಿಕೊಳ್ಳುವಿಕೆ.

ಬುದ್ಧನಿಗೆ ತೀರ ಹತ್ತಿರವಾಗಿದ್ದಾರೆ ಎನ್ನುವುದು ಕೂಡ ತಪ್ಪು. ಹತ್ತಿರ ಎಂದರೆ ಅಲ್ಲೊಂದು ಅಂತರ ಇದೆ. ಹತ್ತಿರ ಅಲ್ಲ, ನೀವೇ ಬುದ್ಧ, ಬುದ್ಧನೇ ನೀವು.

ನೀವು ನಾಳೆ ಬುದ್ಧ ಆಗುವುದು ನನಗೆ ಬೇಕಿಲ್ಲ. ನೀವು ಕಾಯುವುದು ನನಗೆ ಬೇಕಿಲ್ಲ. ಬುದ್ಧ ನಿಮ್ಮ ಸಹಜ ಪ್ರಕೃತಿ.

ಬುದ್ಧರಾಗುವುದು ಪ್ರತಿಯೊಬ್ಬರ ಹಕ್ಕು. ನೀವು ನಿಮ್ಮ ಬುದ್ಧತನವನ್ನ ಕ್ಲೇಮ್ ಮಾಡಿಕೊಳ್ಳದಿರುವುದು ನಿಮ್ಮ ತಪ್ಪು. ದಯವಿಟ್ಟು ನಿಮ್ಮ ಬುದ್ಧತನವನ್ನು ಗುರುತಿಸಿಕೊಳ್ಳಿ, ಬುದ್ಧರಾಗಿ ಬಾಳಿ, ಆಗ ಥಟ್ಟನೇ ನಿಮ್ಮ ಬದುಕಿನ ಪ್ರತಿಯೊಂದೂ ನಿಮಗೆ ಹೊಸದಾಗಿ ಕಾಣತೊಡಗುತ್ತದೆ. ಕೇವಲ ಈ ಗುರುತಿಸಿಕೊಳ್ಳುವಿಕೆಯಿಂದ, ನಿಮ್ಮ ಒಳಗಿನ ಅಸ್ತಿತ್ವ ಬುದ್ಧಮಯ ಎನ್ನುವುದನ್ನ ಗುರುತಿಸಿಕೊಳ್ಳುವುದರಿಂದ ನಿಮಗೆ ಅರಿವು ಸಾಧ್ಯವಾಗುತ್ತದೆ.

ಇಂಗ್ಲಿಷ್ ನ ಪದ ‘ignorance’ ತುಂಬ ಸುಂದರವಾದದ್ದು, ಕೇವಲ ಸುಲಭವಾಗಿ ಅರ್ಥವಾಗುತ್ತದೆ ಎನ್ನುವುದಕ್ಕಲ್ಲ. Ignorance ಎಂದರೆ ನಿಮ್ಮ ಬುದ್ಧತನದ ನಿರ್ಲಕ್ಷಿಸುವಿಕೆ. ನನ್ನ ಪ್ರಕಾರ ಈ ಜಗತ್ತಿನಲ್ಲಿರುವ ಏಕೈಕ ignorance ಎಂದರೆ ನೀವು ನಿಮ್ಮ ಬುದ್ಧತನವನ್ನ ನಿರ್ಲಕ್ಷಿಸಿರುವುದು ಹಾಗು ಈ ಜಗತ್ತಿನ ಏಕೈಕ knowledge ಎಂದರೆ ನೀವು ನಿಮ್ಮ ಬುದ್ಧತನವನ್ನ ಗುರುತಿಸಿಕೊಳ್ಳುವುದು.

ಒಮ್ಮೆ ಒಬ್ಬ ಯುವ ಸನ್ಯಾಸಿ ತನ್ನ ವಿದ್ಯಾಭ್ಯಾಸ ಮುಗಿಸಿ ವಾಪಸ್ ಊರಿಗೆ ಹೊರಟಿದ್ದ. ದಾರಿಯಲ್ಲಿ ಅವನಿಗೆ ತುಂಬಿ ಹರಿಯುತ್ತಿದ್ದ ನದಿ ಎದುರಾಯಿತು. ಭೋರ್ಗರೆಯುತ್ತಾ ಹರಿಯುತ್ತಿದ್ದ ನದಿಯನ್ನು ಹೇಗೆ ದಾಟುವುದು ಎಂದು ಅವ ಚಿಂತಾಕ್ರಾಂತನಾದ.

ಗಂಟೆಗಟ್ಟಲೆ ಯೋಚಿಸಿದ ಮೇಲೂ ಯಾವ ಉಪಾಯ ಹೊಳೆಯದಿದ್ದಾಗ ವಾಪಸ್ ಹೋಗಲು ನಿರ್ಧರಿಸಿದ.
ಅಷ್ಟರಲ್ಲಿ ಅವನಿಗೆ ನದಿಯ ಆಚೆ ದಡದಲ್ಲಿ ಒಬ್ಬ ಹಿರಿಯ ಸನ್ಯಾಸಿ ಕಾಣಿಸಿದ. ಅವನ ಹತ್ತಿರ ನದಿ ದಾಟುವ ಉಪಾಯ ಕೇಳಬೇಕೆಂದು ಯುವ ಸನ್ಯಾಸಿ ಕೂಗಿದ

“ ಮಾಸ್ಟರ್, ಆಚೆ ದಡ ಸೇರುವ ಉಪಾಯ ಹೇಳ್ತೀರಾ?”

ಹಿರಿಯ ಸನ್ಯಾಸಿ ಒಂದು ಕ್ಷಣ ಧ್ಯಾನಿಸಿ ಉತ್ತರಿಸಿದ

“ ಹುಡುಗಾ, ನೀನು ಆಚೆ ದಡದಲ್ಲೇ ಇರೋದು “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.